ಹಸಿರುಗುರು
ಇವರು ನೇಚರ್ ಟೀಚರ್. ಹಸಿರನ್ನು ಪ್ರೀತಿಸಿ. ಅದೇ ನಿಮಗೆ ಬದುಕು ಕಲಿಸುತ್ತದೆ'...

ಇವರು ನೇಚರ್ ಟೀಚರ್. 'ಪ್ರಕೃತಿ ಕಲಿಸುವ ಪಾಠದ ಮುಂದೆ ಇನ್ನಾವುದೂ ಇಲ್ಲ. ಹಸಿರನ್ನು ಪ್ರೀತಿಸಿ. ಅದೇ ನಿಮಗೆ ಬದುಕು ಕಲಿಸುತ್ತದೆ' ಎಂಬುದೇ ಇವರ ಸಿದ್ಧಾಂತ. ಪಠ್ಯದ ಜತೆಗೆ ಮಕ್ಕಳಿಗೆ ಕಲಿಸುತ್ತಿರುವುದೂ ಅದನ್ನೇ.
ಹಾಸನ ಜಿಲ್ಲೆಯ ಆಲೂರು ಪಟ್ಟಣದಿಂದ 1 ಕಿ.ಮೀ ದೂರದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಜೆ.ಬಿ. ತಮ್ಮಣ್ಣಗೌಡರು ಸ್ವತಃ ಗಣಿತದ ಟೀಚರ್. 10 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆ ಆವರಣವನ್ನು ನಂದನವನವನ್ನಾಗಿ ಪರಿವರ್ತಿಸಿದ್ದಾರೆ. 9 ಎಕರೆಯಲ್ಲಿ ಭೂರಮೆ ಹಸಿರುಟ್ಟು ನಲಿಯುತ್ತಿದ್ದಾಳೆ. ತೆಂಗು, ನಿಂಬೆಹಣ್ಣು, ಬಾಳೆ, ಹಲಸು, ತರಕಾರಿ ಎಲ್ಲವೂ ಶಾಲಾ ಮಕ್ಕಳ ಊಟಕ್ಕೆ ಬಳಕೆಯಾಗುತ್ತದೆ. ಇಲ್ಲಿ ಬೆಳೆದಿರುವ ಹಣ್ಣಿನ ಗಿಡಗಳ ಮೇಲೆ ನಾನಾ ಬಗೆಯ ಪಕ್ಷಿಗಳು ಕುಳಿತು ಹಣ್ಣುಗಳನ್ನು ತಿನ್ನುತ್ತಾ ನಲಿಯುವ ದೃಶ್ಯ ಮಕ್ಕಳಲ್ಲಿ ಹೊಸ ಹುರುಪು ತುಂಬದೇ ಇರದು. ನೇರಳೆ, ಪನ್ನೇರಳೆ, ದಾಳಿಂಬೆ, ಬಾಳೆಹಣ್ಣು, ಸೀಬೆ, ಮಾವು, ಸಪೋಟ ಮತ್ತಿತರ ಹಣ್ಣುಗಳನ್ನು ಮಕ್ಕಳು ಮತ್ತು ಹಕ್ಕಿಪಕ್ಷಿಗಳು ಮಾತ್ರ ತಿನ್ನಬೇಕು. ಒಂದೇಒಂದು ಹಣ್ಣನ್ನೂ ಮಾರಾಟ ಮಾಡುವುದಿಲ್ಲ.
ಶಾಲೆ ಮಕ್ಕಳು ಮತ್ತು ಸಿಬ್ಬಂದಿಯೊಡನೆ ತಾವೂ ಸ್ವತಃ ಸಸಿಗಳಿಗೆ ನೀರುಣ್ಣಿಸಿ ಗೊಬ್ಬರ ಹಾಕುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಸಂಜೆ ಆಯ್ತುತೆಂದರೆ ಗೌಡರು ಹಣ್ಣಿನ ಗಿಡಗಳ ಮೇಲೆ ಚಿಲಿಪಿಲಿಗುಡುತ್ತಾ ಬಂದು ಕೂರುವ ಅಪಾರ ಸಂಖ್ಯೆಯ ಹಕ್ಕಿಗಳನ್ನು ನೋಡುತ್ತ ಧ್ಯಾನ್ಯಸ್ಥ ಸ್ಥಿತಿ ತಲುಪಿಬಿಡುತ್ತಾರೆ.
ಸಾಹಿತ್ಯವೂ ಗೊತ್ತು
ಸಾಹಿತ್ಯ ಪ್ರೇಮಿಯೂ ಆಗಿರುವ ಗೌಡರು, ಕುವೆಂಪು ಸಾಹಿತ್ಯವನ್ನು ಬಹಳಷ್ಟು ಓದಿಕೊಂಡಿದ್ದಾರೆ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು', 'ಕಾನೂನು ಹೆಗ್ಗಡತಿ' ಸೇರಿದಂತೆ ಪ್ರಮುಖ ಕಾದಂಬರಿಗಳ ಸನ್ನಿವೇಶಗಳನ್ನು ರಸವತ್ತಾಗಿ ವಿವರಿಸಬಲ್ಲರು; ಕವನಗಳ ಸಾಲುಗಳನ್ನು ಆಕರ್ಷಕವಾಗಿ ಪಟಪಟನೆ ಹೇಳಬಲ್ಲರು. ಬೇಂದ್ರೆ, ಕಾರಂತರು, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತಿತರರ ಕೃತಿಗಳನ್ನು ಶಾಲೆ ಗ್ರಂಥಾಲಯದಲ್ಲಿ ಸಂಗ್ರಹಿಸಿ ಇಟ್ಟು, ವಿದ್ಯಾರ್ಥಿಗಳು ಓದುವಂತೆ ಪ್ರೇರೇಪಿಸುತ್ತಾರೆ. ಫಲಿತಾಂಶದಲ್ಲೂ ಶಾಲೆ ಮುಂದಿದೆ.
ಪ್ರಕೃತಿ ಮತ್ತು ಸಾಹಿತ್ಯದ ಮೂಲಕ ಮಕ್ಕಳಿಗೆ ಬದುಕುವ ಪರಿ ಕಲಿಸುತ್ತಿರುವ 51 ವರ್ಷ ವಯಸ್ಸಿನ ಗೌಡರು ಅವಿವಾಹಿತರು. ಅವರಿಗೆ ಶಾಲೆಯೇ ಮನೆ, ವಿದ್ಯಾರ್ಥಿಗಳೇ ಮಕ್ಕಳು. ಪ್ರಕೃತಿಯೇ ಸ್ನೇಹಿತ.
- ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


