ಸಾಧನೆ

ಕರಡು ಶ್ರದ್ಧೆ

ಕರಡು ಶ್ರದ್ಧೆ
Published On :

ಇಂಥವರು ಕೆಲವೇ ಕೆಲವರು. ಇವರಿಗೆ ಕೆಲಸವೊಂದಿದ್ದರೆ ಸಾಕು. ಹೆಸರು, ಕೀರ್ತಿ, ಅಧಿಕಾರ, ಹಣ... ಯಾವುದೂ ಬೇಡ. ಇವರು ಕೆಲಸವನ್ನು ಹುಡುಕಿಕೊಂಡು ಹೋಗುವವರು. ಶ್ರದ್ಧೆ ಇವರ ಉಸಿರು. 'ಇದನ್ನು ನಾನು ಮಾಡಿದ್ದು' ಎಂದು ಬೀಗುವವರೇ ಅಲ್ಲ. 'ಈಗಿನ ಕಾಲದಲ್ಲಿ ಇಂಥವರು ಇದ್ದಾರಾ?' ಎಂದು ನೀವು ಕೇಳಿದರೆ, ವಿಜಾಪುರದ ಟ್ರೆಜರಿ ಕಾಲೊನಿಯತ್ತ ಕೈ ತೋರಿಸಲೇಬೇಕು. ಅಲ್ಲಿನ ಮಹಾಂತ ಗುಲಗಂಜಿ ಅವರನ್ನು ನಿಮಗೆ ಭೇಟಿ ಮಾಡಿಸಲೇಬೇಕು. ಅವರ ಮನೆ- ಅವರ ಮನಸ್ಥಿತಿ ನೋಡಿಬಿಟ್ಟರೆ, ಆಗ ನಿಮಗೆ ಸತ್ಯ ಗೊತ್ತಾಗುತ್ತದೆ.
ಮಹಾಂತ ನೀಲಪ್ಪ ಗುಲಗಂಜಿ ಅವರಿಗೀಗ 86 ವರುಷ. ಇಳಿವಯಸ್ಸು ಎಂದು ಹೇಳಲು ಯಾಕೋ ಮನಸ್ಸಾಗುತ್ತಿಲ್ಲ.  ಈಗಲೂ ಅವರಲ್ಲಿ ತಾರಣ್ಯದ ಹುರುಪಿದೆ. ಮಕ್ಕಳ- ಮೊಮ್ಮಕ್ಕಳ ಆಕಸ್ಮಿಕ ಅಕಾಲಿಕ ಸಾವು ಅವರನ್ನು ಕಂಗೆಡಿಸಿಲ್ಲ. ಏನೇ ಅಪಘಾತಗಳಾದರೂ ಅವರು ಅಧೀರರಾಗಿಲ್ಲ.
ಅವರ ಹುಟ್ಟೂರು ಬಾಗಲಕೋಟೆ ಜಿಲ್ಲೆಯ ಶಿರೂರು. ಅದು ಅವರಿಗೆ ಸಿರಿಯೂರು. ಅಲ್ಲಿನ ಜನ, ಸಂತೆ, ಸಂಪ್ರದಾಯ, ಸೊಬಗು... ಎಲ್ಲವೂ ಇವರ ಬರಹಕ್ಕೆ ಪ್ರೇರಣೆ. ಹೈಸ್ಕೂಲಿನಲ್ಲಿಯೇ ಇವರಲ್ಲಿ ಸಾಹಿತ್ಯಾಸಕ್ತಿ ಅರಳತೊಡಗಿತು. ಲಲಿತ ಪ್ರಬಂಧ, ಏಕಾಂಕ ನಾಟಕ, ಹನಿಗವನ, ಚುಟುಕು, ಪತ್ರ ಲೇಖನ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಕಥೆ, ಕಾದಂಬರಿ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃಷಿ. ಪ್ರಬಂಧ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು. ಅವರ 'ನಡೆಯದ ನೋಟಿನ ಲೀಲಾ ವಿಲಾಸ'ಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಬಂದಿತ್ತು. ಅದು ಮಹಾರಾಷ್ಟ್ರ ರಾಜ್ಯದ 9ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲೂ ಸೇರಿಕೊಂಡಿತು. ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ 'ನವಕರ್ನಾಟಕ' ಪತ್ರಿಕೆಯಲ್ಲೂ ಗುಲಗಂಜಿ ಕೆಲಸ ಮಾಡಿದ್ದಾರೆ. ವಿಜಾಪುರ ಜಿಲ್ಲಾ ಕಸಾಪಕ್ಕೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದಂಥ ಏಕೈಕ ವ್ಯಕ್ತಿ ಇವರು.
ಜನರಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸುವ, ಅವರಿಗೆ ಒಳ್ಳೆಯ ಸಾಹಿತ್ಯ ಕೃತಿಗಳನ್ನು ಒದಗಿಸುವ ಉದ್ದೇಶದಿಂದ  ಆಶಾ ಸಾಹಿತ್ಯ ಮಂದಿರ ಹಾಗೂ ವಿವೇಕಾನಂದ ವಾಚನಾಲಯವನ್ನು 1951ರಲ್ಲೇ ಆರಂಭಿಸಿದರು. ನಾಡಿನ ಖ್ಯಾತ ಸಾಹಿತಿಗಳನ್ನು ವಿಜಾಪುರಕ್ಕೆ ಸ್ವಾಗತಿಸಿ ವೈವಿಧ್ಯಮಯ ಸಾಹಿತ್ಯ ಚಟುವಟಿಕೆಗಳನ್ನೂ ಹಮ್ಮಿಕೊಂಡರು. ಈ ಕಾರ್ಯ 15 ವರ್ಷ ನಿರಂತರವಾಗಿ ನಡೆಯಿತು.
ಖ್ಯಾತ ಹಾಸ್ಯ ಸಾಹಿತಿ ಬೀಚಿ, ನಿರಂಜನ, ಎಂ. ರಾಮಮೂರ್ತಿ, ಬಸವರಾಜ ಕಟ್ಟಿಮನಿ ತಮ್ಮ ಹಸ್ತಾಕ್ಷರದಲ್ಲಿ ಗುಲಗಂಜಿಯವರಿಗೆ ಬರೆದ ಪತ್ರಗಳ ಅಮೂಲ್ಯ ಸಂಗ್ರಹ ಇವರ ಬಳಿ ಇದೆ. ಅದನ್ನು ಅವರು ಜೋಪಾನವಾಗಿ ಕಾಯ್ದಿರಿಸಿದ್ದಾರೆ. ಇವರ ಮನೆಯೇ ಗ್ರಂಥಾಲಯ.
ಗುಲಗಂಜಿಯವರು 4 ಅಭಿನಂದನಾ ಗ್ರಂಥ, 4 ಸಂಸ್ಮರಣಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಸುಮಾರು ಹತ್ತು ಸಾವಿರ ಜಾನಪದ ಶಬ್ದಗಳನ್ನು ಅಕಾರಾದಿಯಾಗಿ ಸಂಗ್ರಹಿಸಿದ್ದಾರೆ. ಪ್ರತಿ ಶಬ್ದಕ್ಕೂ ಸೂಕ್ತವಾದ ಅರ್ಥ ವಿವರಣೆಯನ್ನೂ ನೀಡಿದ್ದಾರೆ. ಇದೊಂದು ಜಾನಪದ ನಿಘಂಟಿನ ಕರಡು ಪ್ರತಿ. ಇದಲ್ಲದೇ ಅವರು ಸಂಪಾದಕರಲ್ಲದ ಹಾಗೂ ಸಂಪಾದಕ ಮಂಡಳಿಯಲ್ಲೂ ಇಲ್ಲದ ಅನೇಕ ಗ್ರಂಥಗಳನ್ನು ತಿದ್ದಿ-ತೀಡಿ ಸುಂದರ ಪುಸ್ತಕಗಳಾಗಿ ಹೊರಬರಲು ಶ್ರಮಿಸಿದ್ದಾರೆ. ಈಗಲೂ ಅವರು ಅಂಥ ಒಂದಿಲ್ಲೊಂದು ಕಾರ್ಯಗಳಲ್ಲಿ ಸ್ವಪ್ರೇರಣೆಯಿಂದ ನಿರತರಾಗಿರುತ್ತಾರೆ. ತಪ್ಪಿಲ್ಲದ ಶುದ್ಧವಾದ ಕೃತಿಗಳನ್ನು ಕೊಡಲು ಅವರು ಎಷ್ಟು ಬಾರಿಯಾದರೂ ಓದುತ್ತಾರೆ. ಕರಡು ಪ್ರತಿಯನ್ನು ತಿದ್ದುತ್ತಾರೆ.  ಸಣ್ಣ ತಪ್ಪೂ ಉಳಿಯದಂತೆ ಎಚ್ಚರ ವಹಿಸುತ್ತಾರೆ. ಅವರ ಹಾಗೆ ಕರಡು ತಿದ್ದುವವರು ಈಗ ಯಾರೂ ಇಲ್ಲ ಎಂದು ಅನೇಕ ಹಿರಿಯ ಸಾಹಿತಿಗಳೇ ಹೇಳಿದ್ದಾರೆ.
'ಗುಲಗಂಜಿ ಎಂದರೆ ಬಂಗಾರವನ್ನು ತೂಗುವಂಥದ್ದು. ಅದಕ್ಕೆ ಬೆಲೆ ಕಟ್ಟುವಂಥದ್ದು...' ಎಂದೊಮ್ಮೆ ಅವರನ್ನು ಪರಿಚಯಿಸುವಾಗ ಯಾರೋ ಹೇಳಿದರು. ಅದಕ್ಕೆ ಗುಲಗಂಜಿಯವರ ಪ್ರತಿಕ್ರಿಯೆ ಹೀಗಿತ್ತು; 'ಬಂಗಾರ ಅಕ್ಕಸಾಲಿಗನಿಗೆ ಹೇಳುತ್ತಿತ್ತಂತೆ, ನೀನು ನನ್ನನ್ನು ಬಡಿಯುತ್ತಿ... ಬೆಂಕಿಯಲ್ಲಿ ಹಾಕಿ ಕರಗಿಸುತ್ತಿ... ಕತ್ತರಿಸುತ್ತಿ... ಏನೆಲ್ಲ ಹಿಂಸೆ ಕೊಡುತ್ತಿ.  ಆದರೆ ಇದ್ಯಾವುದಕ್ಕೂ ನನಗೆ ದುಃಖವಿಲ್ಲ. ಕೊನೆಗೆ ನೀನು ಆ ಪುಟಗೋಸಿ ಗುಲಗಂಜಿಯೊಂದಿಗೆ ತೂಗುತ್ತೀಯಲ್ಲ ಅದೇ ನನಗೆ ಬೇಸರದ ವಿಷಯ ಎನ್ನುತ್ತಿತ್ತಂತೆ'. ಗುಲಗಂಜಿ ಎಂದೂ ತಮ್ಮನ್ನು ತಾವು ಹೊಗಳಿಕೊಂಡವರಲ್ಲ. ಬೇರೆಯವರು ತಮ್ಮನ್ನು ಹೊಗಳುವಾಗ ಅದನ್ನು ಕೇಳುವುದೆಂದರೆ ಅವರಿಗೆ ತೀರಾ ಮುಜುಗರ.
ಕನ್ನಡ ಸಾಹಿತ್ಯದ ಶ್ರದ್ಧಾವಂತ ಪರಿಚಾರಕರಾಗಿ ಇಷ್ಟೆಲ್ಲ ಕೆಲಸ ಮಾಡಿದ ಗುಲಗಂಜಿಯವರ ಒಂದೇ ಒಂದು ಪುಸ್ತಕವೂ ಇನ್ನೂ ಪ್ರಕಟವಾಗಿಲ್ಲ. ಅವರು ಬರೆದೇ ಇಲ್ಲ ಎನ್ನುವಂತೆಯೂ ಇಲ್ಲ. ಬರೆದು ಪ್ರಕಟಣೆಗಾಗಿ ಕಾಯುತ್ತಿರುವ ಸಾಹಿತ್ಯ, ಹಸ್ತಪ್ರತಿಯ ರೂಪದಲ್ಲಿ ಸಿದ್ಧವಾಗಿ ಕುಳಿತಿದೆ. ಬೇರೆಯವರ ಕೃತಿಗಳನ್ನೇ ತಿದ್ದಿತೀಡಿ ಅಂದವಾಗಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿರುವ ಹಾಗೂ ಅವುಗಳನ್ನೇ ತಮ್ಮ ಕೃತಿ ಎನ್ನುವಂತೆ ಸಂಭ್ರಮ ಪಡುವ ಅನನ್ಯ ಮಹಾಂತ ಈ ಗುಲಗಂಜಿ. ಈ ಗುಣವೇ ಸಮಾಜಕ್ಕೆ ಮೇಲ್ಪಂಕ್ತಿ.

- ಸುಭಾಸ ಯಾದವಾಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.