ಮುಸ್ಸಂಜೆ ಯಾಕಾಗಿದೆ?
ಧೋ ಎಂದು ಸುರಿಯುವ ಮಳೆ ಹೊರಗಡೆ, ತಣ್ಣನೆ ಗಾಳಿ ಒಳಗಡೆ, ಎಷ್ಟು ಹೊದಿಕೆ ಹೊದ್ದುಕೊಂಡರೂ,...

ಧೋ ಎಂದು ಸುರಿಯುವ ಮಳೆ ಹೊರಗಡೆ, ತಣ್ಣನೆ ಗಾಳಿ ಒಳಗಡೆ, ಎಷ್ಟು ಹೊದಿಕೆ ಹೊದ್ದುಕೊಂಡರೂ, ಎಲ್ಲಿಂದಲೋ ತೂರಿಬರುವ ಗಾಳಿಯಿಂದ ದೇಹದಲ್ಲೆಲ್ಲಾ ಕಂಪನ, ಕೊನೆಗೆ ವೈದ್ಯರು ಬಂದು ಇಂಜೆಕ್ಷನ್ ನೀಡಿದಾಗಲೇ ದೇಹ ಹದ್ದುಬಸ್ತಿಗೆ ಬರುವುದು. ಇದು ಮಳೆಗಾಲದಲ್ಲಿ ವಯೋವೃದ್ಧರು ಅನುಭವಿಸುವ ಪರಿ. ಮನೆಯಲ್ಲಿ ವಯಸ್ಸಾದವರಿದ್ದಾರೆಂದರೆ, ಅವರ ಬಗ್ಗೆ ಮಳೆಗಾಲದಲ್ಲಿ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನಾಹುತ ಖಂಡಿತ.
ಮುಸ್ಸಂಜೆ ಮಾತು
ಸಾಮಾನ್ಯವಾಗಿ ವಯಸ್ಸಾದವರಿಗೆ ಮಾತುಗಾರಿಕೆ ಹೆಚ್ಚು. ತಮ್ಮ ಕುಟುಂಬದ ಸದಸ್ಯರೊಂದಿಗೆ ಹರಟುವುದಲ್ಲದೆ, ಹಳೆಯ ಸ್ನೇಹಿತರೊಂದಿಗೂ ಸಂಭಾಷಣೆ ನಡೆಸಬೇಕೆನ್ನುವ ಆಸೆ ಜಾಸ್ತಿ ಇರುತ್ತದೆ. ಆದುದರಿಂದ ಸಂಜೆಯ ವೇಳೆ ತಮ್ಮ ಸ್ನೇಹಿತರನ್ನು ಕಾಣಲೆಂದು ಅವರುಗಳ ಮನೆಗೋ ಅಥವಾ ಪ್ರತಿದಿನ ಮೀಟ್ ಮಾಡುತ್ತಿದ್ದ ಸ್ಥಳಕ್ಕೋ ನಿತ್ಯದಂತೆ, ಮಳೆಗಾಲದಲ್ಲಿಯೂ ಸ್ವಲ್ಪ ಮಳೆ ನಿಂತರೆ ಸಾಕು, ಛತ್ರಿಯನ್ನು ತೆಗೆದುಕೊಂಡು ಹೊರಟೇಬಿಡುತ್ತಾರೆ. ಇಂತಹ ಸಮಯದಲ್ಲಿ ಇವರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಹೀಗೆ ಹೊರಗಡೆ ಹೋಗುವಾಗ ಅವರಿಗೆ ಬೇಕಾಗುವಂತಹ ಬೆಚ್ಚಗಿನ ಸ್ವೆಟರ್, ಟೋಪಿಗಳನ್ನು ನೀಡಲು ಮರೆಯದಿರಿ. ಅದೇ ರೀತಿಯಾಗಿ ವಯಸ್ಸಾದವರನ್ನು ಮನೆಯಿಂದ ಹೊರಗಡೆ ಹೋಗದಂತೆ ಕಟ್ಟಾಜ್ಞೆಯನ್ನು ಎಂದಿಗೂ ನಿಷ್ಠೂರವಾಗಿ ನೀಡಬೇಡಿ. ನಿಧಾನವಾಗಿ ತಿಳಿಹೇಳಿ.
ಆಹಾರ ಕ್ರಮ
ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ವಿಳಂಬವಾಗಿ ಆಗುತ್ತದೆ. ಆದುದರಿಂದ ವಯಸ್ಸಾದವರಿಗೆ ನೀಡುವ ಆಹಾರ, ಸುಲಭವಾಗಿ ಜೀರ್ಣವಾಗುವ, ಹೆಚ್ಚು ಪೋಷಕಾಂಶಗಳನ್ನು ಹೊಂದಿರುವಂತೆ ಇರಬೇಕು. ದೇಹಕ್ಕೆ ಮುಖ್ಯವಾಗಿ ಬೇಕಾಗುವ 'ಡಿ' ಜೀವಸತ್ವ ಹಾಗೂ ಕ್ಯಾಲ್ಸಿಯಂ ಪ್ರಮಾಣ ದೊರಕುವಂತಹ ಆಹಾರವನ್ನು ನೀಡಬೇಕು.
ಕಾಫಿ-ಟೀ ಬೇಡ
ತಣ್ಣನೆಯ ಗಾಳಿಗೆ ದೇಹ ಬೆಚ್ಚಗಿರುವ ಕಾಫಿ ಅಥವಾ ಟೀಯನ್ನು ಪದೇಪದೆ ಕುಡಿಯುವಂತೆ ಮಾಡುತ್ತದೆ. ಹೆಚ್ಚು ಕಾಫಿ ಅಥವಾ ಟೀ ಸೇವನೆಯಿಂದ ನಿದ್ರಾಹೀನತೆ, ಹೈಪರ್ ಆ್ಯಸಿಡಿಟಿ ತೊಂದರೆಗಳು ಪ್ರಾರಂಭವಾಗುತ್ತವೆ. ಇದರ ಬದಲಾಗಿ ಮನೆಯಲ್ಲಿಯೇ ತಯಾರಿಸಿದಂತಹ ಕಷಾಯವನ್ನು ನೀಡಿದರೆ ದೇಹದಲ್ಲಿ ಶಕ್ತಿ ವೃದ್ಧಿಸುತ್ತದೆ.
ಅಜೀರ್ಣ-ಮಲಬದ್ಧತೆ
ಮಳೆಗಾಲದಲ್ಲಿ ಅಜೀರ್ಣ, ಮಲಬದ್ಧತೆ ಸರ್ವೇಸಾಮಾನ್ಯ. ಹಣ್ಣುಗಳ ಸೇವನೆ ದೇಹಕ್ಕೆ ತಂಪು ನೀಡಿದರೂ, ಇವುಗಳನ್ನು ಸೇವಿಸಲು, ವೃದ್ಧರು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಸಾಮಾನ್ಯವಾಗಿ ಮಲವಿಸರ್ಜನೆಯನ್ನು ಎರಡು ದಿನಗಳಿಗೊಮ್ಮೆ ಮುಂದೂಡುತ್ತಾರೆ. ಇಂತಹ ಸಂದರ್ಭದಲ್ಲಿ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿ, ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ನೀಡಬೇಕು.
ಧೂಮಪಾನ-ಮದ್ಯಪಾನ
ವೃದ್ಧಾಪ್ಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಆದುದರಿಂದ ಧೂಮಪಾನ, ಮದ್ಯಪಾನವನ್ನು ಮಾಡಿದರೆ ದೇಹವು ರೋಗಗಳ ಆಗರವಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ದೇಹ ಚಳಿಯಿಂದ ಮರಗಟ್ಟಿದಾಗ ಇವು ಬೇಕೆನಿಸುತ್ತದೆ. ಆದರೆ ಇವುಗಳಿಂದ ದೇಹಕ್ಕಾಗುವ ಹಾನಿ ಅಪಾರ. ಹಾಗೆಂದುಕೊಂಡು ಒಮ್ಮೆಲೇ ನಿಲ್ಲಿಸಿಬಿಟ್ಟರೆ ವೃದ್ಧಾಪ್ಯದಲ್ಲಿ ತುಂಬಾ ಕಷ್ಟವಾಗುತ್ತದೆ. ಆದುದರಿಂದ ಹಂತಹಂತವಾಗಿ ಇವುಗಳಿಂದ ದೂರವಿರಲು ಪ್ರಯತ್ನಿಸಬೇಕು.
ತಾಂಬೂಲ ಸೇವನೆ
ಕೆಲವರು ಮಧ್ಯಾಹ್ನ, ರಾತ್ರಿಯ ಊಟವಾದ ಬಳಿಕ ತಾಂಬೂಲ ಸೇವಿಸುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಅಡಕೆ, ವೀಳ್ಯದೆಲೆ ಹಾಗೂ ಸುಣ್ಣ ಇವುಗಳ ಸ್ವಲ್ಪ ಪ್ರಮಾಣದ ಸೇವನೆ ದೇಹಕ್ಕೆ ಒಳ್ಳೆಯದು. ಆದರೆ ಇದರ ಜತೆ ತಂಬಾಕು ಸೇವನೆ ಹಾನಿಕರ. ಕೆಲವರು ಹಲ್ಲು ಗಟ್ಟಿಯಾಗಿರದ ಕಾರಣ ಅಥವಾ ಕೃತಕ ಹಲ್ಲುಗಳನ್ನು ಅಳವಡಿಸಿಕೊಂಡಿರುವುದರಿಂದ ಇವನ್ನೆಲ್ಲ ಕುಟ್ಟಿ ಪುಡಿಮಾಡಿ ತಿನ್ನುತ್ತಾರೆ. ಹೀಗೆ ತಿನ್ನುವ ಅಭ್ಯಾಸ ದಿನಕ್ಕೆರಡು ಬಾರಿಯಿದ್ದರೆ ಅಪಾಯವಿಲ್ಲ.
ರಸ್ತೆ, ಚರಂಡಿ ದಾಟುವಾಗ ಎಚ್ಚರ
ಮಳೆಗಾಲದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ನೀರು ನಿಂತು, ರಸ್ತೆ ಮತ್ತು ಚರಂಡಿ ನಡುವಿನ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಪ್ರತಿದಿನ ಓಡಾಡುವ ಸ್ಥಳವೆಂದು, ಕಾಲಿಟ್ಟರೆ ಅಪಾಯವಂತೂ ಖಂಡಿತ. ಆದುದರಿಂದ ಮಳೆಗಾಲದಲ್ಲಿ ಓಡಾಡುವಾಗ ಜಾಗೃತೆಯಿಂದಿರಬೇಕು.
ಮರದ ಆಶ್ರಯ ಅಪಾಯ
ಕೆಲವೊಮ್ಮೆ ಮಳೆ ಸಂಪೂರ್ಣವಾಗಿ ನಿಂತಿದೆಯೆಂದು, ಛತ್ರಿ ಅಥವಾ ರೇನ್‌ಕೋಟ್ ಇಲ್ಲದೆ ಮನೆಯಿಂದ ಹೊರಗೆ ಹೋದಾಗ, ಆಕಸ್ಮಿಕವಾಗಿ ಮಳೆ ಬಂದರೆ ಮರವನ್ನು ಆಶ್ರಯಿಸುತ್ತಾರೆ. ಇದು ಅಪಾಯವನ್ನು ಆಹ್ವಾನಿಸಿದಂತೆ.
ಆರೋಗ್ಯ ತಪಾಸಣೆ
ಮಳೆಗಾಲದಲ್ಲಿ ವಯಸ್ಸಾದವರಿಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆದುದರಿಂದ ಆಗಾಗ್ಗೆ ನಿಮ್ಮ ಕುಟುಂಬ ವೈದ್ಯರಿಂದ ಸಂಪೂರ್ಣ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಸೆಲ್‌ಫೋನ್ ಜತೆಗಿರಲಿ
ಮಳೆ ಸುರಿಯುತ್ತಿರುವಾಗ ವಯಸ್ಸಾದವರು ಮನೆಯಲ್ಲಿ ಒಬ್ಬರೇ ಇರುವುದು ಸರಿಯಲ್ಲ. ಅಕಸ್ಮಾತ್ ಆರೋಗ್ಯದಲ್ಲಿ ಏರುಪೇರಾದಾಗ ಅಕ್ಕಪಕ್ಕದ ಮನೆಯವರನ್ನು ಕೂಗಿ ಕರೆದರೂ ಕೇಳುವುದಿಲ್ಲ. ಆದುದರಿಂದ ಮೊಬೈಲ್ ಬಳಿಯಲ್ಲಿಟ್ಟುಕೊಂಡಿರಿ. ಮೊಬೈಲ್ ಬಳಸುವುದನ್ನು ತಿಳಿದುಕೊಂಡಿದ್ದರೆ ಆಪತ್ಕಾಲದಲ್ಲಿ ಸಹಾಯಕ್ಕೆ ಬರುವುದು. ಬಹುತೇಕ ವೃದ್ಧರು ಮಳೆಗಾಲದಲ್ಲಿ ಬೇರೆ ಸಮಯದಲ್ಲಿರುವುದಕ್ಕಿಂತ ಹೆಚ್ಚು ಅಶಕ್ತರಾಗಿರುತ್ತಾರೆ. ಆದುದರಿಂದ ಅವರ ಬಗ್ಗೆ ಕಾಳಜಿ ಅತ್ಯಗತ್ಯ ಇಲ್ಲದಿದ್ದರೆ, ಅನವಶ್ಯಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಆದುದರಿಂದ ಎಚ್ಚರಿಕೆ ಅಗತ್ಯ.
- ಭಾಗ್ಯ ನಂಜುಂಡಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


