ಆಘಾತ
ಬೆಳಿಗ್ಗೆ ಎದ್ದಾಗಲಿಂದಲೂ ಸಣ್ಣಗೆ ತಲೆನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು...

ಬೆಳಿಗ್ಗೆ ಎದ್ದಾಗಲಿಂದಲೂ ಸಣ್ಣಗೆ ತಲೆನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ.
ಯಜಮಾನರು ತೀರಿಕೊಂಡ ಮೇಲೆ ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಆದರೆ ಪಕ್ಕದ ಮನೆಯವರು ಯಾರೆಂದು ನನಗೆ ಇಲ್ಲಿಯವರೆಗೂ ಗೊತ್ತಿಲ್ಲ.
ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡಿ ದಿನ ನಾನು ಮತ್ತು ಟಿವಿ ಎರಡೇ. ಇರುವ ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆ ನಿಂತ ಮೇಲೆ, ಈ ಬೆಂಗಳೂರಿನ ಮನೆಯಲ್ಲಿ ನಮ್ಮವರು, ನಾನು ಮಾತ್ರ ಉಳಿದಿದ್ದೆವು. ನಮ್ಮವರು ಹೋದ ಮೇಲೆ, ನನ್ನ ಇಬ್ಬರು ಗಂಡು ಮಕ್ಕಳ ಜೊತೆ ಇರೋಣವೆಂದರೆ ನನ್ನ ಅಮೆರಿಕ ಜನ್ಯ ಸೊಸೆಯರಿಗೆ ನಾನು ಹಳೆ ಕಾಲದವಳಂತೆ. ಅದಕ್ಕಾಗಿ ನಾನು ಇಲ್ಲೇ ಈ ಫ್ಲಾಟಿನಲ್ಲೇ ಕಾಲ ದೂಕುತ್ತಿದ್ದೇನೆ.
ಬೆಳಿಗ್ಗೆ ಬರುವ ಕೆಲಸದವಳೇ ಮೂರು ಹೊತ್ತಿಗೂ ಬೇಯಿಸಿ, ಒಪ್ಪ ಮಾಡಿಟ್ಟು ಹೋಗುತ್ತಾಳೆ. ತುಂಬಾ ಒಳ್ಳೆಯ ಹೆಣ್ಣು ಮಗಳವಳು. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಸಿಡುಕಿದ್ದು, ರಜೆ ಹಾಕಿದ್ದು ನನಗೆ ಗೊತ್ತೇ ಇಲ್ಲ. ಆಕೆ ತಣ್ಣಗಿರಲಿ.
ಮೊನ್ನೆ ಒಂದಿನ ಸಂಜೆವರೆಗೂ ಹೇಗೋ ಕಾಲ ದೂಡಿದವಳು, ಪಕ್ಕದ ಗಣಪತಿ ಗುಡಿಗಾದರೂ ಹೋಗಿ ಬರೋಣವೆಂದು ಮನೆ ಇಂದ ಹೊರಗೆ ಬಂದೆ. ಲಿಫ್ಟ್ ಸಮೀಪಿಸುತ್ತಿದ್ದಾಗ ಧಡೂತಿ ಉತ್ತರ ಭಾರತದ ಮಹಿಳೆಯೊಬ್ಬಳು ಅಲ್ಲಿ ನಿಂತಿರುವುದು ಕಂಡಿತು.
ಆಕೆಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತೇನಾದರೂ, ಮುಖ ಪರಿಚಯ, ಮುಗುಳ್ನಗೆಗಳ ಹೊರತಾಗಿ ಅಂತಹ ಆತ್ಮೀಯತೆ ಯಾಕೋ ಇನ್ನೂ ಮೂಡಿರಲಿಲ್ಲ. ನನ್ನ ಜೊತೆಯೇ ಆಕೆಯೂ ಲಿಫ್ಟ್ ಒಳಗೆ ಬಂದು ನಾನು ನೆಲ ಮಹಡಿ ಬಟನ್ ಒತ್ತುವುದನ್ನು ನೋಡಿ, ತಾನೂ ಅಲ್ಲಿಗೆ ಹೋಗಬೇಕಿತ್ತೇನೋ ಸುಮ್ಮನಾದಳು.
ಲಿಫ್ಟ್ ಹತ್ತನೇ ಮಹಡಿಯಿಂದ ಇಳಿಯಲು ಆರಂಭಿಸಿದ ಕೂಡಲೇ ಆಕೆ ಎದೆ ಹಿಡಿದುಕೊಂಡು, ಗೋಡೆಗೆ ಜಾರಲು ಆರಂಭಿಸಿದಳು. ನಾನು ಗಾಬರಿಯಾದೆ. ಆಕೆ ಸಳಸಳನೆ ಬೆವರುತ್ತಿದ್ದಳು. ಈಕೆಗೆ ಖಂಡಿತ ಹೃದಯಾಘಾತವೇ ಆಗಿದೆ ಎಂದು ನನಗನಿಸಿದ್ದೇ ತಡ, ಲಿಫ್ಟಿನ ಅಲಾರಾಂ ಒತ್ತಿದೆ. ಲಿಫ್ಟ್ ಅಲಾರಾಂ ಹೊಡೆದುಕೊಳ್ಳುತ್ತಲೇ ನೆಲ ಮಹಡಿ ತಲುಪಿತು.
ಕೆಳಗೆ ಆಗಲೇ ಸುಮಾರು ಜನ ಸೇರಿದ್ದರು. ಕೂಡಲೇ ಅಲ್ಲೇ ಇದ್ದ ಯಾರೋ ಆ್ಯಂಬುಲೆನ್ಸಿಗೂ ಫೋನ್ ಮಾಡಿದರು. ನಾನು ನನ್ನ ಬಳಿ ಇದ್ದ ಇನ್ನೂರನ್ನು ಅವರಿಗೆ ಕೊಟ್ಟೆ. ಆಕೆಯನ್ನು ಆಸ್ಪತ್ರೆಗೂ ಸಾಗಿಸಲಾಯಿತು. ನಾನು ನಿಧಾನವಾಗಿ ಕಾಲೆಳೆಯುತ್ತಾ ದೇವಸ್ಥಾನಕ್ಕೆ ಹೊರಟೆ.
ಮರುದಿನ ತಡೆಯಲಾರದೆ ಕೆಳಗೆ ಇಳಿದು ಬಂದು ಸೆಕ್ಯುರಿಟಿ ಬಳಿ ನಿನ್ನೆಯ ಆ ಹೆಂಗಸಿನ ಸ್ಥಿತಿ ವಿಚಾರಿಸಿದೆ. ಅವನು ಆಕೆ ಈಗ ಸಾಕಷ್ಟು ಸುಧಾರಿಸಿದ್ದಾಳೆಂದು, ಅವರ ಮಗ ನಿಮ್ಮನ್ನು ಭೇಟಿಯಾಗಬೇಕೆಂದು ಕೇಳುತ್ತಿದ್ದರು ಎಂದು ಹೇಳಿದ.
ಆಕೆಯ ಮಗ ಆಗಲೇ ಅಲ್ಲಿ ಬಂದವನು ನನಗೆ ವಂದನೆ ತಿಳಿಸಿದ. ಸಕಾಲಕ್ಕೆ ಅಲಾರಾಂ ಒತ್ತಿ ತಾಯಿಯನ್ನು ಕಾಪಾಡಿದ್ದಕ್ಕೆ ವಂದನೆ ಹೇಳಿದ. ನನಗೂ ನೆಮ್ಮದಿಯಾಯ್ತು. ಆದರೆ, ಅವನು ತಲೆ ಕೆರೆದುಕೊಳ್ಳುತ್ತಾ ನಿಂತ. 'ಅಮ್ಮ ಈಗ ಸುಧಾರಿಸುತ್ತಿದ್ದಾರೆ ಅಜ್ಜೀ, ಆಕೆಯ ಮಾಂಗಲ್ಯದ ಸರ ನೀವು ತೆಗೆದಿರಾ? ಎತ್ತಿಟ್ಟುಕೊಂಡರೆ ಕೊಡ್ತೀರಾ' ಅಂತ ಕೇಳಿದ.
ನನಗೆ ನಿಂತ ನೆಲವೇ ಕುಸಿಯುವಂತಾಯಿತು. ಎದೆ ಕಿವುಚಿಕೊಂಡು ಹಾಗೆಯೇ ನೆಲಕ್ಕೊರಗಿದೆ. ಯಾರೋ ಆ್ಯಂಬುಲೆನ್ಸಿಗೆ ಕರೆ ಮಾಡುತ್ತಿದ್ದ ದನಿ ಕೇಳಿಸಿತು.
- ಬದರಿನಾಥ ಪಳವಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


