seenear
'ನಿಮಗೆಷ್ಟು ವಯಸ್ಸಾಗಿದೆ ಎಂಬುದು ಮುಖ್ಯವಲ್ಲ. ಹೇಗೆ ವಯಸ್ಸಾಯಿತೆನ್ನುವುದು ಮುಖ್ಯ' ಎನ್ನುತ್ತಾನೆ...

'ನಿಮಗೆಷ್ಟು ವಯಸ್ಸಾಗಿದೆ ಎಂಬುದು ಮುಖ್ಯವಲ್ಲ. ಹೇಗೆ ವಯಸ್ಸಾಯಿತೆನ್ನುವುದು ಮುಖ್ಯ' ಎನ್ನುತ್ತಾನೆ ಜೂಲಿಸ್ ರಿನಾರ್ಡ್ ಎಂಬ ಪ್ರಖ್ಯಾತ ಫ್ರೆಂಚ್ ಸಾಹಿತಿ, ವಿಡಂಬನಾಕಾರ. ಈತ ಜೀವಿಸಿದ್ದು ಕೇವಲ ನಲವತ್ತಾರು ವರ್ಷಗಳು ಮಾತ್ರ. ಆದರೂ ಅಸಾಧಾರಣವಾಗಿ ತನ್ನ ದಿನಗಳಿಗೆ ಉಸಿರು ತುಂಬಿದ. ಮಹತ್ವದ ಕೃತಿಗಳನ್ನು ರಚಿಸಿದ. ಸ್ವಾರಸ್ಯವೆಂದರೆ ವೃದ್ಧಾಪ್ಯ ಕುರಿತೇ ಆತ ವ್ಯಾಪಕ ಚಿಂತನೆಗಳನ್ನು ನಡೆಸಿದ್ದು! ವೃದ್ಧರನ್ನು ಹಾಗೆಂದು ಸಂಬೋಧಿಸದೆ ಪ್ರಬುದ್ಧರೆನ್ನಬೇಕೆಂಬ ಆಶಯ ರಿನಾರ್ಡ್‌ದು. ಮುಪ್ಪು ಯಾರನ್ನೂ ಬಿಡದು. ಮುಪ್ಪನ್ನು ಒಪ್ಪೆನು ಎನ್ನಲಾಗದು. ಏಕೆಂದರೆ ದೀರ್ಘಾಯುಷ್ಯವನ್ನು ನಿರಾಕರಿಸಿದಂತಾಗುತ್ತದೆ. ಒಂದು ವಿಪರ್ಯಾಸದ ಅಷ್ಟೇ ಬೋಧಪ್ರದ ಸಂಗತಿ ನೆನಪಾಗುತ್ತದೆ.
ಸುಮಾರು ಎಪ್ಪತ್ತೈದರ ಆತ ಮೆಲ್ಲಗೆ ಮಹಡಿ ಹತ್ತುವಾಗ ಆಕಸ್ಮಿಕವಾಗಿ ಹಿಂದೆ ಏರುತ್ತಿದ್ದ ಇಪ್ಪತ್ತರವನನ್ನು ತುಳಿಯುತ್ತಾರೆ. ಸಿಟ್ಟೇರಿದ ಯುವಕ 'ಕಣ್ಣು ಕಾಣಲ್ವೆ? ಅಷ್ಟೊಂದು ವಯಸ್ಸಾಗಿದೆ ಬೇರೆ...' ಎನ್ನುತ್ತಾನೆ. ಸಾವಧಾನದಿಂದಲೇ ಆ ವೃದ್ಧರು 'ಏನು ಮಾಡ್ಲಪ್ಪ ದೊರೆ, ವಯಸ್ಸಾಯ್ತು. ನಿಂಗೆ ನನ್ನ ಪರಿಸ್ಥಿತಿ ಬರದೆ ಇರ್ಲಪ್ಪ' ಎಂದರು. ಕ್ಷಣ ಯೋಚಿಸಿದ ಆ ಬಿಸಿರಕ್ತದ ಯುವಕನಿಗೆ ತಾನೇನು ಮಾತಾಡಿದೆ, ವೃದ್ಧರ ಆಶಯ(?) ಏನು ಎಂಬುದು ಅರ್ಥವಾಗಿತ್ತು. ಕ್ಷಮಿಸಿಬಿಡಿ, ನನ್ನನ್ನು ಹಾರೈಸಿ ಎಂದು ಕೇಳಿಕೊಂಡ.
ವೃದ್ಧಾಪ್ಯ ಅನುಭವಗಳ ಬುತ್ತಿ. ವೃದ್ಧರು ಜೀವನಾನುಭವ, ಅನುಭಾವಗಳ ಗಣಿ. ನನ್ನ ಹಿರಿಯ ಮಿತ್ರರೊಬ್ಬರು ಪ್ರೌಢಶಾಲೆಯ ಮುಖ್ಯಶಿಕ್ಷಕರ ಹುದ್ದೆಯಿಂದ ನಿವೃತ್ತಿಯಾದರು. ಬೀಳ್ಕೊಡುಗೆಯ ಸಮಾರಂಭದ ದಿನವೇ ಶಿಕ್ಷಣ ಸಂಸ್ಥೆಯ ಅಧಿಕಾರಿಗಳು 'ವಾರಕ್ಕೆ ಎರಡು ದಿನ ಪಾಠ ಹೇಳಲು ಬನ್ನಿ. ನೀವು ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಮುಂದುವರಿಸಿ...' ಎಂದು ವಿವೇಚನೆ ಮೆರೆದರು. ಹಿರಿಯರು ಕೇವಲ ಒಂದು ಸಂಘ-ಸಂಸ್ಥೆಯ ಆಸ್ತಿಯಾಗದೆ ಇಡೀ ಸಮಾಜಕ್ಕೆ ಮಾರ್ಗದರ್ಶಕರಾಗುತ್ತಾರೆ. ದಿಗ್ದರ್ಶಕರಾಗುತ್ತಾರೆ. ಇಂಥ ನಿದರ್ಶನಗಳು ಬಹಳಷ್ಟಿವೆ.
ಖೇದವೆಂದರೆ ನಮ್ಮ ಸಾಮಾಜಿಕ ವ್ಯವಸ್ಥೆ ಹೀಗೇಕಿದೆ ಎನ್ನಿಸುವ ಪ್ರಸ್ತುತಗಳು ಹಲವು. ಪತ್ರಕರ್ತರೊಬ್ಬರು ಒಂದು ವೃದ್ಧಾಶ್ರಮಕ್ಕೆ ಭೇಟಿ ನೀಡುತ್ತಾರೆ. ವೃದ್ಧ ದಂಪತಿ ಕುಶಲ ವಿಚಾರಿಸಿದಾಗ ಹಿಗ್ಗಿನಿಂದ ಅವರು ಅರ್ಧ ಗಂಟೆಗೂ ಮೀರಿ ವಿವರಣೆ ನೀಡಿದ್ದೇ ನೀಡಿದ್ದು. ವೃತ್ತಿಯಲ್ಲಿ ತಾನು ಮೂರೂವರೆ ದಶಕ ಎಂಜಿನಿಯರ್ ಆಗಿ ದೀರ್ಘ ಸೇವೆ ಸಲ್ಲಿಸಿದ್ದು, ನಿರಂತರ ವರ್ಗಾವಣೆ ನಡುವೆಯೂ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಕೊಡಿಸಿದ್ದು, ಅವರನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿದ್ದು, ನಾನಾ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದು... ಹೀಗೆ ಸಾಗಿತ್ತು ಪ್ರವರ. ಸರಿ, ನೀವು ಯಾಕೆ ಇಲ್ಲಿ ಎನ್ನುವ ಪ್ರಶ್ನೆಗೆ 'ಹೌದು, ಇಲ್ಲಿ ಬನ್ ತಿಂದುಕೊಂಡು ಇದ್ದೇವೆ!' ಎಂಬ ಪ್ರತಿಕ್ರಿಯೆ. ವೃದ್ಧರ ಪಾಲಿಗೆ ಇರುವ ಮನೆಯೇ ವೃದ್ಧಾಶ್ರಮವಾಗಬೇಕೇ ಹೊರತು ವೃದ್ಧಾಶ್ರಮ ಮನೆಯಾಗಬಾರದಲ್ಲವೆ? ತನ್ನ ವೃದ್ಧ ತಂದೆಗೆ ಮನೆಯ ಹಿಂಭಾಗದಲ್ಲಿ ಸಣ್ಣ ಕೊಠಡಿ ಕಟ್ಟಿಸಿದ್ದ ಒಬ್ಬ ಮಗ. ಆತ, ವೃದ್ಧ ತಂದೆಗೆ ಮರದ ತಾಟಿನಲ್ಲಿ ಅನ್ನ, ಸಾಂಬಾರು ಕೊಡುವಷ್ಟರಮಟ್ಟಿಗೆ ಉಡಾಫೆ ಮೆರೆದಿದ್ದ. ಆತನ ತಾಯಿ ಹಿಂದೆಯೇ ತೀರಿಕೊಂಡಿದ್ದಳು. ಒಂದು ದಿನ ಆತ, ಪತ್ನಿ ಮಗನೊಂದಿಗೆ ಶಾಪಿಂಗ್‌ನಲ್ಲಿ ಮಗ್ನನಾಗಿದ್ದ. ಮಗ ಇಲ್ಲೇ ಬಂದೆ ಅಂತ ಒಂದು ಅಂಗಡಿಯತ್ತ ನುಗ್ಗಿದನಂತೆ. ಅಲ್ಲೇನು ಮರಿ ನಿಂಗೆ ಬೇಕಾಗಿರೋದು ಕೇಳಿದ ಅಪ್ಪ. 'ಎಷ್ಟು ಪಸಂದಾಗಿದೆ ನೋಡು ಆ ಮರದ ತಾಟು... ಮುಂದೆ ನಿಂಗೆ ಅನ್ನ-ಸಾಂಬಾರು ಇಡಲು ಬೇಕಾಗುತ್ತಲ್ಲ!' ಎಂದನಂತೆ ಪುತ್ರಕಂಠೀರವ!
ಹಿರಿಯ ನಾಗರಿಕರ ಶಾಂತಿ, ನೆಮ್ಮದಿ ಕೇವಲ ಸರ್ಕಾರದ ಕರ್ತವ್ಯವಲ್ಲ. ಪ್ರತಿ ನಾಗರಿಕನ ಹೊಣೆಗಾರಿಕೆಯೂ ಹೌದು. ಅಸಲಿಗೆ ಸರ್ಕಾರ ರೂಪಿಸಿದ ಕಾನೂನುಗಳನ್ನು ಪಾಲಿಸುವುದರತ್ತಲೇ ನಮ್ಮ ಗಮನ ಹರಿದಿಲ್ಲ. ಸಾರಿಗೆ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಾದ ಆಸನಗಳಲ್ಲಿ ಕಿರಿಯ (ಅ)ನಾಗರಿಕರು ಕುಳಿತಿರುವುದು ವಿರಳವೇನಲ್ಲ. ಅಲ್ಲಿ ವೃಥಾ ಹಿರಿಯರೊಡನೆ ಕಿರಿಯರ ವಾಗ್ವಾದಗಳು, 'ಜೋರು ಮಾಡ್ಬೇಡಿ.. ಕೇಳ್ಕೊಂಡ್ರೆ ನಾನೇ ಸೀಟು ಬಿಡ್ತೀನಿ' ಅಂತ ಯುವಕ ವಾದಿಸುವುದಕ್ಕೆ ಏನು ಹೇಳೋಣ? ಹಾಗಾದರೆ ವೃದ್ಧರು ನಿರೀಕ್ಷಿಸುವುದು ಕರುಣೆಯನ್ನೇ?
ಮಲ್ಲೇಶ್ವರದಲ್ಲಿರುವ ಶೇಷು ಅಂಕಲ್‌ಗೆ ಎಂಬತ್ತರ ಸಮೀಪ. ಮಗ, ಸೊಸೆಗೆ ಅವರು ಹೇಳಿರುವ ಮಾತು ಎಲ್ಲ ಮನೆಗಳಿಗೂ ಕಿವಿಮಾತು. 'ಪದೇ ಪದೇ ಪೀಠೋಪಕರಣಗಳನ್ನು ಸ್ಥಳಾಂತರಿಸಬೇಡಿ. ನೆಲಕ್ಕೆ ನೀರು ಹಾಕಿ ತೊಳೆಯುವ ಮುನ್ನ ನನಗೆ ತಿಳಿಸಿ. ಸಾಧ್ಯವಾದಷ್ಟು ನಾನು ವಾಯುವಿಹಾರಕ್ಕೆ ಹೋಗಿದ್ದಾಗ ಶುಚಿಗೊಳಿಸುವುದು, ಕ್ರಿಮಿನಾಶಕ ಪ್ರಯೋಗಿಸುವುದನ್ನು ಮಾಡಿ...' ಹಬ್ಬಗಳ ಅದರಲ್ಲೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವೃದ್ಧರು ಸಂತಸಕ್ಕಿಂತಲೂ ಹೆಚ್ಚಾಗಿ ಯಾತನೆಯನ್ನೇ ಅನುಭವಿಸುತ್ತಾರೆನ್ನಬಹುದು. ಪ್ರತಿ ವರ್ಷವೂ ಬಹಳ ಸದ್ದಿನ ಪಟಾಕಿ ಬೇಡ ಅಂತ ಎಷ್ಟೇ ಹೇಳಿದರೂ ಅದೇ ಹಾಡು ಪಾಡೇ. ಸದ್ದು ಗದ್ದಲವಷ್ಟೇ ಅಲ್ಲ ಬೆಂಕಿಯ ಕಿಡಿಗಳು ಎಲ್ಲಿ ಹಾರಿಬಂದಾವೋ ಎಂಬ ಆತಂಕ ಬೇರೆ. ಮುಪ್ಪು ವ್ಯಕ್ತಿಯೊಬ್ಬರ ಬದುಕಿನ ಅಖೈರು ನಿರ್ಣಯ ಎಂಬ ಮಾತಿದೆ. 'ನನಗೆ ಬಾಲ್ಯದಿಂದಲೇ ಹಿರಿಯರನ್ನು ಹೇಗೆ ಗೌರವಿಸಬೇಕು, ಆದರಿಸಬೇಕೆಂದು ಕಲಿಸಲಾಯಿತು. ಆದರೆ ನನಗೀಗ ನನಗಿಂತಲೂ ವೃದ್ಧರು ಯಾರೂ ಇಲ್ಲದಷ್ಟು ವಯಸ್ಸಾಗಿದೆ. ಅದೇ ನನ್ನ ಕೊರಗು' ಎನ್ನುವುದು ಅನುಭಾವಿಗಳೊಬ್ಬರ ಅಂಬೋಣ. ದಾರ್ಶನಿಕ ಡಿ.ವಿ.ಜಿ. ಅವರ ನುಡಿ ಸೊಗಸಾಗಿ ಹಿಡಿದಿಡುತ್ತದೆ, ಕಾಲನ ಕರೆಯ ಅನಿವಾರ್ಯವನ್ನು;
'ಮುಳುಗದಿರು ಜೀವನದ ತೆರೆಯ ಮೇಲೀಜುತಿರು
ಒಳಿತನಾಗಿಸು ಕೊಡುತ ಕೊಳುತ ಸಂತಸವ
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು
ಮಿಳಿತನಿರು ವಿಶ್ವದಲಿ- ಮಂಕುತಿಮ್ಮ'
- ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


