ಸಾಧನೆ

ದೇವಕಾರ್

ದೇವಕಾರ್
Published On :

ನಿಮ್ಮ ಓಡಾಟಕ್ಕೆ ಅತ್ಯುತ್ತಮ ಕಾರು ಬೇಕೆಂದರೆ ಜಪಾನ್ ಅಥವಾ ಕೊರಿಯಾ ಕಂಪನಿಗಳ ಕ್ಯಾಟ್ಲಾಗ್ ತರಿಸಿಕೊಳ್ಳುತ್ತೀರಿ. ನಿಮ್ಮೂರಿನ ದೇವರಿಗೆ ಲೇಟಸ್ಟ್ ಮಾಡೆಲ್ ರಥ ಬೇಕಿದ್ದರೆ ಎಲ್ಲಿಗೆ ಹೋಗುತ್ತೀರಿ? ಮುದ್ದೇಬಿಹಾಳಕ್ಕೆ ಬನ್ನಿ. ಅಲ್ಲಿ ಪರಶುರಾಮ ಪವಾರ್ ಹಾಗೂ ಅವರ ಸಹೋದರರರು ಕಬ್ಬಿಣದ ರಥಗಳ ನಿರ್ಮಾಣದಲ್ಲಿ ನಿಷ್ಣಾತರಾಗಿದ್ದಾರೆ. ಜಪಾನಿ ಹೋಂಡಾ ಹಾಗೂ ಕೊರಿಯಾದ ಹುಂಡೈ ಕಾರುಗಳಗೆ ಬೇಡಿಕೆ ಹೆಚ್ಚುತ್ತಿರುವಂತೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದ ಪವಾರ ಅವರ ರಥಗಳಿಗೂ ಬೇಡಿಕೆ ಹೆಚ್ಚುತ್ತಿದೆ.

ಪವಾರ ಸಹೋದರರಿಗೆ ರಥ ನಿರ್ಮಾಣದ ಶಾಸ್ತ್ರ ವಿಧಿಗಳು ಗೊತ್ತಿವೆ. ಕಬ್ಬಿಣದ ಸರಕುಗಳನ್ನು ಕತ್ತರಿಸುವ, ಬೆಸೆಯುವ, ಕಾಯಿಸಿ ಬಾಗಿಸುವ ವಿದ್ಯೆಯಲ್ಲೂ ಸಿದ್ಧಹಸ್ತರು. ಪರಶುರಾಮ ಪವಾರ ಬೆಳಗಾವಿಯ ಕೈಗಾರಿಕಾ ವಿಸ್ತರಣಾ ಘಟಕದಲ್ಲಿ ತರಬೇತಿ ಪಡೆದಿದ್ದು, 1990ರಲ್ಲಿ ಮುದ್ದೇಬಿಹಾಳದಲ್ಲಿ ನರೇಂದ್ರ ವೆಲ್ಡಿಂಗ್ ವರ್ಕ್‌ಶಾಪ್ ಆರಂಭಿಸಿ ಅಲ್ಲಿಯೇ ರಥ ನಿರ್ಮಾಣದಲ್ಲಿ ತೊಡಗಿದರು. ತಲೆ ತಲಾಂತರಗಳಿಂದ ಬಂದ ಕಮ್ಮಾರಿಕೆಯನ್ನು ಮೂಲವಾಗಿಟ್ಟುಕೊಂಡು ಮನೆಗೆ ಬೇಕಾಗುವ ಕಿಟಕಿ, ಬಾಗಿಲುಗಳ ಉಪಕರಣ ಮಾಡುತ್ತಿದ್ದರು. ನೆರಬೆಂಚಿ ಗ್ರಾಮದ ಎನ್.ಎಸ್.ಪೋಲೇಶಿ ಅವರ ಮಾರ್ಗದರ್ಶನದಿಂದ ಅಲ್ಲೇ ಸಮೀಪದ ಯಚ್ಚರೇಶ್ವರದೇವರ ರಥವನ್ನು ಕಬ್ಬಿಣದಲ್ಲಿ ನಿರ್ಮಿಸಿದರು. ಅದು ಕ್ಲಿಕ್ಕಾಯಿತು. ಹಿಂದೆಲ್ಲಾ ತಯಾರಿಸುತ್ತಿದ್ದ ರಥಗಳಿಗೆ ಕಟ್ಟಿಗೆಯ ವೆಚ್ಚವೇ ದುಬಾರಿ ಎಂದು ಅವರಿವರು ಕಬ್ಬಿಣದ ರಥವನ್ನೇ ಮೆಚ್ಚಿಕೊಂಡರು.

ಪವಾರ್ ಸಹೋದರರು ದೇವಾಲಯ ನಿರ್ಮಾಣದಂತೆ ಮೊದಲು ದ್ರಾವಿಡ ಶೈಲಿಯಲ್ಲೋ ಅಥವಾ ನಾಗರ ಶೈಲಿಯಲ್ಲೋ ರಥದ ತಳವನ್ನು ನಿರ್ಮಿಸುತ್ತಾರೆ. ಎರಡನೇ ಭಾಗ ಆಧಿಷ್ಟಾನ, ಮೂರನೇ ಭಾಗ ಮಂಟಪ ಮತ್ತು ನಾಲ್ಕನೇಯದು ಕಳಶ, ಎಲ್ಲವೂ ಶಾಸ್ತ್ರೋಕ್ತವಾಗಿ ಆಗುತ್ತದೆ. ಕಬ್ಬಿಣ, ಹಿತ್ತಾಳೆ, ಕಟ್ಟಿಗೆಯ ಅಲಂಕಾರಿಕ ವಸ್ತುಗಳನ್ನು ಬಳಸಿ, ಕಲಾತ್ಮಕವಾಗಿ ರಥಗಳನ್ನು ನಿರ್ಮಿಸುತ್ತಾರೆ. ಗ್ರಂಥೋಕ್ತಿ ಪ್ರಕಾರ ಐದು ರಥಗಳ ಮಾದರಿಯಲ್ಲಿ ಯಾವುದು ಬೇಕೋ ಅದನ್ನು ನಿರ್ಮಿಕೊಡುತ್ತಾರೆ. ವಿನ್ಯಾಸ ಕೆಲವೊಮ್ಮೆ ರಥದ ಗಾತ್ರ, ಚಕ್ರಗಳನ್ನು ಆಧರಿಸುತ್ತದೆ. ಮುಖ್ಯವಾಗಿ ಚಕ್ರಗಳ ಎತ್ತರದ ಆಧಾರದ ಮೇಲೆ ರಥಗಳನ್ನು ನಿರ್ಮಿಸಲಾಗುತ್ತದೆ ಎಂದು ರಥಶಿಲ್ಪಿ ಪರಶುರಾಂ ಪವಾರ ವಿವರಿಸುತ್ತಾರೆ.
ಪವಾರ್ ಸಹೋದರರು ಇದುವರೆಗೆ 152ಕ್ಕೂ ಅಧಿಕ ರಥಗಳನ್ನು ನಿರ್ಮಿಸಿದ್ದು, ಇನ್ನೂ ಹತ್ತು ರಥಗಳ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ. ಒಂದು ರಥ ಸಂಪೂರ್ಣವಾಗಿ ಸಿದ್ಧಪಡಿಸಲು ಕನಿಷ್ಠ ಹತ್ತು ಮಂದಿ ಕೆಲಸಗಾರರೊಂದಿಗೆ ಎರಡು ತಿಂಗಳ ಕಾಲ ನಿರಂತರವಾಗಿ ಶ್ರಮಿಸುತ್ತಾರೆ.

- ಪ್ರವೀಣರಾಜು ಸೊನ್ನದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.