ಸಾಧನೆ

ಹಂದೆ ಮುಂದೆ

ನಿವೃತ್ತ ಜೀವನವೆಂದು ಮಕ್ಕಳು, ಮೊಮ್ಮಕ್ಕಳೊಂದಿಗೆ ಹಾಯಾಗಿ ಮನೆಯಲ್ಲೇ ಕುಳಿತು ಕಾಲ ಕಳೆಯುವ ಜಾಯಮಾನ ಇವರದ್ದಲ್ಲ. ಸದಾ ಸಾಹಿತ್ಯಿಕ ಕಾರ್ಯಕ್ರಮ, ಹರಿಕಥೆ, ...

ಹಂದೆ ಮುಂದೆ
Published On :

ನಿವೃತ್ತ ಜೀವನವೆಂದು ಮಕ್ಕಳು, ಮೊಮ್ಮಕ್ಕಳೊಂದಿಗೆ ಹಾಯಾಗಿ ಮನೆಯಲ್ಲೇ ಕುಳಿತು ಕಾಲ ಕಳೆಯುವ ಜಾಯಮಾನ ಇವರದ್ದಲ್ಲ. ಸದಾ ಸಾಹಿತ್ಯಿಕ ಕಾರ್ಯಕ್ರಮ, ಹರಿಕಥೆ, ತಾಳಮದ್ದಳೆ, ಯಕ್ಷಗಾನ ಸಂಘಟನೆ ಹೀಗೆ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಬ್ಯುಸಿಯಾಗೇ ಇರ್ತಾರೆ. ಕೃಶ ಶರೀರವಾದರೂ ಹಲವಾರು ಕಾರ್ಯಕ್ರಮ ಸಂಘಟನೆಯಲ್ಲಿ ದಣಿವರಿಯದೇ ದುಡಿಯುತ್ತಿರುವ ಜನಾರ್ದನ ಹಂದೆ ಕರ್ಣಾಟಕ ಬ್ಯಾಂಕ್ ಮ್ಯಾನೇಜರ್ ಆಗಿ, ಬಳಿಕ ಅಧಿಕಾರಿಯಾಗಿ ನಿವೃತ್ತಿಯಾದವರು.
ಮೂಲತಃ ಕುಂದಾಪುರದ ಕೋಟ ಹಂದಟ್ಟು ಹಂದೆ ಮನೆತನದ ಜನಾರ್ದನ ಹಂದೆಯವರಿಗೆ ಈಗ 68 ವರ್ಷ. ಇವರದ್ದು ಸಂಪೂರ್ಣ ಯಕ್ಷಗಾನ ಕುಟುಂಬ. ಮಾವ ಸಾಲಿಗ್ರಾಮ ಮೇಳದ ಯಜಮಾನರಾಗಿ ಬಹಳ ವರ್ಷ ಮುನ್ನೆಡೆಸಿದವರು, ಅಣ್ಣ ಶ್ರೀಧರ ಹಂದೆ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿದವರು. ಐದನೇ ತರಗತಿಯಲ್ಲಿರುವಾಗಲೇ ತಾಳಮದ್ದಳೆಯಲ್ಲಿ ಭಾಗವಹಿಸಿ, ಪ್ರೌಢಶಾಲೆಯಲ್ಲಿರುವಾಗ ಯಕ್ಷಗಾನ, ನಾಟಕಗಳಲ್ಲಿ ಪಾತ್ರವಹಿಸಿ ಬಹುಮಾನ ಗಳಿಸಿದವರು. ಶಾಲೆ, ಕಾಲೇಜುಗಳಲ್ಲಿ ಆಶುಕವಿಯಾಗಿ ಸೈ ಎನಿಸಿಕೊಂಡವರು.
ಡಿಗ್ರಿಯಲ್ಲಿ ರ್ಯಾಂಕ್ ಗಳಿಸಿ 1968ರಲ್ಲಿ ಕರ್ಣಾಟಕ ಬ್ಯಾಂಕ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ ಇವರು ನಿವೃತ್ತಿ ಹೊಂದಿದ ಬಳಿಕ ಈಗ ತಮ್ಮ ಪ್ರವೃತ್ತಿಯ ಜೀವನ ಮುಂದುವರಿಸಿದ್ದಾರೆ. ಮಂಗಳೂರಲ್ಲಿ ಯಕ್ಷಗಾನ ಕಾರ್ಯಕ್ರಮವಿದೆಯೆಂದರೆ ಅಲ್ಲಿ ಹಂದೆಯವರು ಇದ್ದೇ ಇರುತ್ತಾರೆ. ರಂಗವನ್ನು ಸಿಂಗರಿಸುವುದರಿಂದ ಖುರ್ಚಿ ಹಾಕುವುದು, ಯಾರಾದರೂ ಕಲಾವಿದರು ಕೈಕೊಟ್ಟರೆ ಸ್ವತಃ ತಾವೇ ಬಣ್ಣ ಹಚ್ಚಿ ಕುಣಿಯಲೂ ಬಲ್ಲರು. ಪೂರ್ವ ಪೀಠಿಕೆಯ ಭಾಗವತಿಕೆಯನ್ನೂ ಮಾಡಬಲ್ಲರು.
ಅಶಕ್ತ ಕಲಾವಿದರನ್ನು ಅಭಿನಂದಿಸಿ ಕಿಸೆಯಿಂದಲೇ 2000- 5000 ನೀಡುತ್ತಿರುವುದು ಇವರ ಕಲಾಪ್ರೀತಿಯ ಪ್ರತೀಕ. ಯಕ್ಷಗಾನದಲ್ಲಿ ಪುರುಷ ಹಾಗೂ ಸ್ತ್ರೀಪಾತ್ರಧಾರಿಗಳ ತ್ರಿಪಾತ್ರ ಚಿತ್ರಣ ಕಾರ್ಯಕ್ರಮ ಇವರ ಪರಿಕಲ್ಪನೆಯಲ್ಲೇ ಮೂಡಿಬಂದಿದೆ.
ಇಷ್ಟೇ ಅಲ್ಲ, ಕೇವಲ ಮಹಿಳೆಯರೇ ಹಾಡುವ ಸೋಬಾನೆ ಪದವನ್ನು ಇವರು ಸರಾಗವಾಗಿ ಹಾಡಬಲ್ಲರು. ಯಕ್ಷಗಾನ ವೇಷಗಳ ಶಿರೋಭೂಷಣ ಮಾದರಿ ರಚಿಸುತ್ತಾರೆ. ಯಕ್ಷಗಾನ ಪ್ರದರ್ಶನವಿದ್ದಾಗ ಅದನ್ನು ಪರದೆಗೆ ತೂಗು ಹಾಕಿ ವೇದಿಕೆಯನ್ನು ಇವರೇ ಸಿಂಗರಿಸುತ್ತಾರೆ.
ಕರ್ನಾಟಕ ಯಕ್ಷಧಾಮ ಎಂಬ ಸಂಸ್ಥೆಯನ್ನು  ಹುಟ್ಟು ಹಾಕಿರುವ ಜನಾರ್ದನ ಹಂದೆ (ಮೊ. 9449259333), ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಲ್ಲಿ ನಿರ್ದೇಶಕ, ಕಲಾಸ್ಪಂದನೆ ಸಂಸ್ಥೆ ಕಾರ್ಯಾಧ್ಯಕ್ಷರಾಗಿದ್ದಾರೆ. ಯಕ್ಷಮಣಿ ದರ್ಶನ, ಚಿತ್ರಕೂಟ, ಯಜಮಾನ, ಪಾತಾಳ ಯಕ್ಷಮಣಿ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಮುಂದೆ ತಮ್ಮ ಕವನಗಳನ್ನು ಪುಸ್ತಕ ರೂಪದಲ್ಲಿ ತರುವ ಉದ್ದೇಶ ಹೊಂದಿದ್ದಾರೆ. ಅವಿರತ ಕಲಾ ತಪಸ್ವಿಯ ಕಲಾ ಕೈಂಕರ್ಯಕ್ಕೆ ಜೈ ಎನ್ನೋಣ.

- ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.