ಸಾಧನೆ

ಪಾಡ್ದನದ ಶೆಡ್ತಿ

ಪಾಡ್ದನದ ಶೆಡ್ತಿ
Published On :

ತುಳುವಿನ ಮುಖ್ಯ ಜನಪದ ಮಹಾಕಾವ್ಯಗಳಲ್ಲಿ ಸಿರಿ ಕಾವ್ಯ ಲೋಕವೂ ಒಂದು. ದಕ್ಷಿಣ ಕನ್ನಡದ ಕೆಲ ದೇವ- ದೈವಸ್ಥಾನಗಳಲ್ಲಿ ಸಿರಿ ಜಾತ್ರೆ ನಡೆಯುತ್ತದೆ. ಅಲ್ಲಿ ಸಿರಿಸಂಧಿ ಅಥವಾ ಪಾಡ್ದನಗಳನ್ನು ಹೇಳಿಕೊಂಡು ಆವೇಶದಿಂದ ನರ್ತನ ಮಾಡುತ್ತಾರೆ. ಇದು ದೈವಿಕತೆ ಎಂಬ ನಂಬಿಕೆ ಇಲ್ಲಿಯವರದ್ದು.

ಸಂಧಿಗಳನ್ನು ಹೇಳುವುದೂ ಒಂದು ಕಲೆ. 400ಕ್ಕೂ ಹೆಚ್ಚು ಪುಟಗಳಲ್ಲಿ ಬರೆದಿಡಬಹುದಾಗಿರುವ ಪಾಡ್ದನವನ್ನು ಕಂಠಪಾಠದಲ್ಲಿ ಹೇಳಲು ಸಾಮರ್ಥ್ಯವಿರುವವರು ಹಿಂದೆ ಇದ್ದರು. ಈಗ ಬೆರಳೆಣಿಕೆಯ ಮಂದಿ ಮಾತ್ರ. ಅಂಥವರ ಪೈಕಿ ಅಳದಂಗಡಿ ಪೇಟೆ ಸನಿಹದ ಬಡಗಕಾರಂದೂರು ಗ್ರಾಮದ ಒಬ್ಬೆದೊಟ್ಟು ಮನೆಯಲ್ಲಿ ವಾಸಿಸುತ್ತಿರುವ ಕರ್ಗಿ ಶೆಡ್ತಿ ಒಬ್ಬರು.

ಬಡತನದ ಬೇಗೆಯಲ್ಲಿ ಬೆಂದ ಜೀವವಾಗಿದ್ದರೂ ಸುಮಾರು 15 ಸಾವಿರ ಗೆರೆಗಳನ್ನು ನೆನಪಿನಲ್ಲಿಡುವ ಅಗಾಧ ಸ್ಮರಣ ಶಕ್ತಿ ಮತ್ತು ಸಂದರ್ಭಕ್ಕೆ ಸರಿಯಾಗಿ ಹಿಗ್ಗಿಸಿ, ಕುಗ್ಗಿಸಿ ಕಾವ್ಯ ಹೆಣೆಯುವ ಪಾಂಡಿತ್ಯ ಇರುವ ಇವರು ಸಿರಿಪಾಡ್ದನವನ್ನು ನಿರರ್ಗಳವಾಗಿ ಸತತ ಮೂರು ದಿನ ಹಾಡುವ ತಾಕತ್ತನ್ನು ಹೊಂದಿದ್ದಾರೆ.

ಕರ್ಗಿ ಶೆಡ್ತಿ 'ಸಿರಿ'ಯಾಗಿ ನೇಮಕಗೊಂಡಿದ್ದು 14ನೇ ವರ್ಷದಲ್ಲಿ. 28ಕ್ಕೂ ಹೆಚ್ಚು ವರ್ಷ ಕಾಲ ಸತತ ಸಿರಿಜಾತ್ರೆಯಲ್ಲಿ ಭಾಗವಹಿಸಿದ್ದಾರೆ. ಸಿರಿ ಸಂಧಿ ಮಾತ್ರವಲ್ಲದೆ ದೇವು ಪೂಂಜನ ಸಂಧಿ, ಗದ್ದೆಯ ನಾಟಿ ಮಾಡುವಾಗ ಹೇಳುವ ಸಂಧಿ, ಹಾ ಲೆಲ್ಲೆ ಸಂಧಿ, ಕಂಡ ಅಳಿಯುನ ಅಂದರೆ ಭತ್ತದ ಗದ್ದೆಯ ಬದುವಲ್ಲಿ ನಿಂತು ಹಾಡುವ ಸಂಧಿ, ಪಂದರ್ ಪಾಡ್ದನ, ಕೋಟಿ ಚೆನ್ನಯ ಪಾಡ್ದನವೂ ಇವರಿಗೆ ಗೊತ್ತು. ಇದೆಲ್ಲದರ ಜೊತೆಗೆ ಹೆರಿಗೆ ಮಾಡಿಸುವುದರಲ್ಲೂ ಜಾಣ್ಮೆಯ ಕೈ ಇವರದ್ದು.

ಗುರು ಕಲಿಸುವ ವಿದ್ಯೆಯಲ್ಲ
'ನಾನು ಶಾಲೆ ಕಲಿತದ್ದು ಮೂರನೇ ತರಗತಿವರೆಗೆ ಮಾತ್ರ. ಇದು ನನಗೆ ಗುರುವಿಲ್ಲದ ವಿದ್ಯೆಯಾಗಿದೆ. ಅತ್ರಿಜಾಲ್ ಮಹಾಲಿಂಗೇಶ್ವರ ದೇವರ ಧರ್ಮ ಹಾಗೂ ದಯೆ ಇದುವೇ ಕಾರಣ. ನಾವು ಸತ್ಯದಲ್ಲಿ ಏನನ್ನು ನುಡಿಯುತ್ತೇವೆಯೋ ಅದನ್ನೇ ನಾವು ಹೃದಯಲ್ಲಿ ಇಟ್ಟುಕೊಂಡದ್ದು. ಇದು ಕಲಿತು, ಗುರುವಿನ ಮೂಲಕ ಬರುವಂಥ ವಿದ್ಯೆ ಅಲ್ಲ. ಪ್ರಾರಂಭದಲ್ಲಿ ಪುರ್ಪ (ಹಿಂಗಾರದ ಹೂ) ಹಿಡಿದು ನಾವು ದಲಿಯ (ಜಾತ್ರೆಯಲ್ಲಿ)ದಲ್ಲಿ ನಿಂತಾಗ ಸ್ವಲ್ಪ ಕಡಿಮೆ ಹಾಡು ಬಂದಿರಬಹುದು. ಕ್ರಮೇಣ ತನ್ನಿಂದ ತಾನಾಗೇ ಇದರ ಅನುಭವ ಬಂದು ಬಿಡುತ್ತದೆ' ಎಂದು ಕರ್ಗಿ ಶೆಡ್ತಿ ಹೇಳುತ್ತಾರೆ.

ಬೃಹತ್ ಗ್ರಂಥ
ಕರ್ಗಿ ಶೆಡ್ತಿ ಅವರ ಪಾಡ್ದನ ಜ್ಞಾನವನ್ನು ಉಡುಪಿಯ ಕರ್ನಾಟಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದವರು ಪ್ರೊ. ಹೇರಂಜೆ ಕೃಷ್ಣ ಭಟ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ. ಅಶೋಕ ಆಳ್ವ ಕೆ. ಅವರ ಸಂಪಾದಕತ್ವದಲ್ಲಿ ದಾಖಲಿಸಿದ್ದಾರೆ. ಶೆಡ್ತಿಯವರ ಸಮಗ್ರ ಕಾವ್ಯವನ್ನು 'ಕರ್ಗಿ ಶೆಡ್ತಿ ಹಾಡಿರುವ ಸಿರಿಕಾವ್ಯಲೋಕ' ಎಂಬ 608 ಪುಟಗಳ ಬೃಹತ್ ಗ್ರಂಥವನ್ನು ಹೊರತಂದಿದ್ದಾರೆ. ಈ ದಾಖಲೀಕರಣದ ಯೋಜನೆಗೆ ಪ್ರೊ.ಕು.ಶಿ. ಹರಿದಾಸ ಭಟ್ ರೂವಾರಿಯಾಗಿದ್ದು, ಫಿನ್ಲೆಂಡಿನ ಜಾನಪದ ವಿದ್ವಾಂಸ ಪ್ರೊ. ಲೌರಿ ಹೋಂಕೋ ಮೂಲಪ್ರೇರಕರಾಗಿ ಮಾರ್ಗದರ್ಶಕರು.

ಕರ್ಗಿ ಶೆಡ್ತಿ ಅವರಿಗೆ 2011ರಲ್ಲಿ ರಾಜ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ತಾಯಮ್ಮ ಎಸ್.ಸಿ. ಮಲ್ಲಯ್ಯ ಜಾನಪದ ಕಲಾವಿದ ಪ್ರಶಸ್ತಿ ಹಾಗೂ ವೀರರಾಣಿ ಅಬ್ಬಕ್ಕ ಪ್ರಶಸ್ತಿಗಳು ಸಂದಿವೆ.

- ದೀಪಕ್ ಅಳದಂಗಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.