ಸಾಧನೆ

ಜನ ಸೇವೆ

ಸಂದುಗಳಲ್ಲಿನ ನೋವಿನಿಂದ ಬಳಲಿ ಬೆಂಡಾಗಿದ್ದ ಬೆಸ್ಕಾಂ ಉದ್ಯೋಗಿ ರಮೇಶ್‌ಗೆ ಯಾರೋ...

ಜನ ಸೇವೆ
Published On :

ಸಂದುಗಳಲ್ಲಿನ ನೋವಿನಿಂದ ಬಳಲಿ ಬೆಂಡಾಗಿದ್ದ ಬೆಸ್ಕಾಂ ಉದ್ಯೋಗಿ ರಮೇಶ್‌ಗೆ ಯಾರೋ ಲಕ್ಷ್ಮಣ ರಾಜುವನ್ನು ನೋಡುವಂತೆ ಸಲಹೆ ಮಾಡಿದರು. ಅವರು ಕೊಟ್ಟ ವಿಳಾಸ ಹುಡುಕಿ ಹೋದರೆ ಅಲ್ಲಿರುವ ವ್ಯಕ್ತಿ ಥೇಟ್ ಆದಿವಾಸಿಯಂತೆ ಕಾಣುತ್ತಿದ್ದಾನೆ! ಲುಂಗಿ, ಮೇಲೆ ಕಪ್ಪು ಕಂಬಳಿ. 'ಇವನೆಂಥ ಮದ್ದು ಕೊಟ್ಟಾನು' ಎನ್ನುವ ಭಾವನೆ. ಇವರ ಮುಖ ನೋಡಿದ ಲಕ್ಷ್ಮಣರಾಜು, ಹಿಂದೆ ಅವರ ಬದುಕಿನಲ್ಲಿ ಆಗಿರುವ ಘಟನೆಗಳ ಸಮೇತ ಅವರ ಪ್ರವರವನ್ನೇ ಬಿಚ್ಚಿಟ್ಟಾಗ ದಂಗಾಗಿಬಿಟ್ಟರು. ನೋವಿಗೆ ನೀಡಿದ ಲೇಹ್ಯವಂತೂ ಮ್ಯಾಜಿಕ್‌ನಂತೆ ಕೆಲಸ ಮಾಡಿತು.
ಬೆಂಗಳೂರು ಕೆ.ಆರ್.ಪುರಂ ಬಳಿ ಇರುವ ಪಿ.ಲಕ್ಷ್ಮಣ ರಾಜು ಆದಿವಾಸಿಯೇ. ಆಂಧ್ರಪ್ರದೇಶದ ಭದ್ರಾಚಲಂನ ಹಳ್ಳಿಯವರು. ದುರ್ಗಾದೇವಿಯ ಉಪಾಸನೆ ಮಾಡುವ ಇವರ ಕುಟುಂಬ ನಾಲ್ಕು ತಲೆಮಾರಿನಿಂದ ನಾಟಿ ವೈದ್ಯ ಮಾಡುತ್ತಿದೆ. ಲಕ್ಷ್ಮಣರಾಜು ಎಂಟನೇ ವಯಸ್ಸಿನಲ್ಲಿರುವಾಗಲೇ ಅಜ್ಜ ನಾಟಿ ವೈದ್ಯದ ಮೂಲತತ್ವಗಳನ್ನು ಹೇಳಿಕೊಟ್ಟರು. ಆ ನಂತರ ತಂದೆಯೇ ಗುರು. ವೈದ್ಯದ ಜತೆಗೆ ಮುಖ ನೋಡಿ ಭವಿಷ್ಯ ಹೇಳುವ ಕಲೆಯೂ ಸಿದ್ಧಿಸಿತು. ಒಮ್ಮೆ ಇವರಿಂದ ಮದ್ದು ಪಡೆದ ಹೈದರಾಬಾದ್‌ನ ಉದ್ಯಮಿಯೊಬ್ಬರು ಒತ್ತಾಯ ಮಾಡಿ ತಮ್ಮ ನಗರಕ್ಕೆ ಕರೆದೊಯ್ದರು. ಅಲ್ಲೇ ಪುಟ್ಟದೊಂದು ಕೊಠಡಿ ಬಾಡಿಗೆ ಹಿಡಿದು ಚಿಕಿತ್ಸಾಲಯ ಮಾಡಿಕೊಟ್ಟರು. ಅಲ್ಲಿಗೆ ಬಂದ ಚೆನ್ನೈನವರೊಬ್ಬರು ತಮಿಳುನಾಡಿಗೆ ಕರೆದೊಯ್ದರು. ಅಲ್ಲಿಂದ ಬೆಂಗಳೂರಿಗೆ ಪಯಣ. ಮೂರು ವರ್ಷದಿಂದ ಇಲ್ಲೇ ವಾಸ್ತವ್ಯ.
ಲಕ್ಷ್ಮಣರಾಜು ನಾಡಿ ಪರೀಕ್ಷೆ ಮೂಲಕ ರೋಗನಿರ್ಣಯ ಮಾಡುತ್ತಾರೆ. ಹೊಟ್ಟೆನೋವು, ತಲೆನೋವು, ಸಂಧು ನೋವು, ಅಲ್ಸರ್, ಮಹಿಳೆಯರಲ್ಲಿ ಗರ್ಭಕೋಶದ ತೊಂದರೆಗಳು ಮೊದಲಾದ 361 ಆರೋಗ್ಯ ಸಮಸ್ಯೆಗಳಿಗೆ ತಮ್ಮಲ್ಲಿ ಪರಿಹಾರ ಇದೆ. ಸಂತಾನ ಸಾಮರ್ಥ್ಯ ಹೆಚ್ಚಿಸುವ ಮದ್ದೂ ಇದೆ. ಆರಂಭಿಕ ಹಂತದಲ್ಲೇ ಬಂದರೆ ಕ್ಯಾನ್ಸರ್‌ನಂಥ ಕಾಯಿಲೆಗೂ ಔಷಧ ಕೊಡಬಹುದು ಎನ್ನುವ ಲಕ್ಷ್ಮಣರಾಜು, ಭದ್ರಾಚಲಂ ಕಾಡಿನಿಂದಲೇ ಗಿಡಮೂಲಿಕೆಗಳನ್ನು ತಂದು ಮದ್ದು ತಯಾರು ಮಾಡುವುದಾಗಿ ಹೇಳುತ್ತಾರೆ. ಲೇಹ್ಯ, ಚೂರ್ಣ, ಕಷಾಯ, ಮಾತ್ರೆಗಳನ್ನು ಕೊಡುತ್ತಾರೆ.
ನಾಡಿ ಪರೀಕ್ಷೆ ಮೂಲಕ ಎಂಥ ಆರೋಗ್ಯ ತೊಂದರೆಯನ್ನೂ ಖಚಿತವಾಗಿ ಪತ್ತೆ ಮಾಡಬಹುದು. ತಮ್ಮಲ್ಲಿಗೆ ಬರುವವರು ಖಾಲಿ ಹೊಟ್ಟೆಯಲ್ಲಿ ಬಂದರೆ ರೋಗ ನಿರ್ಣಯ ಸುಲಭವಾಗುತ್ತದೆ ಎನ್ನುತ್ತಾರೆ ಲಕ್ಷ್ಮಣರಾಜು.

ವಿಳಾಸ: ಕನಕದುರ್ಗಾ ಗಿಡಮೂಲಿಕಾ ಕೇಂದ್ರ, ಬಸವನಪುರ ಮುಖ್ಯರಸ್ತೆ, ಕೃಷ್ಣ ಚಿತ್ರಮಂದಿರ ಬಳಿ, ಅನುಶ್ರೀ ಬೇಕರಿ ಎದುರು, ಕೆ.ಆರ್. ಪುರಂ, ಬೆಂಗಳೂರು. ಮೊ: 9900241943.

ಬದುಕಿಗೆ ಸಾಕು
ನಮ್ಮಲ್ಲಿ ಮದ್ದು ಪಡೆದವರು ಇಂತಿಷ್ಟೇ ಹಣ ಕೊಡಬೇಕು ಎಂಬುದಿಲ್ಲ. ಔಷಧಕ್ಕೆ ಎಷ್ಟು ವೆಚ್ಚವಾಗುತ್ತದೆಯೋ ಅಷ್ಟು ನೀಡಿದರೆ ಸಾಕು. ನಮ್ಮ ವೈದ್ಯಪದ್ಧತಿ ಎಲ್ಲರಿಗೂ ತಲುಪಬೇಕು. ಜನ ಸಂತೋಷದಿಂದ ಇರಬೇಕು.
- ಪಿ.ಲಕ್ಷ್ಮಣರಾಜು

- ಚಿರಾಗ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.