ಗೊಂಬೆಯಾಟವಯ್ಯಾ...

ನವರಾತ್ರಿ ಸಮಯದಲ್ಲಿ ಮನೆ ಮುಂದೆ ಬಂದ ಗೊಂಬೆ ವೇಷ ಕಂಡ ಹುಡುಗನ ಮನದಲ್ಲಿ ಪುಳಕ. ತಾನೂ ಇಂಥ ಗೊಂಬೆಗಳನ್ನು ಮಾಡಬೇಕು ಎನ್ನುವ ಆಸೆ. ದೊಡ್ಡವನಾದಂತೆಲ್ಲ ಈ ಬಯಕೆಯೂ ಬೆಟ್ಟದಂತೆ ಕಾಡತೊಡಗಿತು. ಕೊನೆಗೆ ಆರ್ಥಿಕ ಮುಗ್ಗಟ್ಟಿನಿಂದ ಕಾಲೇಜು ಮೆಟ್ಟಿಲು ಹತ್ತಲು ಆಗದಿದ್ದಾಗ ಕೈ ಹಿಡಿದು ಬದುಕಿಗೆ ಅನ್ನ ನೀಡಿದ್ದು ಅದೇ ಕನಸು.
'ನಮ ಮಲ್ಪಿನ ಕಾರ್ಯೊಡು ಮೋಕೆ ಇತ್ತುಂಡ ವಾ ಕೆಲಸಲಾ ಕಷ್ಟ ಅತ್ತು' (ನಾವು ಮಾಡುವ ಕಾರ್ಯದಲ್ಲಿ ಪ್ರೀತಿ ಇದ್ದರೆ ಯಾವ ಕೆಲಸವೂ ಕಷ್ಟವಲ್ಲ) ಎನ್ನುತ್ತ ವಿಶಿಷ್ಟ ಗೊಂಬೆ ನೃತ್ಯದ ಮೂಲಕ ನಮ್ಮನ್ನು ಸೆಳೆಯುವ ಈ ಯುವ ಕಲಾವಿದನ ಹೆಸರು ಸುರೇಶ್ ಕುಲಾಲ್.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರು. ಹೈಸ್ಕೂಲಿನಲ್ಲಿದ್ದಾಗಲೇ ಮಣ್ಣಿನಲ್ಲಿ ವಿವಿಧ ಮೂರ್ತಿಗಳನ್ನು ರಚಿಸಲು ಪ್ರಾರಂಭಿಸಿದರು. ತೀರಾ ಬಡತನದ ನಡುವೆ ಅಂತೂಇಂತೂ ಎಸ್.ಎಸ್.ಎಲ್.ಸಿವರೆಗೆ ಓದಿದ್ದಾಯ್ತು. ಮುಂದೆ ಆಯ್ದುಕೊಂಡದ್ದು ಬೃಹತ್ ಗಾತ್ರದ ಗೊಂಬೆಗಳನ್ನು ತಯಾರಿಸಿ ಮೆರವಣಿಗೆಯಲ್ಲಿ ಟ್ಯಾಬ್ಲೋ ಪ್ರದರ್ಶನ ನೀಡುವುದು.
ಕೆಲಕಾಲದಲ್ಲಿ ವಿಟ್ಲದಲ್ಲಿ 'ಕಲಾರಸಿಕ ಆರ್ಟ್ಸ್' ಸಂಸ್ಥೆಯನ್ನು ಸ್ಥಾಪಿಸಿದ ಸುರೇಶ್, ಆರಂಭದಲ್ಲಿ ಹಳೇ ಪೇಪರ್‌ಗಳನ್ನು ಬಳಸಿ ಬೊಂಬಾಟ್ ಗೊಂಬೆಗಳನ್ನು ತಯಾರಿಸತೊಡಗಿದರು. ಆದರೆ ಬಾಳ್ವಿಕೆ ಕಡಿಮೆ ಎಂಬ ಕಾರಣದಿಂದ ಪ್ಲಾಸ್ಟಿಕ್ ರಹಿತ ಫೈಬರ್ ಹಾಗೂ ಮಣ್ಣಿನಿಂದ ಕಾಮಿಡಿ ಗೊಂಬೆಗಳನ್ನು ಮಾಡತೊಡಗಿದರು. ವಿವಿಧ ವಿನ್ಯಾಸದ ಮುಖವಾಡಗಳು, ಯಕ್ಷಗಾನಕ್ಕೆ ಒಪ್ಪುವ ಸರ್ವ ವಸ್ತುಗಳು, ವಸ್ತ್ರಲಂಕಾರಗಳನ್ನೂ ರಚಿಸುತ್ತಿದ್ದಾರೆ. ಆಸಕ್ತರಿಗೆ ಯಾವುದೇ ಶೈಲಿಯ ಕಲಾಕೃತಿಗಳನ್ನು ಮಾಡಿಕೊಡುವುದರಲ್ಲೂ ಸಿದ್ಧಹಸ್ತರು.
ಕುಲಾಲರದು ಬಹುಮುಖ ಪ್ರತಿಭೆ. ಚಿತ್ರಕಲೆಯಲ್ಲೂ ಗುರುತಿಸಿಕೊಂಡಿರುವ ಇವರ ಕಲಾನೈಪುಣ್ಯಕ್ಕೆ ದ.ರಾ ಬೇಂದ್ರೆ, ಡಾ. ಶಿವರಾಮ ಕಾರಂತ, ಕುವೆಂಪು ಮುಂತಾದ ಕನ್ನಡ ಕವಿಗಳ ಚಿತ್ರಗಳು, ವೇದಿಕೆಯ ಹಿಂದಿನ ಪರದೆಗಳೇ ಸಾಕ್ಷಿ. ಇದಕ್ಕೆ ಪ್ರೇರಣೆಯೆಂದರೆ ಡ್ರಾಯಿಂಗ್ ಮಾಸ್ಟರ್ ದಿ.ಸುರೇಶ್ ಹಂದಾಡಿ ಅವರಂತೆ. 'ನನ್ನ ಎಲ್ಲಾ ಪ್ರಯತ್ನಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರಾದ ಕಲ್ಲಡ್ಕದ ಶಾಂತರಾಮ ಮತ್ತು ರಮೇಶ್ ಸಹೋದರರು' ಎಂದು ನೆನೆಯುತ್ತಾರೆ ಸುರೇಶರು.
ರಂಗಭೂಮಿಯಲ್ಲೂ ಗುರುತಿಸಿಕೊಂಡಿರುವ ಇವರು ಉತ್ತಮ ಬರಹಗಾರರು ಕೂಡ. ನೆಮ್ಮದಿ ಏಪಾ, ಕಟ್ಟೆದೈವ ಹೀಗೆ ಹಲವು ಜಾನಪದ ಆಧಾರಿತ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಜತೆಗೆ ಕವನ, ಹನಿಗವನಗಳನ್ನು ರಚಿಸುವ ಹವ್ಯಾಸ.
ಕಲಾರಸಿಕ ಆರ್ಟ್ಸ್
ಸುರೇಶ್ ಕುಲಾಲ್ ನೇತೃತ್ವದಲ್ಲಿ ಸಾಗುತ್ತಿರುವ ಈ ತಂಡ 45 ಸದಸ್ಯರನ್ನು ಹೊಂದಿದೆ. ಯಕ್ಷಗಾನ ವೇಷ, ಕೀಲುಕುದುರೆ, ಹಾಸ್ಯಭರಿತ ಗೊಂಬೆ ನೃತ್ಯಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳಗಳಲ್ಲಿ; ಕರ್ನಾಟಕದ ಬೆಂಗಳೂರು, ಚಿಕ್ಕಮಗಳೂರು ಮತ್ತಿತರ ಕಡೆ ಸಾದರಪಡಿಸಿದೆ. ಗಣೇಶೋತ್ಸವ, ಶಾರದೋತ್ಸವದ ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡುವುದರಲ್ಲಿ ಇವರದು ಎತ್ತಿದ ಕೈ. ಹಲವು ಸಂಘ ಸಂಸ್ಥೆಗಳು ಇವರ ತಂಡವನ್ನು ವಿಶೇಷವಾಗಿ ಸನ್ಮಾನಿಸಿವೆ.
ಕಲಾ ರಸಿಕ ಆರ್ಟ್ಸ್ ತಂಡ ಬೋರ್ಡ್, ಬ್ಯಾನರ್, ಕೀಲುಕುದುರೆ ಸೆಟ್, ಬಣ್ಣದ ಕೊಡೆಗಳು, ವಿವಿಧ ವಿನ್ಯಾಸದ ಗೊಂಬೆಗಳು, ನಾಟಕ, ವಿವಾಹ ವೇದಿಕೆಗಳ ಅಲಂಕಾರ, ಫ್ಯಾನ್ಸಿ ಡ್ರೆಸ್, ಟ್ಯಾಬ್ಲೋ ಸೆಟ್ಟಿಂಗ್ಸ್, ಮಣ್ಣಿನಿಂದ ತಯಾರಿಸಿದ ವಿವಿಧ ಜೀವಂತ ಬೊಂಬೆಗಳು, ಅಲ್ಲದೇ ಎಲ್ಲಾ ಕಲಾವೃತ್ತಿಗಳನ್ನು ಮಾಡುತ್ತಿದೆ.
- ನವೀನ್ ಭಟ್,ಇಳಂತಿಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


