ಸಾಧನೆ

ಆತ್ಮ ಸೌಂದರ್ಯ

ಹಸಿರುಟ್ಟ ಗಿಡಮರಗಳು, ಮೈಮನ ಪುಳಕಗೊಳಿಸುವ ನೀರಬುಗ್ಗೆಗಳು, ಬಣ್ಣದ ಬೆಳಕಲ್ಲಿ ಚಿತ್ತಾರ...

ಆತ್ಮ ಸೌಂದರ್ಯ
Published On :

ಹಸಿರುಟ್ಟ ಗಿಡಮರಗಳು, ಮೈಮನ ಪುಳಕಗೊಳಿಸುವ ನೀರಬುಗ್ಗೆಗಳು, ಬಣ್ಣದ ಬೆಳಕಲ್ಲಿ ಚಿತ್ತಾರ ಮೂಡಿಸುವ ಕಾರಂಜಿಗಳು, ನಾಟ್ಯರಾಣಿ ಶಾಂತಲೆಯ ನಾಟ್ಯಮಂಟಪ ನೆನಪಿಸುವ ಶ್ವೇತ ಮಂಟಪ, ಒಪ್ಪ-ಓರಣದಿಂದ ಕೂಡಿದ ಸ್ವಚ್ಛ ಪರಿಸರ, ರಮ್ಯ ಕೊಳ, ಅದರ ಸುತ್ತಲೂ ಜೀವವೆತ್ತು ತೋರುವ ಮೊಸಳೆ, ಆಮೆ- ಮೀನಿನ ಕಲಾಕೃತಿಗಳು; ಕೊಳದೊಳಗೆ ನಿರ್ಮಿಸಿರುವ ಸಂಜೀವಿನಿ ಪರ್ವತವನ್ನು ಹೊತ್ತು ತರುತ್ತಿರುವ 30 ಅಡಿ ಎತ್ತರದ ಆಂಜನೇಯನ ಮೂರ್ತಿ... ಇವೆಲ್ಲದರ ದರ್ಶನ ಸಿಗುವುದು ಆತ್ಮಲಿಂಗೇಶ್ವರನ ಸನ್ನಿಧಿಯಲ್ಲಿ.
ಮಂಡ್ಯದ ಮದ್ದೂರು ತಾಲೂಕಿನ ಕಾಳಮುದ್ದನದೊಡ್ಡಿಯ ಆತ್ಮಲಿಂಗೇಶ್ವರ ನಿಸರ್ಗ ಧಾಮಕ್ಕೆ ಕಾಲಿಟ್ಟೊಡನೆಯೇ ನೀರಿನ ಜುಳು ಜುಳು ನಿನಾದ ಕಿವಿಗೆ ಇಂಪು ನೀಡುತ್ತದೆ. ನಿನಾದ ಬಂದೆಡೆ ಕಣ್ಣು ಹಾಯಿಸಿದರೆ ಗೋಡೆಯ ಮೇಲಿಂದ ಲಯಕ್ಕನುಸಾರ ಬೀಳುವ ನೀರಿನೊರತೆ ನೋಡುಗರನ್ನು ಆಕರ್ಷಿಸುತ್ತದೆ. ಇದೇನಿದು?ಎಂಬ ಪ್ರಶ್ನೆ ಮನದಲ್ಲಿ ಮೂಡುವ ಮುನ್ನವೇ ಆ ಗೋಡೆಯ ಮೇಲಿನ 'ಆತ್ಮಲಿಂಗೇಶ್ವರ ನಿಸರ್ಗ ಧಾಮ' ಎಂಬ ಫಲಕ ಕಾಣಿಸುತ್ತದೆ. ಅದನ್ನು ನೋಡಿ ಅದರತ್ತ ಸಾಗಿ, ಬಾಗಿಲನ್ನು ದಾಟುತ್ತಿದ್ದಂತೆ, 'ವೆಲ್ ಕಂ' ಫಲಕವನ್ನೆತ್ತಿ ಹಿಡಿದು ಸ್ವಾಗತ ಕೋರುವ ಒರಾಂಗುಟಾನ್ ಕಣ್ಸೆಳೆಯುತ್ತದೆ. ಆ ಒರಾಂಗುಟಾನ್ ನೋಡಿ ಹಾಗೇ ಬಲಕ್ಕೆ ಸಾಗಿದಂತೆ ದಾರಿಯ ಇಕ್ಕೆಲಗಳಲ್ಲಿನ ಬಹುವಿಧದ ಹೂ ಗಿಡಗಳು ಕಣ್ಣಿಗೆ ಆನಂದ ಕೊಡುತ್ತವೆ.
ಇಲ್ಲಿನ ತಿಳಿನೀರ ಕೊಳ ಒಂದು ಎಕರೆಗಿಂತಲೂ ಹೆಚ್ಚು ವಿಶಾಲ ಮತ್ತು ಐದು ಅಡಿ ಆಳವಿದೆ. ಇದರೊಳಗೆ ನಿಂತ ದೋಣಿಗಳು ಈಜಾಟದ ಬಯಕೆಯನ್ನು ಮುರಿದು ಬೋಟಿಂಗ್ ಪೆಡಲ್ ತುಳಿಯುವಂತೆ ಮಾಡುತ್ತವೆ.    ಇಂಥ ಮನೋಹರ ಕೊಳದ ಸುತ್ತಲೂ ಜೀವತಳೆದು ಮೇಲೆದ್ದು ಬಂದಂತೆ ಕಾಣುವ ಮೊಸಳೆ, ಆಮೆ, ಮೀನುಗಳು ದಡದಲ್ಲಿ ಕುಳಿತು ಬಿಸಿಲು ಕಾಯಿಸುತ್ತಿರುವಂತೆ ಕಾಣುತ್ತಿವೆ. ಇಲ್ಲೇ ಬೃಹತ್ತಾದ ಆಂಜನೇಯನ ಮೂರ್ತಿಯೂ ಇದೆ. ಸಂಜೀವಿನಿ ಪರ್ವತವನ್ನು ಹೊತ್ತು ತರುವಂತೆ ತೋರುವ ಈ ಮೂರ್ತಿ ನೆಲಮಟ್ಟದಿಂದ 30 ಅಡಿ ಎತ್ತರವಿದೆ. ಇದನ್ನು ಕೊಳದೊಳಗೆ ಇರುವ ಬಂಡೆಗಲ್ಲಿನ ಮೇಲೆ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ.
ಇಲ್ಲೇ ಮುಂದೆ ಹೋದರೆ ಭವ್ಯವಾದ ಶ್ವೇತ ರಾಜಮಂಟಪ ಸ್ವಾಗತಿಸುತ್ತದೆ. ಇದು ಹೊಯ್ಸಳ ರಾಣಿ ಶಾಂತಲೆಯ ನಾಟ್ಯ ಮಂಟಪವನ್ನು ನೆನಪಿಸುತ್ತದೆ. ಬೆಣಚು ಕಲ್ಲಿನಿಂದ ಓರಣವಾಗಿ ಅಲಂಕರಿಸಿ ನಿರ್ಮಿಸಿರುವ ನೀರ ಹರಿದಾರಿಗಳು, ಕಾರಂಜಿಗಳು, ಲಯಕ್ಕನುಸಾರವಾಗಿ ಚಿಮ್ಮುವ ನೋಟವನ್ನು ಖುದ್ದು ನೋಡಿಯೇ ಸವಿಯಬೇಕು.
ಅದರ ಪಕ್ಕದಲ್ಲಿಯೇ ಸ್ವಲ್ಪ ಹೆಜ್ಜೆ ಸವೆಸಿದರೆ ಬಗೆ ಬಗೆಯ ಮೀನು ಕೊಳ, ಮಕ್ಕಳಿಗಾಗಿಯೇ ಮೀಸಲಾದ  ಪ್ಲೇ ಪಾರ್ಕು- ಇವು ಮಕ್ಕಳ ಕನಸಿಗೆ ರೆಕ್ಕೆಪುಕ್ಕ ನೀಡಿ ಮತ್ತಷ್ಟು ಮುದನೀಡುತ್ತವೆ. ಹೊಟ್ಟೆ ಚುರುಗುಟ್ಟಿದರೆ ಅಥವಾ ತಿಂಡಿಪೋತರಿಗೆ, ಕುರುಕಲು ತಿಂಡಿ ಬಯಸೋರಿಗೂ ಇಲ್ಲಿರುವ 'ಫುಡ್‌ಕೋರ್ಟ್‌' ಸಾಥ್ ನೀಡುತ್ತದೆ.
ಸಸ್ಯಪ್ರಿಯರು, ಸುಮಪ್ರಿಯರಿಗೂ ಈ ನಿಸರ್ಗಧಾಮ ಜ್ಞಾನಶಾಲೆಯೂ ಆಗುತ್ತದೆ. ಇಲ್ಲಿ ವಿವಿಧ ದೇಶಗಳ ವೈವಿಧ್ಯ ಹೂಗಳು, ಗಿಡಗಳು, ಔಷಧಿ ಸಸ್ಯಗಳಿವೆ.
ಇನ್ನೇನು ಪಾರ್ಕು ನೋಡಿಯಾಯಿತು ಎಂದು ಕಾಲ್‌ಕೀಳುವಷ್ಟರಲ್ಲಿ ಧುತ್ತನೆ ನಮ್ಮನ್ನು ಯಾವುದೋ ಪ್ರಾಣಿಗಳ ಹಿಂಡು ಅಡ್ಡಗಟ್ಟುತ್ತವೆಂದು ಭಾಸವಾಗುತ್ತದೆ. ಅರೆರೆ, ಹೌದು. ಅದು ಈಗ ತಾನೇ ರಚನಾ ಹಂತದಲ್ಲಿ ಇರುವ ಡೊಮೆಸ್ಟಿಕ್ ಮತ್ತು ವೈಲ್ಡ್ ಅನಿಮಲ್ ಪಾರ್ಕು. ಅಲ್ಲಿರುವುದು ಬೇರೇನಲ್ಲ... ಜಿಂಕೆ, ಕುರಿ ಮತ್ತು ಹುಲಿ ಹಿಂಡಿನ ಕಲಾಕೃತಿಗಳು.
ಇಂಥ ವೈವಿಧ್ಯತೆಯ ನಿಸರ್ಗಧಾಮದ ನಿರ್ಮಾಣಕ್ಕೆ ಖರ್ಚಾಗಿದ್ದು 1 ಕೋಟಿ ರುಪಾಯಿ. ನಿರ್ಮಿಸಿರುವುದು ಭಾರತಿ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಮಧು ಜಿ. ಮಾದೇಗೌಡ. ಇದು ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡರ ಕನಸಿನ ಕೂಸು. ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಒಂದು ಸಾವಿರ ಮಂದಿ ಭೇಟಿ ಕೊಡುವ ಇಲ್ಲಿಗೆ ಬೇಸಿಗೆ ದಿನಗಳಲ್ಲಿ 5 ಸಾವಿರಕ್ಕಿಂತಲೂ ಮೀರಿದ ವೀಕ್ಷಕರು ಬರುತ್ತಾರೆ ಅಂತಾರೆ ಪಾರ್ಕಿನ ಉಸ್ತುವಾರಿ ಹೊತ್ತ ನಾಗರಾಜು.

ನೀವೂ ನೋಡಬೇಕಾ?
ಬೆಂಗಳೂರಿನಿಂದ 95 ಕಿ.ಮೀ. ದೂರವಿದೆ ಈ ಧಾಮ. ಮದ್ದೂರಿನಲ್ಲಿ ಎಡಕ್ಕೆ ತಿರುಗಬೇಕು. ಜಿಲ್ಲಾ ಕೇಂದ್ರವಾದ ಮಂಡ್ಯದಿಂದ 20 ಕಿ.ಮೀ ದೂರವಿದೆ. ತಾಲೂಕು ಕೇಂದ್ರ ಮದ್ದೂರಿನಿಂದ ಮಳವಳ್ಳಿ ಮಾರ್ಗವಾಗಿ ಬಂದರೆ 10 ಕಿ.ಮೀ. ದೂರ. ಇಲ್ಲಿಗೆ ಮಳವಳ್ಳಿ ಮಾರ್ಗವಾಗಿಯೂ ಬರಬಹುದಾಗಿದ್ದು, ಅಲ್ಲಿಂದ 18 ಕಿ.ಮೀ. ಆಗುತ್ತದೆ. ಇಲ್ಲಿಂದ 25 ಕಿ.ಮೀ. ಸಾಗಿದರೆ ಕಾವೇರಿ ನದಿ, ಗಗನ ಚುಕ್ಕಿ- ಭರ ಚುಕ್ಕಿ ಜಲಪಾತಗಳನ್ನು ನೋಡಬಹುದು.

- ರೇಷ್ಮಾ ಎಚ್.ಸಿ. ಗೌಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.