ಸಾಧನೆ

ಕೃಷ್ಣಸನ್ನಿಧಿ

ಕೃಷ್ಣಸನ್ನಿಧಿ
Published On :

ಈಗಿನ ಕಾಲದಲ್ಲಿ ಸಾಮಾಜಿಕ ಸೇವೆಯಲ್ಲಿ ಸಾರ್ಥಕತೆ ಕಾಣುವವರು ಅಪರೂಪ. ಹೆತ್ತವರನ್ನೇ ಆರೈಕೆ ಮಾಡದವರು, ಇನ್ನು ಅವರ ಆಶಯವನ್ನು ಈಡೇರಿಸುವುದು ತೀರಾ ವಿರಳ. ಹಾಗಿರುವಾಗ ತಂದೆಯ ಆಶಯದಂತೆ ವೃದ್ಧರ, ಅನಾಥರ ಸೇವೆಗೆ ಮುಂದಾಗಿದ್ದಾರೆ ಬಳ್ಳಾರಿಯ ಹೆರಿಗೆ ಮತ್ತು ಸ್ತ್ರೀರೋಗತಜ್ಞೆ ಡಾ. ನಾಗರತ್ನ ಸುಯಜ್ಞ ಜೋಶಿ.
ಅನ್ನವರ್ಜುಲ ಸುಬ್ರಮಣ್ಯಂ ಟ್ರಸ್ಟ್ ಮೂಲಕ 'ಕೃಷ್ಣಸನ್ನಿಧಿ' ಎನ್ನುವ ವೃದ್ಧಾಶ್ರಮ ಸ್ಥಾಪಿಸಿದ್ದಾರೆ. ರೋಗರುಜಿನಗಳಿಂದ ಬಳಲುವ, ಅನಾಥರ ಆಶ್ರಯಧಾಮವಾದ ಕೃಷ್ಣಸನ್ನಿಧಿ ಪುನರ್ವಸತಿ ಕೇಂದ್ರ ಕೂಡ ಹೌದು.

ಅಪರೂಪದ ವಿಶ್ರಾಂತಿಧಾಮ
ಗಣಿಧೂಳು ತುಂಬಿರುವ ಬಳ್ಳಾರಿಯಲ್ಲಿ ಹಿರಿಯರಿಗೆ ಇಂಥದ್ದೊಂದು ವಿಶ್ರಾಂತಿಧಾಮ ಇದೆ ಎಂಬ ಕಲ್ಪನೆಯೇ ಯಾರಿಗೂ ಇಲ್ಲ. ಬಳ್ಳಾರಿಯಿಂದ 5-6 ಕಿ.ಮೀ. ದೂರದ ಸಂಗನಕಲ್ ಗ್ರಾಮದಲ್ಲಿರುವ ಕೃಷ್ಣಸನ್ನಿಧಿಯನ್ನು ಒಳಹೊಕ್ಕು ನೋಡಿದರೆ ಮಾತ್ರ ವಿಶ್ರಾಂತಿಧಾಮದ ಮಹತ್ವ ತಿಳಿಯುತ್ತದೆ. ಒಮ್ಮೆ ಕೃಷ್ಣಸನ್ನಿಧಿಯ ಒಳಹೊಕ್ಕರೆ ಹೊರಗಡೆ ಬರುವ ಮನಸ್ಸು ಬರುವುದಿಲ್ಲ.

ತಿಂಗಳಿಗೆ ರು. 1.5 ಲಕ್ಷ
ನಗರದ ಸಮೀಪದಲ್ಲಿ 3.8 ಎಕರೆ ಪ್ರದೇಶವಿದ್ದರೆ, ಅದನ್ನು ಯಾವ ರೀತಿಯ ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಬಹುದು ಎಂದು ಯೋಚಿಸುವ ಈ ಕಾಲದಲ್ಲಿ, ಕೋಟ್ಯಂತರ ರುಪಾಯಿ ಬೆಲೆಬಾಳುವ ಪ್ರದೇಶದಲ್ಲಿ ಅನಾಥರಿಗಾಗಿ ಕೃಷ್ಣಸನ್ನಿಧಿ ನಿರ್ಮಿಸಿರುವುದು ಡಾ. ನಾಗರತ್ನ ಸುಯಜ್ಞ ಜೋಶಿ ಅವರ ಸೇವಾಮನೋಭಾವನೆಯನ್ನು ತೋರಿಸುತ್ತದೆ. ಅವರ ಜತೆ ಪತಿ ಡಾ. ಸುಯಜ್ಞ ಜೋಶಿ (ಸ್ತ್ರೀರೋಗ ತಜ್ಞ ವೈದ್ಯ) ಬೆನ್ನೆಲುಬಾಗಿ ನಿಂತಿದ್ದಾರೆ. ಸಿದ್ಧಾರ್ಥ ಗ್ರಾಮೀಣ ಸಂಚಾರಿ ಆರೋಗ್ಯ ಚಿಕಿತ್ಸಾಲಯಕ್ಕೆ ಪ್ರತಿ ತಿಂಗಳಿಗೆ ಏನಿಲ್ಲವೆಂದರೂ ನಿರ್ವಹಣೆ ಹಾಗೂ ಸಿಬ್ಬಂದಿ ಸಂಬಳಕ್ಕೆ 1.5 ಲಕ್ಷ ರು. ವ್ಯಯಿಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ನಾಗರತ್ನ ಸುಯಜ್ಞ ಅವರ ಸೇವೆ ಅನನ್ಯ.

ಸ್ಟೇ ಹೋಮೂ ಇದೆ...

ಬೆಂಗಳೂರಿನಂಥ ರಾಜಧಾನಿಯಲ್ಲಿರುವ ಸ್ಟೇ ಹೋಂಗಳನ್ನೂ ನಾಚಿಸುವಂಥ ಸ್ಟೇ ಹೋಂ ಕೃಷ್ಣ ಸನ್ನಿಧಿಯಲ್ಲಿದೆ. ಅದ್ಭುತ ನಿಸರ್ಗಧಾಮವಿದು. ವೈದ್ಯರೂ ಸೇರಿದಂತೆ ಶ್ರೀಮಂತರು ತಮ್ಮ ಪೋಷಕರನ್ನು ಈ ಸ್ಟೇ ಹೋಂನಲ್ಲಿ ಬಿಟ್ಟಿದ್ದಾರೆ. ಪ್ರತ್ಯೇಕ ಹೈಟೆಕ್ ಕೋಣೆಗಳ ವ್ಯವಸ್ಥೆ, ಗ್ರಂಥಾಲಯ, ಯಾವುದೇ ಸ್ಟಾರ್ ಹೋಟೆಲ್‌ನಲ್ಲೂ ಇಲ್ಲದಂಥ ಕಿಚನ್ ಇದೆ. ಸ್ಟೇ ಹೋಂ ಊಟವನ್ನೇ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ನೀಡಲಾಗುತ್ತದೆ. ಸ್ಟೇ ಹೋಂಗಳಲ್ಲಿ ಇಂತಿಷ್ಟೇ ಹಣವೆಂದು ನಿಗದಿ ಮಾಡಿಲ್ಲ, ಇದು ಲಾಭದ ಉದ್ದೇಶ ಅಲ್ಲವೇ ಅಲ್ಲ. ಸೌಲಭ್ಯದ ಮಹತ್ವ ಗೊತ್ತಾಗಲಿ ಎಂಬ ಕಾರಣಕ್ಕೆ ಹಣ ನಿಗದಿ ಮಾಡಲಾಗಿದೆ.

ಪ್ರತ್ಯೇಕ ಆಸ್ಪತ್ರೆ ಸೌಲಭ್ಯ
ಕೃಷ್ಣಸನ್ನಿಧಿಯ ವಿಶ್ರಾಂತಿಧಾಮದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ, ವೈದ್ಯರು ಇದ್ದಾರೆ. ಇನ್ನು ಸನ್ನಿಧಿಯ ನಿರ್ಮಾತೃ ಡಾ. ನಾಗರತ್ನ ಸುಯಜ್ಞ ಜೋಶಿ, ಖಾಸಗಿ ನಸಿಂರ್ಗ್ ಹೋಂ ಒತ್ತಡದ ನಡುವೆಯೂ ನಿತ್ಯ 3-4 ಗಂಟೆ ಕೃಷ್ಣಸನ್ನಿಧಿಯಲ್ಲಿ ಕಳೆಯುತ್ತಾರೆ. ಸನ್ನಿಧಿಯಲ್ಲಿಯೇ ಸಾವಯವ ಕೃಷಿಯಲ್ಲಿ ಕಾಯಿಪಲ್ಲೆಗಳನ್ನು ಬೆಳೆದು, ವೃದ್ಧರ ಊಟಕ್ಕೆ ಬಳಸಲಾಗುತ್ತದೆ.

ಆಶ್ರಯ  ಕಲ್ಪನೆ
ಆಶ್ರಯ ರೂಪದಲ್ಲಿ ಅನಾಥರಿಗೆ ನೆರವಾಗುವ ನಿಟ್ಟಿನಲ್ಲಿ ಎಎಸ್‌ಎಂ ಟ್ರಸ್ಟ್ ವೃದ್ಧರು, ಅನಾಥರ ಬಗ್ಗೆ ಮಾಹಿತಿ ಸಿಕ್ಕರೆ, ಅವರನ್ನು ಕರೆತಂದು ಆರೋಗ್ಯ ಸೇವೆ ನೀಡಿ, ಆಶ್ರಯದಲ್ಲಿ ನೆಲೆ ಕೊಡುತ್ತಾರೆ. ಗುಣಮುಖರಾದ ನಂತರ ಅವರಿಷ್ಟದಂತೆ ಕಳುಹಿಸಿ ಕೊಡುವ ವ್ಯವಸ್ಥೆಯೂ ಇಲ್ಲಿದೆ. ಸೀನಿಯರ್ ಸಿಟಿಜನ್ ಸೆಲ್ ವ್ಯವಸ್ಥೆ ಇದ್ದು, ಮುಪ್ಪಿನಾವಸ್ಥೆಯಲ್ಲಿ ಮಕ್ಕಳು ಸೇರಿದಂತೆ ಇತರರಿಂದ ಅನಗತ್ಯ ಆಸ್ತಿಯ ಹಾಗೂ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರೆ, ಅವರು ಈ ಸೆಲ್‌ಗೆ ಮನವಿ ಸಲ್ಲಿಸಿದರೆ, ಪ್ರಕರಣವು ಸುಸಂಬದ್ಧವಾಗಿದ್ದರೆ, ಅಗತ್ಯ ನೆರವು ನೀಡಲಾಗುತ್ತದೆ. ಎಲ್ಲಾ ವೆಚ್ಚವನ್ನೂ ಸೆಲ್ ಭರಿಸುತ್ತದೆ. ಇನ್ನು ಹೆಲ್ಪ್‌ಲೈನ್ ವ್ಯವಸ್ಥೆ ಇದ್ದು, ಮಕ್ಕಳು ದೂರದ ಊರಿನಲ್ಲಿರುತ್ತಾರೆ ಅಥವಾ ಮನೆಯಲ್ಲಿ ವೃದ್ಧರು ಮಾತ್ರ ಇರುತ್ತಾರೆ, ಅಂಥ ಸಂದರ್ಭದಲ್ಲಿ ಹೆಲ್ಪ್‌ಲೈನ್ ಸೆಲ್‌ಗೆ ವರ್ಷಕ್ಕೆ ಕನಿಷ್ಠ ಮೊತ್ತದ ಹಣವನ್ನು ನೀಡಿ ಸದಸ್ಯರಾದರೆ, ವೃದ್ಧರನ್ನು ಆಸ್ಪತ್ರೆ ಸೇವೆ ಅಥವಾ ವೈದ್ಯರನ್ನೇ ಮನೆಗೆ ಕರೆದುಕೊಂಡು ಹೋಗಿ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಪ್ರತ್ಯೇಕ ಆ್ಯಂಬುಲೆನ್ಸ್ ಸೇವೆ ಇದೆ. ಆದರೆ ಇದು ಕೇವಲ ವೃದ್ಧರಿಗೆ ಮಾತ್ರ.
ಇನ್ನು ಸಿದ್ಧಾರ್ಥ ಗ್ರಾಮೀಣ ಆರೋಗ್ಯ ಸಂಚಾರಿ ಚಿಕಿತ್ಸಾಲಯವಿದ್ದು, ಬಳ್ಳಾರಿ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯ ವೃದ್ಧರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಕನಿಷ್ಠ ವೈದ್ಯಕೀಯ ಸೇವೆ ಒದಗಿಸುತ್ತದೆ. ಕೇವಲ ವೈಯಕ್ತಿಕ ಜೀವನ, ಶ್ರೀಮಂತಿಕೆಗೆ ಮಹತ್ವ ಕೊಡುವ ಇಂದಿನ ದಿನಗಳಲ್ಲಿ ಡಾ. ನಾಗರತ್ನ ಸುಯಜ್ಞ ಜೋಶಿ (ಮೊ. 98440 85830) ಅವರ ಸೇವೆ ಮೆಚ್ಚುವಂಥದ್ದು. ಸಿನಿಯರ್ ಸಿಟಿಜನ್ ಸೆಲ್ ಸಂಪರ್ಕ ಸಂಖ್ಯೆ: 08392- 270777.

- ಶಶಿಧರ ಮೇಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.