ಮಂಜು ಮತ್ತು ಗೀತಾ
ಅಪವಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಮಂಜುನಾಥ ಸೇರಿಗಾರ.

ಮಂಜುನಾಥ ಅವರು ಹಲವು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಅಲ್ಲದೆ, ಭಾವಗೀತೆ- ಭಕ್ತಿಗೀತೆಗಳನ್ನೂ ರಚಿಸಿದ್ದಾರೆ...
ಕೈತುಂಬಾ ಸಂಬಳದ ಕೆಲ್ಸ ಸಿಕ್ಕಿದ್ರೆ ಸಾಕು, ಅನೇಕರು ಹವ್ಯಾಸಗಳನ್ನೇ ದೂರವಿಡುತ್ತಾರೆ. ಅವರ ಆ ಟೆನ್ಷನ್ ಲೋಕದ ಬಳಿ ಯಾವ ಕಲೆಗಳೂ ಸುಳಿಯುವುದಿಲ್ಲ. ಆದರೆ, ಈ ಮಾತಿಗೆ ಅಪವಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಮಂಜುನಾಥ ಸೇರಿಗಾರ.
ಇವರು ಬಿಎಸ್ಸೆನ್ನೆಲ್ ಉದ್ಯೋಗಿ. ಈ ಎಂಜಿನಿಯರ್ ಒಳಗೊಬ್ಬ ಒಬ್ಬ ಲೇಖಕ, ಕಲಾಪೋಷಕ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾನೆ. ಇವರು ಅಂಚೆ ಮತ್ತು ತಂತಿ ಇಲಾಖೆಗೆ ಸೇರಿದ್ದು 1979ರಲ್ಲಿ. ಯಕ್ಷಗಾನದ ಬಗ್ಗೆ ಇವರಿಗೆ ವಿಶೇಷ ಕಾಳಜಿ. ಬಹಳ ಹಿಂದೆಯೇ ವಿವಿಧ ಸಂಘಗಳನ್ನು ಕಟ್ಟಿಕೊಂಡು ಯಕ್ಷಗಾನ ಪ್ರಚಾರ, ತರಬೇತಿ ಸೇರಿದಂತೆ ಯಕ್ಷರಂಗಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಈ ನಿಟ್ಟಿನಲ್ಲಿ ಹಲವು ಯಕ್ಷಗಾನ ಪ್ರಸಂಗವನ್ನೂ ರಚಿಸಿ ಸೈ ಎನ್ನಿಸಿಕೊಂಡರು. ಇಂದಿಗೂ ಪೌರಾಣಿಕ, ಕಾಲ್ಪನಿಕ, ಐತಿಹಾಸಿಕ ವಿಷಯಕ್ಕೆ ಸಂಬಂಧಿಸಿದಂತೆ ಪ್ರದರ್ಶನ ಯೋಗ್ಯ ಪ್ರಸಂಗಗಳನ್ನು ಬರೆಯುತ್ತಲೇ ಇದ್ದಾರೆ.
ಮಂಜುನಾಥರು ಬರೆದ ಗಣೇಶೋದ್ಭವ, ಶಿವದೀಕ್ಷೆ, ಸತ್ಯನಾರಾಯಣ ಮಹಾತ್ಮೆ, ಭಾಗವತ ಮಹಾತ್ಮೆ ಮುಂತಾದ 11 ಪೌರಾಣಿಕ ಪ್ರಸಂಗಗಳು ಹಲವೆಡೆ ಪ್ರದರ್ಶಿತವಾಗಿವೆ. 30ಕ್ಕೂ ಹೆಚ್ಚು ಪ್ರಸಂಗಗಳು ತಾಳಮದ್ದಲೆ ರೂಪದಲ್ಲಿ ಜನರನ್ನು ರಂಜಿಸಿವೆ. ಇವರ ಆದರ್ಶ ರಾಜ್ಯ (ಆರ್ತ ಸಂರಕ್ಷಣ), ರಾಜಯಕ್ಷ್ಮ (ಏಡ್ಸ್ ಜಾಗೃತಿ) ಕಾಲ್ಪನಿಕ ಪ್ರಸಂಗಗಳು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ವಿಭಿನ್ನ ಶೈಲಿಯ ವಿಷಯಗಳನ್ನು ಹೊಂದಿರುವಂಥವು.
ಯಾವ್ಯಾವ ಸಂಘ?
ಮಂಜುನಾಥರು ಸಹೋದ್ಯೋಗಿಗಳನ್ನೂ ಕಲಾಪೋಷಣೆಯಲ್ಲಿ ತೊಡಗಿಸಿಕೊಂಡವರು. ವೃತ್ತಿಯ ಕಾರಣದಿಂದ ವರ್ಗವಾಗಿ ಹೋದಲ್ಲೆಲ್ಲ ಸಂಘಗಳನ್ನು ಕಟ್ಟಿ, ಕಲಾಸೇವೆ ಮಾಡಿದರು. 1985ರಲ್ಲಿ ಮಂಗಳೂರಿನಲ್ಲಿ ಉದ್ಯೋಗಿಯಾದ್ದಾಗ ಅಂಚೆ ಮತ್ತು ತಂತಿ ಯಕ್ಷಗಾನ ಸಂಘ, ದೂರವಾಣಿ ಯಕ್ಷಗಾನ ಕೇಂದ್ರಗಳನ್ನು ಸ್ಥಾಪಿಸಿ ಪ್ರಶಂಸೆಗೆ ಗುರಿಯಾದರು.
ಕೊಡಗಿನಲ್ಲಿ ಮಹಾಗಣಪತಿ ಭಜನಾ ಮಂಡಳಿ ಮತ್ತು ವಾಣಿ ಟ್ಯುಟೋರಿಯಲ್ ಸ್ಥಾಪಿಸಿ ಬಡ ಮಕ್ಕಳ ವಿದ್ಯಾಭ್ಯಾ ಸಕ್ಕೆ ನೆರಳಾದರು. ಹರಿಹರಪುರದಲ್ಲಿ ಯಕ್ಷವೇದಿಕೆ ಮತ್ತು ಯಕ್ಷಗಾನ ಕಲಾಕೇಂದ್ರ ಸ್ಥಾಪಿಸಿ ನೂರಾರು ಮಕ್ಕಳಿಗೆ ಕಲೆಯ ತಂಪೆರೆದರು.
ಸಾಹಿತ್ಯ ಚತುರ
ಸದ್ಯ ನಿವೃತ್ತಿಯ ಅಂಚಿನಲ್ಲಿರುವ ಇವರು ಸಾಹಿತ್ಯಕವಾಗಿಯೂ ಗಮನ ಸೆಳೆದವರು. 'ಮಂಜುಪ್ರಕಾಶ' ಕಾವ್ಯನಾಮದೊಂದಿಗೆ 63 ಚರಣಗಳುಳ್ಳ 'ರಾಘವೇಂದ್ರ ಭಕ್ತಿಸೂಕ್ತಿ', 'ಸ್ತೋತ್ರ ಮಂಜರಿ', 'ಗೋವಿಂದ ಶತಕ'ಗಳನ್ನು ಬರೆದಿದ್ದಾರೆ. 100ಕ್ಕೂ ಹೆಚ್ಚು ಭಾವಗೀತೆಗಳ 'ಕವನ ಮಂಜರಿ', 300ಕ್ಕೂ ಹೆಚ್ಚು ಭಕ್ತಿಗೀತೆಗಳಿರುವ 'ಭಕ್ತಿ ಮಂಜರಿ', 10ಕ್ಕೂ ಹೆಚ್ಚು ಕಥನ ಗೀತೆಗಳಿರುವ 'ಕಾವ್ಯಮಂಜರಿ'ಯನ್ನೂ ರಚಿಸಿದ್ದಾರೆ. ಸರ್ಕಾರಿ ಉದ್ಯೋಗಿಯಾಗಿದ್ದರೂ, ಸದಾ ಕ್ರಿಯಾಶೀಲರಾಗಿರುವ ಮಂಜುನಾಥರನ್ನು ಗುರುತಿಸಿ ಒಂದಿಷ್ಟು ಸಂಘಸಂಸ್ಥೆಗಳು ಸನ್ಮಾನ ಮಾಡಿವೆ. ಆದರೆ, ಅವರ ಕಲಾಸೇವೆಯನ್ನು ಇಡೀ ನಾಡು ಗುರುತಿಸುವ ಅವಶ್ಯಕತೆ ಇದೆ. ಮಂಜುನಾಥರಿಗೆ ನೀವೂ ಅಭಿನಂದನೆ ಹೇಳಿ, ಮೊ. 9449838198.
- ಸುಧೀಂದ್ರ ಜಮ್ಮಟಿಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


