ಓಂಕಾರ

ಕಿರಾನಾ ಘರಾಣೆಯೊಂದಿಗೆ ಗುರುತಿಸಿಕೊಂಡಿದ್ದರೂ ನಾಗರಾಜ ಹವಾಲ್ದಾರ ಅವರ ಗಾಯನದಲ್ಲಿ ಜೈಪುರ-ಅತ್ರೌಲಿ ಹಾಗೂ ಗ್ವಾಲಿಯರ್ ಘರಾಣೆಗಳ ವಿಶಿಷ್ಟಪೂರ್ಣ ಅಂಶಗಳು ಕಂಡುಬರುತ್ತವೆ.
ಬೆಳಗಿನ ಜಾವದ ಎರಡು ಗಂಟೆ. ಈಶ್ವರನ ದೇವಸ್ಥಾನವದ ಆವರಣದಲ್ಲಿ ಸಪ್ತಸ್ವರಗಳ ನಿನಾದ ಅಲೆಅಲೆಯಾಗಿ ಹೊಮ್ಮುತ್ತಿದೆ. ಕಂಚಿನ ಕಂಠದಿಂದ ಗಂಭೀರ, ಸುಶ್ರಾವ್ಯ ಸಂಗೀತ ರಸಧಾರೆ ಉಕ್ಕುತ್ತಿದೆ. ದರಬಾರಿ ಕಾನ್ಹಡಾ, ನಂತರ ಮರಾಠಿಯಿಂದ ಕನ್ನಡಕ್ಕೆ ತರ್ಜುಮೆಯಾದ ಅಭಂಗ 'ನನ್ನ ತವರೂರೇ ಪಂಢರೀ...' ಹಾಡುತ್ತಿದ್ದಂತೆ ಶ್ರೋತ್ರಗಳ ನಿದ್ದೆಗುಂಗು ಮಂಗಮಾಯ.
ಹುಬ್ಬಳ್ಳಿ-ಧಾರವಾಡ ನಡುವೆ ಇರುವ ನವನಗರದಲ್ಲಿ ನವನಗರ ಸಂಗೀತ ಕಲಾ ಮಂಡಳ ಹಮ್ಮಿಕೊಂಡಿದ್ದ 'ನವನಗರ ಸಂಗೀತೋತ್ಸವ'ದಲ್ಲಿ ಅಂಥ ವಾತಾವರಣ ಸೃಷ್ಟಿಸಿದ್ದು ಬೆಂಗಳೂರಿನ ಓಂಕಾರ ಹವಾಲ್ದಾರ್. ನಾಡಿನ ಉದಯೋನ್ಮುಖ ಗಾಯಕ.
1985ರ ಸೆಪ್ಟೆಂಬರ್ 21ರಂದು ಜನಿಸಿದ ಓಂಕಾರನಾಥ ಹವಾಲ್ದಾರ ಅವರದು ಸಂಗೀತಗಾರರ ಹಾಗೂ ಸಂಗೀತಜ್ಞರ ಮನೆತನ. ತಂದೆ ಡಾ.ನಾಗರಾಜರಾವ್ ಹವಾಲ್ದಾರ ಕಿರಾನಾ ಘರಾಣೆಯ ಪ್ರತಿನಿಧಿ. ತಾಯಿ ಸುಧಾಮಯಿ ಫೈನ್ ಆರ್ಟ್ಸ್ ಪದವೀಧರೆ. ಅಜ್ಜ ಕೆ.ರಾಘವೇಂದ್ರ ರಾವ್ ಸಂಗೀತ ವಿಮರ್ಶಕ. ಮನೆಯಲ್ಲಿ ಸಂಗೀತಮಯ ಪರಿಸರ. ಸಹಜವಾಗಿ ಓಂಕಾರಗೆ ಚಿಕ್ಕಂದಿನಿಂದಲೇ ಸಂಗೀತದತ್ತ ಒಲವು. ತಂದೆಯಿಂದ ಪ್ರಾಥಮಿಕ ಮಾರ್ಗದಶನ. ಕಿರಾನಾ ಘರಾಣೆಯ ಪಂ. ಮಾಧವ ಗುಡಿ ಹಾಗೂ ಜೈಪುರ-ಅತ್ರೌಲಿ ಘರಾಣೆಯ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಲ್ಲಿ ಆಳವಾದ ಸಂಗೀತ ಅಧ್ಯಯನಗೈದು ಭರವಸೆ ಮೂಡಿಸಿರುವ ಗಾಯಕರಾಗಿ ರೂಪುಗೊಂಡಿದ್ದಾರೆ.
ಬೆಂಗಳೂರು ಜಯನಗರದ ನ್ಯಾಶನಲ್ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಪದವಿ ಪಡೆದ ಅವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿವಿಧ ಘರಾಣೆಗಳಲ್ಲಿ ಅಡಗಿರುವ ವಿಶಿಷ್ಟ ಅಂಶಗಳು ಹಾಗೂ ಸೂಕ್ಷ್ಮತೆಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡವರು. ಪ್ರಸ್ತುತ ಪಂ.ಇಂದೂಧರ ನಿರೋಡಿ ಅವರಲ್ಲಿ ಧ್ರುಪದ್ ಹಾಗೂ ಖ್ಯಾಲ್, ಬೆಂಗಳೂರಿನ ಬಲೂಚಿ ಹರಿಕೃಷ್ಣನ್ ಪಹೂವಾ ಅವರಲ್ಲಿ ಗಝಲ್ ಕುರಿತು ಮಾರ್ಗದರ್ಶನ, ತಂದೆ ಡಾ.ನಾಗರಾಜರಾವ್ ಹವಾಲ್ದಾರ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ.
ಓಂಕಾರ ಅವರು ಕಿರಾನಾ ಘರಾಣೆಯೊಂದಿಗೆ ಗುರುತಿಸಿಕೊಂಡಿದ್ದರೂ ಕೂಡ ಅವರ ಗಾಯನದಲ್ಲಿ ಜೈಪುರ-ಅತ್ರೌಲಿ ಹಾಗೂ ಗ್ವಾಲಿಯರ್ ಘರಾಣೆಗಳ ವಿಶಿಷ್ಟಪೂರ್ಣ ಅಂಶಗಳು ಕಂಡುಬರುತ್ತವೆ. ಅವರದು ಸಮಧುರ ಕಂಠಸಿರಿ. ವಿಲಂಬಿತ ಲಯದ ನಿರಾತಂಕ ಅವಕಾಶದಲ್ಲಿ ಸ್ವರಗಳನ್ನು ಆಲಾಪಿಸಿ ಕ್ರಿಯಾಮಾಧುರ್ಯಗಳೊಂದಿಗೆ ಶೃಂಗರಿಸುವಿಕೆ, ರಾಗದ ಶುದ್ಧತೆ, ಕ್ರಮಬದ್ಧ ರಾಗವಿಸ್ತಾರ, ಫಿರತ್, ವೈವಿಧ್ಯಮಯ ತಾನ್ಗಳ ಪ್ರಸ್ತುತಿ, ಸ್ವರಗಳ ಆರೋಹ-ಅವರೋಹಗಳ ಸರಗಮ್, ಅತ್ಯುತ್ತಮ ಲಯಕಾರಿ ಅವರ ಗಾಯಕಿಯಲ್ಲಿ ಹಾಸುಹೊಕ್ಕಾಗಿವೆ. ಠುಮರಿ, ದಾದ್ರಾ, ಗಝಲ್, ಭಜನ್, ಮರಾಠಿ ಅಭಂಗಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಾವೀಣ್ಯರು.
ಸಂಗೀತಕ್ಕೆ ಸಂಪೂರ್ಣವಾಗಿ ತಮ್ಮ ತೊಡಗಿಸಿಕೊಂಡಿರುವ ಓಂಕಾರ ಅವರು ಸಂಗೀತ ದಿಗ್ಗಜರಿಂದ ಹರಿದು ಬರುವ ವಿವಿಧ ಘರಾಣೆಗಳ ಪೋಷಕಾಂಶಗಳನ್ನು ಹೀರಿ ಸಂಗೀತ ಲೋಕಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸುವರೆಂಬ ಭರವಸೆ ಮೂಡಿಸಿದ್ದಾರೆ. <
ವಿದೇಶಗಳಲ್ಲಿ ಹರಡಿದ ಕಂಪು
2006 ರಲ್ಲಿ ತಂದೆಯೊಂದಿಗೆ ಅಮೆರಿಕ ಪ್ರವಾಸ, 2009ರಲ್ಲಿ ಯುನೆಸ್ಕೋ ಹಾಗೂ ವಿಶ್ವಬ್ಯಾಂಕ್ಗಳು ಸಂಯುಕ್ತವಾಗಿ ಅಪ್ಘಾನಿಸ್ತಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಯಾತ್ರೆಗಳಲ್ಲಿ ತಮ್ಮ ಸುಮಧುರ ಕಂಠದ ಸಂಗೀತ ಸುಧೆ ಹರಿಸಿದ್ದಾರೆ. ಓಂಕಾರನಾಥ ಹಾಡಿರುವ ದಾಸರ ಪದಗಳ ಗುಚ್ಛ 'ಮುತ್ತು ಕೊಳ್ಳಿರೋ' ಹಾಗೂ ಮರಾಠಿ ಅಭಂಗಗಳ ಅನುವಾದದ 'ಅಭಂಗ ವಾಣಿ' ಸಿ.ಡಿಗಳು ಜನಪ್ರಿಯವಾಗಿವೆ. ಆಕಾಶವಾಣಿ, ದೂರದರ್ಶನಗಳ ಉನ್ನತ ಶ್ರೇಣಿಯ ಕಲಾವಿದರಾಗಿರುವ ಓಂಕಾರನಾಥ ಹವಾಲ್ದಾರ, ವಾರಣಾಸಿಯ ಸಂಕಟಮೋಚನ ಸಂಗೀತ ಸಮಾರೋಹ, ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಆಕಾಶವಾಣಿ ಸಂಗೀತೋತ್ಸವ, ನವನಗರ ಸಂಗೀತೋತ್ಸವ ಹೀಗೆ ನಾಡಿನ ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಹಾಡಿದ್ದಾರೆ.
-ಚಿತ್ರ-ಲೇಖನಃ ರವೀಂದ್ರ ಕವಠೇಕರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


