ಸಾಧನೆ

ಚುಕ್ಕಿ ಚತುರ

ಚುಕ್ಕಿ ಚತುರ
Published On :

ಇವರ ರಂಗೋಲಿ ಸುತರಾಂ ಸುಳ್ಳಲ್ಲ!

ಆತನ ಕೈಗೆ ಒಂದಷ್ಟು ಬಣ್ಣದ ಹುಡಿಯನ್ನು ಕೊಟ್ಟರೆ ಕ್ಷಣಾರ್ಧದಲ್ಲಿ ಅತ್ಯಾಕರ್ಷಕ ರಂಗೋಲಿ ರಚಿಸುತ್ತಾರೆ. ಆಯ, ಆಕಾರ, ಗೆರೆ, ತುಂಬಿದ ಬಣ್ಣ ಒಂದಿಷ್ಟು ಆಚೀಚೆ ಇಲ್ಲದ ಈ ರಂಗೋಲಿ ನೋಡಿ ಎಂತಹ ರಂಗೋಲಿ ಚತುರೆಯರೂ ನಿಬ್ಬೆರಗಾಗಬೇಕು...
ಬೆಳಗಾವಿಯ ಮಹೇಶ್ ಸುತಾರ್ ಕಲಿತದ್ದು ಬಿ.ಕಾಂ. ಐದು ವರ್ಷ ಮಾರ್ಕೆಟಿಂಗ್ ಉದ್ಯೋಗ. ಈಗ ಮಣಿಪಾಲದಲ್ಲಿ ಬಿಬಿಎಂ ಮಾಡುವುದಕ್ಕಾಗಿ ಉಡುಪಿಗೆ ಬಂದಿದ್ದಾರೆ. ಅವರ ರಂಗೋಲಿ ಪ್ರತಿಭೆ ಗುರುತಿಸಿದ  ಉಡುಪಿ ಆರ್ಟ್ ಗ್ಯಾಲರಿ ನಿರ್ದೇಶಕ ವಸಂತ್ ರಾವ್, ಅವರಿಂದ ಪೇಪರ್ ಮೇಲೆ ಒಂದಷ್ಟು ರಂಗೋಲಿಗಳನ್ನು ಬರೆಯಿಸಿ ಕೆಲ ದಿನಗಳ ಹಿಂದೆ ಪ್ರದರ್ಶನ ಏರ್ಪಡಿಸಿದ್ದರು.
ಯಾವುದೇ ಅಕಾಡೆಮಿಕ್ ಕಲಾ ಶಿಕ್ಷಣ ಪಡೆಯದೆ, ತಮ್ಮ ತಾಯಿ ಹಾಗೂ ಅಕ್ಕ ರಂಗೋಲಿ ಬರೆಯುವುದನ್ನು ನೋಡಿ ಸ್ಫೂರ್ತಿಗೊಂಡು ರಂಗೋಲಿ ಬರೆಯಲಾರಂಭಿಸಿರುವ ಸುತರ್, ಇದೀಗ ತಮ್ಮದೇ ಆದ ಶೈಲಿಯೊಂದನ್ನು ರೂಢಿಸಿಕೊಳ್ಳುತ್ತಿದ್ದಾರೆ.
ಫ್ರೀ ಹ್ಯಾಂಡ್ ನಿಪುಣ
ಕರಾವಳಿ, ಮಲೆನಾಡಿನಲ್ಲಿ ಚುಕ್ಕಿ ಇಟ್ಟು, ಇವುಗಳನ್ನು ಒಂದಕ್ಕೊಂದು ಜೋಡಿಸಿ ಬರೆಯವ ರಂಗೋಲಿಗಳು ಬಹಳ ಪ್ರಸಿದ್ಧ. ಆದರೆ ಉತ್ತರ ಕರ್ನಾಟಕದಲ್ಲಿ ಚುಕ್ಕಿಗಳಿಲ್ಲದೇ ನೇರವಾಗಿ ಗೆರೆಗಳನ್ನು ಬರೆದು ರಚಿಸುವ ರಂಗೋಲಿ ಶೈಲಿಯೊಂದಿದೆ. ಇದನ್ನು ಕಲಾ ಶಿಕ್ಷಣದಲ್ಲಿ ಫ್ರೀ ಹ್ಯಾಂಡ್ ಆರ್ಟ್ ಎಂದು ಕರೆಯಲಾಗುತ್ತದೆ. 2 ಅಥವಾ 3 ಅಥವಾ 5 ಬೆರಳುಗಳಲ್ಲಿ ಬಣ್ಣದ ಹುಡಿಯನ್ನು ಹಿಡಿದು ನೆಲದ ಮೇಲೆ ಸರಾಗವಾಗಿ ಈ ರಂಗೋಲಿಗಳನ್ನು ಬಿಡಿಸಲಾಗುತ್ತದೆ.
ಇಂತಹದ್ದೇ ರಂಗೋಲಿಯಲ್ಲಿ ಮಹೇಶ್ ಸುತಾರ್ ಈಗ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಸತತ 12 ವರ್ಷಗಳಿಂದ ಇದನ್ನು ಅಧ್ಯಯನ ಮಾಡಿ ಕರಗತ ಮಾಡಿಕೊಂಡಿದ್ದಾರೆ. ಅವರ ಕೈಯಲ್ಲಿ ಮೂಡುವ ರಂಗೋಲಿಯಲ್ಲಿ ಹೆಡೆ ಬಿಚ್ಚಿದ ಹಾವು, ಕುಣಿಯುವ ನವಿಲು, ಅರಳಿದ ಹೂವು, ಬಳುಕುವ ಬಳ್ಳಿ... ಎಲ್ಲವೂ ಜನಪದೀಯ ಶೈಲಿಯಲ್ಲಿರುತ್ತದೆ. ಆದರೆ ಅದ್ಯಾವುದೂ ಯಾರದ್ದೋ ನಕಲು ಅಲ್ಲ, ಎಲ್ಲವೂ ಅವರ ಸ್ವಂತ ಕಲ್ಪನೆಗಳೇ ಆಗಿವೆ.
2002ರಲ್ಲಿ ಬೆಂಗಳೂರಿನ ನಡೆದ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಮಹೇಶ್ ಪ್ರಥಮ ಬಹುಮಾನ ಪಡೆದಿದ್ದಾರೆ. ಫೆಬ್ರುವರಿ ಕೊನೆವಾರದಲ್ಲಿ ಉಡುಪಿಯಲ್ಲಿ ನಡೆದ ಪ್ರದರ್ಶನದ ಉದ್ಘಾಟನೆ ಸಂದರ್ಭದಲ್ಲಿ ನಾಡಿನ ಹಿರಿಯ ರಂಗೋಲಿ ಕಲಾವಿದ ಬಿ.ಪಿ. ಬಾಯರಿ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಪ್ರಶಸ್ತಿಯನ್ನೂ ಉಡುಪಿ ಫೌಂಡೇಶನ್ ವತಿಯಿಂದ ಮಹೇಶ್ ಅವರಿಗೆ ನೀಡಿ ಗೌರವಿಸಲಾಗಿದೆ.

50 ಅಡಿ ಉದ್ದ, 50 ಅಡಿ ಅಗಲದ ರಂಗೋಲಿ
2007ರಲ್ಲಿ ಮಹೇಶ್ ಬೆಳಗಾವಿಯಲ್ಲಿ 40 ಜನರಿಗೆ ತರಬೇತಿ ನೀಡಿ, ಇಸ್ಕಾನ್ ರಥೋತ್ಸವದ ಸಂದರ್ಭದಲ್ಲಿ 8 ಕಿ.ಮಿ ಉದ್ದದ ರಸ್ತೆಯಲ್ಲಿ ರಂಗೋಲಿ ಬಿಡಿಸಿದ್ದರು. ನಂತರ ಇಸ್ಕಾನ್ ವತಿಯಿಂದ ನಡೆದ ಗೌರ್ ಪೂರ್ಣಿಮಾ ಹಬ್ಬದ ಸಂದರ್ಭದಲ್ಲಿ 120 ಮಡಕೆಗಳ ಮೇಲೆ ಕೇವಲ 3 ದಿನಗಳಲ್ಲಿ ಚಿತ್ರ ಬಿಡಿಸಿದ್ದರು. ಎಷ್ಟೇ ದೊಡ್ಡ ಗಾತ್ರದ ರಂಗೋಲಿಯನ್ನು ಬಿಡಿಸಬಲ್ಲರು. ಇಸ್ಕಾನ್  ತ್ಸವದಲ್ಲಿ 50 ಅಡಿ ಉದ್ದ, 50 ಅಡಿ ಅಗಲದ ರಂಗೋಲಿಯನ್ನು ಬಿಡಿಸಿದ್ದರು.
- ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.