ಇನ್ನೂ ಇದೆ...!

ವಯಸ್ಸು ಹೆಚ್ಚಾಗುತ್ತಾ ಹೋದಂತೆ ದೇಹ ಎಲ್ಲದರಿಂದಲೂ ನಿವೃತ್ತಿ, ವಿಶ್ರಾಂತಿ ಬಯಸಲು ಆರಂಭಿಸುತ್ತದೆ. ಚೈತನ್ಯದಿಂದ ಸದಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದ ಶರೀರಕ್ಕೆ ಜೀವನ ಜಡ, ಬದುಕು ನಿಸ್ತೇಜ ಎನಿಸುವುದು ನಿವೃತ್ತಿ ಪಡೆದಾಗ.
ನಿವೃತ್ತಿ ಬದುಕನ್ನು ಪ್ರೀತಿಸಿ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕಾಗಿರುವುದು ಜೀವನದ ಅಂತಿಮ ಮೆಟ್ಟಿಲು. ಒಣಪ್ರತಿಷ್ಠೆ, ಒಣ ಜಂಭ, ದುರಭಿಮಾನ ಮುಂತಾದವುಗಳನ್ನು ಕಳೆದುಕೊಂಡು, ಉತ್ಸಾಹ, ಸಂತಸ ಬರಮಾಡಿಕೊಂಡಾಗ ಜೀವನ ಸುಂದರವಾಗುತ್ತದೆ; ಪರಿಪೂರ್ಣತೆ ಪಡೆಯುತ್ತದೆ. ನಾವು ಕೂಡ ಸಮಾಜದ ಶಕ್ತಿಯ ಒಂದು ಭಾಗ ಎಂಬುದನ್ನು ಮರೆಯಬಾರದು.
ಬದುಕಿನಲ್ಲಿ ಬದಲಾವಣೆ ಪ್ರಕೃತಿ ನಿಯಮ. ಹಾಗೇ ನಿವೃತ್ತಿಯೂ ಸಹ ಬದುಕಿನ ಒಂದು ಬದಲಾವಣೆಯೇ. ನಿವೃತ್ತಿ ಬಂದಾಗ ಕುಗ್ಗದೆ ಸಮಾಧಾನ, ತೃಪ್ತಿ ಪಡೆಯಬೇಕು. ಜೀವನದಲ್ಲಿ ನಂಬಿಕೆ ಬಿಡಬಾರದು. ನಿವೃತ್ತಿ ಜೀವನಕ್ಕೆ ಭಯಪಡುವುದು ಬೇಡ. ಯಾರು ತಮ್ಮ ವೃತ್ತಿಯನ್ನು ಜೀವನದ ಒಂದು ಹಂತವೆಂದು ಭಾವಿಸುತ್ತಾರೋ ಅವರು ನಿಜವಾಗಿಯೂ ಸುಖಿಗಳು. ನಿವೃತ್ತಿಯಿಂದ ವೃತ್ತಿ ಬಾಂಧವರನ್ನು, ಚಿರಪರಿಚಿತ ವೃತ್ತಿಯನ್ನು, ದಿನಚರಿಯನ್ನು ಕಳಕೊಂಡ ದುಃಖ ಸಹಜವಾದರೂ, ಸಾಮಾಜಿಕ ಚಟುವಟಿಕೆ ಮತ್ತು ದೈಹಿಕ ಆರೋಗ್ಯವು ಜೀವನದ ತೃಪ್ತಿಗೆ ಅಡ್ಡಿಯಾಗುವುದಿಲ್ಲ. ನಿವೃತ್ತಿ ಬದುಕು ಬರಡಾದಂತೆ ಕಂಡರೂ ಒಯಸಿಸ್‌ನ ಅನುಭವ ಪಡೆಯಲು ಸಾಧ್ಯ.
ಸುಖಮಯ ನಿವೃತ್ತಿ ಜೀವನ ನಿಮ್ಮದಾಗಬೇಕಾ? ಇಲ್ಲಿವೆ ಕೆಲವು ಸೂತ್ರಗಳು.
- ನಿವೃತ್ತಿ ಬದುಕಿನಲ್ಲಿಯ ಒಂದು ಹಂತ. ಅದಕ್ಕಾಗಿ ನಿವೃತ್ತಿಯ ಪೂರ್ವ ಮತ್ತು ಉತ್ತರ ಆವೃತ್ತಿಗಳನ್ನು ಒಪ್ಪಲೇಬೇಕು.
- ನಿವೃತ್ತಿ ನಂತರ ನೂತನ ಗೆಳೆಯರನ್ನು ಆರಿಸಿಕೊಳ್ಳಬೇಕು. ಅಲ್ಲದೇ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.
- ಪ್ರತಿದಿನ ಸಮತೋಲಿತ, ಮಿತ ಆಹಾರ ಸೂಕ್ತ. ಬೆಳಗಿನ ವ್ಯಾಯಾಮ, ನಡಿಗೆ ತಪ್ಪಿಸಬಾರದು.
- ಆರೋಗ್ಯ ಸಮಸ್ಯೆಗಳಿಗೆ ನಿಯಮಿತವಾಗಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.
- ಇಷ್ಟು ವರ್ಷದ ಬದುಕಿನಲ್ಲಿ ಮನೆಯಲ್ಲಿ ನೀವು ಹೇಳಿದ್ದನ್ನು ಕೇಳುವ ಜನರಿದ್ದರು; ಈಗ ಅವರು ಹೇಳಿದಂತೆ ನೀವು ಕೇಳುವುದರಲ್ಲಿ ತಪ್ಪೇನೂ ಇಲ್ಲ.
- ವೃತ್ತಿಯಲ್ಲಿದ್ದಾಗ ನಿಮಗಿದ್ದ ಅಧಿಕಾರದಿಂದ ನಿಮಗೆ ಗೌರವ ಸಿಗುತ್ತಿತ್ತು. ನಿವೃತ್ತಿ ನಂತರ ಇದು ಸಿಗುವುದಿಲ್ಲ. ಇದನ್ನು ನಿವೃತ್ತಿಪೂರ್ವದಲ್ಲೇ ತಿಳಿದುಕೊಳ್ಳುವುದು ಸೂಕ್ತ. ಸೇವೆಯಲ್ಲಿದ್ದಾಗ ನಿಮ್ಮ ಹುದ್ದೆಗೆ ಗೌರವ ಕೊಡುತ್ತಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಿ.
- ನಿಮ್ಮ ಅಪಾರ ಅನುಭವ ಸಂಪತ್ತನ್ನು ಇತರರೊಡನೆ ಹಂಚಿಕೊಳ್ಳಿ.
- ಸಮಯ ಕಳೆಯಲು ನಿಮಗೆ ಇಷ್ಟವಾಗುವ ಯಾವುದಾದರೂ ಒಂದು ಕೆಲಸ ಮಾಡಿ.
- ನಿವೃತ್ತಿ ಜೀವನ ನಿಷ್ಪ್ರಯೋಜಕ ಎಂಬ ಭಾವನೆ ಬೇಡ.
- ನಿವೃತ್ತಿ ನಂತರ ಬೇರೆ ಉದ್ಯೋಗ ಆಯ್ಕೆ ಮಾಡಿಕೊಂಡು ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಮೊದಮೊದಲು ಆದಾಯವಿರುವುದಿಲ್ಲ, ಆದರೆ ತೃಪ್ತಿ ಇರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


