ಕಾಮತ ಬ್ಯಾಂಕ್

ಬ್ರಿಟಿಷ್ ಆಡಳಿತಾವಧಿಯಲ್ಲಿ ಭಾರತದಲ್ಲಿ ಚಾಲ್ತಿಯಲ್ಲಿದ್ದ ತಾಮ್ರದ ನಾಣ್ಯಗಳ ಮೇಲೆ ಹಿಂದೂ ದೇವತೆಗಳ ಚಿತ್ರ! ರಾಮ, ಸೀತೆ, ಲಕ್ಷ್ಮಣ, ಹನುಮಂತ, ಲಕ್ಷ್ಮೀ, ಗಣೇಶನ ಚಿತ್ರಗಳಿದ್ದ ಆ ಕಾಲದ ನಾಣ್ಯಗಳು ಅಪರೂಪವೇ. ಅಂತಹ ನಾಣ್ಯಗಳಿವೆ ಜಯಂತ ಸೀತಾರಾಮ ಕಾಮತ್ ಬಳಿ.
66 ವರ್ಷದ ಕಾಮತರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಗ್ರಾಮದವರು. 45 ವರ್ಷ ಹಿಂದೆ ಸಿಂದಗಿಗೆ ವಲಸೆ ಬಂದು ಹೋಟೆಲ್ ಆರಂಭಿಸಿದರು. ಆಗ ಗ್ರಾಹಕರು ನಡೆಯದ ಇಂಥ ನಡೆಯದ ನಾಣ್ಯಗಳನ್ನು ಗದ್ದಲದಲ್ಲಿ ಇವರ ಕೈಗಿತ್ತು ಮೋಸಗೊಳಿಸುತ್ತಿದ್ದರು. ವ್ಯಾಪಾರ ಮುಗಿದ ಬಳಿಕ ನಾಣ್ಯ ಕಂಡಾಗ ಜಯಂತ ರಿಗೆ ಈ ನಾಣ್ಯಗಳ ಕುರಿತು ಆಸಕ್ತಿ, ಕೌತುಕ ಮೂಡತೊಡಗಿತು. ಮೊದಮೊದಲು ಇವರನ್ನೇ ಅರಸಿ ಬರುತ್ತಿದ್ದ ನಾಣ್ಯಗಳನ್ನು ಸಂಗ್ರಹಿಸತೊಡಗಿದವರು ಮುಂದೆ ಅದನ್ನೊಂದು ಹವ್ಯಾಸವಾಗಿ ರೂಢಿಸಿಕೊಂಡರು, ತಾವೇ ಇಂಥ ನಾಣ್ಯ, ನೋಟುಗಳ ಬೆನ್ನತ್ತಿ ಹೋಗತೊಡಗಿದರು. ಪುರಾತನ ಮತ್ತು ಅನ್ಯ ದೇಶಗಳ ನಾಣ್ಯಗಳ ಬಗ್ಗೆ ಇವರಿಗಿದ್ದ ಅಪಾರ ಆಸಕ್ತಿ, ಪ್ರೀತಿಯನ್ನು ಕಂಡು ಇವರ ಸ್ನೇಹಿತರು, ಬಂಧು-ಬಳಗದವರು ತಮಗೆ ದೊರೆತ ನಾಣ್ಯಗಳನ್ನು ಇವರ ಸಂಗ್ರಹಕ್ಕೆ ಕೊಟ್ಟರು. ಎಲ್ಲಿಯಾದರೂ, ಯಾರ ಬಳಿಯಲ್ಲಾದರೂ ಇಂತಹ ನಾಣ್ಯಗಳಿದ್ದರೆ ಇವರಿಗೆ ತಿಳಿಸತೊಡಗಿದರು. ಆಗ ಜಯಂತ ಕಾಮತ ಎಷ್ಟೇ ದರ ಹೇಳಿದರೂ ಕೊಟ್ಟು ಖರೀದಿಸಲಾರಂಭಿಸಿದರು. ತುಕ್ಕು ಹಿಡಿದ ನಾಣ್ಯಗಳನ್ನು ತಿಕ್ಕಿ ತೊಳೆದು ಫಳಫಳನೆ ಹೊಳೆಯುವಂತೆ ಮಾಡಿದರು. ಬಂಧುಮಿತ್ರರ ಪ್ರಶಂಸೆ ಅವರ ಉತ್ಸಾಹ ಹೆಚ್ಚಿಸಿತು.
ಇತಿಹಾಸದ ಕುತೂಹಲ
ಸಿಂದಗಿಯಲ್ಲಿ ಇತ್ತೀಚೆಗೆ ಜರುಗಿದ ವಿಪ್ರ ಜಾಗೃತ ಸಮಾವೇಶದಲ್ಲಿ ಕಾಮತರು ಮೊದಲ ಸಲ ನಾಣ್ಯಗಳ ಸಂಗ್ರಹವನ್ನು ಪ್ರದರ್ಶಿಸಿದರು. ಜನರ ಪ್ರತಿಕ್ರಿಯೆ ಚೆನ್ನಾಗಿದ್ದರೂ ಅದು ಇವರಿಗೇ ಅಷ್ಟು ಖುಷಿ ಕೊಡಲಿಲ್ಲ.
'ನನ್ನ ಸಂಗ್ರಹದಲ್ಲಿರುವ ಅನೇಕ ನಾಣ್ಯಗಳ ಇತಿಹಾಸ, ಹೆಚ್ಚಿನ ಮಾಹಿತಿ ನನಗೇ ಗೊತ್ತಿಲ್ಲ. ಅದಕ್ಕಾಗಿ ಈ ಕುರಿತು ಇತಿಹಾಸ ಸಂಶೋಧಕರನ್ನು ಸಂಪರ್ಕಿಸಿ ನಾಣ್ಯಗಳ ಕಾಲ ಮತ್ತು ವಿವರ ಅರಿತು ಪ್ರದರ್ಶನದಲ್ಲಿ ನೋಡುಗರಿಗೆ ನಾಣ್ಯಗಳ ಸಂಪೂರ್ಣ ವಿವರ ನೀಡುವ ಬಯಕೆ ಇದೆ' ಎನ್ನುತ್ತಾರೆ ಜಯಂತ್ ಕಾಮತ್.
ಈಗ ವಿಶ್ರಾಂತ ಜೀವನದಲ್ಲಿರುವ ಕಾಮತ್. ನಿತ್ಯ ನಾಣ್ಯಗಳನ್ನು ಒರೆಸಿ ಒಪ್ಪ-ಓರಣವಾಗಿ ಜೋಡಿಸಿ ಇಡುವುದೇ ಅವರ ದಿನಚರಿ. ಆಸಕ್ತರು ಯಾರಾದರೂ ಬಂದರೆ ಅತ್ಯಂತ ಉತ್ಸಾಹದಿಂದ ನಾಣ್ಯಗಳ ಆಲ್ಬಂ ಅವರ ಮುಂದೆ ಹರಡಿ ತಾವೂ ಎಂದಿನ ಕುತೂಹಲದೊಂದಿಗೆ ರಾವುಗನ್ನಡಿ ಹಿಡಿದುಕೊಂಡು ನೋಡಿ ಆನಂದಿಸುತ್ತಾರೆ. ಅವರ ಹವ್ಯಾಸಕ್ಕೆ ಪತ್ನಿ ಲಲಿತಾ, ಪುತ್ರ ಗುರುಪ್ರಸಾದ, ಸೊಸೆ ಗೌರಿ ಅವರ ಸಹಕಾರವಿದೆ. ಸಂಪರ್ಕ: 9448724579.
ರಾಮ ರಾಜ್ಯ!
1616ರ ಒಂದು ಇಂಚು ವ್ಯಾಸದ ತಾಮ್ರದ ನಾಣ್ಯದ ಮೇಲೆ ಕುಳಿತ ಭಂಗಿಯಲ್ಲಿರುವ ರಾಮಭಕ್ತ ಹನುಮಂತ, ಇನ್ನೊಂದು ಬದಿ ಹಾಫ್ ಆನ್ನಾ (ಅರ್ಧ ಪೈಸೆ), ಸಚ್ ತೋಲೊ, ಸಚ್ ಬೋಲೊ ಎಂಬ ಬರಹವಿದೆ. 1818ರಲ್ಲಿ ಟಂಕಿಸಲಾದ ತಾಮ್ರದ ನಾಣ್ಯದ ಮೇಲೆ ರಾಮ, ಲಕ್ಷ್ಮಣ, ಸೀತೆ ಇವರ ಪಾದದ ಬಳಿ ಕೈಮುಗಿದು ಕುಳಿತ ಹನುಮಂತನ ಚಿತ್ರವಿದೆ. ಆದರೆ ಕೆಳಬದಿಯಲ್ಲಿ ರಾಮರಾಜ್ಯ ಎಂದು ಮುದ್ರಿತಗೊಂಡಿದೆ. ಹಿಂಬದಿಯಲ್ಲಿ ಈಸ್ಟ್ ಇಂಡಿಯಾ ಕಂಪನಿ ಲಾಂಛನವಿದ್ದು ಒನ್ ಅನ್ನಾ (ಒಂದು ಪೈಸೆ) ಎಂದು ಬರೆಯಲಾಗಿದೆ. ಅಲ್ಲದೇ ಇದೇ 1818ರ ಕಾಲದ ತಾಮ್ರದ ನಾಣ್ಯದ ಮೇಲೆ ಚತುರ್ಭುಜರಾದ ಲಕ್ಷ್ಮೀ, ಗಣೇಶರ ಚಿತ್ರವಿದ್ದು ಆನೆಯೊಂದು ಈ ದೇವತೆಗಳಿಗೆ ಹೂಮಾಲೆ ಅರ್ಪಿಸುತ್ತಿದೆ. ಆಸ್ಟ್ರೇಲಿಯಾ, ಸಿಂಗಪುರ, ಫ್ರಾನ್ಸ್, ಇಂಗ್ಲೆಂಡ್, ವೆನಿಜುವೆಲ್ಲಾ, ಮಲೇಷ್ಯ, ಬ್ಯಾಂಕಾಂಕ್, ಬಹರೀನ್, ಪೋರ್ಚ್‌ಗೀಸ್, ಯುಎಸ್‌ಎ, ಯುಎಇ, ಕುವೈತ್, ಮಾರಿಷಸ್, ಜಕೊಸ್ಲೋವಾಕಿಯಾ, ಬಲ್ಗೇರಿಯಾ, ಸ್ವೀಡನ್, ನೇಪಾಳ, ಪಾಕಿಸ್ತಾನ, ಡಚ್, ಟರ್ಕಿ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸೇರಿದಂತೆ ಅನೇಕ ರಾಷ್ಟ್ರಗಳ ನೋಟು, ನಾಣ್ಯಗಳನ್ನು ಜಯಂತ ಕಾಮತರ ಸಂಗ್ರಹದಲ್ಲಿ ಇವೆ.
- ಇಂದುಶೇಖರ ಮಣೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


