ಗುರುಗಳಿಗೆ ಗೌರವ

ಗಾಂಧಿ ತತ್ವಗಳ ನೈಜ ಅನುಷ್ಠಾನ, ಕೋಮು ಸೌಹಾರ್ದತೆ, ಬಸವ ವಚನಗಳ ಸಾರದ ಪಾಠ ಕಲಿಸುವುದು...
ಇವೇನು ಯಾವುದೋ ಕಾರ್ಯಕ್ರಮದಲ್ಲಿ ಕೇಳಿದ ಭಾಷಣದ ವಿಚಾರಗಳಲ್ಲ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯ ಸಂಗಮೇಶ್ವರ ದೇಗುಲದಲ್ಲಿ ಗಾಂಧಿ ಜಯಂತಿಯಂದು ಈ ವೈವಿಧ್ಯತೆಯನ್ನು ನೋಡಿ ಆಸ್ವಾದಿಸಬಹುದು.
ಮುಸ್ಲಿಂ ಕುಟುಂಬವೊಂದು ಅಗಲಿದ ತಂದೆಯ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಹಿಂದು ದೇಗುಲದಲ್ಲಿ ಆಯೋಜಿಸುತ್ತದೆ. ಆದರ್ಶ ನಿವೃತ್ತ ಶಿಕ್ಷಕರನ್ನು ಸನ್ಮಾನವೂ ಇಲ್ಲಿರುತ್ತದೆ. ಆ ಕುಟುಂಬದ ಎಲ್ಲರು ತಮ್ಮ ದುಡಿಮೆಯ ಅಲ್ಪ ಹಣದಲ್ಲಿ ಈ ಕಾರ್ಯವನ್ನು ನಡೆಸುತ್ತಿದ್ದಾರೆ. 22 ವರ್ಷಗಳಿಂದ.
ಅಪ್ಪನ ನೆನಪಿಗಾಗಿ...
ಬಿದರಕುಂದಿ ಗ್ರಾಮದವರೇ ಆದ ದಿ. ನಬಿಸಾಬ ಎಲ್. ನಾಯ್ಕೋಡಿ ಕಡುಬಡತನದಲ್ಲಿ ಮುಲ್ಕೀ ಪರೀಕ್ಷೆ ಪಾಸಾಗಿ ಶಿಕ್ಷಕರಾದರು. ಸಿಂಧಗಿ ತಾಲೂಕಿನ ಬಿಂಜಲಭಾವಿಯಲ್ಲಿ ಆಗಿನ ಗಾಂವಟಿ ಶಾಲೆ ಶಿಕ್ಷಕರಾಗಿ ಗ್ರಾಮಸ್ಥರು ಕೊಟ್ಟ ಊಟ ಮಾಡುತ್ತ, ಮಕ್ಕಳಿಗೆ ಪಾಠ ಕಲಿಸುತ್ತಿದ್ದರಂತೆ. ನಂತರ ಸೋಮನಾಳ, ರೂಢಗಿ, ಮನಗೂಳಿ, ಬ್ಯಾಕೋಡ, ಹುಲಿಬೆಂಚಿ, ಹೂವಿನ ಹಿಪ್ಪರಗಿ ಹೀಗೆ ಹಲವು ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನೂರಾರು ಬಡ ಮಕ್ಕಳಿಗೆ ಉಚಿತ ಪಾಠ, ನಿರ್ಗತಿಕರನ್ನು ತಮ್ಮ ಜೊತೆಗೇ ಇಟ್ಟುಕೊಂಡು ಓದು ಕಲಿಸಿದ ಕರುಣಾಮಯಿ. ಗಾಂಧಿ ತತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದರು. ಅವರೀಗ ಇಲ್ಲ. ಹೀಗಾಗಿ, ತಂದೆ ನೆನಪಿನಲ್ಲಿ ಮಕ್ಕಳು ಅವರ ಕಾರ್ಯದ ಕನಸುಗಳನ್ನು ಈ ಕಾರ್ಯಕ್ರಮದ ಮೂಲಕ ವಿಸ್ತರಿಸುತ್ತಿದ್ದಾರೆ.
25 ವರ್ಷಗಳ ಹಿಂದೆ ತಂದೆ ನಬಿಸಾಬ ತೀರಿಕೊಂಡಾಗ, ತಾಯಿ ಸಾಹೇಬ್ಬಿಯವರು ಇಂಥ ಸೇವೆ ಮಾಡಲು ಸಲಹೆ ನೀಡಿದರು. ಅದರಂತೆ ಮಗ ಹಾಗೂ ಕೆಎಸ್ಸಾರ್ಟಿಸಿ ತಾಂತ್ರಿಕ ಸಹಾಯಕ ಅಬ್ದುಲ್ ರೆಹಮಾನರು ತಂದೆಯ ಆದರ್ಶ ಮುಂದುವರಿಸಲು ತಮ್ಮಂದಿರಾದ ಇಬ್ರಾಹಿಂ, ಮೊಹ್ಮದ್ ರಫೀಕ್, ಬಷೀರ ಅಹ್ಮದ್‌ರೊಂದಿಗೆ ಚರ್ಚಿಸಿ ಗಟ್ಟಿ ನಿರ್ಧಾರ ಕೈಗೊಂಡರು. ಆದರ್ಶ ನಿವೃತ್ತ ಶಿಕ್ಷಕರ ಪ್ರತಿಷ್ಠಾನ ರಚಿಸಿ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಿದರು.
ಅ.2ರ ಆ ದಿನ ಬರೀ ಸನ್ಮಾನ ಕಾರ್ಯಕ್ರಮ ಮಾತ್ರ ಅಲ್ಲ. ಅಲ್ಲಿ ಗಾಂಧಿ ತತ್ವಾದರ್ಶ, ಬಸವಾದಿ ಶರಣರ ವಚನ ಸಾರ, ಕೋಮು ಸೌಹರ್ದತೆಯ ಪಾಠ, ಹಿರಿಯರ ನೀತಿ ಬೋಧನೆ... ಹೀಗೆ ಎಲ್ಲವೂ ಮೇಳೈಸಿರುತ್ತದೆ. ಪ್ರೊ.ದೊಡ್ಡರಂಗೇಗೌಡ, ಡಾ. ಸಿಂಪಿ ಲಿಂಗಣ್ಣ, ದಾನಪ್ಪ ಜತ್ತಿ, ನಾಟಕಕಾರ ಎನ್. ಬಸವರಾಜ್, ವಿಡಂಬನಕಾರ ಡಾ. ಶಂಭು ಬಳಿಗಾರ, ಪರಿಸರಪ್ರೇಮಿ ಸ್ವಾಮೀಜಿ ನಂದಿವೇರಿ ಶಿವಕುಮಾರ ಶ್ರೀ, ನಿರ್ಭಯಾನಂದ ಶ್ರೀ, ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು, ಲೇಖಕ ರಹಮತ್ ತರೀಕೆರೆ ಈ ಕಾರ್ಯಕ್ರಮದ ವೇದಿಕೆ ಹಂಚಿಕೊಂಡಿದ್ದಾರೆ. ಈ 23 ವರ್ಷಗಳಲ್ಲಿ 325ಕ್ಕೂ ಅಧಿಕ ನಿವೃತ್ತ ಶಿಕ್ಷಕರು ಇಲ್ಲಿ ಸನ್ಮಾನಿತರಾಗಿದ್ದಾರೆ.
- ಚಿತ್ರ- ಲೇಖನ: ಡಿ.ಬಿ. ವಡವಡಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


