ನಂದಳಿಕೆಯ ಬಾಲಚಂದ್ರ
ಅವನು (ಮುದ್ದಣ) ಹುಟ್ಟಿದ ಊರಿಗೆ ನಂದಾದೀಪವೆನ್ನಿಸಿದನು. ಊರಿನ ತರುಣರನೇಕರು ಸೇರಿಕೊಂಡು ಕವಿ ಮುದ್ದಣ ಸ್ಮಾರಕ ಮಂಡಳಿ ಎಂಬ ಸಂಘವೊಂದನ್ನು ಕಟ್ಟಿದರು.
ಆ ಸಂಘದ ಗೌರವಾಧ್ಯಕ್ಷರಾಗಿ ನಂದಳಿಕೆ ಬಾಲಚಂದ್ರ ರಾವ್ ಎನ್ನುವವರು ಮುಂದೆ ನಿಂತರು. ಸಂಘದ ಎದುರಿಗೆ ಎರಡು ಮೂಲ ಉದ್ದೇಶಗಳಿದ್ದುವು. ಒಂದು, ಮುದ್ದಣನ ಹೆಸರನ್ನು ಅಜರಾಮರಗೊಳಿಸುವುದು. ಇನ್ನೊಂದು, ಅವನ ಹೆಸರಿನ ಬಲದ ಮೇಲೆ ಊರಿನ ಅಭಿವೃದ್ಧಿ ಸಾಧಿಸುವುದು. ಮಿತ್ರ ಮಂಡಳಿಗೆ ಈಗ 20 ವರ್ಷ ತುಂಬಿದೆ. ಮಂಡಳಿಯ ಕಾರ್ಯಕರ್ತರ ಉತ್ಸಾಹ ಕುಂದಿಲ್ಲ. ಈ ಅವಧಿಯಲ್ಲಿ ಅವರು ಸಾಧಿಸಿರುವುದು ಅಲ್ಪವೇನಲ್ಲ.
ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು ಕಾರ್ಕಳ ತಾಲೂಕಿನ ನಂದಳಿಕೆ. ಕವಿ ಮುದ್ದಣನಿಗೊಂದು ಸ್ಮಾರಕ ನಿರ್ಮಿಸುವ ಕನಸು ಹೊತ್ತ ಈ ಮಿತ್ರಮಂಡಳಿ ಕ್ರಮೇಣ ಇಡೀ ಹಳ್ಳಿಯ ಪುನರುತ್ಥಾನಕ್ಕೆ ತೊಡಗಿತು. ಸಂಘಟನಾ ಶಕ್ತಿಯಿಂದ ನಂದಳಿಕೆಯ ನೆಲದಲ್ಲಿ ಡಾಂಬರು ರಸ್ತೆ, ಮನೆಮನೆಗಳಲ್ಲಿ ವಿದ್ಯುದ್ದೀಪದ ಬೆಳಕು, ಬಸ್‌ಗಳ ಸಂಪರ್ಕ, ಆಸ್ಪತ್ರೆ ಸೌಲಭ್ಯ, ಗ್ರಂಥಾಲಯ, ಕೊಳವೆ ಬಾವಿ, ಮುದ್ದಣನ ವನ ಮುಂತಾದ ಹಲವು ಸೌಕರ್ಯದ ನಾಗರಿಕತೆಯ ಗಾಳಿ ಬೀಸುವಂತಾಯಿತು. ಮಿತ್ರ ಮಂಡಳಿಯ ಸ್ಥಾಪಕ ಗೌರವ ಅಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್ ಅವರ ಛಲ ಬಿಡದ ಭಗೀರಥ ಪ್ರಯತ್ನದಿಂದ ನಂದಳಿಕೆ ನಂದನವನವಾಯಿತು.
ನಂದಳಿಕೆಯ ಮುದ್ದಣ ಮಿತ್ರ ಮಂಡಳಿಯೊಂದಿಗೆ ಬಾಲಚಂದ್ರ ರಾವ್ ತೆಕ್ಕೆಯಲ್ಲಿರುವ ಸಂಘ ಸಂಸ್ಥೆಗಳು ಹಲವಾರು. ನಾಡಿನಾದ್ಯಂತ ಪ್ರಸಿದ್ಧಿ ಪಡೆದ ಕಾಂತಾವರ ಕನ್ನಡ ಸಂಘ, ನಂದಳಿಕೆ ಶ್ರೀ ಮಹಾಲಿಂಗೇಶ್ವರ ಶಾಲಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ, ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ ಉಪಾಧ್ಯಕ್ಷರು. ದಕ್ಷಿಣ ಕನ್ನಡ ಜಿಲ್ಲಾ ದೂರಸಂಪರ್ಕ ಸಮಿತಿಯ ಸದಸ್ಯರಾಗಿ ಬಾಲಚಂದ್ರ ರಾಯರು ನಡೆಸುತ್ತಿರುವ ಸಾಮಾಜಿಕ ಸ್ಪಂದನ ಸ್ತುತ್ಯರ್ಹ. ಅವರು ಅಖಿಲ ಭಾರತೀಯ ಸಾರ್ವಜನಿಕ ಸಂಪರ್ಕ ಸಂಘದ ಬೆಂಗಳೂರು ಘಟಕದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆನ್ನು ತಟ್ಟುವ ಕಾಯಕ
ಬಾಲಚಂದ್ರರಾವ್ ಸ್ವತಃ ಬರಹಗಾರರು. ಅದಕ್ಕಿಂತಲೂ ಹೆಚ್ಚಾಗಿ ಇತರರಿಗೆ ಪ್ರೋತ್ಸಾಹ ನೀಡುವ ಸ್ವಭಾವದವರು. ಎಲೆ ಮರೆಯಲ್ಲಿರುವ ಎಷ್ಟೋ ಪ್ರತಿಭೆಗಳನ್ನು ಬೆಳಕಿಗೆ ತರುವುದೆಂದರೆ ಅವರಿಗೆ ಹಿಗ್ಗು. ಮಿತ್ರ ಮಂಡಳಿಯ ಆಶ್ರಯದಲ್ಲಿ ಅನೇಕ ಕೃತಿಗಳನ್ನು ಪ್ರಕಾಶಕ್ಕೆ ತಂದ ಕೀರ್ತಿ ಇವರಿಗೆ ಸಲ್ಲಬೇಕು. ಇಂದು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಗಂಜೀಫಾ ರಘುಪತಿ ಭಟ್ಟರ ಮೊತ್ತಮೊದಲ ಗಂಜೀಫಾ ಚಿತ್ರಕಲಾ ಪ್ರದರ್ಶನ 1991ರಲ್ಲಿ ನಂದಳಿಕೆಯ ಮಿತ್ರ ಮಂಡಳಿಯ ಆಶ್ರಯದಲ್ಲೇ ನಡೆಯಿತು. 1994 ಜನವರಿಯಲ್ಲಿ ಮುದ್ದಣನ 125ನೇ ಜಯಂತಿ ಸಂದರ್ಭದಲ್ಲಿ ನನ್ನ 'ಯಕ್ಷಗಾನ ಅಷ್ಟಾವಧಾನ' ಕೂಡ ಪ್ರಪ್ರಥಮ ಪ್ರಯೋಗವಾಗಿ ಮಿತ್ರಮಂಡಳಿಯ ಆಶ್ರಯದಲ್ಲೇ ಮೂಡಿಬಂತು.
ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ನಂದಳಿಕೆ ಬಾಲಚಂದ್ರರಾವ್ ಕರ್ಣಾಟಕ ಬ್ಯಾಂಕಿನಲ್ಲಿ 3 ದಶಕ ಕಾರ್ಯ ನಿರ್ವಹಿಸಿ ಇದೇ ಮಾ. 30ರಂದು ತನ್ನ ಸೇವೆಯಿಂದ ನಿವೃತ್ತರಾಗಿದ್ದಾರೆ. ಕರ್ನಾಟಕದ ಪ್ರಮುಖ ಕವಿಗಳ ಹುಟ್ಟೂರಿನಲ್ಲಿ ಇಂಥವರು ಉದಯಿಸಿದರೆ ಕನ್ನಡ ನಾಡು ಮುದ್ದಣ-ಮನೋರಮೆಯರ ನಂದಳಿಕೆಯಾಗುವುದು.
- ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

