ಕಲಾ ಭೀಷ್ಮ ರಂಗಪ್ರತಿಭೆ ಲಕ್ಷ್ಮಯ್ಯ

ಇಲ್ಲೊಬ್ಬರು ಹೆಸರಿಗೆ 'ಲಕ್ಷ್ಮಯ್ಯ'. ಆದರೆ ಲಕ್ಷ್ಮೀ ಲಕ್ಷಗಟ್ಟಲೆ ಇರಲಿ, ಸಾವಿರದ ಲೆಕ್ಕದಲ್ಲೂ ಇಲ್ಲ. ಆದರೆ, ಈ ಬಗ್ಗೆ ಇವರಿಗೆ ಚಿಂತೆಯೇ ಇಲ್ಲ. ತಾವಾಯಿತು ತಮ್ಮ ನಾಟಕ ಕಲೆಯಾಯಿತು ಎಂದು ಜೀವನ ಸಾಗಿಸುತ್ತಿದ್ದಾರೆ. ನಾಲ್ಕೂವರೆ ದಶಕಕ್ಕೂ ಹೆಚ್ಚಾಗಿ 1,200 ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. 20ನೇ ವಯಸ್ಸಿನಲ್ಲಿ ಅಭಿನಯಿಸಲು 'ರಂಗ' ಏರಿದ ಲಕ್ಷ್ಮಯ್ಯ 70ರ ಆಸುಪಾಸಿನಲ್ಲೂ ಇನ್ನೂ ಅಲ್ಲೇ ಇದ್ದಾರೆಂದರೆ, ಅವರ ರಂಗದ ನಂಟು ಎಷ್ಟಿರಬೇಕು?
1962ರಲ್ಲಿ 'ಸುಂದರಕಾಂಡ ರಾಮಾಯಣ' ಮೂಡಲ ಪಾಯದ ಯಕ್ಷಗಾನಕ್ಕಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿ ಪೌರಾಣಿಕ ನಾಟಕಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡರು. ಪೌರಾಣಿಕ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. 'ಅಳಿಯ ಮನೆ ತೊಳೆಯ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಾಟಕಗಳಲ್ಲಿ ದುಶ್ಯಾಸನ, ಶಕುನಿಯಂಥ ದುಷ್ಟತನದ ಪಾತ್ರಗಳಲ್ಲದೆ ವಯೋವೃದ್ಧ ಭೀಷ್ಮರ ಪಾತ್ರದಲ್ಲೂ ಅಭಿನಯಿಸಿ 'ರಂಗಭೂಮಿಯ ಭೀಷ್ಮ' ಎಂಬ ಬಿರುದು ಪಡೆದಿದ್ದಾರೆ. ಲಕ್ಷ್ಮಣ, ವಿಧುರ, ಬಲರಾಮ, ಮಾರೀಚ, ಸುಗ್ರೀವರ ಪಾತ್ರಗಳಲ್ಲಿ ಗುರುತಿಸಿಕೊಂಡು ವಿಭಿನ್ನತೆ ಮೆರೆದಿದ್ದಾರೆ. ಆಂಜನೇಯನ ಏಕಪಾತ್ರಾಭಿನಯ ಇವರ 'ಪ್ಲಸ್ ಪಾಯಿಂಟ್'. ಇವರು ಹಾರ್ಮೋನಿಯಂ ಹಿಡಿದು ಕಂದಪದ್ಯ ಹೇಳಿದಲ್ಲಿ 'ಒನ್ಸ್‌ಮೋರ್' ಎನ್ನುವುದು ಖಂಡಿತ ಎಂಬುದು ಇವರ ಅಭಿಮಾನಿಗಳ ನುಡಿ. ಕೃಷಿ ವಿಶ್ವವಿದ್ಯಾಲಯದಲ್ಲಿದ್ದು ಈಗ ನಿವೃತ್ತರಾಗಿರುವ ಲಕ್ಷ್ಮಯ್ಯ ಅವರಿಗೆ ರಂಗಭೂಮಿಯೇ ಹವ್ಯಾಸ ಪ್ರಪಂಚ. ಹಾಗಾಗಿ ಯಾವುದೇ ನಾಟಕ ಕಂಪನಿಗೆ ಸೇರದೆ ತಮ್ಮ ಕಲಾ ಸೇವೆಯನ್ನು ಮುಂದುವರಿಸಿದರು. ಇವರು ಬಯಸದೇ ಇದ್ದರೂ ಹಲವು ಸಂಘಸಂಸ್ಥೆಗಳಿಂದ 'ನಾಟಕ ಕಲಾ ತಪಸ್ವಿ, ಕರುನಾಡ ಕಲಾಸೇವಾ ಪ್ರಶಸ್ತಿ, ಡಾ. ರಾಜ್‌ಕುಮಾರ್ ಸುವರ್ಣ ರತ್ನ ಪ್ರಶಸ್ತಿ, ಕರ್ನಾಟಕ ಧೃವತಾರೆ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. 'ನಾಟಕ ಕಲೆಯು ತಂದೆಯವರಿಂದ ಬಂತು' ಎಂದು ವಿನಮ್ರವಾಗಿ ನುಡಿಯುವಾಗ ಕಣ್ಣು ಹನಿಸಿದ್ದು ತೋರ್ಗೊಡಲಿಲ್ಲ. ತಾವು ಬೆಳೆಯುವುದರ ಜೊತೆಗೆ ಗೆಳೆಯರನ್ನು ಕೂಡಿಹಾಕಿ, ರಂಗ ತಾಲೀಮು ಕೊಟ್ಟು ತಮ್ಮ ಜೊತೆ ಜೊತೆಗೆ ಅವರನ್ನು ನಟರನ್ನಾಗಿಸಿ, ಬೆಳೆಸಿದವರು. ರಂಗಗೀತೆಗಳನ್ನು, ಸಂಭಾಷಣೆಗಳನ್ನು ಪತ್ನಿಯ ಸಹಾಯದಿಂದ ಬರೆಸಿ ಸಂರಕ್ಷಿಸಿದ್ದಾರೆ. ಐತಿಹಾಸಿಕ, ಪೌರಾಣಿಕ ನಾಟಕಗಳ ಭಂಡಾವರವನ್ನೇ ಹೊಂದಿದ್ದಾರೆ. ಲಕ್ಷ್ಮಯ್ಯನವರು ತಮ್ಮೆಲ್ಲ ನಾಟಕಗಳ ಲೆಕ್ಕಪತ್ರಗಳನ್ನೂ ಬರೆದಿಟ್ಟಿದ್ದಾರೆ. ಅದರ ಕಂತೆಗಳನ್ನು ನೋಡುತ್ತಾ ತಮ್ಮ ಗತಕಾಲದ ಕಲಾ ಪ್ರಯಾಣವನ್ನು ಮೆಲುಕು ಹಾಕುತ್ತಾರೆ. ಸರ್ಕಾರ ಇವರ ಅವಿರತ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ- ಪುರಸ್ಕಾರ ನೀಡಿದಲ್ಲಿ ಇಳಿ ವಯಸ್ಸಿನ ಈ ಕಲಾವಿದರ ಬಾಳು ಸಾರ್ಥಕವೆನಿಸುತ್ತದೆ.ಸಂಪರ್ಕ: 9844174899.
- ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


