ಸಾಧನೆ

ವೇಷದ ಅಣ್ಣಯ್ಯ

ಅವರು ಮಾತನಾಡುವಾಗ ಮುಖದಲ್ಲಿ ನಗು ತುಂಬಿರುತ್ತದೆ. ಮಾತುಗಳಲ್ಲೂ ಹಾಸ್ಯದ ಹೊನಲು.

ವೇಷದ ಅಣ್ಣಯ್ಯ
Published On :

ಅವರು ಮಾತನಾಡುವಾಗ ಮುಖದಲ್ಲಿ ನಗು ತುಂಬಿರುತ್ತದೆ. ಮಾತುಗಳಲ್ಲೂ ಹಾಸ್ಯದ ಹೊನಲು. ಅವರ ಮಾತುಗಳನ್ನು ಕೇಳಿದ ವರ ಮುಖದಲ್ಲೂ ನಗು ಉಕ್ಕುತ್ತದೆ. ಆದರೆ ಅವರ ಹೃದಯ ಭರಿಸಲಾಗದ ನೋವನ್ನು ತುಂಬಿಕೊಂಡಿದೆ. ಅದೂ ಎಂಥದ್ದು, ಮೂವತ್ತೆಂಟರ ಹರೆಯದ ಮಗನನ್ನು ಕಳೆದುಕೊಂಡ ದುಃಖ! ನಿರಂತರವಾದ ಪುತ್ರ ಶೋಕ! ಅಂಥ ನೋವನ್ನು ಅದುಮಿಟ್ಟುಕೊಂಡು ನಗುನಗುತ್ತಾ ಮಾತನಾಡುತ್ತಾರೆ. ತಮ್ಮ ನೋವು ಮರೆತು ಬೇರೆಯವರನ್ನು ನಗಿಸುವ ಅವರ ಹೆಸರು ಕೆ.ವಿ. ಶ್ರೀನಿವಾಸ್. ಕೇಂದ್ರ ಸುಂಕ ಇಲಾಖೆಯ ನಿವೃತ್ತ ಅಧಿಕಾರಿ ಮತ್ತು ಬಹುಮುಖ ಪ್ರತಿಭೆಯ ಕಲಾವಿದ.
ಬಹುಶಃ ಇಷ್ಟೇ ಹೇಳಿದರೆ ನಿಮಗೆ ಪೂರ್ತಿ ಪರಿಚಯ ಆಗಲಿಕ್ಕಿಲ್ಲ. ಕಿರುತೆರೆಯಲ್ಲಿ ಮಿನುಗುತ್ತಿದ್ದ ವೆಂಕಿ ಎನ್ನುವ ಯುವ ಕಲಾವಿದನನ್ನು ನೆನಪಿಸಿಕೊಳ್ಳಿ. ಅಕಾಲಿಕ ಸಾವನ್ನಪ್ಪಿದ ವೆಂಕಿಯ ತಂದೆ ಇವರು. 80ರ ಇಳಿವಯಸ್ಸಿನಲ್ಲಿ ಮಗನ ಸಾವು ಸದಾ ಕಾಡುತ್ತಿರುತ್ತದೆ. ಅದನ್ನು ಮರೆಯಲು ಕಲೆ ಸ್ವಲ್ಪಮಟ್ಟಿಗೆ ಸಹಾಯಕವಾಗಿದೆ.
ಅಮ್ಮನ ಆಶೀರ್ವಾದ
ಶ್ರೀನಿವಾಸ್ ಅವರಿಗೆ ಕಲೆಯ ನಂಟು ಬೆಳೆದದ್ದು ಆಕಸ್ಮಿಕವಲ್ಲ. ಅವರು ಹುಟ್ಟು ಕಲಾವಿದರು. 'ನನಗಾಗ ಎಂಟರ ಹರೆಯ. ಸಂಬಂಧಿಕರ ಮನೆಯ ಸಮಾರಂಭಕ್ಕೆ ಹೋಗಿದ್ದೆ. ನನ್ನನ್ನು 'ಅಣ್ಣಯ್ಯ' ಎಂದೇ ಸಂಬಂಧಿಕರೆಲ್ಲ ಕರೆಯುವ ರೂಢಿ. ನಾನು ಸಮಾರಂಭಕ್ಕೆ ಮುದುಕನ ವೇಷ ತೊಟ್ಟು ಹೋಗಿದ್ದೆ. ಅಣ್ಣಯ್ಯ ಬಂದಿದ್ದಾನೆ ಎಂದು ಯಾರೋ ನನ್ನ ಅಮ್ಮನಿಗೆ ಸುದ್ದಿ ಮುಟ್ಟಿಸಿದರು. ಅಮ್ಮ ಹೊರಬಂದವರೇ ನನ್ನನ್ನು ದುರುಗುಟ್ಟಿ ನೋಡತೊಡಗಿದರು. ಭಯಪಟ್ಟು ಅಲ್ಲಿಂದ ಕಾಲ್ಕಿತ್ತೆ. ಸಂಜೆ ಮನೆಗೆ ಬಂದ ಅಮ್ಮ 'ಎಲ್ಲರ ಮುಂದೆ ಹೊಗಳುವುದು ನನಗೆ ಸರಿಕಾಣಲಿಲ್ಲ. ಹಾಗಾಗಿ ನಿನ್ನನ್ನು ಹೊಗಳಲಿಲ್ಲ. ನಿನ್ನಲ್ಲಿ ಕಲೆ ಇದೆ. ಅದನ್ನು ಬೆಳೆಸಿಕೊ' ಎಂದು ಆಶೀರ್ವಾದ ಮಾಡಿದರು. ಆ ಆಶೀರ್ವಾದವೇ ನನಗೆ ಪ್ರೇರಣೆಯಾಗಿ ಈ ವಯಸ್ಸಿನವರೆಗೂ ಕಲೆಯ ಸೇವೆ ಮಾಡುತ್ತಿದ್ದೇನೆ' ಎನ್ನುತ್ತಾರೆ ಕೆ.ವಿ. ಶ್ರೀನಿವಾಸ್.
ಇವರು ಸಿನಿಮಾದಲ್ಲೂ ನಟಿಸಿದ್ದಾರೆ! 'ವಂಶವೃಕ್ಷ' ಸಿನಿಮಾದಲ್ಲಿ 'ತಿಥಿ ಬ್ರಾಹ್ಮಣ'ನ ಪಾತ್ರ ನಿರ್ವಹಿಸಿದ್ದಾರೆ. ಮಗ ವೆಂಕಿ ಜತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯ ನಂಟು ಮೊದಲಿನಿಂದಲೂ ಇತ್ತು. ಕೈಲಾಸಂ ಅವರ ಎಲ್ಲ ನಾಟಕಗಳೂ ಸೇರಿದಂತೆ ಜಿಹ್ವಾಚಾಪಲ್ಯ, ಹುತ್ತದಲ್ಲಿ ಹುತ್ತ, ಬಂಡ್ವಾಳ್ವಿಲ್ಲದ ಬಡಾಯಿ.. ಹೀಗೆ ಇತರ ಅನೇಕ ನಾಟಕಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು.
ಶ್ರೀನಿವಾಸ್ ಅವರು ಕೇಂದ್ರ ಸುಂಕ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಇಲಾಖೆಯ ಮನರಂಜನಾ ಕಾರ್ಯಕ್ರಮಗಳಲ್ಲಿ ನಾಟಕಗಳನ್ನು ನಿರ್ದೇಶಿಸುತ್ತಿದ್ದರು. 'ನನ್ನ ಈ ನಾಟಕದ ಹವ್ಯಾಸದಿಂದ ಅಫೀಶಿಯಲ್ ಫೇವರ್ ಕೂಡ ಪಡೆದಿದ್ದೇನೆ' ಎನ್ನುತ್ತಾರೆ.
ನೀವೇಕೆ ಸಿನಿಮಾ ನಟನೆಯನ್ನು ಮುಂದುವರಿಸಲಿಲ್ಲ ಎಂದು ಕೇಳಿದರೆ, 'ನಾನು ಸೇವೆ ಮಾಡುತ್ತಿದ್ದುದು ಕೇಂದ್ರ ಸರ್ಕಾರಿ ಇಲಾಖೆಯಲ್ಲಿ. ನಿಯಮದ ಪ್ರಕಾರ ಸಿನಿಮಾಗಳಲ್ಲಿ ನಟಿಸಬೇಕಾದರೆ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಅಲ್ಲದೇ ಸಿನಿಮಾ ಅಂದಮೇಲೆ ಕಾಲ್‌ಶೀಟ್‌ಗೆ ತಕ್ಕಂತೆ ಪದೇಪದೆ ರಜ ಹಾಕಬೇಕಾಗುತ್ತದೆ. ಹಾಗಾಗಿ ಸಿನಿಮಾ ನಟನೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ' ಎನ್ನುತ್ತಾರೆ.
ವೇಷ ಕಟ್ಟುತ್ತಾರೆ!
ಶ್ರೀನಿವಾಸ್ ಅವರು ವಾಸವಿರುವ ಏರಿಯಾದ ನಾಗರೀಕರೆಲ್ಲ ಸೇರಿ 'ವಿದ್ಯಾ ವಿಲಾಸಿನೀ ಸಭಾ' ಎಂಬ ಸಂಘ ಕಟ್ಟಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಈ ಸಂಘ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಂಘದ ವಾರ್ಷಿಕೋತ್ಸವದಲ್ಲಿ ಕೆ.ವಿ. ಶ್ರೀನಿವಾಸ್ ಅವರ ಛದ್ಮವೇಷ ವಿಶೇಷ ಮನ್ನಣೆ, ಆಕರ್ಷಣೆಯನ್ನು ಗಳಿಸಿಕೊಂಡಿದೆ. ಇವರು ಧರಿಸದ ವೇಷಗಳೇ ಇಲ್ಲ- ಮಹಾತ್ಮ ಗಾಂಧೀಜಿ, ಭಾರತದ ಬಡ ರೈತ, ಅಬ್ದುಲ್ ಕಲಾಂ ಅಜಾದ್, ಶಿವರಾಮ ಕಾರಂತ, ರವೀಂದ್ರನಾಥ ಟ್ಯಾಗೋರ್, ಎದುರು ಮನೆಯ ಗೂರ್ಖಾ, ಲಂಬಾಣಿ ಹೆಂಗಸು... ಹೀಗೆ ವೈವಿಧ್ಯಮಯ ಛದ್ಮವೇಷಗಳನ್ನು ಇಂದಿಗೂ ಧರಿಸುತ್ತಾರೆಂದರೆ ಅವರ ಕಲೆಯ ಬಗೆಗಿನ ಪ್ರೀತಿ, ಜೀವನೋತ್ಸಾಹದ ಅರಿವಾಗುತ್ತದೆ.
ಮೂಲತಃ ದಕ್ಷಿಣ ಕನ್ನಡದವರಾದ ಇವರು ಒಮ್ಮೆ ಊರಿನ ದೇವಸ್ಥಾನದಲ್ಲಿ 'ಮೌನಿಬಾಬಾ' ವೇಷ ಧರಿಸಿದ್ದಾಗ ಬಾಬಾನನ್ನು ನೋಡಲು ನಾಲ್ಕುನೂರು ಜನ ಜಮಾಯಿಸಿದ್ದನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಳಿವಯಸ್ಸಿನಲ್ಲೂ ಸದಾ ಚಟುವಟಿಕೆಯಿಂದಿರುವ, ಇಂದಿಗೂ ಪ್ರತಿವರ್ಷ ಸಂಘದ ವಾರ್ಷಿಕೋತ್ಸವದಲ್ಲಿ ಛದ್ಮವೇಶ ಧರಿಸುವ ಅವರ ಜೀವನೋತ್ಸಾಹಕ್ಕೆ ಹ್ಯಾಟ್ಸಾಫ್ ಎನ್ನಲೇಬೇಕು. ಅವರಿಗೆ ಹಲೋ ಹೇಳಲು: 9449083550.

- ಶಶಿರೇಖಾ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.