ಪುಸ್ತಕ ಫಕೀರ
ಹೆರ್ಗ ಗೋಪಾಲ ಭಟ್ಟರು ಎನ್ನುವುದಕ್ಕಿಂತ ಕು.ಗೋ. ಎಂದರೆ ನಾಡಿನ ಪ್ರಕಾಶನ ವಲಯದಲ್ಲಿ...

ಎಲ್‌ಐಸಿಯಂಥ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತರಾಗಿದ್ದಾರೆ. ವಯಸ್ಸು 75 ದಾಟಿದೆ. ಒಳ್ಳೆಯ ಪೆನ್ಶನ್ ಬರುತ್ತಿದೆ. ನಗರದಿಂದ ಸ್ವಲ್ಪ ಹೊರಗೆ ಸ್ವಂತ ಮನೆ ಇದೆ. ಆರೋಗ್ಯ ತಕ್ಕಮಟ್ಟಿಗೆ ಚೆನ್ನಾಗಿದೆ...
ಸಾಮಾನ್ಯವಾಗಿ ಇಂಥವರು ಈ ವಯಸ್ಸಲ್ಲಿ ಏನು ಮಾಡುತ್ತಾರೆ? ಮನೆಯ ವರಾಂಡದಲ್ಲಿ ತೂಗುಕುರ್ಚಿಯಲ್ಲಿ ಕೂತು, ಮೊಮ್ಮಕ್ಕಳೊಂದಿಗೆ ಆಡುತ್ತಾ, ಕಾಫಿ ಹೀರುತ್ತಾ, ಪೇಪರ್ ಓದುತ್ತಾ, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ...
ಊಹೂಂ.. ಉಡುಪಿಯ ಹೆರ್ಗ ಗೋಪಾಲ ಭಟ್ಟರು ಮಾತ್ರ ಹಾಗಲ್ಲ. ಈ ವಯಸ್ಸಲ್ಲಿಯೂ ಹೆಗಲ ಮೇಲೊಂದು ಮಣಭಾರದ ಚೀಲ ತೂಗಿಸಿಕೊಂಡು ದಾಪುಗಾಲು ಹಾಕುತ್ತಾ, ಪ್ರೀತಿಪಾತ್ರರು ಕರೆದಲ್ಲೆಲ್ಲಾ ಓಡುತ್ತಾ, ನಗೆ ಚಟಾಕಿ ಹಾರಿಸಿ ನಗಿಸುತ್ತಾ ಸದಾ ಬ್ಯುಸಿ ಇರುತ್ತಾರೆ.
ಇವರು ಕು.ಗೋ!
ಹೆರ್ಗ ಗೋಪಾಲ ಭಟ್ಟರು ಎನ್ನುವುದಕ್ಕಿಂತ ಕು.ಗೋ. ಎಂದರೆ ನಾಡಿನ ಹಾಸ್ಯ - ಸಾಹಿತ್ಯ - ಪ್ರಕಾಶನ ವಲಯದಲ್ಲಿ ಎಲ್ಲರಿಗೂ ಥಟ್ಟನೆ ಗೊತ್ತಾಗುತ್ತದೆ. ಕು.ಗೋ. ಯಾನೆ ಕುಸುಮ ಗೋಪಾಲ ಎಂಬ ಹೆಸರಿನಿಂದ ಮದುವೆ, ಶನಿ ಹಿಡಿದವ, ತೇಲ್ನೋಟ ಸೇರಿದಂತೆ ಏಳೆಂಟು ಹಾಸ್ಯ ಕೃತಿಗಳನ್ನೂ ರಚಿಸಿರುವ ಕು.ಗೋ. ಪುಸ್ತಕ ಹಂಚುವ ಫಕೀರ. 20 ವರ್ಷದಿಂದ ನಾಡಿನ ಬಹುತೇಕ ಎಲ್ಲ ಸಾಹಿತಿಗಳ ಪುಸ್ತಕಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ಓಡಾಡುತ್ತಾ, ಹೊಸ ಪೀಳಿಗೆಗೆ ಪುಸ್ತಕಗಳನ್ನು ಹಂಚುತ್ತಾರೆ. ಈ ಕು.ಗೋ. ಇದುವರೆಗೆ 12 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹಂಚಿದ್ದಾರೆ! ಕಾಸು ಕೊಟ್ಟರೆ ತೆಗೆದುಕೊಳ್ಳುತ್ತಾರೆ, ಕೊಡದಿದ್ದವರ ಬಳಿ ಕೇಳುವುದಿಲ್ಲ. ಆ ಪುಸ್ತಕದ ಹಣ ತಮ್ಮ ಕಿಸೆಯಿಂದಲೇ ಹೋದರೂ ಬೇಸರಿಸಿಕೊಳ್ಳದೆ ಹೊಸಬರಿಗೆ ಪುಸ್ತಕ ಓದುವ ಚಟ ಹತ್ತಿಸಿದ ಖುಷಿಯಿಂದ ನಷ್ಟ ಮರೆಯುತ್ತಾರೆ.
'ಯಾಕ್ ಭಟ್ರೆ ಇದೆಲ್ಲಾ ನಷ್ಟ ಮಾಡಿಕೊಳ್ಳುವ ಕೆಲಸ ನಿಮ್ಗೆ' ಎಂದರೆ, 'ಪುಸ್ತಕಗಳನ್ನು ಓದುವವರಿಲ್ಲ ಎನ್ನುವುದು ಸರಿಯಲ್ಲ. ಓದುವವರಿಗೆ ಪುಸ್ತಕಗಳು ಸರಿಯಾಗಿ ತಲುಪುತ್ತಿಲ್ಲ. ಯಾವ ಪುಸ್ತಕ ಚೆನ್ನಾಗಿದೆ, ಯಾವುದನ್ನು ಓದಬೇಕು ಎಂದು ಹೇಳುವವರಿಲ್ಲ. ಓದಬೇಕಾದ ಪುಸ್ತಕಗಳು ಕೂಡ ಸರಿಯಾಗಿ ಲಭ್ಯವಾಗುತ್ತಿಲ್ಲ. ಆದ್ದರಿಂದ ನನ್ನ ಕೈಯಲ್ಲಿ ಎಷ್ಟಾಗುತ್ತದೆ ಅಷ್ಟು ಮಾಡುತ್ತೇನೆ' ಎನ್ನುತ್ತಾರೆ.
ಪುಸ್ತಕಗಳ ಕಣಜ
ಅವರ ಮನೆಗೆ ಹೋದರೆ ನೇರ ಪುಸ್ತಕಗಳ ರಾಶಿ ತುಂಬಿರುವ ತಮ್ಮ ಕೋಣೆಗೆ ಕರೆದುಕೊಂಡು ಹೋಗುತ್ತಾರೆ. ಯಾವುದು ಬೇಕು ತಗೋ ಎನ್ನುತ್ತಾರೆ. ನೀವೆಲ್ಲಾ ತುಂಬಾ ಓದಬೇಕು ಮಾರಾಯ ಎಂದು ಹರಸುತ್ತಾರೆ.
ಬೇಕಾದ ಪುಸ್ತಕ ಮಾರುಕಟ್ಟೆಯಲ್ಲಿ ಸಿಗದಿದ್ರೆ, ಹೆಸರು ಹೇಳಿ 'ಬೇಕಿತ್ತಲ್ಲಾ ಭಟ್ರೆ' ಎಂದರೆ ಒಂದು ವಾರದಲ್ಲಿ ಕಮಿಷನ್ ಹಣವನ್ನೂ ಪಡೆಯದೇ ತರಿಸಿಕೊಡುತ್ತಾರೆ. 'ನೀವು ನನ್ನಿಂದ ಪುಸ್ತಕ ತರಿಸ್ಕೊಂಡು ಓದ್ತಿರಲ್ಲಾ ಅದೇ ನನ್ನ ಕಮಿಷನ್' ಎನ್ನುತ್ತಾರೆ.
ಸುಹಾಸಂ ಸಂಘಟನೆ
ಇಷ್ಟೇ ಅಲ್ಲ, ಉಡುಪಿಯಲ್ಲಿ ಸುಹಾಸಂ ಎಂಬ ಹಾಸ್ಯಪ್ರಿಯರ ಸಂಘಟನೆ ಹುಟ್ಟು ಹಾಕಿದ್ದಾರೆ. ಅದರ ಮೂಲಕ ಪ್ರಕಾಶನಕ್ಕೆ ಸಹಾಯ ಮಾಡಿದ್ದಾರೆ. ಸಮಾರಂಭಗಳನ್ನು ಏರ್ಪಡಿಸಿ ನೂರಾರು ಕೃತಿಗಳನ್ನು ಬಿಡುಗಡೆ ಮಾಡಿಸಿದ್ದಾರೆ. ನಾಡಿನ ಹಿರಿಯ, ಕಿರಿಯ ಸಾಹಿತಿಗಳನ್ನು ಕರೆಸಿದ್ದಾರೆ.
ಕು.ಗೋ. (9886419155) ಗೊರೂರು ಸಾಹಿತ್ಯ ಪ್ರಶಸ್ತಿ, ಉಗ್ರಾಣ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮೂವರು ಮಕ್ಕಳೊಂದಿಗೆ ವಾಸಿಸುವ ಅವರು ಪತ್ನಿಯನ್ನು ಕಳೆದುಕೊಂಡ ದುಃಖವನ್ನು ಹೊರಗೆ ತೋರಿಸುವುದಿಲ್ಲ. ಆ ಬಗ್ಗೆ ಕೇಳಿದರೆ ಅದೆಲ್ಲಾ ಇರ್ಲಿ ಮಾರಾಯ, ಯಾವ ಪುಸ್ತಕ ಕೊಡ್ಲಿ ನಿಂಗೆ ಎಂದು ಚೀಲ ಬಿಚ್ಚುತ್ತಾರೆ...
- ಸುಭಾಶ್ಚಂದ್ರ ವಾಗ್ಳೆ
wagle_subhash@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


