ಸಾಧನೆ

ಮೈಸೂರ್ ಟೇಸ್ಟ್

ಕೆಟ್ಟದ್ದೋ, ಒಳ್ಳೆಯದ್ದೋ ಯಾವ ನೆನಪೂ ಕಹಿಯಲ್ಲ. ಅದರಲ್ಲೂ ಮನುಷ್ಯನಿಗೆ ವಯಸ್ಸಾದ ಮೇಲೆ...

ಮೈಸೂರ್ ಟೇಸ್ಟ್
Published On :

ಕೆಟ್ಟದ್ದೋ, ಒಳ್ಳೆಯದ್ದೋ ಯಾವ ನೆನಪೂ ಕಹಿಯಲ್ಲ. ಅದರಲ್ಲೂ ಮನುಷ್ಯನಿಗೆ ವಯಸ್ಸಾದ ಮೇಲೆ ಮೆಲುಕು ಹಾಕುವುದು ಬಹುಪ್ರಿಯ ಸಂಗತಿ. ಮೆಲುಕು ಹಾಕಿದಷ್ಟೂ ರೋಚಕ ಅವು ಎಂದ ಮೇಲೆ ಅಂದಕಾಲತ್ತಲೇ ಅಂದರೆ ಅರ್ಧಶತಮಾನದ ಹಿಂದೆ ಎರಡನೇ ಮನೆ ಎಂದೇ ಆಪ್ತವಾಗಿದ್ದ ಫಲಾಹಾರ ಮಂದಿರಗಳಲ್ಲಿ ದೋಸೆ, ಬಾತ್, ಪಕೋಡ ವಗೈರೆ ಚಪ್ಪರಿಸಿದ್ದನ್ನು, ಅಕ್ಷರಶಃ ಪ್ರಜ್ಞೆ ತಪ್ಪಿಸುತ್ತಿದ್ದ ಗೊಜ್ಜಿನಂಥ ಕಡು ಕಾಫಿ ಹೀರಿದ್ದನ್ನು ನೆನಪಿಸಿಕೊಳ್ಳುವುದೆಂದರೆ ಹೇಗಿರಬೇಡ ಹೇಳಿ!?
ಮೈಸೂರು ನಿವೃತ್ತರ ಸ್ವರ್ಗ. ಅದಕ್ಕೆ ಈ ಹೋಟೆಲ್ಲುಗಳು ಕೊಟ್ಟ ನೆನಪೂ ಕಾರಣವಿರಬಹುದು ಎಂಬುದು ನನ್ನ ಅನಿಸಿಕೆ. ನಾನು ಹೇಳುತ್ತಿರುವ ಆ ಹೋಟೆಲ್ಲುಗಳೆಲ್ಲ ಇಂದು ಇಲ್ಲದಿರಬಹುದು. ಆದರೆ, ಹಿರಿಯರ ನೆನಪಿನ ಖಜಾನೆಯಲ್ಲಿ ಅಲ್ಲಿ ಮೆಲ್ಲಿದ ಪ್ರತಿ ರುಚಿಯಂತೂ ಭದ್ರ. ಹಾಗಾಗೇ ನಾವು ವಯಸ್ಸಾದವರು ನಾಲ್ಕು ಮಂದಿ ಒಂದುಗೂಡಿದರೆ ಅಲ್ಲಿ ರಾಜು ಹೋಟೆಲ್, ಪ್ರಸಾದ್ ಲಂಚ್ ಹೋಂನ ಪ್ರಸ್ತಾಪ ಎತ್ತಿ ದಿವ್ಯಾನುಭವದಂತೆ ಹಂಚಿಕೊಳ್ಳುತ್ತೇವೆ.
ಚಿಕ್ಕ ಮಾರ್ಕೆಟ್‌ಗೆ ಹತ್ತಿರದ ಸಯ್ಯಾಜಿರಾವ್ ರಸ್ತೆಯ ಆರಂಭದಲ್ಲಿ ರಾಜು ಹೊಟೇಲಿತ್ತು. ಅದರೆ ನಿಜ ಹೆಸರೇನೋ ಕಾಣೆ. ಅದನ್ನು ನಡೆಸುತ್ತಿದ್ದ ಪಾಕಪ್ರವೀಣ ರಾಜು ಹೆಸರಿನಿಂದಲೇ ಎಲ್ಲರೂ ಅದನ್ನು ಕರೆಯುತ್ತಿದ್ದುದು. ಅವರಂತೂ ರುಚಿಯ ವಿಷಯದಲ್ಲಿ ಫುಲ್ ಸ್ಟ್ರಿಕ್ಟ್. ಬಾಣಸಿಗರಿಗೆ ಕಾಫಿತಿಂಡಿ ತಯಾರಿಸುವಾಗ ಖುದ್ದು ಕ್ಯಾಷಿಯರ್ ಮೇಜಿನಿಂದ ಆಗಿಂದ್ದಾಗ್ಗೆ ಎದ್ದು ಬಂದು ಯುಕ್ತ ನಿರ್ದೇಶನ ನೀಡುತ್ತಿದ್ದರು. ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ, ಒಮ್ಮೆ ಅಂಬೊಡೆಗೆ ಲವಣ ಅಧಿಕ ಅಂತ ಗ್ರಾಹಕರೊಬ್ಬರು ದೂರಿದರು. ನೇರ ಅಡುಗೆಮನೆಗೆ ಹೋದ ರಾಜು ಕಲಸಿದ್ದ ಹಿಟ್ಟನ್ನು ಒಗೆದು ತಾವೇ ದೊಡ್ಡ ಬೇಸಿನ್‌ನಲ್ಲಿ ಬೇರೆ ಹಿಟ್ಟು ಕಲಸತೊಡಗಿದರು.
ನಮ್ಮ ತಂದೆಯವರಿಗೆ ಸೆಟ್ ದೋಸೆ ಹುಚ್ಚು. ಆದರೆ ತಿನ್ನಲು ಸಂಪ್ರದಾಯಸ್ಥರು ಏನೆಂದುಕೊಂಡಾರೆಂಬ ಭಯ! ಅದಕ್ಕಾಗಿ ಅವರು ಟವೆಲ್‌ನಿಂದ ಮುಖ ಮರೆ ಮಾಡಿಕೊಂಡು ರಾಜು ಹೋಟೆಲ್‌ಗೆ ನುಸುಳುತ್ತಿದ್ದರು.
ಆದರೆ ಸ್ವಾರಸ್ಯಕರವೆಂದರೆ ಬಹುತೇಕರು ಅಲ್ಲಿ ಅದೇ ಭೀತಿಯಲ್ಲಿದ್ದವರೇ!
ಸರಳ, ಸಾಧಾರಣ ಮರದ ಕುರ್ಚಿ, ಮೆಟ್ಟಿಲುಗಳನ್ನೇರಿದರೆ ಒಂದು ವರಾಂಡ. ಅಲ್ಲೂ ಒಂದೆರಡು ಆಸನಗಳು. ಏಕಾಂತದಲ್ಲಿ ಖಾರಾಬಾತ್ ಸವಿಯಲು ತಕ್ಕ ಆಯ್ಕೆ. ಅಂದ ಹಾಗೆ, ಕೇಸರಿಬಾತ್ ಸೇವನೆಗೆ ಚಮಚ ನೀಡುತ್ತಿರಲಿಲ್ಲ. ಎಲೆಯ ಒಂದು ತುದಿ ಹರಿದು ಅದನ್ನೇ ಚಮಚದಂತೆ ಬಳಸುತ್ತಿದ್ದೆವು. ಅಪ್ಪಟ ತುಪ್ಪದಿಂದ ತಯಾರಿಸಿದ ಕೇಸರಿಬಾತ್ ಎಷ್ಟು ರುಚಿಯಾಗಿರುತ್ತಿತ್ತೆಂದರೆ ಬಾಯಿಯ ಬಳಿಗೆ ಕೇಸರಿಬಾತ್ ತರುವುದೇ ತಡ, ನಾಲಿಗೆ, ಹಲ್ಲು, ಗಂಟಲು ಒಂದಾಗಿ ಅದನ್ನು ಸ್ವಾಗತಿಸುತ್ತಿತ್ತು. ರಸಿಕ ಕಣ್ಣು ಮುಚ್ಚಿ ಆಸ್ವಾದನೆಗಿಳಿದುಬಿಡುತ್ತಿದ್ದ!
ರಾಜು ಹೋಟೆಲಿನಲ್ಲಿ ಹೆಚ್ಚು ಐಟಂಗಳಿರುತ್ತಿರಲಿಲ್ಲ. ದೋಸೆ, ಬಾತ್, ವಡೆ, ಪಕೋಡದ್ದೇ ಕಾರುಬಾರು. ಶುಚಿರುಚಿಗೆ ಕೊರತೆಯಿರಲಿಲ್ಲ. ಹೋಟೆಲ್ ಸಣ್ಣದು. ಆದರೆ ಹೋಟೆಲ್ಲಿಗೆ ರುಚಿಯಾದುದನ್ನು ತಿನ್ನಲು ಹೋಗುತ್ತೇವೆಯೇ ಹೊರತು ಸಾವಿರಾರು ರುಪಾಯಿಯ ಚೇರ್‌ನಲ್ಲಿ ಕುಳಿತುಕೊಳ್ಳುವುದಕ್ಕಲ್ಲವಷ್ಟೇ.
ಪ್ರತಿ ವರ್ಷ ಗಣೇಶೋತ್ಸವವನ್ನು ಆ ಹೋಟೆಲ್ ಆಚರಿಸುತ್ತಿತ್ತು. ಒಂದು ವರ್ಷ ಬಾಲಮುರಳಿ ಕೃಷ್ಣರವರ ಸಂಗೀತ ಇತ್ತು. ದೊನ್ನೆಯಲ್ಲಿ ಹುಳಿಯನ್ನ ಪ್ರಸಾದವಾಗಿ ಕೊಡಲಾಗುತ್ತಿತ್ತು. ನಾನು ಎಲ್ಲರ ಕಣ್ತಪ್ಪಿಸಿ ಒಂದು ದೊನ್ನೆ ತಿಂದು ಇನ್ನೊಂದನ್ನು ಮನೆಗೊಯ್ದಿದ್ದೆ. ಅಂದು ಪಕ್ಕದಲ್ಲಿದ್ದ ಆಸಾಮಿಗೆ 'ಏಕೆ ನೀವು ಪಕೋಡ ತಿನ್ನುತ್ತಿಲ್ಲ, ಕೊಟ್ಟು ಅರ್ಧ ತಾಸಾಯಿತಲ್ಲ?' ಎಂದಾಗ ಆತ ಹೇಳಿದ್ದು, 'ಬಾಯಿಗೆ ಹಾಕಿದ್ರೆ ಕರಗುತ್ತೆ. ಅದೇ ಸಂಕಟ'!
ಪ್ರತಿ ಸೋಮವಾರ ರಾಜು ಹೋಟೆಲ್‌ಗೆ ರಜೆ. ಆಗೆಲ್ಲ ಅದೇ ಬೀದಿಯಲ್ಲಿದ್ದ 'ಪ್ರಸಾದ್ ಲಂಚ್ ಹೋಂ'ಗೆ ಜನ ಧಾಂಗುಡಿಯಿಡುತ್ತಿದ್ದರು. ಅಲ್ಲಿ ಇಡ್ಲಿ ಹೆಸರುವಾಸಿ. ಇಲ್ಲಿ ಚಟ್ನಿಯನ್ನು ಜನರು ಇಡ್ಲಿಗೆ ನಂಚಿಕೊಂಡು ತಿನ್ನುತ್ತಿದ್ದರೆಂದರೇ ಸರಿಯಾಗಬಹುದು. ಕಾಯುತ್ತಾ ಕೂರಬೇಕಾದುದು ಅಲ್ಲಿನ ವಿಶೇಷವಾಗಿತ್ತು. 'ನಿಮಗೆ ಶುಚಿರುಚಿ, ಬಿಸಿ ಬೇಕಾದರೆ ಸ್ವಲ್ಪ ನಿಧಾನಿಸಿ, ಬೇಗ ಬೇಕೆಂದರೆ ಫ್ರಿಜ್‌ನಲ್ಲಿದ್ದದ್ದು ಕೊಡಬೇಕಾಗುತ್ತದೆ' ಅದರ ಒಡೆಯ ತಮಾಷೆ ಮಾಡುತ್ತಿದ್ದರು.
ಅರಮನೆಗೆ ಬಲು ಸಮೀಪದಲ್ಲಿ ಬೋರ್ಡ್‌ರಹಿತ ಹೋಟೆಲ್ಲೊಂದಿತ್ತು. ಅಲ್ಲಿನ ಒಡೆಯ ಬಹುರೂಪಿ. ಅಡುಗೆಯಿಂದ ಹಿಡಿದು, ನಗದು ಸ್ವೀಕಾರದವರೆಗೂ ಆತನೇ ನಿಭಾಯಿಸುತ್ತಿದ್ದ. ಇಷ್ಟಾದರೂ ಅದು ಹೇಗೆ ಅಷ್ಟು ಸೊಗಸಾದ ಖಾಲಿ ದೋಸೆ, ಕಾಫಿ ಒದಗಿಸುತ್ತಿದ್ದನೋ ಪವಾಡವೇ ಸರಿ. ಅಲ್ಲಿ ಚಳಿಗಾಲದಲ್ಲಿ ಒಲೆಯ ಎದುರು ಚಳಿಕಾಸಿಕೊಂಡು ಕಾಫಿ ಹೀರುತ್ತಿದ್ದೆವು.
ಆ ದಿನಗಳಲ್ಲಿ ಉಂಡು ತೆರಬಹುದಾಗಿತ್ತು. ಈ ದಿನಗಳಲ್ಲಿ ತೆತ್ತು ಉಣಬೇಕು. ಕಂಪ್ಯೂಟರ್ ಯುಗದಲ್ಲಿ ಹೇಗಾಯ್ತು ನೋಡಿ, ಮನುಷ್ಯ ಮನುಷ್ಯನನ್ನೇ ನಂಬುತ್ತಿಲ್ಲ!

- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.