ಮಾಹಿತಿ ಕಣಜ

'ಇಂದಿನ ಸುದ್ದಿ ನಾಳೆ ರದ್ದಿ' ಎನ್ನುವ ಮಾತು ಪತ್ರಿಕೋದ್ಯಮದಲ್ಲಿ ಜನಜನಿತ. ಅಕ್ಕಿಆಲೂರಿನ ಯುವಕ ವಿನೋದ ಪುಠಾಣಿಕರ ಅವರಿಗೆ ಪತ್ರಿಕಾ ತುಣುಕುಗಳೇ ಮಹತ್ವದ್ದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಅವರನ್ನು ಸಂಪರ್ಕಿಸಿದರೆ ಸಾಕು, ಕರ್ನಾಟಕವೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಗಳು ಸಿಗುತ್ತವೆ.
ವಿನೋದರ ಸಂಗ್ರಹದಲ್ಲಿರುವ ಪತ್ರಿಕಾ ತುಣುಕುಗಳು ಆಸಕ್ತರು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಅಧ್ಯಯನ ಯೋಗ್ಯ ವಸ್ತುಗಳಾಗಿವೆ. ಇವರ 'ಸಮಗ್ರ ಕರ್ನಾಟಕ ದರ್ಶನ' ಎಂಬ ಕಡತದಲ್ಲಿ ಕರ್ನಾಟಕ ಏಕೀಕರಣ, ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಸಂಗೀತ, ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಕ್ರೀಡೆ, ರಾಜಕೀಯ ಮುಂತಾದ ಕ್ಷೇತ್ರಗಳ ಸಾಧಕರ ಮಾಹಿತಿ ಇದೆ.
ರಾಜ್ಯದ ಪ್ರಮುಖ ಪ್ರವಾಸಿ ತಾಣ, ಐತಿಹಾಸಿಕ ದೇಗುಲ, ಕೆರೆ, ನದಿಗಳು, ಮೇರುನಟರಾದ ಡಾ. ರಾಜಕುಮಾರ ಮತ್ತು ಡಾ.ವಿಷ್ಣುವರ್ಧನ್ ಕುರಿತಂತೆ ಸಮಗ್ರ ಮಾಹಿತಿ ಇದೆ. ಬೆಂಗಳೂರು ಕುರಿತು ಸಮಗ್ರ ಪರಿಚಯ ನೀಡುವ ವಿವರಗಳೂ ಇವೆ. ವಿಜ್ಞಾನ, ಕಲೆ, ಭೂಗೋಳ, ಖಗೋಳ, ಔಷಧ ಸಸ್ಯಗಳು, ಪ್ರಾಣಿ-ಪಕ್ಷಿ ಪ್ರಭೇದ, ಅದ್ಭುತ ವಿಚಾರಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 500ಕ್ಕೂ ಹೆಚ್ಚು ವಿಶೇಷ ವ್ಯಕ್ತಿಗಳ ಮಾಹಿತಿ, ರಾಜ್ಯ, ರಾಷ್ಟ್ರದ ದರ್ಶನ, ಸಾಹಿತಿಗಳ ಮಾಹಿತಿ ಹೀಗೆ ಹತ್ತು, ಹಲವು ವಿಷಯಗಳನ್ನು ಸಂಗ್ರಹಿಸಿದ್ದಾರೆ, ಅವೆಲ್ಲವನ್ನೂ ಉತ್ತಮ ಕಾರ್ಡ್ಗಳಿಗೆ ಅಂಟಿಸಿ ಜೋಪಾನ ಮಾಡುತ್ತಿದ್ದಾರೆ. ಈ ಪ್ರವೃತ್ತಿ ಮುಂದುವರಿದಿದೆ.
ಸದ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ, ಹಾನಗಲ್ಲ ತಾಲೂಕಿನ, 35ರ ಹರೆಯದ ವಿನೋದ, ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್. ಪ್ರವೃತ್ತಿ ಚಿಗುರಿದ್ದೂ ಬೆಂಗಳೂರಿಗೆ ಹೋದ ಮೇಲೆಯೇ ಎನ್ನುವ ವಿನೋದ ಅವರ ಮನೆ ಮಿನಿ ಮ್ಯೂಸಿಯಂನಂತಿದೆ.
ಮಾಹಿತಿ ಕಣಜ
ಗಾಂಧೀಜಿ ಕುರಿತಂತೆ ಸುಮಾರು 103 ದೇಶಗಳು ಅಂಚೆಚೀಟಿ ಬಿಡುಗಡೆ ಮಾಡಿವೆ. ವಿನೋದ ಬಳಿ 75 ದೇಶಗಳ ಅಂಚೆಚೀಟಿಗಳಿವೆ. ರೈಟ್ ಸಹೋದರರ ಹಿಂದಿನ ಅಂಚೆಚೀಟಿಯಿಂದ ಇಲ್ಲಿವರೆಗಿನ ದೇಶ ವಿದೇಶಗಳ ಅಂಚೆಚೀಟಿ ಸಂಗ್ರಹ ಇವರ ಬಳಿ ಇದೆ. 1948ರಿಂದ ಇಲ್ಲಿಯವರೆಗೆ ಭಾರತದಲ್ಲಿ ಬಿಡುಗಡೆಯಾದ ಅಂಚೆಚೀಟಿಗಳಿವೆ.
ಅಂಚೆ ಇತಿಹಾಸವನ್ನು ಹೇಳುವ ಪತ್ರಗಳು, ಅಂತರ್ದೇಶಿ ಪತ್ರಗಳು, ಲಕೋಟೆಗಳು, ಪರಿಸರ ಜಾಗೃತಿಯ ಅಂಚೆ ಚೀಟಿಗಳು, ಕರ್ನಾಟಕ ಇತಿಹಾಸ ಕುರಿತ ಅಂಚೆಚೀಟಿಗಳು ಎಲ್ಲವನ್ನೂ ಕಾಲಾನುಕ್ರಮದಲ್ಲಿ ಜೋಡಿಸಿ ವಿಂಗಡಿಸಿಟ್ಟಿದ್ದಾರೆ.
ಬ್ರಿಟಿಷ್ ಆಡಳಿತದಲ್ಲಿ 1835ರಿಂದ 1947ರವರೆಗೆ ಬಿಡುಗಡೆಯಾದ ನಾಣ್ಯಗಳು, 1950ರಿಂದ ಇಲ್ಲಿಯವರೆಗೆ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾದ ನಾಣ್ಯಗಳು, ನೋಟುಗಳು, ವಿದೇಶಿ ನಾಣ್ಯ, ನೋಟು, ವಿಶಿಷ್ಟ ಸಂಖ್ಯೆಯ (111111, 7777, 88888) ನೋಟುಗಳು, ವಿಜಯನಗರ ಅರಸ ಶ್ರೀಕೃಷ್ಣದೇವರಾಯನ ನಾಣ್ಯಗಳು, ಮೈಸೂರು ಒಡೆಯರು, ಹೈದರಲಿ, ಟಿಪ್ಪುಸಲ್ತಾನ್, ಹೈದರಾಬಾದಿನ ನಿಜಾಮರು, ಗ್ವಾಲಿಯರ್ ಸಿಂದ್, ರಾಜ ಚೋಳ, ಶಾತವಾಹನರ ಕಾಲದ ನಾಣ್ಯಗಳೂ ಇವರ ಸಂಗ್ರಹದಲ್ಲಿ ಸೇರಿವೆ.
ವೃತ್ತಿಯೊಂದಿಗೆ ಪ್ರವೃತ್ತಿಯ ಹೊಂದಾಣಿಕೆ ಮಾಡಿಕೊಂಡು ಹೊರಟಿರುವ ವಿನೋದರಿಗೆ ತಮ್ಮ ಸಂಗ್ರಹವನ್ನು ಪ್ರದರ್ಶಿಸುವ ಬಯಕೆ. ಸಂಘ-ಸಂಸ್ಥೆಗಳು ಅದಕ್ಕೆ ವೇದಿಕೆ ನಿರ್ಮಿಸಿಕೊಡಬೇಕಿದೆ.
ಎಲ್ಲರಂತೆ ಗುಂಪಿನೊಳಗೆ ಒಂದಾಗಲು ಇಷ್ಟವಿಲ್ಲ. ಹೀಗಾಗಿಯೇ ಈ ವಿಶಿಷ್ಟ ಹವ್ಯಾಸ ರೂಢಿಸಿಕೊಂಡೆ.
- ವಿನೋದ ಪುಠಾಣಿಕರ
-ಕಿರಣ ಮಾಸಣಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


