ಸಾಧನೆ

ಕಾಮತ್ ಕೈ ರುಚಿ

ಕಾಮತ್ ಕೈ ರುಚಿ
Published On :

ಉಜಿರೆಯಿಂದ ಚಾರ್ಮಾಡಿಯ ಹಾದಿಯಲ್ಲಿ ಎರಡು ಕಿಲೋಮೀಟರ್ ಸಾಗಿದಾಗ ಸಿಗುವ ಪುಟ್ಟ ಊರು ನಿಡಿಗಲ್. ಇಲ್ಲಿಗೆ ತಲಪುವಾಗಲೇ ತೇಲಿಬರುವ ಕಾದ ತೆಂಗಿನೆಣ್ಣೆಯ ಕಂಪು ನಾಲಗೆಯಲ್ಲಿ ನೀರೂರುವಂತೆ ಮಾಡುತ್ತದೆ. ನಿಜ ಹದಿನೈದು ವರ್ಷಗಳಿಂದ ನಿಡಿಗಲ್ ಎಣ್ಣೆಯಿಂದ ತಯಾರಿಸುವ ವೈವಿಧ್ಯಮಯ ತಿಂಡಿಗಳ ಗೃಹೋದ್ಯಮಕ್ಕೆ ಹೆಸರಾಗಿದೆ. ಇಲ್ಲಿ ಸಿಗುವ ಖಾದ್ಯಗಳ ರುಚಿ ನೋಡಿದವರು ಇನ್ನೊಮ್ಮೆ ಅದಕ್ಕಾಗಿಯೇ ಹುಡುಕಿಕೊಂಡು ಬರುವಷ್ಟು ಅವು ಸ್ವಾದಿಷ್ಟವೂ ಆಗಿವೆ. ಅರವತ್ತರ ಹರೆಯದ ಶೈಲಜಾ ಕಾಮತ್ ಈ ವಿಶಿಷ್ಟ ಉದ್ಯಮದ ಮೂಲಕ ಊರಿಗೆ ಒಳ್ಳೆಯ ಹೆಸರು ತಂದಿದ್ದಾರೆ.

ಹೆದ್ದಾರಿಗೆ ಅಂಟಿಕೊಂಡೇ ಶೈಲಜಾ ಅವರ ಗೃಹೋದ್ಯಮವಿದೆ. ಪತಿ ಮಾಧವ ಕಾಮತ್ ಅವರಿಗೆ ಸಾಥ್ ನೀಡುತ್ತಾರೆ. ಇವರು ತಯಾರಿಸುವ ಗರಿಗರಿ ಚಕ್ಕುಲಿಗಳಿಗೆ ಅಕ್ಕಿ ಮತ್ತು ಉದ್ದಿನಬೇಳೆ ಮಾತ್ರ ಬಳಸಿದ್ದರೂ ಶೈಲಜಾ ಅವರ ಪಾಕಕೌಶಲ ಅದಕ್ಕೆ ವಿಶಿಷ್ಟ ಸ್ವಾದ ನೀಡಿದೆ. ಹಾಗೆಯೇ ಬಟಾಟೆ, ಹಲಸಿನಕಾಯಿಯ ಹಪ್ಪಳಗಳನ್ನೂ ತಯಾರಿಸುತ್ತಾರೆ. ಇನ್ನು ಸಂಡಿಗೆಗಳಲ್ಲಿ ಹತ್ತು ಹಲವು ಬಗೆ. ಬಿದಿರುಗಣಿಲೆ, ಸಾಬಕ್ಕಿ, ನುಗ್ಗೆಸೊಪ್ಪು,  ಉದ್ದಿನಬೇಳೆ, ನೀರುಳ್ಳಿ, ಬೆಳ್ಳುಳ್ಳಿ ಮುಂತಾಗಿ ನಾನಾ ರುಚಿಯ ಸಂಡಿಗೆಗಳಿವೆ. ಮಜ್ಜಿಗೆಯಲ್ಲಿ ನೆನೆಸಿ ಒಣಗಿಸಿದ ಮೆಣಸು ಕರಿದರೆ ಊಟಕ್ಕೆ ಬಲು ರುಚಿಕರ. ಒಣಗಿಸಿದ ತೊಂಡೆಕಾಯಿಯೂ ಇಲ್ಲಿ ಲಭ್ಯ. ಕರಿದರೆ ಅದಕ್ಕಿರುವ ರುಚಿಯೇ ಬೇರೆ. ಬೇಸಿಗೆಯಲ್ಲಿ ಶೈಲಜಾ ತಮ್ಮ ಸೊಸೆಯ ಜೊತೆಗೂಡಿ ಇದನ್ನೆಲ್ಲ ತಯಾರಿಸಿ ಮಳೆಗಾಲದ ವ್ಯಾಪಾರಕ್ಕೂ ದಾಸ್ತಾನಿಡುತ್ತಾರೆ. ಸಮಾರಂಭಗಳಿಗೆ ಹಾಗೂ ಸ್ಥಳೀಯ ಹೋಟೆಲುಗಳಿಗೆ ಬೇಕು ಅಂತ ಕೇಳಿಕೊಂಡವರಿಗೆ ಅಕ್ಕಿಯ ಶಾವಿಗೆ ಮತ್ತು ಪುಂಡಿಯನ್ನು ಕೂಡ ಮಾಡಿ ಕೊಡುತ್ತಾರೆ.

ಈ ತಿಂಡಿಗಳ ಖ್ಯಾತಿ ಗೊತ್ತಿರುವ ಗ್ರಾಹಕರು ಇಲ್ಲಿಗೆ ತಾವಾಗಿಯೇ ಅರಸಿಕೊಂಡು ಬರುತ್ತಾರೆ. ಬೇಕರಿ ಮತ್ತು ಅಂಗಡಿಗಳವರು ಮಾರಾಟಕ್ಕಾಗಿ ಕೊಂಡೊಯ್ಯುತ್ತಾರೆ. ಶೈಲಜಾ ಅವರಿಗೆ ಉದ್ಯಮದ ಬೆಳವಣಿಗೆಯಲ್ಲಿ ಲಾಯಿಲದ ದಯಾಳ್ ಬಾಗ್ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸಿದೆ. ವಿಮುಕ್ತಿ ಸ್ವಸಹಾಯ ಸಂಘದಲ್ಲಿ ಶೈಲಜಾ ಸದಸ್ಯೆಯಾಗಿ ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಮಾರ್ಗದರ್ಶನವಲ್ಲದೆ, ಸಾಲದ ನೆರವನ್ನೂ ಪಡೆದಿದ್ದಾರೆ. ಉತ್ಪಾದನೆಗೆ ಚಿತ್ತಾಕರ್ಷಕವಾಗಿ ಪ್ಯಾಕ್ ಮಾಡುವುದೂ ವ್ಯಾಪಾರ ವೃದ್ಧಿಗೆ ಸಹಾಯಕವೆಂಬುದನ್ನು ಅರಿತವರು ಇವರು.

ಇಳಿವಯಸ್ಸಿನಲ್ಲೂ ಹುಮ್ಮಸ್ಸಿನಿಂದ ದುಡಿದು ಗ್ರಾಹಕರ ಮನ ಗೆದ್ದಿರುವ ಶೈಲಜಾ ಕಾಮತರ ಜೀವನೋತ್ಸಾಹ ಬದುಕಿನಲ್ಲಿ ಒಳ್ಳೆಯದನ್ನು ಸಾಧಿಸಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ತೋರಿಸಿಕೊಡುತ್ತದೆ. ಅವರ ಸಂಪರ್ಕ, 9740561720.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.