ಸಾಧನೆ

ಮಂಡೇಲಾ ಮಾಣಿಕ್ಯ

ಆ ಮುಖದಿಂದ ಆಕ್ಸಿಜನ್ ಮಾಸ್ಕ್ ತೆಗೆದು ಕೆಲವು ಹೊತ್ತಾಗಿದೆ....

ಮಂಡೇಲಾ ಮಾಣಿಕ್ಯ
Published On :

ಆ ಮುಖದಿಂದ ಆಕ್ಸಿಜನ್ ಮಾಸ್ಕ್ ತೆಗೆದು ಕೆಲವು ಹೊತ್ತಾಗಿದೆ. ಆದರೂ ಅವರು ನಗುತ್ತಿದ್ದಾರೆ. ಅದೇ ಹಳೆಯ ಹೊಳಪು ಆ ತುಟಿಯ ತಿರುವಿನಲ್ಲಿ. ಮತ್ತೆ ಮಂಡಿಯೂರಿ ನಡೆಯುವ ಕನಸನ್ನು ಮಂಡೇಲಾ ಮರೆತುಬಿಟ್ಟಂತೆ ಕಾಣುವುದೇ ಇಲ್ಲ. ಆರ್ಮ್‌ಚೇರ್‌ನಲ್ಲಿಯೇ ಮಲಗಿದಂತೆ ಕೂತು ಪೇಪರ್ ಓದುತ್ತಾರೆ. ವ್ಹೀಲ್‌ಚೇರಿನಲ್ಲಿ ತಮ್ಮನ್ನು ತಾವೇ ಕೈಬಲದೊಂದಿಗೆ ಒಂದಷ್ಟು ಮೀಟರುಗಳ ದೂರ ತಳ್ಳಿಕೊಂಡು ಹೋಗುತ್ತಾರೆ. ಬೇರೆಯವರ ಸಪೋರ್ಟ್ ಅನ್ನು ನಿರೀಕ್ಷಿಸಿದ್ದೇ ಅವರ ದಾದಿಗೆ ಗೊತ್ತಿಲ್ಲವಂತೆ.
ಚೇರಿನ ದಿಂಬಿಗೆ ತಲೆಕೊಟ್ಟು ಹೀಗೆ ಒಂಬತ್ತು ತಿಂಗಳಾಗಿವೆ. ಮೊನ್ನೆ ಮೊನ್ನೆಯಷ್ಟೇ ಆಸ್ಪತ್ರೆಯ ಗಾಳಿ ಸೇವಿಸಿ ಸಾಕಾಗಿ, ಮನೆಗೆ ಬಂದಿದ್ದಾರೆ ಮಂಡೇಲಾ. ಅವರ ಮೊಗದ ನೆರಿಗೆಗಳು ಸುಸ್ತಿನ ಕಥೆ ಹೇಳುವುದಿಲ್ಲ. ಆದರೆ, ಅವರ ಬಾಯಿ ಮಾತ್ರ ದಕ್ಷಿಣ ಆಫ್ರಿಕದ ರಾಜತಾಂತ್ರಿಕತೆ ಬಗ್ಗೆ ಮೊದಲಿನಷ್ಟೇ ಮೊನಚಾಗಿ ಮಾತಿಗಿಳಿಯುತ್ತದೆ. ಅಮೆರಿಕ- ಉತ್ತರ ಕೊರಿಯಾ ಬಗ್ಗೆ ಚರ್ಚೆಗಿಳಿಯುತ್ತದೆ. ಜಗತ್ತಿನ ಆಗುಹೋಗುಗಳೆಲ್ಲ, ತಲೆಯೊಳಗೆ ತಕರಾರಿಲ್ಲದೆ ತರ್ಕದೋಕುಳಿ ಚೆಲ್ಲುತ್ತಿವೆ.  
ಇಲ್ಲಾ... ಮಂಡೇಲಾಗೆ ಯುವಕರಂತೆ ಮೈಮರೆತು ಮಲಗಿಯೇ ಗೊತ್ತಿಲ್ಲ!
'ಈ ವಯಸ್ಸಲ್ಲೂ ಅವರೆಂಥ ಆ್ಯಕ್ಟಿವ್!' ಅಂತ ಹುಡುಗರೆಲ್ಲ ಮಂಡೆಬಿಸಿ ಮಾಡಿಕೊಂಡು ಮಂಡೇಲಾರ ಬಗ್ಗೆ ಹೇಳಿಬಿಡಬಹುದು. ಆದರೆ, ಅವರಂತೆ ನೇರವಾಗಿ ಬದುಕುವುದು ಕಷ್ಟ. ಮಾನವ ಸಂಬಂಧಗಳ ನಡುವೆ ಬಣ್ಣಗಳ ಪ್ರಾಮುಖ್ಯತೆಯನ್ನು ಅಲ್ಲಗಳೆದು, ಈಗಲೂ ತುಂಬುಗಲ್ಲದಲ್ಲಿ ನಗುವ ನೆಲ್ಸನ್ ಮಂಡೇಲಾ ಈ ಜಗದ ಹೋರಾಟದ ಹೂವು.
ಬದುಕು ಇಡಿ ಇಡಿಯಾಗಿ ನಮ್ಮ ಕೈಯ್ಯೊಳಗಿದ್ದರೂ, ಏನನ್ನೂ ಸಾಧಿಸಲಾಗದೆ ಒದ್ದಾಡುವ ಮಂದಿಗೆ ಅವರೊಬ್ಬರು ಮಾದರಿ. ಅವರ ಇಪ್ಪತ್ತೇಳು ವಸಂತಗಳು ಜೈಲಿನ ಸರಳುಗಳ ಹಿಂದೆಯೇ ಸರಿದುಹೋದಾಗ, ಉತ್ಸಾಹಹೀನರಾಗಿ ಅವರ ದನಿಯೇನೂ ಕುಗ್ಗಿ ಹೋಗಲಿಲ್ಲ. ದಕ್ಷಿಣ ಆಫ್ರಿಕದ ಕರಿಯ ಜನಾಂಗದವರ ಕೈಗೆ ಸ್ವಾತಂತ್ರ್ಯದ ದೀವಟಿಗೆ ಕೊಡುವ ತನಕ ಅವರೇನೂ ನಿದ್ದೆ ಮಾಡಿದವರೂ ಅಲ್ಲ.
ಮಂಡೇಲಾ ಇಲ್ಲಿಯ ತನಕ ಮೂರು ಮದುವೆಯಾದವರು. 1996ರಲ್ಲಿ ವಿನ್ನಿ ಮಂಡೇಲಾ ಅವರಿಂದ ವಿಚ್ಛೇದನ ಪಡೆದರು. ಕೂದಲು ಹಣ್ಣಾದರೂ, ಒಂದೆರಡು ಹಲ್ಲು ಉದುರಿಬಿದ್ದರೂ ಅವರ ವೃದ್ಧಾಪ್ಯ ನೋಡದೆ 'ಯುವ ಉತ್ಸಾಹ'ಕ್ಕೆ ಮನಸೋತೇ 80ರ ಮಂಡೇಲಾರನ್ನು ಗ್ರಾಕ್ ಮಾಕೆಲ್ ನೀ ಸಿಂಬಿನಿ ಎಂಬಾಕೆ ಮದುವೆಯಾದರು. ಸಂಪ್ರದಾಯವಾದಿಗಳು ಈ ಮದುವೆ ವಿರುದ್ಧ ಸೊಲ್ಲೆತ್ತಿದ್ದರು. ಮಂಡೇಲಾರ ಆದರ್ಶವನ್ನು ಈ ಮದುವೆಯೊಂದಿಗೆ ತಳುಕು ಹಾಕಿ, ಇನ್ನಿಲ್ಲದ ಸುದ್ದಿ ಹಬ್ಬಿಸಿಬಿಟ್ಟರು. ಆಗಲೂ ಮಂಡೇಲಾ ಎದೆಗುಂದಲಿಲ್ಲ. ಈಗಿವರಿಬ್ಬರದ್ದು ಆದರ್ಶ ದಾಂಪತ್ಯ.
ಮೊನ್ನೆ ಮತ್ತೊಬ್ಬರು ಸುದ್ದಿಮಾಡಿದರು. ಭಾರತದ ಮಹಿಳೆ ಅಮೀನಾ. ಅವರು ತಮ್ಮ 'ವೆನ್ ಹೋಪ್ ಆ್ಯಂಡ್ ಹಿಸ್ಟರಿ ರೈಮ್‌' ಕೃತಿಯಲ್ಲಿ ಹೀಗೆ ಗೀಚಿದರು... 'ಯವ್ವನದಲ್ಲಿ ನಾನು ಸ್ಫುರದ್ರೂಪಿ. ಇದು ಅನೇಕರಿಗೆ ಗೊತ್ತಿದೆ. ಅಂಥವರಲ್ಲಿ ನೆಲ್ಸನ್ ಮಂಡೇಲಾ ಕೂಡ ಒಬ್ಬರು. ಅವರು ನನಗೆ ಪ್ರಪೊಸ್ ಕೂಡ ಮಾಡಿದ್ದರು. ಪ್ರೀತಿಗೆ ವಯಸ್ಸು ಅಡ್ಡಿ ಅಲ್ಲ ಎಂದು ನಾನರಿತದ್ದು ಅಂದೇ'.
ನೆಲ್ಸನ್ ಮಂಡೇಲಾರ ಹುಟ್ಟಿದ ತಾರೀಖು ಇವತ್ತು ನಮಗೆ ಅವರಿಗೆ 95 ಆಯ್ತು ಎಂದು ಮೋಸಗೊಳಿಸಬಹುದು. ಆದರೆ, ಅವರ ನಗುವಿನ ಮುಖ ನಿಜ ಹೇಳುತ್ತದೆ. ಜಗದ ನೋವಿಗೆ ಪುಟಿಯುವ ಅವರ ಹೃದಯ ತಾನಿನ್ನೂ ಯುವಕ ಎಂದು ಸತ್ಯದ ಸದ್ದು ಹೊರಡಿಸುತ್ತದೆ.
ಹೋರಾಟದ ಹೂವು ಎಂಥ ವಯಸ್ಸಿನ ತಾಪಕ್ಕೂ ಬಾಡದು!

ವೃದ್ಧರಿಗೆ ಸಂಘ ಕಟ್ಟಿದರು!
ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನಶೈಲಿಗಳಿಂದ ನಗರದ ಹಿರಿಯ ಜೀವಗಳ ಬದುಕು ತೀರಾ ಅತಂತ್ರವಾಗಿದೆ. ಅನೇಕ ವಯೋವೃದ್ಧರು ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ ಇವತ್ತಿನ ಪರಿಸ್ಥಿತಿಗೆ ಕಾರಣಗಳು ದಂಡಿಯಾಗಿವೆ. ನಮ್ಮ ಸಾಮಾಜಿಕ ವ್ಯವಸ್ಥೆಯೇ ಪಲ್ಲಟವಾಗಿರುವುದರಿಂದ ವಯೋವೃದ್ಧರು ನೆಮ್ಮದಿಯಿಂದ ಬದುಕುವ ಅವಕಾಶಗಳು ಕಡಿಮೆಯಾಗಿ, ಸವಾಲುಗಳು ಬೆಟ್ಟದಷ್ಟಾಗಿವೆ.
ಎಲ್ಲ ವಯೋವಾನದವರಿಗೂ ಅವರದೇ ಆದ ಸಂಘಗಳಿವೆ. ಆದರೆ, ವೃದ್ಧರಿಗೆ ಯಾವುದೇ ಸಂಘಗಳಿಲ್ಲ. ತಮ್ಮ ಹಕ್ಕುಗಳ ಬಗ್ಗೆ ಒಗ್ಗಟ್ಟಾಗಿ ಹೋರಾಡಲು ಅವರಿಗೆ ಶಕ್ತಿಯಿಲ್ಲ. ಟ್ಯಾಕ್ಸ್‌ಗಳನ್ನು ಹಾಕುವಾಗ ಅಮೆರಿಕ ಮತ್ತಿತರ ಪಾಶ್ಚಾತ್ಯ ದೇಶಗಳನ್ನು ಉದಾಹರಿಸುವ ನಮ್ಮ ಸರ್ಕಾರಗಳು ಅಲ್ಲಿರುವಂತೆ ಸೋಷಿಯಲ್ ಸೆಕ್ಯುರಿಟಿ ಬಗ್ಗೆ ಮಾತ್ರ ಚಿಂತಿಸುತ್ತಿಲ್ಲ.
ಇದನ್ನೆಲ್ಲ ಯೋಚಿಸಿಯೇ 2007ರಲ್ಲಿ ನೆಲ್ಸನ್ ಮಂಡೇಲಾ, ಗ್ರಾಕ್ ಹಾಗೂ ಡೆಸ್ಮಂಡ್ ಟುಟು ಸೇರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ವಯೋವೃದ್ಧ ಮುತ್ಸದ್ದಿ ಸಮೂಹ' ಕಟ್ಟಿದ್ದಾರೆ. ಅವರ 89ನೇ ಹುಟ್ಟುಹಬ್ಬದ ದಿನದಂದು ರಚನೆಗೊಂಡ ಈ ಸಂಘವು ಜಾಗತಿಕ ಮಟ್ಟದಲ್ಲಿ ತಲೆದೋರುವ ಮಾನವ ವಿರೋಧಿ ಕೃತ್ಯಗಳ ಬಗೆಗೆ ತನ್ನ ಪ್ರತಿಭಟನೆಯ ಹೇಳಿಕೆಗಳನ್ನು ನೀಡಿ ಶಾಂತಿ ಸಂದೇಶಗಳನ್ನು ಬಿತ್ತರಿಸುತ್ತದೆ. ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕರು ಈ ಸಂಘದ ಸಕ್ರಿಯ ಸದಸ್ಯರಾಗಿದ್ದಾರೆ. ಯಾವುದೇ ಅಂಜಿಕೆ, ಅಳುಕಿಲ್ಲದೇ ಈ ಸಂಘಟನೆಯು ಜಗತ್ತಿನ ಯಾವುದೇ ಭಾಗದಲ್ಲಿ ಮಾನವನ ಜೀವವಿರೋಧಿಯಾಗಿ ನಡೆಯುವ ಎಲ್ಲ ಕುಕೃತ್ಯಗಳನ್ನು ಖಂಡಿಸುತ್ತದೆ. ಪ್ರತಿಭಟನಾ ಹೇಳಿಕೆ ನೀಡಿ ಜಗತ್ತನ್ನು ಜಾಗೃತವಾಗಿಡುವ ಪ್ರಯತ್ನದಲ್ಲಿ 'ವಯೋವೃದ್ಧ ಮುತ್ಸದ್ದಿ ಸಮೂಹ' ತೊಡಗಿಕೊಂಡಿದೆ.
ನಮ್ಮಲ್ಲೂ ಇಂಥ ಸಂಘಗಳ ಸ್ಥಾಪನೆ ಅನಿವಾರ್ಯವಾಗಿದೆ. ಆಗಲಾದರೂ ವೃದ್ಧರ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿಯ ಜೀವನ ಅವರದಾಗಬಹುದು.

-ಶಶಿರೇಖಾ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.