ಸಾಧನೆ

ಹಿರಿಯರ ಕಿರಿಕಿರಿ

ಹಿರಿಯರ ಕಿರಿಕಿರಿ
Published On :

ವಯಸ್ಸು 60 ದಾಟಿತೆಂದರೆ ಮನಸ್ಸಿನಲ್ಲಿ ಆತಂಕ. ನಾವಿನ್ನು ಸೀನಿಯರ್ ಸಿಟಿಜನ್ ಅರ್ಥಾತ್ ಹಿರಿಯ ನಾಗರಿಕರು. ಮಕ್ಕಳನ್ನು ಓದಿಸಿ ಮದುವೆ ಮಾಡಿ ಕೆಲಸದಿಂದ ನಿವೃತ್ತಿಗೊಳ್ಳುವ ಸಮಯದಲ್ಲಿ ಇಂಥ ಆತಂಕಗಳು ಕಾಡುತ್ತಲೇ ಇರುತ್ತವೆ. ಇಲ್ಲಿಯವರೆಗೆ ದುಡಿದದ್ದಾಯ್ತು...ಮುಂದೇನು?
ದಿನದ 24 ಗಂಟೆಯೂ ಸಾಲದು ಎಂಬಂತೆ ದುಡಿವ ಮಕ್ಕಳ ನಡುವೆ ನಮಗೊಂದಿಷ್ಟು ಸಮಯ ಕೊಡಿ ಎಂದು ಕೇಳಲು ಚಡಪಡಿಸುತ್ತಿರುವ ಹಿರಿಜೀವಗಳು ನಮ್ಮೆಡೆಯಲ್ಲಿದ್ದಾರೆ. ಅದುವರೆಗೂ ಹೊಟ್ಟೆಪಾಡಿಗೆ ದುಡಿದು ಸಂಪಾದಿಸಿ, ಕೊನೆಗೊಂದು ದಿನ ನಿವೃತ್ತಿ ಹೊಂದಿ ಹಿರಿಯ ನಾಗರಿಕ ಎಂದು ಕರೆಸಿಕೊಳ್ಳುವಾಗ ಉಂಟಾಗುವ ತಳಮಳ ಇದೆಯಲ್ಲಾ ಅದು ಪದಗಳಿಗೆ ನಿಲುಕದ್ದು. ನಿವೃತ್ತಿ ಹೊಂದಿದ ಕೆಲವು ತಿಂಗಳವರೆಗೆ ಬದುಕು ಆರಾಮವಾಗಿದೆ ಎಂದೆನಿಸುತ್ತದೆ. ಆದರೆ ಬರಬರುತ್ತಾ ಈ ಆರಾಮವೂ ಹಿತವೆನಿಸುವುದಿಲ್ಲ. ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಸ್ನೇಹಿತರ ಒಡನಾಟದ ಕೊರತೆ, ಹಣಕಾಸಿನ ತೊಂದರೆ ಎಲ್ಲವೂ ಕಾಡತೊಡಗುತ್ತದೆ. ಈ ಎಲ್ಲ ಸಮಸ್ಯೆಗಳ ಜತೆ ತಾನು ಒಂಟಿ ಎಂಬ ಭಾವನೆ, ಕೀಳರಿಮೆಯೂ ಹುಟ್ಟಿಕೊಳ್ಳುತ್ತದೆ. ಇದೆಲ್ಲಾ ವೃದ್ಧಾಪ್ಯದ ವೈಯಕ್ತಿಕ ಸಮಸ್ಯೆಗಳಾಗಿದ್ದರೆ ಇನ್ನೂ ಕೆಲವು ಸಾಮಾಜಿಕ ಸಮಸ್ಯೆಗಳು ಇವರನ್ನು ಕಾಡುತ್ತವೆ.
ಬೆಂಗಳೂರಿನ ಹಿರಿಯ ನಾಗರಿಕರಿಗಿರುವ ಸಮಸ್ಯೆಗಳೇನು ಎಂದು ಅವರನ್ನೇ ಮಾತನಾಡಿಸಿದಾಗ ಸಿಕ್ಕಿದ ಪ್ರತಿಕ್ರಿಯೆಗಳು ಹೀಗಿವೆ.
ಫುಟ್‌ಪಾತ್ ಸಮಸ್ಯೆ
ಬೆಂಗಳೂರಿನ ಫುಟ್‌ಪಾತ್‌ಗಳಲ್ಲಿ ಹೆಚ್ಚಿನವು ಅಪಾಯವನ್ನು ಆಹ್ವಾನಿಸುತ್ತವೆ. ದ್ವಿಚಕ್ರ ವಾಹನ ಸವಾರರು ಫುಟ್‌ಪಾತ್‌ಗಳ ಮೇಲೆ ಹತ್ತಿಯೇ ಮುನ್ನುಗ್ಗುತ್ತಿದ್ದರೆ, ಕೆಲವೊಂದು ಫುಟ್‌ಪಾತ್‌ಗಳಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತದೆ. ಅತ್ತ ರೋಡಿಗಿಳಿದು ನಡೆಯುವಂತಿಲ್ಲ, ಇತ್ತ ಫುಟ್‌ಪಾತ್‌ನಲ್ಲಿ ಸುರಕ್ಷಿತವಾಗಿ ಓಡಾಡುವಂತಿಲ್ಲ ಎಂಬ ಪರಿಸ್ಥಿತಿ. ಕೆಲವು ಕಡೆ ಫುಟ್‌ಪಾತ್ ಸ್ಲಾಬ್‌ಗಳು ಏರು ಪೇರಾಗಿದ್ದು ಅಪಾಯಕಾರಿಯಾಗಿವೆ.
ಆಟೋ ಕಾಟ
ನಾವು ವಯಸ್ಸಾದವರು ಆಟೋದವರಲ್ಲಿ 'ಬರ್ತೀರಾ?' ಎಂದರೆ ಹೆಚ್ಚಿನ ವರು ಒಪ್ಪುವುದೇ ಇಲ್ಲ. ಬಂದರೂ ಅಧಿಕ ದುಡ್ಡು ಕೇಳ್ತಾರೆ. ಪೊಲೀಸವರಿಗೆ ಹೇಳ್ತೀವಿ ಅಂದ್ರೂ ಹೋಗಿ, ಹೇಳ್ರಿ ಎಂದು ಧಿಮಾಕು ತೋರುವ ಆಟೋದವರೂ ಇದ್ದಾರೆ. ಒಂಟಿಯಾಗಿ ಹೋಗಬೇಕಾಗಿ ಬಂದಾಗ ನಾವೇನು ಮಾಡುವುದು? ಮೀಟರ್‌ಗಿಂತ ಜಾಸ್ತಿ ಬೆಲೆ ತೆತ್ತು ಪ್ರಯಾಣ ಮಾಡಬೇಕಾಗಿ ಬರುತ್ತದೆ.
ಇದಿಷ್ಟು ಪ್ರಯಾಣ ಸಮಸ್ಯೆಗಳಾದರೆ  ಕೆಲವೊಂದು ಸೌಲಭ್ಯಗಳ ಬಗ್ಗೆ ಹಿರಿಯ ನಾಗರಿಕರಿಗೆ ಗೊತ್ತೇ ಇರುವುದಿಲ್ಲ. ಅಂಥ ಸೌಲಭ್ಯಗಳಲ್ಲೊಂದು 80 ವರ್ಷ ಮೇಲ್ಪಟ್ಟವರಿಗೆ ನಿವೃತ್ತಿ ವೇತನದಲ್ಲಿ ಸಿಗುವ ಹೆಚ್ಚುವರಿ.
ನಿವೃತ್ತಿ ವೇತನದಲ್ಲಿ ಹೆಚ್ಚುವರಿ
ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಪ್ರಕಾರ 80ರಿಂದ ಮೇಲ್ಪಟ್ಟ ವಯಸ್ಸಿನವರಿಗೆ ನಿವೃತ್ತಿ ವೇತನದಲ್ಲಿ ಶೇ.20ರಷ್ಟು ಹೆಚ್ಚುವರಿ ನೀಡಲಾಗುತ್ತದೆ. ನಿವೃತ್ತಿ ವೇತನ ಪಡೆದುಕೊಂಡಿರುವ ಸಾಮಾನ್ಯ ಜನರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿಯೂ ಸಿಕ್ಕಿದ ಹಾಗೆ ಇಲ್ಲ. ಈ ಸೌಲಭ್ಯ ಪಡೆಯಬೇಕಾದರೆ ನಿವೃತ್ತಿ ವೇತನ ಪಡೆಯುವವರು (80 ವರ್ಷಕ್ಕಿಂತ ಮೇಲ್ಪಟ್ಟವರು) ಕರ್ನಾಟಕ ಸರ್ಕಾರದ ಹೊರಡಿಸಿದ ಆದೇಶದ ಪ್ರತಿಯೊಂದಿಗೆ  ಜಿಲ್ಲಾ ಪಿಂಚಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಮಾತ್ರ ಹೆಚ್ಚುವರಿ ನಿವೃತ್ತಿ ವೇತನ ಲಭಿಸುತ್ತದೆ. ಮಾಹಿತಿಯ ಕೊರತೆಯಿಂದಾಗಿ ಎಷ್ಟೋ ಜನರಿಗೆ ಸರ್ಕಾರದ ಈ ಆದೇಶದ ಬಗ್ಗೆ, ಹೆಚ್ಚುವರಿ ನಿವೃತ್ತಿ ವೇತನದ ಬಗ್ಗೆ ತಿಳಿದಿಲ್ಲ.
ಇಲ್ಲಿದೆ ಪರಿಹಾರ
ಸರ್ಕಾರಿ ಆದೇಶದ ಪ್ರತಿಯ ಜತೆ ಪೆನ್ಶನ್ ಬುಕ್‌ನ ಮೊದಲ ಪುಟದ ಪ್ರತಿ, ಪೆನ್ಶನ್ ನಂಬರ್, ಜನನ ದಿನಾಂಕ, ನಿವೃತ್ತಿ ಹೊಂದಿದ ದಿನಾಂಕ ಹಾಗೂ ಪೆನ್ಶನ್ ಪಡೆಯುತ್ತಿರುವ ಬ್ಯಾಂಕ್ ಖಾತೆ ಸಂಖ್ಯೆ ಎಲ್ಲವನ್ನೂ ಸವಿವರವಾಗಿ ಬರೆದ ಮನವಿ ಪತ್ರದ ಜತೆಗೆ ಅಗತ್ಯ ದಾಖಲೆಗಳ ಪ್ರತಿಯನ್ನು ಜಿಲ್ಲಾ ಪಿಂಚಣಿ ಅಧಿಕಾರಿಗಳಿಗೆ ಕಳುಹಿಸಿಕೊಟ್ಟರೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಪ್ರಸ್ತುತ ಸರ್ಕಾರಿ ಆದೇಶದ ಪ್ರತಿಯನ್ನು http://saanthvana.blogspot.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದು ಸರ್ಕಾರಿ ಸೌಲಭ್ಯವಾಗಿದ್ದರೆ ಕೆಲವೊಂದು ಖಾಸಗಿ ಸಂಘ ಸಂಸ್ಥೆಗಳು ಹಿರಿಯ ನಾಗರಿಕರಿಗಾಗಿ ಕೈಲಾದ ಸಹಾಯವನ್ನು ಮಾಡುತ್ತವೆ. ಉದಾಹರಣೆಗೆ ಹಿರಿಯ ನಾಗರಿಕರಿಗೆ ವೈದ್ಯಕೀಯ ಸಹಾಯ, 24x7 ಹೆಲ್ಪ್‌ಲೈನ್ ಸ್ವಯಂ ಸೇವಕರು, ಊಟದ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆಗಳೂ ಬೆಂಗಳೂರಿನಲ್ಲಿವೆ.
ಪ್ರಯಾಣದ ಸಮಸ್ಯೆ
ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯ ನಡುವೆ ಪ್ರಯಾಣ ಮಾಡುವುದೇ ತ್ರಾಸದಾಯಕ. ಹಿರಿಯ ನಾಗರಿಕರಿಗೆ ಬಸ್ ದರದಲ್ಲಿ ರಿಯಾಯಿತಿ ಕೊಡಲಾಗುತ್ತದೆ. ಅದನ್ನು ವೋಲ್ವೋ, ಬಿಗ್ 10 ಬಸ್‌ಗಳಿಗೂ ವಿಸ್ತರಿಸಬೇಕು. ಸಾಧಾರಣ ಬಸ್‌ಗಳಲ್ಲಿ ಎತ್ತರವಾದ ಮೆಟ್ಟಿಲುಗಳಿರುತ್ತವೆ, ಲಕ್ಷುರಿ ಬಸ್‌ಗಳಲ್ಲಿ ತಗ್ಗಾದ ಮೆಟ್ಟಿಲುಗಳಿರುವುದರಿಂದ ಹತ್ತಿ ಇಳಿಯೋಕೆ ಅನುಕೂಲವಾಗುತ್ತದೆ. ಇಂಥಾ ಬಸ್‌ಗಳಲ್ಲಿ ಪ್ರಯಾಣವೂ ಆರಾಮದಾಯಕವಾಗಿರುತ್ತದೆ.
ಇನ್ನು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಹಿರಿಯ ನಾಗರಿಕರಿಗೆ ಮೀಸಲಿರಿಸಿದ ಸೀಟುಗಳನ್ನು ಯಾರೂ ಬಿಟ್ಟುಕೊಡುವುದೇ ಇಲ್ಲ. ಕಂಡಕ್ಟರ್‌ಗಳು ಕೂಡಾ ಈ ಬಗ್ಗೆ ಗಮನ ಹರಿಸುವುದಿಲ್ಲ. ಹಿರಿಯ ನಾಗರಿಕರ ಸೀಟಿನಲ್ಲಿ ಕುಳಿತುಕೊಂಡವರು ನಿದ್ದೆ ಬಂದಂತೆ ನಟಿಸುತ್ತಾರೆ. ಎದ್ದೇಳಿ,  ಎನ್ನುವವರೆಗೆ ಸೀಟು ಬಿಟ್ಟು ಕದಲುವುದಿಲ್ಲ.


- ರಶ್ಮಿ ಕಾಸರಗೋಡು
    rashkasar@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.