ರಾಜಣ್ಣ ಸ್ಟುಡಿಯೋ

ಕ್ಯಾಮೆರಾದಲ್ಲಿ ಫೋಟೋ ಸೆರೆ ಹಿಡಿಯುವುದು ಇಂದಿನ ಡಿಜಿಟಲ್ ಯುಗದಲ್ಲಿ ಸುಲಭ ಎಂದುಕೊಂಡಿರಬಹುದು. ಆದರೆ, ಗುಣಮಟ್ಟದ ಕಲಾತ್ಮಕ ಚಿತ್ರಗಳನ್ನು ಕ್ಯಾಮೆರಾದಲ್ಲಿ ಬಂಧಿಸುವುದು ಸುಮ್ಮನೆಯಲ್ಲ.
ಕಲಾತ್ಮಕ ಚಿತ್ರಗಳನ್ನು ಕ್ಯಾಮೆರಾದಲ್ಲಿ ಬಂಧಿಸುವ ಛಾಯಾಗ್ರಹಕರಿನಿಗೆ ದೃಷ್ಟಿ ಸೂಕ್ಷ್ಮತೆ, ಸಮಯದ ಕೌಶಲ್ಯವೂ ಅಗತ್ಯ. ಅಂಥ ಗುಣಗಳುಳ್ಳ ಪ್ರತಿಭೆ ಶಿರಸಿಯ ರಾಜಾರಾಮ ಹೆಗಡೆ. ಶಿರಸಿ ತಾಲೂಕಿನ ಮುಂಡತೋಟದ ರಾಜಾರಾಮ ಹೆಗಡೆ 1974ರಲ್ಲಿ ಬಿಎ ಪದವಿ ಪೂರೈಸಿದವರೇ ಕ್ಯಾಮೆರಾವನ್ನು ಹೆಗಲಿಗೇರಿಸಿದರು. ಅಕ್ಕಮ ಮದುವೆಯಲ್ಲಿ ಸಿಕ್ಕ ಕ್ಯಾಮೆರಾದ ಉಡುಗೊರೆ ಅವರ ಭವಿಷ್ಯವನ್ನೇ ಬರೆಯಿತು.
ವೃತ್ತಿ ಆರಂಭ
ಹವ್ಯಾಸವಾಗಿ ಬೆಳೆಸಿಕೊಂಡ ಕ್ಯಾಮೆರಾ ವ್ಯವಸಾಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಮನನ ಮಾಡಿಕೊಂಡರು. ಅಲ್ಲದೆ ಪೋಟೋ ಸಂಸ್ಕರಣದ ಬಗ್ಗೆ ತಿಳಿಯಲು, ಮುಂಬೈನ ಕಲಾ ಮಂದಿರದಲ್ಲಿ ವಿಶೇಷ ತರಬೇತಿ ಪಡೆದರು. ಫೋಟೋಗ್ರಫಿಯ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ ತಿಳಿದುಕೊಂಡ ಅವರು, ಅದನ್ನೇ ವೃತ್ತಿಯಾಗಿ ಸ್ವೀಕರಿಸಲು ಪೂರ್ವ ಸಿದ್ಥತೆ ಮಾಡಿಕೊಂಡರು. ಅದರಂತೆ 1978ರಲ್ಲಿ ಶಿರಸಿಯಲ್ಲಿ ಶ್ರೀರಾಜ ಸ್ಟುಡಿಯೋ ತೆರೆದರು.
ಕಪ್ಪು ಬಿಳುಪಿನಿಂದ ಬಣ್ಣದೆಡೆಗೆ
ರಾಜಣ್ಣ ಸ್ಟುಡಿಯೋ ಪ್ರಾರಂಭಿಸಿದಾಗ ಡಿಜಿಟಲ್ ಕ್ಯಾಮೆರಾವೂ ಬಂದಿರಲಿಲ್ಲ. ಕಲರ್ ಪ್ರೀಂಟ್ ಕೂಡಾ ಇರಲಿಲ್ಲ. ಕಪ್ಪು ಬಿಳುಪು ಪಟಗಳ ಚಾಲ್ತಿಯಲ್ಲಿದ್ದವು. ಅಂದು ಕ್ಯಾಮೆರಾಗಳಿಗೆ ರೋಲ್ ಇದ್ದಿದ್ದರಿಂದ ಈಗಿನಂತೆ ಖಂಡಾಪಟ್ಟೆ ಫೋಟೋ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರ ಕ್ಲಿಕ್ಕಿಸಿದ ತಕ್ಷಣ, ಸೆರೆ ಹಿಡಿದ ಪೋಟೋವನ್ನು ನೋಡಲೂ ಆಗುತ್ತಿರಲಿಲ್ಲ. ಅಂಥ ದಿನದಲ್ಲಿ ರಾಜಣ್ಣನಂಥ ಛಾಯಾಗ್ರಾಹಕರಿಗೆ ಉತ್ತಮ ಚಿತ್ರಗಳನ್ನು ತೆಗೆಯುವುದು ಸವಾಲಿನ ಕೆಲಸವೇ ಆಗಿತ್ತು.
ಮದುವೆ, ಮುಂಜಿ, ಸಭಾ ಕಾರ್ಯಕ್ರಮ, ಸೀಮಂತ, ನಿಶ್ಚಿತಾರ್ಥ... ಮುಂತಾದವುಗಳಿಗೆ ಹೋದರೂ ಬೇಕಾಬಿಟ್ಟಿ ಫೋಟೋ ತೆಗೆಯುವುದಕ್ಕೂ ಅವಕಾಶ ಇರಲಿಲ್ಲ. ಮಹತ್ವದ ಅವಶ್ಯ ಉಳ್ಳ ಛಾಯಾಚಿತ್ರಗಳನ್ನು ಮಾತ್ರವೇ ರಾಜಣ್ಣ ಕ್ಯಾಮೆರಾದಲ್ಲಿ ಬಂಧಿಸುತ್ತಿದ್ದರು. ಅಲ್ಲದೆ ಗ್ರಾಮೀಣ ಪ್ರದೇಶದ ಅಪರೂಪದ ದೃಶ್ಯಗಳನ್ನು ಮನಸ್ಸಿಗೆ ಉಲ್ಲಾಸ ನೀಡುವ ಸನ್ನಿವೇಶಗಳನ್ನು ಚಿತ್ರೀಸುತ್ತಿದ್ದರು. ಇವರು ಸೆರೆ ಹಿಡಿದ ಹಲವು ಛಾಯಾಚಿತ್ರಗಳು ವಿವಿಧ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ.
ಮೂವರು ಸಹೋದರರಿಗೆ ಕ್ಯಾಮೆರಾ ಕಲೆಯನ್ನು ರೂಢಿಸಿ, ಅದನ್ನೇ ಉದ್ಯೋಗವಾಗಿ ಸ್ವೀಕರಿಸಲು ಮಾರ್ಗದರ್ಶನ ನೀಡಿದರು. ರಾಜಣ್ಣನ ಸಹೋದರರು ಈಗ ಶಿರಸಿ ಹಾಗೂ ಯಲ್ಲಾಪುರದಲ್ಲಿ ಪ್ರತ್ಯೇಕ ಸ್ಟುಡಿಯೋ ತೆರೆದು ಉತ್ತಮವಾಗಿ ನಡೆಸುತ್ತಿದ್ದಾರೆ. 1986ರಲ್ಲಿ ಕಲರ್ ಫೋಟೋ ಚಾಲ್ತಗೆ ಬಂದಾಗ ರಾಜಣ್ಣರ ಸ್ಟುಡಿಯೋದಲ್ಲಿ ಎಲ್ಲ ರೀತಿಯ ಫೋಟೋ, ಸ್ಟುಡಿಯೋ ಕಲರ್ ಪ್ರಿಂಟಿಂಗ್ ಶುರುವಾಯಿತು. 40 ವರ್ಷಗಳಿಂದ ಫೋಟೋಗ್ರಫಿ ಕ್ಷೇತ್ರದಲ್ಲಿ ಸಕ್ರಿಯ ಆಗಿರುವ ರಾಜಣ್ಣ ಛಾಯಾಚಿತ್ರ ಕಸುಬಿನಲ್ಲಿ ಉತ್ತಮ ಹಿಡಿತ ಸಾಧಿಸಿದ್ದಾರೆ. ಬದಲಾದ ತಂತ್ರಜ್ಞಾನಕ್ಕೆ ಹೊಂದಿಕೊಂಡು ಉತ್ತಮ ಸೇವೆಯನ್ನು ನೀಡುತ್ತಾ ಗ್ರಾಹಕರ ಪ್ರೀತಿ, ವಿಶ್ವಾಸದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸೇವೆಗೆ ಗೌರವ
ಶಿರಸಿಯಲ್ಲೇ ಉತ್ತಮ ಛಾಯಾಗ್ರಹಕರಲ್ಲಿ ಒಬ್ಬರಾಗಿರುವ ರಾಜಣ್ಣರಿಗೆ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. 1999ರಲ್ಲಿ ಧಾರವಾಡದ ಸಾಲಿ ಗ್ರಾಫಿಕ್ಸ್ನವರು ಇವರ ಕ್ರಿಯಾಶೀಲತೆ, ಜನಪರ ಸೇವೆಯನ್ನು ಗುರುತಿಸಿ ಗೌರವಿಸಿದ್ದಾರೆ. ಉ.ಕ. ಜಿಲ್ಲಾ ಚಿತ್ರಕಲಾ ಪರಿಷತ್ತು ಇವರನ್ನು ಉತ್ತಮ ಛಾಯಾಚಿತ್ರಗಾರ ಎಂದು ಪುರಸ್ಕರಿಸಿದೆ.
2012ರಲ್ಲಿ ಶಿರಸಿಯ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಶನ್ ಅದ್ಧೂರಿಯಾಗಿ ಸನ್ಮಾನಿಸಿದೆ. 1979ರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ 2014ರಲ್ಲಿ ರಾಷ್ಟ್ರೀಯ ಫೋಟೋ ಸ್ಪರ್ಧೆಯಲ್ಲಿ ರಾಜಣ್ಣ ಕ್ಲಿಕ್ಕಿಸಿದ ಛಾಯಾಚಿತ್ರ ಬಹುಮಾನಕ್ಕೆ ಆಯ್ಕೆ ಆಗಿರುವುದು ವಿಶೇಷ. ರಾಜಣ್ಣನ ಮೊ.9901140570.
-ಗಣಪತಿ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


