ಯಾರ್ ಕಾಲ ಚೆನ್ನ?

ಆ ಹಿರೀಕರನ್ನು ನಲವತ್ತರವನಾದ ಈತ ಹಿಂದೆ ಕಂಡಿದ್ದವನೇ. ಪಾರ್ಕ್‌ನಲ್ಲಿ, ಸಭೆ ಸಮಾರಂಭಗಳಲ್ಲಿ, ಮದುವೆ ಮುಂಜಿ ಮನೆಗಳಲ್ಲಿ. ಹಿರೀಕರು ಎಲ್ಲೆಂದರಲ್ಲಿ ಮಾತಿಗೆ ಎಳೆದುಬಿಡುತ್ತಾರೆ. ವಿಷಯಕ್ಕೇನು ಬರ ಅವರಿಗೆ! ಮಾತು ಪ್ರಶ್ನೆಗಳ ಸುರಿಮಳೆಯಿಂದ ಆರಂಭ. ಅವರಾಗಿಯೇ 'ಅಬ್ಬಬ್ಬ ಏನು ಬೇಸಿಗೆ ಈ ಬಾರಿ' ಎನ್ನುತ್ತಲೇ ಈತನತ್ತ ಅಂದು ಗ್ರಂಥಾಲಯದ ಆವರಣದಲ್ಲಿ ತಿರುಗಿದ್ದರು. ಇವನು 'ಹೌದು ಸಾರ್' ಅಂತ ಪ್ರತಿಕ್ರಿಯಿಸಿದ್ದ. 'ಅಲ್ಲಪ್ಪ, ಹನಿ ಮಳೇನೂ ಇಲ್ಲ ಅನ್ನೋದೆ ಆಕಾಶರಾಯ? ಏನು ಕಾಲ ಬಂತೋ. ಕಲಿಗಾಲ. ನಾವೆಲ್ಲ ಸ್ವಲ್ಪ ಧರ್ಮಕರ್ಮ ಅಂತ ನೋಡದೇಹೋದ್ರೆ ಈ ಗತೀನೇ ನೋಡು ಮುಂದೆ...' ಎಂದ ಹಿರಿಜೀವದ ಎನ್‌ಕ್ವಯರಿ 'ಟೇಕ್ ಆಫ್' ಆಗಿಯೇಬಿಟ್ಟಿತ್ತು.
'ಸರಿ, ಎಲ್ಲಿರೋದು? ಏನು ಕೆಲಸ?'
'ಸಂಬಳ ಎಷ್ಟು ಬರುತ್ತೆ?'
'ಸರ್ಕಾರಿ ಕೆಲಸವೆ, ಇಲ್ಲ ಖಾಸಗಿಯದೇ?'
'ಮನೆ ಸ್ವಂತದ್ದು ತಾನೆ?'
'ನಿಮ್ಮನೆ ಕಡೆ ನೀರು ಪರವಾಗಿಲ್ವ?'
'ಲಗ್ನ ಆಗಿದೆಯೇ? ಎಷ್ಟು ಮಕ್ಕಳು? ಓದ್ತಿದಾರ?'
'ಕ್ರಿಕೆಟ್ ನೋಡ್ತೀರೋ ಹ್ಯಾಗೆ?'
ಇವೇ ಮುಂತಾದ 'ಎನ್ ಕೊಯ್ಯುವ' ಅರ್ಥಾತ್ ಕೊರಳು ಕೊಯ್ಯುವ ವಿಚಾರಣೆಗಳಿಗೆ ನಮ್ಮ ಯುವ ಮಹಾನುಭಾವ ತಾಳ್ಮೆಯಿಂದಲೇ ಉತ್ತರಿಸಿದ್ದ ಆ ದಿನ. ಮತ್ತೊಂದು ಅಂಶವನ್ನು ಅವರ ಬಗ್ಗೆ ಈತ ಗಮನಿಸಿದ್ದೇನೆಂದರೆ ಬಹುಶಃ ಮರೆವಿನಿಂದ ಹಿಂದೊಮ್ಮೆ ಮಾತನಾಡಿಸಿ ಪರಿಚಯ ಮಾಡಿಕೊಂಡವರನ್ನೇ ಮತ್ತೆ ವಿಚಾರಣೆಗೊಳಪಡಿಸುವುದು! ಇವೊತ್ತು ಬಡಾವಣೆಯ ಗುಂಡಣ್ಣ ಉದ್ಯಾನದ ಕಲ್ಲುಬೆಂಚಿನ ಮೇಲೆ ಹಿರೀಕರು ಆಸೀನರಾಗಿದ್ದಾರೆ. ತಾನು ಅಲ್ಲಿ ಕೂತು ಒಂದು ಪುಸ್ತಕ ತಿರುವಬೇಕೆಂದುಕೊಂಡು ಯೋಜಿಸಿದ್ದ ಈತ. ಅವರು ತರಗತಿಗಿಳಿದರೆ ಏನು ಪಾಡು ತನ್ನದು! ಒಂದು ಉಪಾಯ ಅವನಿಗೆ ಹೊಳೆಯುತ್ತದೆ. ನೇರವಾಗಿ ಸ್ವಲ್ಪವೂ ಕಸಿವಿಸಿ ಪಡದೆ ಆ ಹಿರೀಕರ ಪಕ್ಕದಲ್ಲೇ ಕೂತ. ತಾನಾಗಿಯೇ ಹೆಸರು, ಮನೆ, ಉದ್ಯೋಗ, ಸಂಬಳ, ವಿವಾಹವಾಗಿರೋದು, ಮಗ ನಾಲ್ಕನೆಯ ಕ್ಲಾಸ್‌ನಲ್ಲಿರೋದು, ಕ್ರಿಕೆಟ್ ಖಯಾಲಿ, ಟಿ.ವಿ. ಮೆಚ್ಚಿನ ಚಾನೆಲ್... ಹೀಗೆ ಎಲ್ಲ ವಿವರ ಒಪ್ಪಿಸಿ ಕೊನೆಗೆ ಮಳೆ, ಬೆಳೆ ಇಲ್ಲ, ಕಾಲ ಕೆಟ್ಟೋಯ್ತು ಅಂತ ಒಗ್ಗರಣೆ ಸಿಡಿಸಿದ. ಪರಿಣಾಮ ಪಸಂದಾಗಿತ್ತು. ಹಿರೀಕರಿಗೇ ಬೋರ್ ಆಗಿ 'ಬರ್ತೀನಿ, ಇನ್ನೊಂದು ಸುತ್ತು ವಾಕಿಂಗ್ ಬಾಕಿಯಿದೆ' ಎಂದು ಹೊರಟೇಬಿಟ್ಟರು!
ಗತವೈಭವವನ್ನು ಬಣ್ಣಿಸುವುದೆಂದರೆ ಹಿರಿಯರಿಗೆ ಅದೇನೋ ಆನಂದ. ತಮ್ಮ ಕಾಲವೇ ಸುವರ್ಣಯುಗ. 'ಬೆಣ್ಣೆ ಕಾಸಿದರೆ ಮೂರು ಮೈಲಿಗಳಾಚೆಗೂ ಸುವಾಸನೆ ಮೂಗಿಗೆ ಬಡಿಯುತ್ತಿತ್ತು. ಹೋಟೆಲ್ಲುಗಳಲ್ಲಿ ತಯಾರಾಗುತ್ತಿದ್ದ ಕೇಸರಿಬಾತ್ ಚಮಚ ಬಳಸದೆಯೇ ಗುಳುಂಗೊಳ್ಳುತ್ತಿತ್ತು ಗಂಟಲೊಳಗೆ. ದಸರಾ ವಸ್ತುಪ್ರದರ್ಶನದಲ್ಲಿ ನೂರು ಹಾಳೆಗಳ ಕಟ್ಟಿಗೆ ಒಂದೇ ರುಪಾಯಿ. ಆಣೆ ಕಾಸುಗಳ ವಿಜೃಂಭಣೆಯ ದಿನಗಳವು... ಮುಂತಾಗಿ ಅವರ ಮೆಲುಕುಗಳು. ರೋಚಕ ಹೈಕುಗಳು.
ಒಮ್ಮೆ ಎಂಬತ್ತರ ಅಜ್ಜ ಗೃಹಪ್ರವೇಶ ಸಮಾರಂಭದಲ್ಲಿ ಮಾತಿಗೆ ಶುರುಹಚ್ಚಿಕೊಂಡಿದ್ದರು, 'ಬಿಡಿ. ಏನೂಂತ ಹೇಳ್ಲಿ ಆಗಿನ ಕಾಲದ ರುಪಾಯಿಗಿದ್ದ ಶಕ್ತೀನ. ನಾನೇ ಹೊರಲಾರದೆ ತಂದಿದೀನಿ ರುಪಾಯಿಗೆ ಹತ್ತು ಕಿಲೊ ಅಕ್ಕಿಯನ್ನ. ಸಕ್ರೆ ಮನೇಲಿ ಹಿತ್ತಾಳೆ ಕೊಡಗದ ತುಂಬ ಇಟ್ಟಾಡೋದು. ಸೀಮೆಎಣ್ಣೆ, ಪೆಟ್ರೋಲು ಕೇಳೋರೇ ಗತಿಯಿಲ್ಲ ಅನ್ನಿ. ಒಂದಾಣೆಯಿದ್ರಾಯ್ತು ಹೋಟೆಲ್‌ನಲ್ಲಿ ಹೊಟ್ಟೆ ಬಿರಿಯೋತರಹ ಊಟ. ನನ್ನ ಸಂಬಳ ತಿಂಗಳಿಗೆ ಹತ್ತೊಂಬತ್ತು ರುಪಾಯಿ. ಒಂದು ರುಪಾಯಿ ಇನ್ಶೂರೆನ್ಸ್‌ಗೆ ಕಟ್ತಿದ್ದೆ. 'ನಮ್ಮನೆ ಹಿತ್ತಲಲ್ಲಿ ತೆಂಗಿನಕಾಯಿ ರಾಶಿಯಿದೆ. ಎಷ್ಟು ಬೇಕೊ ಒಯ್ಯಿರಿ' ಅನ್ನುತ್ತಿದ್ದ ದಿನಗಳು ಅವು. ರಸ್ತೇಲಿ ಜನ, ವಾಹನಗಳೇ ಕಮ್ಮಿ. ಬೀದಿಗೆ ಎಲ್ಲಿಂದಲಾದ್ರೂ ಕಾರು ಬಂದರೆ ಸಾಕು, ನಾವು ಹೈಕಳು ನಮ್ಮನೆ ಮುಂದೆ ಕಾರು ನಿಲ್ಲಿಸಿ ಅಂತ ಹಠಮಾಡ್ತಿದ್ವಿ. ಸಮೃದ್ಧ ಕಾಲ. ಹೇಳ್ತಿದ್ರೆ ನನ್ನ ಹೊಟ್ಟೆ ಉರಿಯುತ್ತೆ... ಚೀಲ ತುಂಬ ಹಣ. ಕಿಸೆ ತುಂಬ ದಿನಸಿ ಈಗ. ಆಗ ತದ್ವಿರುದ್ಧ' ಅಜ್ಜನ ಸುತ್ತ ನಾವೆಲ್ಲ ಕೂತು ಅತೀವ ಆಸಕ್ತಿಯಿಂದ ಅವರ ಅನುಭವ ಆಲಿಸುತ್ತಿದ್ದೆವು. ಎರಡು ರೌಂಡ್ ಪಾನಕ ಬಂದಿದ್ದರೂ ನಮಗದರ ಅರಿವೇ ಆಗಲಿಲ್ಲ.
ತುಂಟ ಆಸಾಮಿಯೊಬ್ಬ ಅಜ್ಜನತ್ತ ಧಾವಿಸಿದವನೇ 'ತಾತಾ, ಅದು ಹೇಗೆ ಹೇಳಿದ್ರಿ ನಿಮ್ಮ ಕಾಲವೇ ಚೆನ್ನ ಅಂತ. ತಿಂಗಳ ಸಂಬಳ ಹತ್ತೊಂಬತ್ತು ರುಪಾಯಿ ಮಾತ್ರ ಅಂದ್ರಲ್ಲ. ಛೆ! ಹತ್ತೊಂಬತ್ತು ರುಪಾಯಿಗೆ ತಿಂಗಳಪೂರ್ತಿ ದುಡಿಯಬೇಕಿತ್ತಲ್ಲ ನೀವು. ಈಗ್ನೋಡಿ ತಾತಾ, ತಿಂಗಳಿಗೆ ನಲವತ್ತೈದು ಸಾವಿರ ಸಂಬಳ ನಂಗೇನೇ ಬರ್ತದೆ' ಅಂದ. ಅಜ್ಜ ಅವನ ತರ್ಕದಿಂದ ಬೇಸ್ತು ಬಿದ್ದಿದ್ದರು. ಈಗಿನ ಹುಡುಗರಿಗೆ ನಾವು ಬುದ್ಧಿ ಹೇಳೋಕ್ಕಾಗುತ್ಯೆ? ಎನ್ನುತ್ತ ನಸ್ಯದ ಡಬ್ಬಿ ಕಿಸೆಯಿಂದ ಹೊರತೆಗೆದರು. ಅದರ ತಲೆ ಮೇಲೆ ತುಂಟನನ್ನು ದುರುಗುಟ್ಟಿ ನೋಡಿ ಪಟ್ ಅಂತ ಏಟು ಬಾರಿಸಿದ್ದರು.
- ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


