ಸುಜಾತ ಜಾತಕ

ಹೆಚ್ಚಾಗಿ ನಾಟಕಕಾರರನ್ನೇ ಕಂಡಿರುವ ಕರ್ನಾಟಕದಲ್ಲಿ, ನಾಟಕಕಾರ್ತಿಯರು ವಿರಳ. ಜನಪದ ಕಥೆಗಳನ್ನೇ ಆಧರಿಸಿ ನಾಟಕ ರಚಿಸುವ ಅಭಿಲಾಷೆ, ತೀವ್ರತೆಗಳೊಂದಿಗೆ ಮಹಿಳಾ ಸಮನ್ವಯತೆಯನ್ನೂ ಸಂಯೋಜನೆಗೊಳಿಸುವ ನಾಟಕಕಾರ್ತಿ ಡಾ.ಸುಜಾತಾ ಅಕ್ಕಿ.
ಮಂಡ್ಯ ರಮೇಶ್ ನಿರ್ದೇಶನದಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಚಾಮಚೆಲುವೆ'ಯ ರಚನೆ ಅಕ್ಕಿ ಅವರದ್ದು. ಹಲವು ಜನಪದ ವಿದ್ವಾಂಸರು ಸಂಗ್ರಹಿಸಿರುವ ಚಾಮುಂಡೇಶ್ವರಿ -ನಂಜುಂಡೇಶ್ವರರ ನಡುವಿನ ಪ್ರಣಯ ಪ್ರಸಂಗ, ಚಾಮುಂಡಿಯ ಬದುಕನ್ನು ಕುರಿತ ಮನೋರಂಜನಾತ್ಮಕ ಗೀತೆಗಳಿಂದ ಪ್ರೇರಿತರಾಗಿ ನಾಟಕರೂಪ ಕೊಟ್ಟಿದ್ದಾರೆ.
ಚಾಮುಂಡಿ ಮಹಿಷಾಸುರನನ್ನು ಕೊಂದು ಮೈಸೂರಿನಲ್ಲಿ ನೆಲೆಸುವಾಗ ಕಪಿಲಾ -ಕಾವೇರಿ ಸಂಗಮದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನಂಜುಂಡೇಶ್ವರ ಬಂದು ಇವಳಿಗೆ ಮಾರು ಹೋಗಿ, ಇಬ್ಬರು ಹೆಂಡತಿಯರಿದ್ದರೂ ಇವಳನ್ನು ಕೂಡಲು ತವಕಿಸುತ್ತಾನೆ. ಅಲ್ಲಿ ಅವರಿಬ್ಬರ ಮಾತುಕತೆ ರೋಚಕವಾಗಿದೆ. ನಂಜುಂಡ ಮದುವೆಯಾದದ್ದನ್ನು ತಿಳಿದು ವಿರೋಧಿಸುವ ಹೆಂಡತಿಯರು. ಇವರ ನಡುವೆ ಬರುವ ಉತ್ನಳ್ಳಿ ಮಾರಮ್ಮ, ಶ್ರೀರಂಗನಾಥ ಪಾತ್ರಗಳು ಪೂರಕವಾಗಿವೆ. ಮೇಲ್ವರ್ಗ ಸಂದರ್ಭಕ್ಕನುಗುಣವಾಗಿ ಕೆಳ ವರ್ಗದವರಿಗೆ ಶರಣಾಗಬೇಕಾಗುತ್ತದೆಂಬ ಧ್ವನಿ ಇದೆ. ಆದರೆ ಮಹಿಳಾ ಸಂವೇದನೆಯುಳ್ಳ ಲೇಖಕಿ 'ಒಂದು ಹೆಣ್ಣಿಗೆ ಒಬ್ಬನೇ ಗಂಡ' ಎಂಬುದನ್ನು ಚಾಮುಂಡಿಯ ಮಾತುಗಳಿಂದ ಸೂಚಿಸಿದ್ದಾರೆ.
ಮೂಲತಃ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿಯ ಕೃಷಿಕ ದಂಪತಿ ಅಕ್ಕಿಕೊಟ್ರಪ್ಪ, ಅಕ್ಕಿಕೊಟ್ಟಮ್ಮ ಅವರ ಕೂಸಾದ ಸುಜಾತಾ ಮೈಸೂರಿನ ಸೊಸೆ. ಚಿಕ್ಕಂದಿನಿಂದಲೂ ಅಮ್ಮ ಹಾಡುವ ಜನಪದ ಗೀತೆಗಳನ್ನು ಕೇಳುತ್ತಾ ಬೆಳೆದವರು. ಕನ್ನಡ, ಜಾನಪದ, ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, 'ಬಳ್ಳಾರಿ ಜಿಲ್ಲೆಯ ರಂಗನಟಿಯರು' ಎಂಬ ಪ್ರೌಢಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪಡೆದಿದ್ದಾರೆ.
ಡಾ.ಸುಜಾತಾ ಅಕ್ಕಿ ನಾಟಕ ರಚನೆಯಲ್ಲಿ ಮಾತ್ರ ತೊಡಗಿಲ್ಲ. ಕವಯತ್ರಿಯೂ ಹೌದು. ಜನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಾರೆ. ಬಳ್ಳಾರಿ ಸುತ್ತಮುತ್ತ ಪ್ರಚಲಿತವಿರುವ ಜನಪದ ಗೀತೆಗಳನ್ನು ಸಂಗ್ರಹಿಸಿ 'ಸುರಿಗಿ ಸುವ್ವಾಲೆ' ಪುಸ್ತಕ ಸಂಪಾದಿಸಿದ್ದಾರೆ. ಆಧುನಿಕ ವೈಚಾರಿಕತೆಯನ್ನು ಪ್ರತಿಪಾದಿಸುವ ಅವರು, ಹಲವು ವಿಚಾರ ಸಂಕಿರಣ, ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಮಹಿಳಾ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಆಕಾಶವಾಣಿ, ಪತ್ರಿಕಾ ಮಾಧ್ಯಮಗಳಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದು, ಇವರ 'ಮಾದೇವಿ ಮತ್ತು ಇತರ ನಾಟಕಗಳು' ಕೃತಿಗೆ ರಾಜ್ಯಮಟ್ಟದ ಏಕಾಂಕ ಸ್ಪರ್ಧೆಯಲ್ಲಿ ಪ್ರಶಸ್ತಿ ದೊರೆತಿದೆ. ಇದೇ ಕೃತಿಗೆ ಮೂರು ಪ್ರಶಸ್ತಿಗಳು ಸಂದಿವೆ. ಕವನ ಸಂಕಲನ, ಕತೆ ಹಾಗೂ ನಾಟಕಗಳಿಗೆ ಗಳಿಸಿರುವ ಪ್ರಶಸ್ತಿ -ಬಹುಮಾನಗಳು ಹಲವಾರು.
ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರೂ ಜನಪದ ಸಾಹಿತ್ಯ ಇವರ ಮೆಚ್ಚಿನ ವಿಷಯ. ರೈಲಿನಲ್ಲಿ ಪ್ರಯಾಣ ಮಾಡುವ ಮಹಿಳಾ ಬೋಗಿಯ ಉದ್ಯೋಗಸ್ಥ ಮಹಿಳೆಯರೆಲ್ಲಾ ಕೂಡಿ ಇವರ ನೇತೃತ್ವದಲ್ಲಿ 'ಲೇಡೀಸ್ ಕಂಪಾರ್ಟ್‌ಮೆಂಟ್' ಎಂಬ ಬೀದಿ ನಾಟಕವನ್ನು ಮಂಡ್ಯ, ಮೈಸೂರಿನಲ್ಲಿ ಪ್ರದರ್ಶಿಸಿದ್ದೂ ಹೊಸ ಪ್ರಯೋಗವೇ.
ತನ್ನ ಎಲ್ಲ ಚಟುವಟಿಕೆಗಳ ಪ್ರೇರಕ ಶಕ್ತಿ ತಮ್ಮ ಪತಿ ಎನ್.ಎಸ್. ಗೋಪಿನಾಥ್ ಎನ್ನಲು ಸುಜಾತಾ ಅಕ್ಕಿ ಮರೆಯುವುದಿಲ್ಲ.
- ಪೂರ್ಣಿಮಾ ಸಿ.ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


