ಆದನಗೌಡರ ಈ ದಿನ

ಇಂದು ಎರಡು ಮೂರು ತಿಂಗಳ ಆ್ಯಕ್ಟಿಂಗ್, ಡಾನ್ಸ್ ಕಲಿತು ನೇರವಾಗಿ ಹಿರಿ ಮತ್ತು ಕಿರುತೆರೆಗಳಲ್ಲಿ ನಟಿಸುವ ಇರಾದೆಯುಳ್ಳವರೇ ಬಹಳಷ್ಟು ಜನ. ಆದರೆ ಚಿಕ್ಕಂದಿನಿಂದಲೇ ನಾಟಕದ ಹುಚ್ಚು ಹಚ್ಚಿಕೊಂಡು ಈಗ ಕಿರುತೆರೆಯಲ್ಲಿ ನಟಿಸುವ ಮಟ್ಟಿಗೆ ಬೆಳೆದಿದ್ದಾರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾದ ಎಚ್. ಆದನಗೌಡ ಮಾಲೀ ಪಾಟೀಲ್ರು.
ಆದನಗೌಡರು ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಅಭಿನಯದ ಮೂಲಕವೇ ಮನೆ ಮಾತಾಗಿದ್ದಾರೆ. ಇವರು ನಟಿಸಿದ 'ಗಂಡೆದೆಯ ಗಂಡು', 'ನರನಾಗರು', 'ಸಂಶಯದ ಸಂಸಾರ', 'ಹುರಿಗಣ್ಣಿನ ಹುಲಿ', 'ಧರ್ಮ ದಕ್ಕಿತು ಕರ್ಮ ಕಕ್ಕಿತು', 'ಕಲಿಯುಗಕ್ಕೆ ಕಾಲಿಟ್ಟ ಶಕುನಿ', 'ರಕ್ತ ರಾತ್ರಿ' ಎಂಬ ಹಲವಾರು ನಾಟಕಗಳು ಈ ಜಿಲ್ಲೆಗಳಲ್ಲಿ ಜನಜನಿತ.
ಆದನಗೌಡರಿಗೆ ಬಾಲ್ಯದಿಂದಲೇ ನಾಟಕಗಳಲ್ಲಿ ಎಲ್ಲಿಲ್ಲದ ಆಸಕ್ತಿ. ತಮ್ಮ ಊರಿಗೆ ಹಾಗೂ ತಮ್ಮ ಪಕ್ಕದ ಯಾವುದೇ ಊರುಗಳಿಗೆ ನಾಟಕಗಳು ಬಂದರೆ ಅಲ್ಲಿ ಇವರು ಹಾಜರ್. ಹಾಗೆ ನೋಡಿಕೊಂಡು ಬಂದ ನಾಟಕಗಳ ಪ್ರಮುಖ ಪಾತ್ರಗಳನ್ನು ಮನೆಯಲ್ಲಿ ಯಾರೂ ಇಲ್ಲದಾಗ, ಹೊಲಗಳಲ್ಲಿ ಒಬ್ಬರೇ ಅಭಿನಯಿಸುತ್ತಿದ್ದರು. ಪರಿಣಾಮ ಇವರ ನಾಟಕದ ಹುಚ್ಚನ್ನು ಕಂಡು 1996ರಲ್ಲಿ ಶ್ರೀ ಶರಣಬಸವೇಶ್ವರ ನಾಟ್ಯಸಂಘ ಜವಳಗೇರಾ 'ಗಂಡೆದೆಯ ಗಂಡು' ನಾಟಕದಲ್ಲಿ ನಟಿಸಲು ಇವರಿಗೆ ಒಂದು ಅವಕಾಶ ನೀಡಿತು. ಅಲ್ಲಿಂದ ಆದನಗೌಡರು ಹಿಂದಿರುಗಿ ನೋಡಲಿಲ್ಲ. ಇದುವರೆಗೂ 64 ನಾಟಕಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು.
ಕಿರುತೆರೆಗೂ ಲಗ್ಗೆ...
ಮೂಲತಃ ಕೃಷಿಕ ಮನೆತನದವರಾಗಿದ್ದರೂ ಇವರ ನಾಟಕದ ಹುಚ್ಚು ಮತ್ತು ಮನೋಜ್ಞ ಅಭಿನಯ ಇವರಿಗೆ ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟ ಕಾರಣ ಕಿರುತೆರೆಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪ್ರಸ್ತುತ ಚಂದನ ವಾಹಿನಿಯ 'ಓ ನನ್ನ ರಬ್ಬಿ' ಮತ್ತು 'ಅರುಣರಾಗ' ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಇನ್ನೂ ಮುಹೂರ್ತ ಕಾಣದ ಕನ್ನಡದ ಒಂದು ಸಿನೆಮಾದಲ್ಲಿ ಎಸ್‌ಐ ಪಾತ್ರದಲ್ಲಿ ನಟಿಸಲಿದ್ದಾರೆ.
ಇವರ ನಟನೆಗೆ ಇದುವರೆಗೂ ಹಲವು ಪುರಸ್ಕಾರಗಳು ಮುಡಿಗೇರಿವೆ. ಶಾಂಭವಿ ನಾಟ್ಯ ಸಂಘದಿಂದ ನಟ ಭಯಂಕರ ಪ್ರಶಸ್ತಿ, ಧುಮತಿ ಗ್ರಾಮದ ಶ್ರೀ ಪಂಪಣ್ಣ ಸಾಹುಕಾರ್‌ರಿಂದ ಶ್ರೇಷ್ಠ ಖಳನಾಯಕ ಬಿರುದು, ಸರಸ್ವತಿ ಸುತ, ಕಲಾ ಶ್ರೀಮಾನ್, ರಂಗಚೇತನ ಎಂಬ ಬಿರುದು ಪಡೆದಿದ್ದಾರೆ.
ಅಷ್ಟೇ ಅಲ್ಲದೆ, ಗೌಡರು ಎಷ್ಟೋ ಬಡ ಕಲಾವಿದರಿಗೆ ನೆರವಾಗಿದ್ದಾರೆ. ಸಹಾಯಕ್ಕಾಗಿ ಅವರ ಬಳಿ ಯಾರೇ ಹೋದರೂ ಬರಿಗೈಯಿಂದ ಯಾರನ್ನೂ ಕಳುಹಿಸುವುದಿಲ್ಲ. ಅಕ್ಕಪಕ್ಕದ ಹಳ್ಳಿಗಳಲ್ಲಿ ಸಾಮೂಹಿಕ ವಿವಾಹ ಮತ್ತು ಧಾರ್ಮಿಕ ಕಾರ್ಯಗಳಿಗೆ ದಾನ, ಧರ್ಮ ಮಾಡಿ ಗ್ರಾಮದ ಹಿರಿಯರಿಂದ ಗುಪ್ತ ದಾನಿ, ವಿಶಾಲ ಹೃದಯ ಎಂಬ ಬಿರುದು ಪಡೆದಿದ್ದಾರೆ.
ಆದನಗೌಡರಿಗೆ ನೀವೂ ಅಭಿನಂದಿಸಬಹುದು, ಮೊ. 9902446974.
= ರಮೇಶ್ ಬಿ. ಜವಳಗೇರಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


