ನಾಣ್ಯ ಪಾಠ

ವಿಶಾಲ ಕರ್ನಾಟಕವನ್ನು ಅನೇಕ ರಾಜವಂಶಗಳು ಆಳಿವೆ ಎನ್ನುತ್ತದೆ ಇತಿಹಾಸ. ಇವುಗಳ ಆಡಳಿತ ವೈಖರಿ, ನೀಡಿದ ಕಾಣಿಕೆಗಳತ್ತ ದೃಷ್ಟಿ ಹಾಯಿಸಿದರೆ ಎಲ್ಲೋ ಒಂದು ಕಡೆ ಮಾಹಿತಿಗಳ ಕೊರತೆ ಗೋಚರಿಸುತ್ತದೆ. ರಾಜಮನೆತನಗಳ ಆಡಳಿತ, ಆಚಾರ- ವಿಚಾರಗಳು, ಜನಸಮುದಾಯದ ಸಂಸ್ಕೃತಿ ಮುಂತಾದವುಗಳ ಕುರಿತು ಇನ್ನೂ ಸರಿಯಾಗಿ ಮಾಹಿತಿ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ದಾಖಲೆಗಳ ಕೊರತೆ.
ನಮಗೇ ಸರಿಯಾಗಿ ಮಾಹಿತಿ ಇಲ್ಲ ಅಂದಮೇಲೆ, ಮುಂದಿನ ಪೀಳಿಗೆಗೆ ಚರಿತ್ರೆಯನ್ನು ದಾಟಿಸಲಾಗದು. ಈ ಅರಿವನ್ನಿಟ್ಟುಕೊಂಡೇ ಪ್ರಾಚೀನ ಕಾಲದ ನಾಣ್ಯಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಯೋಗ್ಯ ಮಾಹಿತಿ ನೀಡುತ್ತಿದ್ದಾರೆ ಉಡುಪಿಯ ಕುಂದಾಪುರ ತಾಲೂಕಿನ ಬೈಂದೂರಿನ ಶಿಕ್ಷಕ ಶ್ರೀಕಾಂತ್.
ಪಿಯುಸಿಯಲ್ಲಿದ್ದಾಗಲೇ ನಾಣ್ಯ ಸಂಗ್ರಹಣೆ ಆರಂಭಿಸಿದರು ಇವರು. ಬಸ್ಸಿನ ನಿರ್ವಾಹಕ, ಅಂಗಡಿಯಾತ ಚಿಲ್ಲರೆಯಾಗಿ ನೀಡುತ್ತಿದ್ದ ನಾಣ್ಯಗಳಲ್ಲಿ ಇರುತ್ತಿದ್ದ ಮಹಾನ್ ವ್ಯಕ್ತಿಗಳ ಚಿತ್ರಗಳು, ಹಲವು ಸಂಕೇತಗಳನ್ನು ಕುತೂಹಲದಿಂದ ಗಮನಿಸುತ್ತಾ ಸ್ಫೂರ್ತಿಗೊಳ್ಳುತ್ತಿದ್ದರು. ಕುತೂಹಲಕ್ಕೆಂದು ಸಂಗ್ರಹಿಸಿದ ನಾಣ್ಯಗಳು ಶಿಕ್ಷಕ ತರಬೇತಿಯ ಸಂದರ್ಭದಲ್ಲಿ ಕಲಿಕೋಪಕರಣವಾಗಿ ಬಳಕೆಯಾದಾಗ ಸಾರ್ಥಕ್ಯವನ್ನು ಕಂಡು ಮುಂದಕ್ಕೆ ಇದನ್ನೇ ಪ್ರವೃತ್ತಿಯನ್ನಾಗಿಸಿಕೊಂಡರು.
ತುಂಬಿದೆ ಖಜಾನೆ
ಅಂದಹಾಗೆ, ಇವರ ಮನೆಯಲ್ಲಿ 5000ಕ್ಕೂ ಹೆಚ್ಚು ಪುರಾತನ ನಾಣ್ಯಗಳಿವೆ. ತಾಮ್ರ, ಬೆಳ್ಳಿ, ಚಿನ್ನ ಮತ್ತು ಮಣ್ಣಿನ ನಾಣ್ಯಗಳು ಇವರ ಖಜಾನೆಯಲ್ಲಿ ತುಂಬಿವೆ. ಅಶೋಕ, ಮೊಘಲರು, ಟಿಪ್ಪು, ಹೊಯ್ಸಳರು, ಕದಂಬರು, ಗಂಗರು, ಚೋಳರು, ಚಾಲುಕ್ಯರು, ಕೃಷ್ಣದೇವರಾಯ, ಬ್ರಿಟಿಷರು, ರಾಷ್ಟ್ರಕೂಟರು ಮೊದಲಾದ ಅರಸರ ಕಾಲದ ಜನರು ಬಳಸುತ್ತಿದ್ದ ನಾಣ್ಯಗಳು ಜತೆಗೆ ಈಗಿನ 140 ದೇಶಗಳ ನೋಟುಗಳು ಮತ್ತು ನಾಣ್ಯಗಳು ಕೂಡಾ ಇವೆ.
ನಾಣ್ಯಗಳ ಇತಿಹಾಸ ಪಾಠ
ನಾಣ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ಚರಿತೆ ತಿಳಿಸುತ್ತಾರಿವರು. ಅಂದಿನ ರಾಜವಂಶಗಳ ಆಡಳಿತ, ಧರ್ಮ, ಆರ್ಥಿಕ ಸ್ಥಿತಿಗತಿಗಳು, ಸಾಮ್ರಾಜ್ಯದ ವ್ಯಾಪ್ತಿ, ಲಾಂಛನಗಳು ಇವೆಲ್ಲವನ್ನೂ ನಾಣ್ಯದ ಆಧಾರದ ಮೇಲೆಯೇ ವಿವರಿಸುತ್ತಾರೆ. ವರ್ಷಕ್ಕೆ ಕನಿಷ್ಠ 4 ಶಾಲೆಗಳಲ್ಲಿ ನಾಣ್ಯಗಳ ಪ್ರದರ್ಶನ ನೀಡುತ್ತಾರೆ. ಈ ವೇಳೆ ನಾಣ್ಯ ಸಂಗ್ರಹಣೆಯ ಪ್ರಾಮುಖ್ಯವನ್ನೂ ವಿವರಿಸುತ್ತಾರೆ ಶ್ರೀಕಾಂತ್.
ಸದ್ಯ ಶ್ರೀಕಾಂತ್ ಪ್ರೌಢ ವಿಭಾಗ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಬಿಆರ್‌ಸಿ ಬಂಟ್ವಾಳದಲ್ಲಿ ಕರ್ತವ್ಯದಲ್ಲಿದ್ದಾರೆ. ಹೆಚ್ಚುವರಿಯಾಗಿ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕರಾಗಿ ಬಂಟ್ವಾಳ ತಾ.ಪಂ.ನಲ್ಲಿದ್ದಾರೆ. ಶ್ರೀಕಾಂತ್ ಸಂಪರ್ಕ, ಮೊ. 8123123278.
- ಉದಯ್ ವಿಟ್ಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


