ಸಾಧನೆ

ಮುಪ್ಪಿಗಿಂತ ರುಚಿ ಬೇರೆಇಲ್ಲ!

ಮುಪ್ಪಿಗಿಂತ ರುಚಿ ಬೇರೆಇಲ್ಲ!
Published On :

ಇವತ್ತಿಗೆ ನನಗೆ ಎಂಬತ್ತು ವರ್ಷ. 75 ವರ್ಷದ ನನ್ನ ಬೊಚ್ಚುಬಾಯಿಯ ಹೆಂಡತಿಗೆ ಬಿಟ್ಟರೆ ಇನ್ನ್ಯಾರಿಗೂ ನನ್ನ ಹುಟ್ಟುಹಬ್ಬದ ನೆನಪಿರಲಿಲ್ಲ. ಅವಳು ಮೊಮ್ಮಕ್ಕಳಿಗೆ ಹೇಳಿದಳು. ಮೊಮ್ಮಕ್ಕಳು ಅವರ ಅಪ್ಪಮ್ಮಂದಿರಿಗೆ ಹೇಳಿದರು. ಭಾನುವಾರವಾದ್ದರಿಂದ ಭರ್ಜರಿ ಪಾರ್ಟಿ ಎನ್ನುವ ಮಟ್ಟಿಗೆ ಮನೆಯಲ್ಲಿ ಸಂಭ್ರಮ.
ಶುಗರ್ ಇರುವ ಕಾರಣ ಬೇಕರಿಯಿಂದ ತರಿಸಿದ ವಿಧವಿಧ ಸಿಹಿತಿಂಡಿಗಳನ್ನು ಅಜ್ಜನ ಹೆಸರು ಹೇಳಿಕೊಂಡು ಮೊಮ್ಮಕ್ಕಳು ತಿಂದರು. ನಾನು ಎಂದಿನಂತೆ ಒಂದಿಷ್ಟು ಹಾಲನ್ನ ಊಟ ಮಾಡಿದೆ. ಅರವತ್ತು ವರ್ಷವಾದಾಗಿಂದ ನಿತ್ಯದ ಕೆಲಸಗಳಲ್ಲಿ ಪಾರ್ಕಿಗೆ ಹೋಗುವುದೂ ಒಂದು. ನೀನೂ ಬಾರೆ ಪಾರ್ಕಿಗೆ ಎಂದು ಹೆಂಡತಿಯನ್ನು ಕರೆದರೆ ನೋಡಿದವರು ಏನು ಹೇಳಿಯಾರು ಎಂದು ಕಳೆದವಾರ ಮದುವೆಯಾದ ಮದುಮಗಳಂತೆ ನಾಚುತ್ತಾಳೆ!
80 ದಾಟಿದ ಕೆಲ ಸ್ನೇಹಿತರು ಅಳಲೆಂದೇ ಪಾರ್ಕಿಗೆ ಬರುತ್ತಾರೇನೋ ಅನ್ನಿಸುತ್ತದೆ. ಹೋದ ತಿಂಗಳು 85 ವರ್ಷದ ಗೆಳೆಯನೊಬ್ಬ ಹೃದಯಾಘಾತದಿಂದ ಸತ್ತಾಗ ಮನೆಯಲ್ಲಿ ಒಬ್ಬನೇ ಇದ್ದನಂತೆ. ಇನ್ನೊಬ್ಬನ ಹೆಂಡತಿ ಸತ್ತಿದ್ದಾಳೆ. ಮನೆಯಲ್ಲಿ ಮಕ್ಕಳು ಕೆಲಸದಲ್ಲಿ ಬ್ಯುಸಿ. ನನ್ನೊಂದಿಗೆ ಮಾತಾಡುವವರು ಯಾರೂ ಇಲ್ಲ ಎಂಬುದು ಅವನ ಗೋಳು. ಮತ್ತೊಬ್ಬನಿಗೆ ನಿತ್ಯ ಹತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದೇ ಸಮಸ್ಯೆ. ಆದರೆ, ನನಗೆ 80 ವರ್ಷ ತುಂಬಿದ್ದು ಒಂದು ಸಮಸ್ಯೆ ಎಂದು ಅನ್ನಿಸಿಲ್ಲ. ವಿಪರೀತ ಸಕ್ಕರೆ ಕಾಯಿಲೆ, 70ನೇ ವಯಸ್ಸಿನಲ್ಲಿ ಬೈಪಾಸ್ ಹಾರ್ಟ್ ಸರ್ಜರಿಯಾದ ನಂತರ ನಿರ್ಲಿಪ್ತನಾಗಿದ್ದೇನೆ.
ಮಕ್ಕಳು ಜೀವನದಲ್ಲಿ ಮಾಡುವ ಸಣ್ಣಪುಟ್ಟ ತಪ್ಪುಗಳು ಅತ್ಯಂತ ಬೇಗ ತಿಳಿಯುತ್ತವೆ. ಆದರೆ ಅವರ ಎಲ್ಲ ತಪ್ಪುಗಳನ್ನು ಅವರಿಗೆ ಬೊಟ್ಟು ಮಾಡಿ ತೋರಿಸಿದರೆ ಅಪ್ಪ ಕಿರಿಕಿರಿ ಮಾಡುತ್ತಾನೆ ಎಂದು ಉದಾಸೀನ ಮಾಡಿಯಾರು. ಸೊಸೆಗೊಂದಿಷ್ಟು ಸ್ವಾತಂತ್ರ್ಯ ಕೊಟ್ಟರೆ ಅತ್ತೆ ಮಾವ ನನ್ನ ಪಾಲಿನ ದೇವರು ಎಂದು ಊರು ತುಂಬಾ ಹೇಳಿಕೊಂಡು ಬರುತ್ತಾಳೆ. ಮೊಮ್ಮಕ್ಕಳು ನಿತ್ಯ ಕಾಲೇಜಿನಿಂದ ಬಂದ ಕೂಡಲೆ ನನ್ನನ್ನು ಮಾತನಾಡಿಸದೇ ಹೋದರೂ ಅಪ್ಪ ಬೈದಾಗ ಅಲವತ್ತುಕೊಳ್ಳುವುದು ನನ್ನ ಬಳಿಯೇ. 79 ವರ್ಷಗಳಲ್ಲಿ ಬರದ ವಿಶಾಲ ಚಿಂತನೆ 80ನೇ ವರ್ಷಕ್ಕೆ ಬೋನಸ್ ಇರಬಹುದೇನೊ. ಕೆಲವೊಮ್ಮೆ ಅನ್ನಿಸುತ್ತದೆ, ಜೀವನ ಶುರುವಾದದ್ದೇ ವಯಸ್ಸಾದ ಮೇಲೆ ಎಂದು. ನೆಂಟರ ಮನೆಗೆ ಹೋಗುವುದು ಅಪರೂಪವಾದರೂ, ಹೋದಾಗ ಮಾತ್ರ ವಯಸ್ಸಾಗಿದೆ ಎಂಬ ಕಾರಣಕ್ಕೆ ಭರ್ಜರಿ ಉಪಚಾರ. ಕೂತಲ್ಲಿಗೆ ನೀರು, ತಿಂಡಿ.
98 ವರ್ಷ ಬದುಕಿದ ನನ್ನಪ್ಪ ಒಂದು ರಾತ್ರಿ ನನ್ನನ್ನು ಎಬ್ಬಿಸಿ ಎಂಬತ್ತನೇ ವರ್ಷ ಎಂಬುದು ಜೀವನದ ಸುಂದರ ಘಟ್ಟ. ಅರವತ್ತರ ತನಕ ಮನುಷ್ಯ ಬದುಕಿಗಾಗಿ ಹೋರಾಡುತ್ತಾನೆ. ಈಗ ಏನೂ ಕೆಲಸವಿಲ್ಲದೆ ಅಪ್ರಯೋಜಕನಂತಾಗಿಬಿಟ್ಟೆನಲ್ಲ ಎಂದು ಅರವತ್ತರಿಂದ ಎಂಬತ್ತರವರೆಗೆ ಕೊರಗುತ್ತಾನೆ. ಎಂಬತ್ತರ ನಂತರ ಸಮಾನ ಮನಸ್ಥಿತಿಯನ್ನು ಸಾಧಿಸಿ ಬೆಟ್ಟದ ತುದಿಯಲ್ಲಿ ಕೂತು ಊರ ವೀಕ್ಷಣೆ ಮಾಡುವ ತಿಮ್ಮಪ್ಪನ ಭಾವನೆ ಬಂದುಬಿಡುತ್ತದೆ. ಇದೊಂಥರಾ ಸಮಾಧಿಸ್ಥಿತಿ. ಸಾವು- ಹುಟ್ಟು ಒಂದೇ ರೀತಿ ಕಾಣತೊಡಗುತ್ತದೆ. ಯಾರಾದರೂ ಬೈದರೂ ಅಷ್ಟು ಬೇಸರವಾಗುವುದಿಲ್ಲ. ಮನುಷ್ಯ ಎಂಬತ್ತು ವರ್ಷ ಬದುಕುವುದೇ ಈ ಸ್ಥಿತಿ ತಲುಪಲೆಂದೇನೋ ಎಂದು ನಿದ್ದೆಗೆ ಜಾರಿದರು. ಅಪ್ಪನಿಗೆ ಅರಳುಮರಳು ಎಂದು ಸುಮ್ಮನಾದೆ. ಆದರೆ ಇಂದು ನನಗೆ ಎಂಬತ್ತಾಗಿದೆ. ಅಪ್ಪ ಹೇಳಿದ ಎಲ್ಲಾ ಮಾತು ಸತ್ಯ ಎನ್ನಿಸತೊಡಗಿದೆ.

- ಶಶಾಂಕ್ ಭಟ್ ನಿವಣೆ
Shashankbhat90@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.