ರಿಕ್ಷಾ ರಿಸ್ಕ್

ಈತ ಎಲ್ಲರ ಕೈಗೆಟಕುವ ವ್ಯಕ್ತಿ. ಆದರೀತನಿಗೆ ಒಂದು ಕೈಯೇ ಇಲ್ಲ. ಈ ಶ್ರಮಜೀವಿ ತನ್ನ 57ರ ವಯಸ್ಸಲ್ಲೂ ಪರಿಸರಸ್ನೇಹಿ, ಇಂಧನ ರಹಿತ ರಿಕ್ಷಾಸೈಕಲ್ ತುಳಿಯುವ ಮೂಲಕ ಬದುಕಿನ ಬಂಡಿ ನಡೆಸುತ್ತಿದ್ದಾರೆ. ಅದೂ ಒಂದೇ ಕೈಯಿಂದ ರಿಕ್ಷಾ ನಡೆಸುತ್ತಾ!
ದಾವಣಗೆರೆಯ ಬಾಷಾನಗರದ ನಿವಾಸಿ ನಜೀರ್ ಅಹ್ಮದ್ ಹುಟ್ಟು ಅಂಗವಿಕಲ. ಬಡತನದಿಂದಾಗಿ ನಜೀರ್‌ಗೆ ಶಿಕ್ಷಣ ಒಲಿಯಲಿಲ್ಲ. ಹಾಗಾಗಿ ತನ್ನ 15ನೇ ವರ್ಷಕ್ಕೇ ರಿಕ್ಷಾ ಏರಿದ ನಜೀರ್ ಇನ್ನೂ ಬದುಕಿನ ಬಂಡಿಯನ್ನು ತುಳಿಯುತ್ತಲೇ ಇದ್ದಾರೆ. ಶಾಲಾ ಮಕ್ಕಳನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದೊಯ್ದು, ಮತ್ತೆ ಮನೆಗೆ ಕರೆತರುವ ನಿತ್ಯಕಾಯಕ ಇವರದ್ದು.
ಬಡತನ ಎಂಬ ಬೇತಾಳ ಇವರ ಬೆನ್ನು ಬಿಡದೇ ಹಿಂಬಾಲಿಸುತ್ತಿರುವ ಕಾರಣ ತನ್ನ ಮೂವರು ಮಕ್ಕಳಿಗೆ ಶಿಕ್ಷಣ ನೀಡಲಾಗಗಲಿಲ್ಲ. ಆದರೆ ತನ್ನ ಬಂಡಿಯಲ್ಲಿ ಕರೆದೊಯ್ದ ಅನೇಕ ಮಕ್ಕಳು ಇಂದು ಡಾಕ್ಟರ್, ಎಂಜಿನಿಯರ್‌ನಂಥ ದೊಡ್ಡ ದೊಡ್ಡ ಹುದ್ದೆಗಳಲ್ಲಿರುವುದೇ ಇವರಿಗೆ ಹೆಮ್ಮೆಯಂತೆ!
ಎಲ್ಲರ ಪಾಲಿಗೆ ರಿಕ್ಷಾಮಾಮಾ, ರಿಕ್ಷಾಚಾಚಾನಾಗಿರುವ ನಜೀರ್ ಬದುಕು ಆಟೋರಿಕ್ಷಾ, ಟಂಟಂ, ಗೂಡ್ಸ್ ಗಾಡಿ ಹೆಚ್ಚಾದ ಇಂದಿನ ದಿನಗಳಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ನೆಮ್ಮದಿಯಿಂದ ಮಲಗಲೊಂದು ಸೂರು ಕಲ್ಪಿಸಿಕೊಳ್ಳಲಾಗದೆ ತಾಯಿಯ ಮನೆಯಲ್ಲಿಯೇ ಇರುವ ನಜೀರ್‌ಗೆ, ಅಂಗವಿಕಲನೆಂಬ ಕಾರಣಕ್ಕೆ ಸಾವಿರ ರು ಮಾಸಾಶನ ಬಿಟ್ಟರೆ ಸರ್ಕಾರದ ಮತ್ತಾವುದೇ ಸವಲತ್ತು, ಇನ್ನಾರದ್ದೇ ನೆರವು ದಕ್ಕಿಲ್ಲ.
ಮಕ್ಕಳ ಆಶ್ರಯದಲ್ಲಿ ನೆಮ್ಮದಿಯಿಂದ ಮುಪ್ಪಿನ ದಿನಗಳನ್ನು ಕಳೆಯಬೇಕಿದ್ದ ನಜೀರ್, ತನ್ನ ಇಳಿವಯಸ್ಸಲ್ಲೂ ಕಸುವು ಮೀರಿ ಸೈಕಲ್ ತುಳಿಯುವುದು ನೋಡಿದರೆ ಎಂಥವರ ಕರುಳೂ ಚುರ್ ಎನ್ನದಿರದು. ತಾನು ಈ ಕಾಯಕ ಬಿಟ್ಟು ಸಣ್ಣದೊಂದು ಬೀಡಾ ಅಂಗಡಿ ಇಡಬೇಕೆನ್ನುವ ಹಂಬಲಕ್ಕೆ ಅರ್ಥಿಕ ಸ್ಥಿತಿ ಸಮ್ಮತಿಸಿಲ್ಲ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳಿರುವ ನಜೀರ್ ಶಾಲಾ ಮಕ್ಕಳನ್ನು ಸಂತೋಷದಿಂದ ಶಾಲೆಗೆ ಕರೆದೊಯ್ಯುತ್ತಾನೆ. ಈ ಸಂದರ್ಭದಲ್ಲಿ ಯಾರೊಂದಿಗೂ ಜಗಳ ಮಾಡಿಕೊಂಡ ಉದಾಹರಣೆಗಳಿಲ್ಲ. ತನ್ನ ಜೀವನ ಹೀಗೆ ಆಯಿತಲ್ಲಾ ಎಂದು ಹೇಳಿಕೊಂಡಿದ್ದು ವಿರಳ. ಈತನಲ್ಲಿರುವ ಬದುಕಲೇಬೇಕೆಂಬ ಛಲ, ಹಠ ತಾನು ಒಂದು ಕೈ ಇಲ್ಲದವನು ಎಂಬ ಕೀಳರಿಮೆಯನ್ನೇ ತೊಡೆದು ಹಾಕಿದೆ.
ಒಂದೇ ಕೈಯಲ್ಲಿ ಸತತ 38 ವರ್ಷದಿಂದ ರಿಕ್ಷಾ ತುಳಿಯುತ್ತಿರುವ ನಜೀರ್‌ಗೆ ಯಾರಾದರೂ ಸಹಾಯ ಮಾಡಬೇಕೆಂದಲ್ಲಿ ಅಥವಾ ಆತನ ಶ್ರಮಕ್ಕೆ ಹ್ಯಾಟ್ಸ್‌ಆಫ್ ಹೇಳಬೇಕೆಂದಲ್ಲಿ ಮೊ: 9731780513ಗೆ ಸಂಪರ್ಕಿಸಬಹುದು.
- ಗಣೇಶ್ ಕಮ್ಲಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


