ಸಾಧನೆ

ಮುಗಿದಿಲ್ಲ!

ನಿವೃತ್ತಿ ಜೀವನ ಎಂದೊಡನೆ ಕಲ್ಪನೆಗೆ ಬರುವುದೇನು?

ಮುಗಿದಿಲ್ಲ!
Published On :

ನಿವೃತ್ತಿ ಜೀವನ ಎಂದೊಡನೆ ಕಲ್ಪನೆಗೆ ಬರುವುದೇನು? ಒಂದು ಆರಾಮ ಕುರ್ಚಿ ಮೇಲೆ ಕುಳಿತು ಮೂರ್ನಾಲ್ಕು ದಿನಪತ್ರಿಕೆಗಳನ್ನು ತಿರುವಿಹಾಕುವುದು. ಮೆಚ್ಚಿನ ಪುಸ್ತಕ ಓದುವುದು. ನಡಿಗೆಕೋಲು ಟಪಟಪ ಊರುತ್ತ ಎರಡೂ ಹೊತ್ತು ವಾಕಿಂಗ್, ಟಿ.ವಿ. ವೀಕ್ಷಣೆ. ಸಮೀಪದ ಪಾರ್ಕ್ನ ಕಲ್ಲು ಬೆಂಚಿನ ಮೇಲೆ ಅಥವಾ ಅಂಗಡಿ, ಮುಂಗಟ್ಟುಗಳ ಮೆಟ್ಟಿಲುಗಳ ಮೇಲೆ ಕೂತು ಪರಿಚಿತರು, ಅಪರಿಚಿತರೆಂಬ ಭೇದವಿಲ್ಲದೆ ಹರಟುವುದು. ಒತ್ತಾಯಪೂರ್ವಕವಾಗಿಯೇ ಎಳೆಯರನ್ನು ಕೂರಿಸಿಕೊಂಡು ಅವರೊಡನೆ ಗತವೈಭವವನ್ನು ಬಣ್ಣಿಸುವುದು. 'ಅಲ್ಲ ಮಾತಿಗೆ ಹೇಳ್ತೀನಿ' ಎಂದೇ ಆರಂಭವಾಗಿರುತ್ತದೆನ್ನಿ.
ವಾಸ್ತವವಾಗಿ ನಿವೃತ್ತಿ ಜೀವನ ಹೀಗಿರಬೇಕಿಲ್ಲ. ಹೇಗಪ್ಪ ಕಾಲಹರಣ ಅಂತ ಕೊರಗುವುದಂತೂ ಬದುಕನ್ನು ಅಪಮಾನಿಸಿದಂತೆ. ಈ ಸಲ್ಲದ ಮನಃಸ್ಥಿತಿಯಿಂದ ತನಗೆ ಸ್ವಲ್ಪವೂ ಸಮಯ ದೊರೆಯುತ್ತಿಲ್ಲ ಎನ್ನುವಂಥ ಕಾರ್ಯೋದ್ಯುಕ್ತತೆಗೆ ತಲುಪುವುದು ಖಂಡಿತ ಸಾಧ್ಯ. ಒಂದು ಅರೆಕಾಲಿಕ ಉದ್ಯೋಗ ಹಿಡಿದರೆ ಅಥವಾ ಲಾಭದಾಯಕ ವಹಿವಾಟಿನಲ್ಲಿ ತೊಡಗಿದರೆ ಒಂದಷ್ಟು ಸಂಪಾದನೆಯಾದೀತು. ಆದರೆ ಈ ದಿನಗಳಲ್ಲೂ ಮತ್ತೆ ಗಳಿಕೆ, ಖರ್ಚುಗಳ ಪಂಜರದಲ್ಲಿರುವುದೇ? ಇಂದಿನ ಜೀವನಮಟ್ಟಕ್ಕೆ ಸರಿಹೊಂದುವ ಪಿಂಚಣಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ನಿವೃತ್ತರಿಗೆ ನೀಡಿಯೇ ಇವೆ. ಹಾಗಾಗಿ ನಿವೃತ್ತಿಯೋತ್ತರ ದಿನಗಳನ್ನು ಸಾಧ್ಯವಾದಮಟ್ಟಿಗೆ ಸಮಾಜಸೇವೆ, ಓದು, ಕಿರಿಯರಿಗೆ ಮಾರ್ಗದರ್ಶನ, ಹೊಸ ಹೊಸ ಅರ್ಥಪೂರ್ಣ ಹವ್ಯಾಸಗಳಲ್ಲಿ ನಿಯೋಜಿಸಿಕೊಳ್ಳುವುದು ಅನುಪಮ. ಮನೆಮಂದಿಯೊಂದಿಗೆ ಪ್ರವಾಸ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು, ಸಮಾಜಮುಖಿ ಚರ್ಚೆ, ಸಂವಾದಗಳನ್ನು ಏರ್ಪಡಿಸುವುದು ಮೇಲ್ಪಂಕ್ತಿಯೆನ್ನಿಸುತ್ತದೆ. ಸೇವಾವಧಿಯಲ್ಲಿದ್ದಾಗ ಹತ್ತಿರದ ಸಂಬಂಧಿಗಳು, ಅಕ್ಕಪಕ್ಕದ ನಿವಾಸಿಗಳನ್ನು ಕೂಡ ಭೇಟಿಯಾಗಲಾಗಲಿಲ್ಲ. ಇದೋ ಈಗ ಬಿಡುವಿದೆ, ಒಮ್ಮೆಯೂ ಕಂಡು ಮಾತನಾಡಿಸಲಾಗದ ನೆಂಟರಿಷ್ಟರನ್ನು ಕಾಣಿರಿ. ಕಲಿಕೆಗೆ ವಯಸ್ಸು ಅಡ್ಡ ಬರದು. ಹೊಸ ಭಾಷೆ ಕಲಿಯಬಹುದು. ಅಯ್ಯೋ ಈಗೇಕೆ ಲ್ಯಾಪ್ಟಾಪ್, ಇ- ಮೇಲ್, ಫೇಸ್ಬುಕ್, ಚಾಟಿಂಗ್ ಅಂತ ಪೀಳಿಗೆ ಅಂತರ (ಜನರೇಶನ್ ಗ್ಯಾಪ್) ನೆಪವೊಡ್ಡದೆ ಸದಾ ಹೊಸತನಕ್ಕೆ ತೆರೆದುಕೊಂಡಿರುವುದು ಜಾಣತನ. ಆ ಮೂಲಕ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಎಲ್ಲರಲ್ಲೂ ಒಂದಿಲ್ಲೊಂದು ಪ್ರತಿಭೆ, ಕೌಶಲ ಇದ್ದೇ ಇರುತ್ತದೆ. ಅದು ಪರರಿಗೂ ಉಪಯುಕ್ತವಾಗುವಂತೆ ತೆರೆದುಕೊಳ್ಳಬೇಕು ಈಗ. ಅಂದ ಹಾಗೆ ಯಾರದೇ ಕಟ್ಟುಪಾಡು, ಅಂಕುಶವಿಲ್ಲದೆ ನಮಗೆ ಒಪ್ಪಿಗೆಯಾಗುವಂಥ ಸೃಜನಶೀಲ ಕಾರ್ಯಚಟುವಟಿಕೆಗಳಲ್ಲಿ ಯಾವ ಸಮಯದಲ್ಲಾದರೂ ನಾವು ತೊಡಗಿಕೊಳ್ಳಬಹುದಾದ ದಿನಮಾನಗಳಿವು.
ನಿವೃತ್ತಿ ಬದುಕಿನಲ್ಲೂ ಕಷ್ಟ, ಸುಖ ಇದ್ದಿದ್ದೇ. ನಿವೃತ್ತಿ ಹತ್ತಿರ ಬರುತ್ತಿದೆಯಲ್ಲ, ಇರುವ ಹಣಕಾಸು ಸಾಕಾದೀತೆ ಎಂಬ ಆತಂಕಕ್ಕೊಳಗಾಗಿ ಉಳಿತಾಯವನ್ನು ತೀವ್ರಗೊಳಿಸುವ ಅಗತ್ಯವೇ ಇಲ್ಲ. ಏಕೆಂದರೆ ಅಸಲಿಗೆ ಹಣಕ್ಕೂ ನೆಮ್ಮದಿಗೂ ಯಾವ ಸಂಬಂಧವೂ ಇಲ್ಲ. ರಾಬರ್ಟ್ ಲಾರ ಎಂಬ ಲೇಖಕ ನಿಷ್ಠುರವಾಗಿಯೇ ಹೇಳುತ್ತಾನೆ, 'ದೀರ್ಘಾಯುಷ್ಯದ ಬೆನ್ನೇರಿ. ಆದರೆ ಇರುವಷ್ಟು ಕಾಲವೂ ಆರೋಗ್ಯದಿಂದಿರುವುದು ಮುಖ್ಯ. ನಿವೃತ್ತಿಯ ನಂತರ ಇರುವ ಒಂದೇ ಒಂದು ಖಾತರಿಯೆಂದರೆ ಸಾವು! ಆದರೆ ಇನ್ನೆಷ್ಟು ದಿನ ತಾನೆ ಉಳಿದಿವೆಯೆಂಬ ಅಳಲು ಮೂರ್ಖತನ'. ಮನೆಯನ್ನು ಮರುವಿನ್ಯಾಸಗೊಳಿಸುವುದು, ಸಾಧ್ಯವಾದಷ್ಟು ಸ್ಥಳಾವಕಾಶ ಕಲ್ಪಿಸಿಕೊಂಡು ಹೂಕುಂಡಗಳಲ್ಲಾದರೂ ಸರಿ ಗಿಡಗಳನ್ನು ಬೆಳೆಸುವುದು, ಸಂಗೀತ ಕಲಿಯುವುದು... ಹೀಗೆ ಮೊಗೆದಂತೆ ಅವಕಾಶಗಳು. ಲಾಭ- ನಷ್ಟದ ಗಡಿ ಮೀರಿ ಕೈಗೊಳ್ಳಬಹುದಾದ ಸಣ್ಣಪುಟ್ಟ ವ್ಯಾಪಾರವೂ ಒಂದು ಸಮಾಜ ಸೇವೆಯೇ. ಉದಾಹರಣೆಗೆ, ಮನೆಯಲ್ಲೇ ವಿದ್ಯಾರ್ಥಿಗಳಿಗೆ ಅಗತ್ಯವಾದ ನೋಟ್ಬುಕ್, ಪಠ್ಯಪುಸ್ತಕ, ಲೇಖನ ಸಾಮಗ್ರಿ ವಗೈರೆ ಮಾರಾಟ, ಜೆರಾಕ್ಸ್ ಯಂತ್ರ ಇಟ್ಟುಕೊಳ್ಳುವುದು, ಪುಸ್ತಕಗಳಿಗೆ ಬೈಂಡ್ ಹಾಕುವುದು, ಮನೆಯಲ್ಲೇ ಬೇಬಿ ಸಿಟ್ಟಿಂಗ್... ಮುಂತಾದವು. ಕಾಂಚಾಣ ಪ್ರಾಪ್ತಿ ಎಷ್ಟೆನ್ನುವುದು ಮುಖ್ಯವಾಗಬಾರದು. ಈ ಪರಿಯ ಸೇವೆ ತನ್ನಿಂದಾಗುತ್ತಿದೆಯಲ್ಲ ಎನ್ನುವುದೇ ಸಮಾಧಾನ, ಸಂತೃಪ್ತಿ.
ನನ್ನ ಹಿರಿಯ ಮಿತ್ರರೊಬ್ಬರು ತಮ್ಮ ನಿವೃತ್ತಿ ಜೀವನವನ್ನು ವಿಶಿಷ್ಟವಾಗಿ ಕಳೆಯುತ್ತಿದ್ದಾರೆ. ಅದು ಎಂದು ಕಲಿತಿದ್ದರೋ, ವಿದ್ಯುನ್ಮಾನ ಉಪಕರಣಗಳ ದುರಸ್ತಿ, ಕೆಟ್ಟಿರುವ ಹಳೆಯ ನಮೂನೆಯ ರೇಡಿಯೊ, ಟ್ರಾನ್ಸಿಸ್ಟರ್, ಇಸ್ತ್ರಿಪೆಟ್ಟಿಗೆ, ಗೋಡೆ ಗಡಿಯಾರ ಮೊದಲಾದವು ಅಚ್ಚುಕಟ್ಟಾಗಿ ಮರುಜೀವ ಪಡೆಯುತ್ತವೆ. ಎಪ್ಪತ್ತು ಸಮೀಪಿಸುತ್ತಿರುವ ಆ ದಣಿವರಿಯದ ಜೀವಿ ಪ್ಲಂಬರ್ ಆಗಿ, ಕಾರ್ಪೆಂಟರ್ ಆಗಿ ಸಹ ಮೆರೆಯುತ್ತಾರೆ.
ಎಂಬತ್ತು ದಾಟಿದರೇನು, ಬ್ಯಾಟು ಹಿಡಿದು ಟೆನ್ನಿಸ್ ಆಡುವವರಿಲ್ಲವೆ? ನಾಲ್ಕು ದಶಕಗಳ ಹಿಂದೆ ಕಚೇರಿ ತಲುಪಿಸುತ್ತಿದ್ದ ಬೈಸಿಕಲ್ ಕೆಲವರ ಪಾಲಿಗೆ ಇಂದಿಗೂ ಸವಾರಿ ಬಯಸುತ್ತದೆ. ಒಂದು ಭಾವನಾತ್ಮಕ ್ಣಸಂಬಂಧವ ಹೌದೆನ್ನಿ. ಮಹತ್ತರ ಮಾರ್ಪಾಟಿನ ಬದುಕಿನ ಶೈಲಿಗೆ ಜಿಗಿಯಲು ನಿವೃತ್ತಿಯೆನ್ನುವ ಘಟ್ಟ ಒಂದು ಎಗರುವ ಹಲಗೆಯಾಗಲಾರದೆ? ನಿವೃತ್ತಿ ಪೂರ್ಣಾವಧಿ ಪ್ರವೃತ್ತಿಯಾಗದೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಖಂಡಿತ ಇದೆ.

- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.