ಸೆಂಟ್ ಪರ್ಸೆಂಟ್

ಸುಗಂಧದ್ರವ್ಯ ಬಳಸದ ಆತ ಎಲ್ಲಿಗೇ ಹೋದರೂ ಸೆಂಟ್ ಖರೀದಿಸಲು ಮರೆಯುವುದಿಲ್ಲ. ಮಾರು ಹೋಗುವುದು ಬಾಟಲಿಯ ಆಕಾರಕ್ಕೇ ಹೊರತು, ಅದರೊಳಗಿನ ದ್ರವ್ಯದ ಪರಿಮಳಕ್ಕೆ ಅಲ್ಲ.
ಆತನ ಬಳಿ ಬರೋಬ್ಬರಿ 80 ಸುಗಂಧದ್ರವ್ಯಗಳ ಬಾಟಲಿ ಇದೆ. ಅವನ್ನೆಲ್ಲ ಖರೀದಿಸಿ ಎಷ್ಟೋ ವರ್ಷಗಳೇ ಕಳೆದಿವೆ. ಆದರೂ ಒಮ್ಮೆಯೂ ಬಳಸಿಲ್ಲ. ಸೆಂಟ್ ಬಳಸುವ ಅಭ್ಯಾಸವೂ ಆತನಿಗಿಲ್ಲ. 'ಅಯ್ಯೋ ಮತ್ಯಾಕೆ ಖರೀದಿಸಿದ್ದು' ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ ಅಲ್ಲ? ಇಲ್ಲೇ ಇದೆ ಗಮ್ಮತ್ತು.
ಮೈಸೂರಿನ ಮಾನಸಗಂಗೋತ್ರಿಯಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದಲ್ಲಿ ದ್ವಿತೀಯ ಎಂ.ಎ. ವ್ಯಾಸಂಗ ಮಾಡುತ್ತಿರುವ ನೃಪತುಂಗನಿಗೆ ವಿಶಿಷ್ಟ ಆಕಾರಗಳ ಸುಗಂಧದ್ರವ್ಯ ಬಾಟಲಿ ಸಂಗ್ರಹವೇ ಹವ್ಯಾಸ. ವಕೀಲರಾಗಿದ್ದ ಪಿ.ಜಿ. ರವೀಂದ್ರ ಹಾಗೂ ಭಾನುಮತಿ ಅವರ ಪುತ್ರನೀತ. ಈತನ ಸಂಗ್ರಹದಲ್ಲಿ ಸುಗಂಧದ್ರವ್ಯ ಬಾಟಲಿಗಳಷ್ಟೇ ಅಲ್ಲ, ವಿದೇಶಗಳ ವೈನ್ ಬಾಟಲಿಗಳು,ಅಂಚೆ ಚೀಟಿಗಳು, ವಿವಿಧ ರಾಜಾಡಳಿತಗಳು ಚಲಾವಣೆಗೆ ತಂದಿದ್ದ ನಾಣ್ಯಗಳು, ಗರಡಿಯಲ್ಲಿ ಬಳಸುವ ಗುರಾಣಿ ಎಲ್ಲ ಇವೆ.
ನೃಪತುಂಗನ ಬಳಿ ಇರುವ ಸೆಂಟ್ ಬಾಟಲಿಗಳು ಕತ್ತಿ, ಐಫೆಲ್ ಟವರ್, ದ್ರಾಕ್ಷಿಯ ಗೊಂಚಲು, ರೈಲುಗಾಡಿ, ಶಂಖ, ಲೇಡಿ, ಆಮೆ, ಸಿಗಾರ್, ಸ್ಪೇನ್ ಉತ್ಪನ್ನ, ತುಟಿ, ಹೂವು, ಪೈನಾಪಲ್, ವಜ್ರದ ಆಕಾರಗಳು ಗಮನ ಸೆಳೆಯುತ್ತವೆ. ಪ್ರವಾಸ ಹೋದಾಗ ಅಲ್ಲಿ ಆಕರ್ಷಕ ವಿನ್ಯಾಸದ ಬಾಟಲಿ ಕಂಡರೆ ಕೊಂಡು ತರುತ್ತಾನೆ.
ವಿವಿಧ ದಶಕಗಳಲ್ಲಿ ಅಚ್ಚಾದ 300 ಅಂಚೆಚೀಟಿಗಳಿವೆ ಈತನ ಬಳಿ. ಹಾಗೆ ವಿವಿಧ ರಾಜರ ಆಳ್ವಿಕೆಯಲ್ಲಿ ಚಲಾವಣೆಗೆ ಬಂದ ಚಿನ್ನ, ಬೆಳ್ಳಿ, ಕಂಚಿನ ನಾಣ್ಯಗಳು ಈತನ ಸಂಗ್ರಹಣಾ ಡಬ್ಬದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ಗುಪ್ತ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿ ಚಿನ್ನದ ನಾಣ್ಯ ಇರುವುದು ಅಪರೂಪ. ಸಮುದ್ರ ತಟದಲ್ಲಿ ದೊರೆತ ಸಾಸಿವೆ ಗಾತ್ರದ ಬಲಮುರಿ ಶಂಖವೂ ವಿಶೇಷವಾಗಿದೆ.
ತನ್ನ ವಂಶಸ್ಥರು ಸಂಗ್ರಹಿಸಿರುವ ಹಳೆ ಕಾಲದ ವರ್ಣಚಿತ್ರಗಳು, ಜಲವರ್ಣ ಚಿತ್ರಗಳು 150ಕ್ಕೂ ಹೆಚ್ಚಿವೆ. ಅವೆಲ್ಲವನ್ನೂ ಸಂರಕ್ಷಿಸಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುವ ಉದ್ದೇಶ ಈತನಿಗಿದೆ. ಈ ಹವ್ಯಾಸಗಳೊಂದಿಗೆ ಉತ್ತಮ ಎನ್ಸಿಸಿ ಪಟುವೂ ಆಗಿರುವ ನೃಪತುಂಗನಿಗೆ ದೆಹಲಿಯ ಗಣರಾಜ್ಯೋತ್ಸವ ಪರೇಡ್ನಲ್ಲೂ ಪಾಲ್ಗೊಂಡಿದ್ದ ಹೆಮ್ಮೆ.
ಮಹಾರಾಣಿಯ ಮೆಚ್ಚುಗೆ ಕತ್ತಿ
ಇವರ ತಾತ ಮೈಸೂರು ಅರಮನೆಯಲ್ಲಿ ನೌಕರಿಯಲ್ಲಿದ್ದವರು. ಅವರು ನಿವೃತ್ತರಾದಾಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಧರ್ಮಪತ್ನಿ ಲಕ್ಷ್ಮಮ್ಮಣ್ಣಿ ಅವರು ಮೆಚ್ಚುಗೆ ಕತ್ತಿ ನೀಡಿದರು. ಹಾಗೆಯೇ ದೀಪಾಲೆ ಕಂಬದಲ್ಲಿ ಲಕ್ಷ್ಮಾಂಭಧರ್ಮ ಎಂದು ಹೆಸರು ಬರೆಯಿಸಿ ಕೊಟ್ಟಿದ್ದಾರೆ. ಅವೆರಡನ್ನು ಈಗಲೂ ಪ್ರತಿಷ್ಠೆಯ ಪ್ರತೀಕವಾಗಿ ನೃಪತುಂಗ ಸಂರಕ್ಷಿಸಿದ್ದಾರೆ.
ತನ್ನ ತಾತ, ಮುತ್ತಾತರು ನವರಾತ್ರಿಯಲ್ಲಿ ಆಚರಿಸಿಕೊಂಡು ಬಂದಿರುವ ಬೊಂಬೆ ಪ್ರದರ್ಶನವನ್ನು ಇಂದಿಗೂ ಮುಂದುವರಿಸಿದ್ದಾನೆ. ಪ್ರದರ್ಶನದಲ್ಲಿನ ಎಲ್ಲಾ ಬೊಂಬೆಗಳು ಹಳೆಯ ಕಾಲದ್ದಾಗಿವೆ. ಮೈಸೂರು ಅರಮನೆ, ಕೆ.ಆರ್. ವೃತ್ತ, ಸಿ.ಆರ್.ವೃತ್ತದ ಮಾದರಿಗಳು; ಆನೆ, ಒಂಟೆಯ ಬೊಂಬೆಗಳಿವೆ.
-ಜೆ. ಮಹದೇವ
-ಚಿತ್ರಗಳು: ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


