ಬಳ್ಳಿ ಕಲೆಯ ಗಣಪಜ್ಜ
ಬರೋಬ್ಬರಿ 83ರ ಪ್ರಾಯ. ಕಣ್ಣಿಗಿನ್ನೂ ಚಾಳೀಸು ಬಂದಿಲ್ಲ. ಕೆಲಸ ಮಾಡುವ...

ಇವರಿಗೆ ಬರೋಬ್ಬರಿ 83ರ ಪ್ರಾಯ. ಕಣ್ಣಿಗಿನ್ನೂ ಚಾಳೀಸು ಬಂದಿಲ್ಲ. ಕೆಲಸ ಮಾಡುವ ಉತ್ಸಾಹವೂ ಬತ್ತಿಲ್ಲ! ಈ ಇಳಿ ವಯಸ್ಸಿನಲ್ಲಿಯೂ ಅವರು ಕೂಗಲ ಬಳ್ಳಿ (ಕಾಡು ಬಳ್ಳಿ)ಯಿಂದ ಚೊಬ್ಬೆ, ಹೂದಾನಿ, ಯಕ್ಷ ಕಿರೀಟ, ಅಲಂಕಾರಿಕ ವಸ್ತುಗಳು.... ಇತ್ಯಾದಿಗಳನ್ನು ಬಹಳ ನಾಜೂಕಾಗಿ, ಆಕರ್ಷಕವಾಗಿ ನೇಯುತ್ತಾರೆ. ಅವರು ಬಳ್ಳಿಯಿಂದ ವಿವಿಧ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸುವುದನ್ನು ನೋಡಿದ ಎಂಥವರಿಗೂ ಆಶ್ಚರ್ಯವಾಗದಿರದು.
ಬೇರೆಯವರಿಗೆ ಹೊರೆಯಾಗದಂತೆ ಬದುಕಬೇಕೆಂಬ ಅವರ ಛಲ, ಸಾಧನೆ ಮಾಡಬೇಕೆಂಬ ಹಂಬಲ, ಅಪೇಕ್ಷೆಯನ್ನು ನೋಡಿದರೆ ಅವರೆದುರು ಯುವಕರೂ ನಾಚಿಕೊಳ್ಳಬೇಕು. ಅವರೇ ಉ. ಕ. ಜಿಲ್ಲೆ, ಸಿದ್ದಾಪುರ ತಾಲೂಕು, ತಟ್ಟಿಕೈನ ಗಣಪತಿ ಹೆಗಡೆ. ಆತ್ಮೀಯರು, ಹಿತೈಷಿಗಳು ಇವರನ್ನು ಗಣಪಜ್ಜ ಎಂದೇ ಪ್ರೀತಿಯಿಂದ ಕರೆಯುತ್ತಾರೆ.
ತಟ್ಟಿಕೈನ ಗಣಪತಿ ಹೆಗಡೆ ಕೃಷಿ ಕುಟುಂಬದವರು. ನಿಸರ್ಗದಲ್ಲಿ ಸುಲಭವಾಗಿ ಸಿಗುವ ಕೂಗಲ ಬಳ್ಳಿ (ಕಾಡು ಬಳ್ಳಿ)ಯಿಂದ ಅಲಂಕಾರದ ವಸ್ತುಗಳನ್ನು ಸಿದ್ಧಪಡಿಸುವುದರಲ್ಲಿ ಇವರದು ಎತ್ತಿದ ಕೈ. ಇಪ್ಪತ್ತೈದನೇ ವಯಸ್ಸಿನಲ್ಲಿಯೇ ಬಳ್ಳಿಯ ಕಸುಬಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಗಣಪಜ್ಜ ಬಳ್ಳಿಯ ಕಲೆಯನ್ನು ಯಾರಿಂದಲೂ ಕೇಳಿ ರೂಢಿಸಿಕೊಂಡವರಲ್ಲ. ಯಾವುದಾದರೂ ಹೊಸ ವಸ್ತುಗಳನ್ನು ನೋಡಿದರೆ ಸೂಕ್ಷ್ಮವಾಗಿ ಗಮನಿಸಿ, ಗ್ರಹಿಸಿ, ತಮ್ಮ ಕಲ್ಪನೆ, ಸಾಮರ್ಥ್ಯದಿಂದ ಸಿದ್ಧಪಡಿಸುವ ಕಲೆ ಇವರಲ್ಲಿ ರಕ್ತಗತವಾಗಿಯೇ ಬಂದಿದೆ.
ತಾವು ತಯಾರಿಸಿದ ಬಳ್ಳಿಯ ಅಲಂಕಾರದ ವಸ್ತುಗಳ ಜತೆಗೆ ದೈನಂದಿನ ಬಳಕೆಗೆ ಉಪಯೋಗಿಸುವ ಹಲವಾರು ಬಗೆಯ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ. ಹಾಗಂತ ಆ ವಸ್ತುಗಳನ್ನು ಅವರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿದವರಲ್ಲ. ಆಸುಪಾಸು ಊರಿನ ಆತ್ಮೀಯರು, ಪರಿಚಯಸ್ಥರು ಕೇಳಿದ ಬೆಲೆಗೆ ಮಾರಾಟ ಮಾಡಿದ್ದಾರೆ.
'ಇದು ನನ್ನ ಕೆಲಸಕ್ಕೆ ಯೋಗ್ಯವಾದ ಬೆಲೆಯೇನೂ ಅಲ್ಲ. ಆದರೆ ನಾನು ಸಿದ್ಧಪಡಿಸಿದ ಕರಕುಶಲ ವಸ್ತುಗಳಿಗೆ ಸರಿಯಾದ ದರ ನಿಗದಿ ಮಾಡುವ ಸಾಮರ್ಥ್ಯ ನನ್ನಲ್ಲಿಲ್ಲದ ಕಾರಣ ಅಗ್ಗದ ಬೆಲೆಯಲ್ಲಿಯೇ ಮಾರಾಟ ಮಾಡುವಂತಾಯಿತು' ಎಂದು ಗಣಪಜ್ಜ ವಿಷಾದ ವ್ಯಕ್ತಪಡಿಸುತ್ತಾರೆ.
ಕೂಗಲ ಬಳ್ಳಿಯನ್ನು ಕಾಡಿನಿಂದ ತಂದು, ಅದನ್ನು ಹದಗೊಳಿಸಿ, ನಾಜೂಕಾಗಿ ನೇಯುವುದು ಸುಲಭದ ಕೆಲಸವಲ್ಲ. ಹಾಗಂತ, ತಯಾರಿಸುವ ವಸ್ತುಗಳನ್ನು ಹೇಗ್ಹೇಗೋ ಸಿದ್ಧಪಡಿಸಲೂ ಸಾಧ್ಯವಿಲ್ಲ. ಅದೊಂದು ಸೂಕ್ಷ್ಮ, ನಾಜೂಕಿನ ಕೆಲಸ. ಹೂ ಬುಟ್ಟಿ, ಯಕ್ಷ ಕಿರೀಟ, ಬುಟ್ಟಿಯಂತಹ ದೊಡ್ಡ ದೊಡ್ಡ ಕೃತಿಗಳನ್ನು ತಯಾರಿಸಲು 15-20 ದಿನಗಳಾದರೂ ಬೇಕೆನ್ನುತ್ತಾರೆ ಗಣಪಜ್ಜ.
ಜನಸಾಮಾನ್ಯರ ಬಳಕೆಗೆ ಅಗತ್ಯವಿರುವ ಅನೇಕ ವಸ್ತುಗಳನ್ನು ಕೂಗಲ ಬಳ್ಳಿಯಿಂದ ತಯಾರಿಸಿದ ಹೆಮ್ಮೆ ಅವರಿಗಿದೆ. ಆದರೆ ಇಂತಹ ಸೂಕ್ಷ್ಮ ಹಾಗೂ ನಾಜೂಕಿನ ಕಲೆಯಲ್ಲಿ ಏನನ್ನೋ ಸಾಧಿಸಿದ ಅಹಂಕಾರವಿಲ್ಲ. ಈ ಕಲೆಯಲ್ಲಿ ಇನ್ನೂ ಸಾಕಷ್ಟು ಪರಿಣಿತಿ ಪಡೆಯಬೇಕು ಎಂದು ಮುಗ್ಧವಾಗಿ ಹೇಳುವುದನ್ನು ಕೇಳಿದರೆ, ಅವರ ಹುಮ್ಮಸ್ಸಿಗೆ, ಜೀವನೋತ್ಸಾಹಕ್ಕೆ ಒಂದು ದೊಡ್ಡ ಸಲಾಂ. ಗಣಪಜ್ಜನ ಕುರಿತು ಮಾಹಿತಿಗೆ: 9480789844.
- ಎಸ್. ಹೆಗಡೆ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


