ವಾರಾನ್ನಪೂರ್ಣೆ

ಚನ್ನರಾಯಪಟ್ಟಣದ ಶಕುಂತಲಮ್ಮ ತಿಲಕ್ ಎಂದರೆ ತಕ್ಷಣ ಗೊತ್ತಾಗಲಿಕ್ಕಿಲ್ಲ. 1971ರಲ್ಲಿ ರಾಜ್ಯ ವಿಧಾನಸಭೆಗೆ ಹಾಸನ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಕುಂತಲಮ್ಮ ತಿಲಕ್ ಎಂದರೆ ಹೆಚ್ಚಿನವರಿಗೆ ಇವರು ಚಿರಪರಿಚಿತರು. ಕೇವಲ ಒಂದೇ ಒಂದು ಬಾರಿ ಘಟಾನುಘಟಿ ರಾಜಕಾರಣಿಯ ವಿರುದ್ಧ ಸ್ಪರ್ಧಿಸಿದರೂ ಕನಿಷ್ಠ ಅಂತರದಿಂದ ಕ್ಷೇತ್ರ ಬಿಟ್ಟುಕೊಟ್ಟವರು ಇವರು. ಅಧಿಕಾರಕ್ಕಾಗಿ ಹಂಬಲಿಸದೆ, ಅಧಿಕಾರವಿಲ್ಲದೆಯೂ ಸಮಾಜಸೇವೆ ಮಾಡಬಹುದೆಂಬುದಕ್ಕೆ ಇವರೇ ಉದಾಹರಣೆ.
ಸದಾ ಒಂದಿಲ್ಲೊಂದು ಕೆಲಸದಲ್ಲಿ ನಿರತರಾಗಿರುವ, ಸಮಾಜ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುವ ಇವರಿಗೀಗ ಬರೋಬ್ಬರಿ 84 ವರ್ಷ ತುಂಬಿದೆ!
ಸ್ವಾತಂತ್ರ್ಯ ಹೋರಾಟದಲ್ಲಿ ಪತಿ 3-4 ಬಾರಿ ಜೈಲಿಗೆ ಹೋದಾಗ, ಇಡೀ ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಶಕುಂತಲಮ್ಮ, ವ್ಯವಸಾಯದ ಜವಾಬ್ದಾರಿಯನ್ನೂ ಹೊತ್ತು ತೋಟ, ಗದ್ದೆಗಳ ಕೆಲಸದಲ್ಲಿ ಕಿಂಚಿತ್ತೂ ಲೋಪವಾಗದಂತೆ ರೈತ ಮಹಿಳೆಯಾಗಿ ಕೆಲಸ ಮಾಡಿದವರು.
ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಇವರು ಉದಾಹರಣೆ. ಓದಿದ್ದು ನಾಲ್ಕನೇ ಕ್ಲಾಸು, ಆದರೆ ಇಂಗ್ಲಿಷನ್ನೂ ತಕ್ಕಮಟ್ಟಿಗೆ ಕಲಿತಿದ್ದಾರೆ. ಮರಿಮೊಮ್ಮಕ್ಕಳ ಜತೆ ಮಾತನಾಡುವುದಕ್ಕೋಸ್ಕರವೇ ಇವರು ತಮ್ಮ 80ನೇ ವಯಸ್ಸಿನಲ್ಲಿ ಇಂಗ್ಲಿಷ್ ಕಲಿತರೆಂದರೆ, ಇವರ ಆಸಕ್ತಿ, ಉತ್ಸಾಹಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು.
ಅನ್ನಪೂರ್ಣೇಶ್ವರಿ
'ವಾರಾನ್ನದ' ಕಲ್ಪನೆ ಬಹುಶಃ ಅನೇಕರಿಗೆ ಇರಲಿಕ್ಕಿಲ್ಲ. ಹಿಂದೆ ಹಾಸ್ಟೆಲ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಬಡ ಮಕ್ಕಳು ವಾರಾನ್ನ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಂದೊಂದು ದಿನ ಒಬ್ಬೊಬ್ಬರ ಮನೆಯಲ್ಲಿ ಊಟ ಮಾಡುವ ಪದ್ಧತಿ. ಇಂದು ವಾರಾನ್ನ ನೀಡುವ ಮನೆಗಳು ಅಪರೂಪ ಎಂದೇ ಹೇಳಬಹುದು. ಆದರೆ ಶಕುಂತಲಮ್ಮನವರ ಮನೆಯಲ್ಲಿ ಇಂದಿಗೂ ಪ್ರತಿದಿನ ಹಲವಾರು ವಾರಾನ್ನದ ಮಕ್ಕಳು ಊಟ ಮಾಡಿ ಹೋಗುತ್ತಾರೆ. ಯಾವುದೇ ಪ್ರಚಾರವನ್ನೂ ಬಯಸದೆ ಬಡ ಮಕ್ಕಳಿಗಾಗಿ ಹೆಚ್ಚಿನ ಧನಸಹಾಯ ನೀಡುವ ಇವರು ಮನೆಗೆಲಸದವರಿಗೆ, ಕೃಷಿ ಕೂಲಿಕಾರರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿರುವುದರಲ್ಲಿ ಇವರ ಸಮಾಜಸೇವೆಯ ಮುಖ ಅನಾವರಣಗೊಳ್ಳುತ್ತದೆ.
ಗಾಯತ್ರಿ ಭಜನಾ ಮಂಡಳಿ
ಇವರೇ ಹುಟ್ಟುಹಾಕಿದ ಈ ಭಜನಾ ಮಂಡಳಿಯಲ್ಲಿ ಆಸಕ್ತ ಮಹಿಳೆಯರಿಗೆ ಶಾಸ್ತ್ರೀಯ ಸಂಗೀತ, ದೇವರನಾಮ, ಸಂಪ್ರದಾಯದ ಹಾಡುಗಳನ್ನು ಹೇಳಿಕೊಡುತ್ತಾರೆ. 200-250 ಸ್ವರಚಿತ ಹಾಡುಗಳಿಗೆ ರಾಗಸಂಯೋಜಿಸಿದ್ದಾರೆ. ಹಬ್ಬ ಹರಿದಿನಗಳಲ್ಲಿ ಸಂಘ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದೆ. ದೇವಸ್ಥಾನಗಳಲ್ಲಿ ಪುರಾಣ, ಪುಣ್ಯಕಥೆ, ಕೀರ್ತನೆಗಳನ್ನು ಹಾಡುತ್ತಾರೆ ಶಕುಂತಲಮ್ಮ.
ರಂಗೋಲಿಯ ವಿಶೇಷ ಸಂಗ್ರಹ
ಕುಸುರಿ ಕೆಲಸಗಳಲ್ಲಿ ಪರಿಣತರಾಗಿರುವ ಶಕುಂತಲಮ್ಮ ಇಂದಿಗೂ ಶಾಲು, ಸ್ವೆಟರ್ ಮುಂತಾದ ಕೈಕೆಲಸ ಮಾಡುತ್ತಲೇ ಇರುತ್ತಾರೆ. ಅವರ ಕೆಲಸಗಳ ನೈಪುಣ್ಯತೆಗೆ ಯಾರಾದರೂ ತಲೆಬಾಗಲೇಬೇಕು. ವಿಶೇಷವೆಂದರೆ ಇವರು ಬಗೆಬಗೆಯ ರಂಗೋಲಿಗಳನ್ನು ಬಿಡಿಸುವುದರಲ್ಲಿ ನಿಪುಣರು. ಇವರ ಸಂಗ್ರಹದಲ್ಲಿ 1500ಕ್ಕೂ ಹೆಚ್ಚು ರಂಗೋಲಿ ಮಾದರಿಗಳಿವೆ.
ಚನ್ನರಾಯಪಟ್ಟಣದ ಪುರಸಭಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಶಕುಂತಲಮ್ಮ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂದಿಗೂ ತಮ್ಮನ್ನು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಲಿರುವ ಇವರು ಇಂದಿನ ಯುವಜನತೆಗೂ ಅನುಕರಣೀಯರು.
- ಅಮಿತಾ ಅತ್ರೇಶ್. ಎಚ್.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


