ಪನ್‌ಡಿತ ಪೂಜಾರ

ಪೂಜಾರ ಮೇಷ್ಟ್ರ ಕ್ಲಾಸು ಎಂದರೆ ಪುಟಾಣಿಗಳಿಗೆ ಖುಷಿಯೋ ಖುಷಿ. ಬೆಲಲ್ಹೊಡೆದದ್ದು ಗೊತ್ತೇ ಆಗಲ್ಲ. ಆಟ ಆಡಿಸ್ತಾ, ಪ್ರಾಸಬದ್ಧ ಹಾಡು ಹೇಳಿಸ್ತಾ ಕಲಿಸೋ ಮೇಷ್ಟ್ರು ಅವರು.
ಮಕ್ಕಳ ವಯಸ್ಸು, ಕಲಿಕಾ ಸಾಮರ್ಥ್ಯ ಅರಿತು ಕಲಿಸುವುದು ಅಣ್ಣಿಗೇರಿಯ ಎಂ.ಎಸ್. ಪೂಜಾರರ ಹೆಗ್ಗಳಿಕೆ. ಅದರಲ್ಲೂ ಗಣಿತ ಎಂದರೆ ಅವರಿಗೆ ಮ್ಯಾಜಿಕ್. ಮಕ್ಕಳಿಗೆ ಕಲಿಸುತ್ತಿರುವುದೂ ಅದೇ ರೀತಿಯಲ್ಲಿ. ಹೀಗಾಗಿ ಅವರ ಶಿಷ್ಯರಿಗೆ ಇದು ಕಷ್ಟದ ವಿಷಯವೇ ಅಲ್ಲ. ಅವರು 'ಪನ್'ಡಿತ ಪೂಜಾರರು.
ಆರು ವರ್ಷದ ಪುಟಾಣಿ ನೂರು ವರ್ಷದ ಕ್ಯಾಲೆಂಡರ್ ಹೇಳಿಬಿಟ್ಟ. ಶಿಗ್ಲಿ ಊರವರಿಗೆಲ್ಲ ಆಶ್ಚರ್ಯವೋ ಆಶ್ಚರ್ಯ. ಅವನ ಹೆತ್ತವರಂತೂ ಪೂಜಾರರ ಕಾಲಿಗೆ ಅಡ್ಡಬಿದ್ದು 'ಎಂಥಾ ಅದ್ಭುತ ಮಾಡಿಬಿಟ್ರಿ' ಎಂದು ಗದ್ಗದಿತರಾದರು.
ಪೂಜಾರರು ಆಗಿನ ಕಾಲದಲ್ಲಿ 25 ಪೈಸೆಯ 'ಸಂಖ್ಯೋದ್ಯಾನ' ಎಂಬ ಗಣಿತ ಪುಸ್ತಕದಿಂದ ಪ್ರಭಾವಿತರಾಗಿ ಹವ್ಯಾಸಿ ಗಣಿತ ತಜ್ಞರಾದರು. ಗಣಿತದಲ್ಲಿ ತೊಡಗಿಸಿಕೊಂಡಂತೆ ರಂಜನೀಯ ಅಂಶಗಳ ಮೂಲಕ ಹೊಸಹೊಸ ವಿಷಯಗಳನ್ನು ಹೇಳುವಲ್ಲಿ ಆಸಕ್ತಿ ಬೆಳೆಯಿತು. ಅದು ಬರವಣಿಗೆಯ ಹುಚ್ಚು ಹಿಡಿಸಿತು. ಸಣ್ಣಪುಟ್ಟ ಲೇಖನಗಳನ್ನು ಪತ್ರಿಕೆಗಳಿಗೆ ಬರೆಯಲು ಪ್ರಾರಂಭಿಸಿದರು. ಮಕ್ಕಳಿಗಾಗಿ ವಿಶೇಷ ಪನ್ ಪದಪುಂಜಗಳನ್ನು ಸೃಷ್ಟಿಸತೊಡಗಿದರು. ಈವರೆಗೆ 14 ಶೈಕ್ಷಣಿಕ ಕಿರು ಪುಸ್ತಕಗಳು, ಗಣಿತದಲ್ಲಿ ಹೊಸ ಅವಿಷ್ಕಾರಗಳ ಪುಸ್ತಕ ಪ್ರಕಟವಾಗಿದೆ. ಮೈಮೇಲೆ ಹರಿದ ಬಟ್ಟೆಯಿದ್ದರೂ ಚಿಂತೆಯಿಲ್ಲ, ಕೈಯಲ್ಲಿ ಒಂದು ಪುಸ್ತಕವಿರಬೇಕು ಎಂದು ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿದರು.
ಮಕ್ಕಳಿಗಾಗಿ 'ಮಜಾಗಟ' ಎಂಬ ವಿನೂತನ ಪದಆಟ ಕಾರ್ಯಕ್ರಮ ಹುಟ್ಟುಹಾಕಿ ನಾಡಿನಾದ್ಯಂತ 300ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿ ಗದುಗಿನ ತೋಂಟದಾರ್ಯ ಮಠದಲ್ಲಿ ಮಕ್ಕಳಿಗಾಗಿ ಶಿವಾನುಭವದ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಸುಲಭ ಕಲಿಕೆಯ ಸುಮಾರು ನೂರು ಆಟೋಪಕರಣಗಳು ಮತ್ತು ಪೀಠೋಪಕರಣಗಳನ್ನು ತಾವೇ ತಯಾರಿಸಿದ್ದಾರೆ. ಹಳೆ ಹತ್ತಾರು ಆಟಗಳಿಗೆ ಶೈಕ್ಷಣಿಕ ರೂಪ ನೀಡಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿದ್ದಾರೆ. 64 ವಿದ್ಯೆಗಳಲ್ಲಿ ಅಕ್ಷರ ಮುಷ್ಠಿಕಾ ವಿದ್ಯೆ (ನ್ಯೂಮಾನಿಕ್)ಯಿಂದ ಗಣಿತ ಸೂತ್ರಗಳನ್ನು ಮಕ್ಕಳು ಸುಲಭವಾಗಿ ನೆನಪಿಡಬಹುದು. 20 ವರ್ಷಗಳಿಂದ ಔಷಧವಿಲ್ಲದೇ ಬದುಕುವ ನಿಸರ್ಗ ಚಿಕಿತ್ಸೆಯ ಜ್ಞಾನ ಹೊಂದಿ ಅದರ ಪ್ರಚಾರದಲ್ಲಿ ತೊಡಗಿದ್ದಾರೆ. ಆಗಸ್ತ್ಯ ವಿಜ್ಞಾನ ಕೇಂದ್ರವು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಆರಂಭಿಸಿರುವ ಮಜಾ ಮೋಜಿನ ಖಜಾನೆಯಾಟ 'ಗಣಿತಲೋಕ'ದಲ್ಲೂ ಇವರ ಪರಿಶ್ರಮವಿದೆ. 'ಗುಬ್ಬಚ್ಚಿಗೂಡು' ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ 6 ವರ್ಷ ಸೇವೆ ಸಲ್ಲಿಸಿದ್ದಾರೆ. ಸಂಪರ್ಕ: 9731782304.
ಹುಟ್ಟು ಪ್ರತಿಭಾವಂತ
ಕನಸು ಕಾಣಬೇಕು, ಅದರಂತೆ ಬೆಳೆಯಬೇಕು ಎನ್ನುವ ಪೂಜಾರರು ಹುಟ್ಟಾ ಪ್ರತಿಭಾವಂತ. 1ನೇ ತರಗತಿಯಲ್ಲಿ ವಚನ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. 5ನೇ ತರಗತಿಯಲ್ಲಿದ್ದಾಗ ಶಾಲೆಗೆ ಬಂದ ಶಿಕ್ಷಣಾಧಿಕಾರಿಗಳು 7ನೇ ತರಗತಿ ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆಗಳಿಗೆ ಇವರೇ ಉತ್ತರಿಸಿದ್ದರು. ಟೇಪ್ ರೆಕಾರ್ಡರ್ ಇಲ್ಲದ ಕಾಲದಲ್ಲಿ ಮುಂಬೈ ಆಕಾಶವಾಣಿ ಕೇಂದ್ರದವರು ಗದುಗಿಗೆ ಬಂದಾಗ ಇವರ ಹಾಡನ್ನು ಕೇಳಿ ರೇಡಿಯೋದಲ್ಲಿ ಮರುಪ್ರಸಾರ ಮಾಡಿದ್ದುಂಟು. 8ನೇ ತರಗತಿಯಲ್ಲಿ ಏಕಕಾಲಕ್ಕೆ ಒಂದೇ ವೇದಿಕೆ ಕಾರ್ಯಕ್ರಮದಲ್ಲಿ 26 ಪಾರಿತೋಷಕ ಬಹುಮಾನ ಪಡೆದ ಹೆಗ್ಗಳಿಕೆ ಇವರದ್ದು.
-ಅರುಣಕುಮಾರ ಹೂಗಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


