ಶತಕದಂಚಿನ ಸಂಪಾದಕ

ಇಳಿವಯಸ್ಸಿನಲ್ಲೂ ಎಳೆವಯಸ್ಸಿನ ಚುರುಕುತನ ಇಟ್ಟುಕೊಂಡು ಯುವ ಚೇತನಕ್ಕೆ ಮಾದರಿಯಾಗಿ ಸರಸ್ವತಿಯ ಸೇವೆ ಮಾಡುತ್ತಿರುವವರು ಹರಿಹರಪುರ ಬಿ. ಸುಬ್ರಹ್ಮಣಂ.
ಸುಬ್ರಹ್ಮಣಂ ಎಂದರೆ ಹಳಬರಿಗೂ ತಿಳಿಯದು. ಆದರೆ ಶ್ಯಾನುಭೋಗರು ಎಂದರೆ ಥಟ್ಟನೆ ಅಲ್ಲೊಂದು ಗಂಭೀರ ವದನ ಕಣ್ಮುಂದೆ ಸುಳಿಯುತ್ತದೆ, ಕಂಚಿನ ಕಂಠ ಕಿವಿ ನಿಮಿರಿಸುತ್ತದೆ.
ಮಲೆನಾಡ ಮೂಲೆಯಲ್ಲಿ, ಬಡತನದ ಬೇಗೆಯಲ್ಲಿ ಹುಟ್ಟಿ ಜೀವನದ ಹತ್ತು ಹಲವು ಮಜಲುಗಳನ್ನು ಅನುಭವಿಸಿ 97 ವಸಂತಗಳನ್ನು ಕಂಡಿರುವ ಶಾನುಭೋಗರು 11 ವರ್ಷದಿಂದ ಹರಿಹರಪುರ ಶ್ರೀಮಠ ನಡೆಸುತ್ತಿರುವ 'ಸ್ವಯಂಪ್ರಕಾಶ' ಎಂಬ ಧಾರ್ಮಿಕ ಮಾಸಪತ್ರಿಕೆಯ ಸಂಪಾದಕರಾಗಿ ಶತಕದಂಚಿನಲ್ಲೂ ಕ್ರಿಯಾಶೀಲರಾಗಿದ್ದಾರೆ.
ಸುಬ್ಬು ಶ್ಯಾನುಭೋಗರಾದದ್ದು
ಬಾಲ್ಯದಲ್ಲಿ ಊರಿನ ಹಿರಿಯರಿಂದ ಸುಬ್ಬು ಎಂದು ಕರೆಸಿಕೊಳ್ಳುತ್ತಿದ್ದ ಸುಬ್ರಹ್ಮಣ್ಯ ಲೋಯರ್ ಸೆಕೆಂಡರಿ ಉತ್ತೀರ್ಣರಾಗಿ ಶೃಂಗೇರಿಯ ಸಂಸ್ಕೃತ ಪಾಠಶಾಲೆಯಲ್ಲಿ ಕಲಿಯುತ್ತಿದ್ದರು. ಆಗಲೇ ಸಾಹಿತ್ಯದ ರುಚಿ ಹತ್ತಿಸಿಕೊಂಡಿದ್ದ ಇವರ ಬರವಣಿಗೆಯೂ ಅಂದವಾಗಿತ್ತು.
ಅನಧ್ಯಯನದ ಕಾಲದಲ್ಲಿ ಊರಿಗೆ ಬಂದಾಗ ಸುಬ್ಬುವಿನ ಪ್ರತಿಭೆ ತಿಳಿದಿದ್ದ ಮಠದ ಆಗಿನ ಶ್ಯಾನುಭೋಗರಾಗಿದ್ದ ಹೊರಕುಡಿಗೆ ಶೇಷಗಿರಿಯಪ್ಪನರು ಖಾತೆ, ಪಹಣಿ, ರೆಂಟ್ ರೋಲ್, ಖಾತೆದಾರರು, ಸಾಗುವಳಿ ಮೊದಲಾದ ವಿಷಯಗಳ ಬಗ್ಗೆ ಹೇಳಿಕೊಡುತ್ತಿದ್ದರು. ಕೆಲವು ವರ್ಷಗಳ ನಂತರ ಶೇಷಗಿರಿಯಪ್ಪನವರು ಸುಬ್ಬು ಈ ಸ್ಥಾನಕ್ಕೆ ಸೂಕ್ತ ಎಂದು ಸ್ವಾಮೀಜಿ ಮತ್ತು ವಿವಿಧ ಅಧಿಕಾರಿಗಳಿಗೆ ಮನದಟ್ಟು ಮಾಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಈ ಹಿಂದೆಯೇ ಲೆಕ್ಕಪತ್ರಗಳ ಅನುಭವ ಹೊಂದಿದ್ದ ಸುಬ್ರಹ್ಮಣ್ಯ ಮಠದ ಶ್ಯಾನುಭೋಗರಾಗಿ 1936ರಲ್ಲಿ ಅಧಿಕಾರ ಸ್ವೀಕರಿಸಿದರು. ಹೀಗೆ ಸುಬ್ರಮಣ್ಯ ತಾವು ಶಾನುಭೋಗರಾದ ಕತೆಯನ್ನು ನೆನಪಿನ ಸುರುಳಿಯಿಂದ ಬಿಚ್ಚಿಡುತ್ತಾರೆ.
ಹತ್ತು ಹಲವು ಕ್ಷೇತ್ರ
ಇದುವರೆಗಿನ ತಮ್ಮ ಜೀವಿತಾವಧಿಯಲ್ಲಿ ಇವರು ಶ್ಯಾನುಭೋಗಿಕೆ, ದಸ್ತಾವೇಜು ಬರಹ, ಅರ್ಚಕ ವೃತ್ತಿ, ಸಂಘ ಸಂಸ್ಥೆಗಳ ಸದಸ್ಯ, ಜೀವವಿಮಾ ಪ್ರತಿನಿಧಿ, ಉಪಸಂಪಾದಕ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೆ 10 ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನಸೇವೆ ಮಾಡಿದ ಕೀರ್ತಿ ಶ್ಯಾನುಭೋಗರದ್ದು.
ಅಯೋಧ್ಯೆಯ ಅಖಿಲ ಭಾರತ ಪಂಡಿತ ಪರಿಷತ್ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಹಿತ್ಯದಲ್ಲಿ ಭೂಷಣ, ಜ್ಯೋತಿಷ್ಯದಲ್ಲಿ ರತ್ನ ಎಂಬ ಬಿರುದು ಪಡೆದು ತಮ್ಮ ಸಂಸ್ಕೃತ ಪಾಂಡಿತ್ಯವನ್ನು ಮೆರೆದಿದ್ದಾರೆ.
ಹರಿಹರಪುರ ಮಠದಲ್ಲಿ ನವರಾತ್ರಿ ಬಂತೆಂದರೆ ಶ್ಯಾನುಭೋಗರ ಅಷ್ಟಾವಧಾನ ಸೇವೆ ಕೇಳುವುದೇ ಒಂದು ಹಿತಾನುಭವ. ಇವರ ಕಂಚಿನ ಕಂಠದ ಆಶೀರ್ವಚನ ನಿಜಕ್ಕೂ ಕರ್ಣರಸಾಯನವೇ ಸರಿ.
ಬದುಕಿನ ದಾರಿ
ಮಾತಿನ ತೋರಣ, ತೋರುಬೆಳಕು, ಅದ್ವೈತಾಚಾರ್ಯ ಅಪ್ಪಯ್ಯ ದೀಕ್ಷಿತರು..., ಮುಂತಾದ ಪುಸ್ತಕಗಳನ್ನು ಬರೆದಿರುವ ಶ್ಯಾನುಭೋಗರು 2000ನೇ ಇಸವಿಯಲ್ಲಿ ನಡೆದ ಕೊಪ್ಪ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ 'ತುಂಗಾ ತೀರದ ಬದುಕು' ಎಂಬ ಪುಸ್ತಕ ಬರೆದು ತಮ್ಮ ಜೀವನ ನಡೆದು ಬಂದ ಹಾದಿಯನ್ನು ಪರಿಚಯಿಸಿದ್ದಾರೆ.
ಸಂಸ್ಕೃತ, ಇಂಗ್ಲೀಷ್, ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ಪಾಂಡಿತ್ಯ ಪಡೆದಿರುವ ಇವರು ಬೆಂಗಳೂರಿನ ವಿಮಾ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿ, ಅದೇ ಕಂಪೆನಿ ಹೊರಡಿಸುತ್ತಿದ್ದ 'ವಿಮಾ ವಾಣಿಜ್ಯ' ಪತ್ರಿಕೆಗೆ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಲವು ದಿನಗಳ ಕಾಲ ಇವರ 'ಚಿಂತನ' ಕಾರ್ಯಕ್ರಮ ಪ್ರಸಾರವಾಗಿತ್ತು.
ಕುಟೀರದಲ್ಲಿ ವಾಸ
ಪ್ರಸ್ತುತ ಬೆಂಗಳೂರಿನ ತಮ್ಮ ಮನೆ 'ಕುಟೀರ'ದಲ್ಲಿ ವಾಸಿಸುತ್ತಿರುವ ಶ್ಯಾನುಭೋಗರು ಸ್ವಯಂಪ್ರಕಾಶ ಮಾಸಿಕದ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನೂರಕ್ಕಿಂತಲೂ ಹೆಚ್ಚು ವಸಂತವನ್ನು ಕಾಣಲೆಂದು ಶುಭ ಹಾರೈಸಲು ಕರೆ ಮಾಡಿ- (080) 26585578.
- ಸುಧೀಂದ್ರ ಜಮ್ಮಟಿಗೆ
sudheeja@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


