ನಿರ್ಮಲ ಗ್ರಾಮರ್

ಸಾದಾ ಸೀರೆ. ಮೇಲೊಂದು ಕೋಟ್. ಆ ಕೋಟಿಗೋ ಹತ್ತಾರು ಬ್ಯಾಡ್ಜ್. ಇಷ್ಟು ಹೇಳಿದರೆ ಸಾಕು, ಮೈಸೂರಿನ ವಿದ್ಯಾರ್ಥಿ ವೃಂದಕ್ಕೆ ಗೊತ್ತಾಗಿ ಬಿಡುತ್ತದೆ ಇವರು ಡಾ.ಬಿ. ನಿರ್ಮಲಾ ಎಂದು.
ಬೆಳಗ್ಗೆ ವ್ಯಾಯಾಮ ಮತ್ತು ದಿನಕೆಲಸ ಪೂರೈಸಿದ ಬಳಿಕ ಕಾಲೇಜು. ಅಲ್ಲಿಂದ ಮರಳಿದ ಮೇಲೆ ಸಮಾಜ ಸೇವೆ. ಇದು ಡಾ. ನಿರ್ಮಲಾ ಅವರ ದಿನಚರಿ. ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸುವುದು, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ನಡೆಸುವುದು, ಬರವಣಿಗೆ... ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಈಕೆ ಉಪನ್ಯಾಸಕಿ, ಜ್ಯೋತಿಷಿ, ಕ್ರೀಡಾಪಟು.
ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ಸಮಾಜದಲ್ಲಿ ಹೆಸರು ಮಾಡಿದ್ದ ಮುದುಗೆರೆಯ ಬಟ್ಟಿಮಲ್ಲಪ್ಪ ಮತ್ತು ಮಲ್ಲಮ್ಮ ದಂಪತಿಯ ಇಬ್ಬರು ಪುತ್ರಿಯರಲ್ಲಿ ಒಬ್ಬಳಾದ ನಿರ್ಮಲಾಗೆ ಪುಟ್ಟ ಮಗುವಾಗಿರುವಾಗಲೇ ನೊಂದವರಿಗೆ ಸಾಂತ್ವನ ಹೇಳುವುದು, ಬಡವರನ್ನು ಕಂಡರೆ ಕನಿಕರಿಸುವುದು, ಅಂಥವರಿಗೆ ಸಣ್ಣಪುಟ್ಟ ಸಹಾಯ ಮಾಡುವ ಗುಣ. ತಂದೆಯದೋ ದೊಡ್ಡ ಸಂಸಾರ. ಮನೆಯಲ್ಲಿ ಸದಾ ನೆಂಟರು. ಮಗಳ ಓದುವ ಹುಚ್ಚು ಗೊತ್ತಿದ್ದರೂ ಖಾಸಗಿ ಶಾಲೆಗೆ ಸೇರಿಸಲು ಸಾಧ್ಯವಾಗದೆ ಸರ್ಕಾರಿ ಶಾಲೆಗಳಲ್ಲೇ ಓದಿಸಿದರು.
ಚಿನ್ನದ ಪದಕಗಳೊಂದಿಗೆ ಓದು, 'ರಾಜೇಂದ್ರ ಅವಾಸ್ತಿ ಉಪನ್ಯಾಸೋಂ ಮೆ ಆಂಚಲಿಕ್ತಾ' ವಿಷಯಕ್ಕಾಗಿ ಬೆಂಗಳೂರು ವಿ.ವಿಯಿಂದ ಪಿ.ಎಚ್‌ಡಿ ಪಡೆದ ನಿರ್ಮಲಾ, ಆರಂಭಿಕ ದಿನಗಳಲ್ಲಿ ಬೆಂಗಳೂರಿನ ಎನ್‌ಎಂಕೆಆರ್‌ವಿ, ಎಂಇಎಸ್, ಎಸ್‌ಎಸ್‌ಎಂಆರ್‌ವಿ, ಎಸ್‌ಜೆಆರ್‌ಸಿ, ಬಸವೇಶ್ವರ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದರು. 18 ವರ್ಷಗಳಿಂದ ಮೈಸೂರಿನ ಮಹಾರಾಣಿ ವಿಜ್ಞಾನ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕಿ.
ಸೇವಾ ಮನೋಭಾವದ ಇವರಿಗೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಹೊಣೆ ಹೆಗಲೇರಿತು. ಅಲ್ಲೂ ಇವರದು ದಾಖಲೆ. ಒಂದು ವರ್ಷ ಎನ್‌ಎಸ್‌ಎಸ್ ಸಹಾಯಕ ಯೋಜನಾಧಿಕಾರಿಯಾಗಿ, ನಂತರ ನಿರಂತರ 15 ವರ್ಷ (1995-96 ರಿಂದ 2010) ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 'ಇದೊಂದು ರಾಷ್ಟ್ರೀಯ ದಾಖಲೆ' ಎಂದು ನಿರ್ಮಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಈ ಅವಧಿಯಲ್ಲಿ ರಕ್ತದಾನ ಶಿಬಿರಗಳ ಮೂಲಕ 965 ಯೂನಿಟ್ ರಕ್ತ ಸಂಗ್ರಹ, 12,000ಕ್ಕೂ ಹೆಚ್ಚು ರಕ್ತ ಗುಂಪು ತಪಾಸಣೆ ಮಾಡಿಸಿದ್ದಾರೆ. ನೇತ್ರದಾನಕ್ಕೆ 5500 ಪ್ಲೆಡ್ಜ್ (ವಚನ) ಸಂಗ್ರಹಿಸಿರುವರು. 9700 ಸಸಿಗಳನ್ನು ನೆಡಿಸಿ ಅದನ್ನು ಪೋಷಿಸುತ್ತಿದ್ದಾರೆ. 14000 ಆರೋಗ್ಯ ಶಿಬಿರ ಹಾಗೂ 3200 ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದಾರೆ. ತಮ್ಮ ಬುಕ್ಸ್ ಬ್ಯಾಂಕ್ ಸ್ಕೀಮ್ ಮುಖೇನ ಅಂದಾಜು ಒಂದು ಲಕ್ಷ ರುಪಾಯಿ ಮೌಲ್ಯದ ಪುಸ್ತಕಗಳನ್ನು ಬಡ ಮಕ್ಕಳಿಗೆ ನೀಡಿದ್ದಾರೆ.
ಇನ್ನು ಕ್ರೀಡಾಕ್ಷೇತ್ರ. ಕ್ರಿಕೆಟ್ ಆಟಗಾರ್ತಿಯಾಗಿ ಕರ್ನಾಟಕ ಹಾಗು ರಾಜಸ್ಥಾನ ತಂಡಗಳಿಗೆ ಆಡಿದ್ದಾರೆ. ಎರಡೂ ರಾಜ್ಯಗಳಿಗೆ ಟಿ.ಟಿ. ಬ್ಯಾಡ್ಮಿಂಟನ್, ಕೇರಂ ಆಡಿದ್ದಾರೆ (ನಿರ್ಮಲಾ ಕಾಲೇಜು, ಸ್ನಾತಕೋತ್ತರ ಪದವಿ ಓದಿದ್ದು ರಾಜಸ್ಥಾನದಲ್ಲಿ). ವಿದ್ಯಾರ್ಥಿ ಜೀವನದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಓಟ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಖೋ ಖೋ, ಸೈಕ್ಲಿಂಗ್, ಕೇರಂ, ಟಿ.ಟಿ.ಗಳಲ್ಲಿ ಬಹುಮಾನ ಗೆದ್ದಿದ್ದಾರೆ. ರಾಜಾಸ್ಥಾನ ವಿ.ವಿ ತಂಡಕ್ಕೆ ಜನರಲ್ ಕ್ಯಾಪ್ಟನ್ ಆಗಿದ್ದರು.
ಸತ್ಯಸಾಯಿ ಇನ್‌ಸ್ಟಿಟ್ಯೂಟ್‌ನ ಬಾಲ ಸೇವಿಕ ಯೋಜನೆ ಹಾಗೂ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಮಾರ್ಗದರ್ಶಕಿಯಾಗಿ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಎಸ್‌ಎಸ್ ಸಲಹಾ ಸಮಿತಿ ಸದಸ್ಯೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಲಯನ್ಸ್ ಹಾಗೂ ಲಯನೆಸ್ ಸಂಸ್ಥೆಗಳ ಚಟುವಟಿಕೆಗಳಲ್ಲೂ ಮುಂದು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಎಂಜೆಎಫ್ (ಮೆಲ್ವಿನ್ ಜೋನ್ಸ್ ಫೆಲೋಶಿಪ್) ಪುರಸ್ಕೃತರಾಗಿದ್ದಾರೆ.
ಒಟ್ಟಾರೆ 32 ವರ್ಷಗಳ ಉಪನ್ಯಾಸಕ ವೃತ್ತಿ ಜೀವನದಲ್ಲಿ 60ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ಸಂಯೋಜಿಸಿದ್ದಾರೆ. ಅನೇಕ ಲೇಖನ, ಕೃತಿಗಳೂ ಪ್ರಕಟಗೊಂಡಿವೆ. ತಮ್ಮ ಸಾಮಾಜಿಕ ಚಟುವಟಿಕೆಗಳಿಗಾಗಿ ನೂರಾರು ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ.
- ಸವಿತಾ ನಾಗೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


