ಸಾಧನೆ

ಲಹರಿ

ಲಹರಿ
Published On :

ನರಹರಿ ಕಲಿಸುವ ಪರಿ

ಯಾರೋ ಕೊಟ್ಟ ಸೆಕೆಂಡ್ ಹ್ಯಾಂಡ್ ಟಿವಿಎಸ್ ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ಅಲೆದಾಡಿತು. ಆ ದಿನಗಳಲ್ಲಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವತ್ತು 'ಸೃಜನ ಸಂಗೀತ ಶಾಲೆ' ಬೆಂಗಳೂರಿನಲ್ಲಿ 16 ಶಾಖೆಗಳನ್ನು ಹೊಂದಿದೆ!

'ನನ್ನ ಗುರುಗಳು ಶ್ರೀ ನರಹರಿ ದೀಕ್ಷಿತ್ ಅವರು. ಅವರ ಬಳಿ ಸುಗಮ ಸಂಗೀತ ಕಲಿಯುತ್ತಿದ್ದೇನೆ' ಎಂದು  ಮುದ್ದು ಮಕ್ಕಳು ಹೇಳುತ್ತಿದ್ದರೆ ಮನೆಯಲ್ಲಿ ಕುಳಿತು 'ಎದೆ ತುಂಬಿ ಹಾಡುವೆನು' ನೋಡುತ್ತಿರುವ ಗುರುವಿನ ಕಣ್ಣುಗಳಲ್ಲಿ ಆನಂದಭಾಷ್ಪ. ಮನದಲ್ಲಿ ಸಂತೃಪ್ತಿ.
ಇವತ್ತು ಬೆಂಗಳೂರಿನ ಮಕ್ಕಳು ನರಹರಿ ದೀಕ್ಷಿತ್ ಬಳಿ ಸುಗಮ ಸಂಗೀತ ಕಲಿಯಲು ಹಾತೊರೆಯುತ್ತಾರೆ. 'ನಮ್ಮ ಮಗುವಿಗೆ ಸಂಗೀತ ಕಲಿಸಿ' ಎಂದು ಪಾಲಕರೂ ದುಂಬಾಲು ಬೀಳುತ್ತಾರೆ. ದೀಕ್ಷಿತರು ಹಣದ ಆಸೆಯಿಂದ ಎಲ್ಲರಿಗೂ ಕಲಿಸುವುದಿಲ್ಲ. ಮಗುವಿನ ಧ್ವನಿಪರೀಕ್ಷೆ ಮಾಡುತ್ತಾರೆ, ಸಂಗೀತದ ಬಗ್ಗೆ ಎಷ್ಟು ಆಸಕ್ತಿ ಎನ್ನುವುದನ್ನು ಪರೀಕ್ಷಿಸುತ್ತಾರೆ. ಕಲಿಯುವ ಮನಸ್ಸಿದೆ ಎನ್ನುವುದು ಖಚಿತವಾದರೆ ಮಾತ್ರ ಪಾಠ. ಇಲ್ಲದಿದ್ದರೆ 'ಮಗುವಿಗೆ ಬಲವಂತ ಮಾಡಬೇಡಿ. ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನೇ ಕಲಿಸಿ' ಎಂದು ನಯವಾಗಿ ಬುದ್ಧಿಮಾತು ಹೇಳಿ ಕಳಿಸುತ್ತಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಮಂಚಾಲೆ ಗ್ರಾಮದ ದೀಕ್ಷಿತರು ಬರಿಗೈಲಿ ಬೆಂಗಳೂರಿಗೆ ಬಂದವರು. ದಿ. ಶಂಕರ ದೀಕ್ಷಿತ್ ಹಾಗೂ ಪದ್ಮಾವತಿ ದೀಕ್ಷಿತ್ ಅವರ ಪುತ್ರ. ಬಡತನವೇ ಈ ಕುಟುಂಬದ ಆಸ್ತಿ. ಹುಡುಗ ಹೂವು ಮಾರುತ್ತಲೇ ಎಸ್ಸೆಸ್ಸೆಲ್ಸಿ ಮುಗಿಸಿದ. ರೇಡಿಯೊ ಕೇಳುತ್ತಲೇ ಸಂಗೀತದ ಗುಂಗು ಹತ್ತಿಸಿಕೊಂಡ. ಏಕಲವ್ಯನಂತೆ ಕಲಿತು ಅರಗಿಸಿಕೊಂಡ. ಮುಂದೆ ಓದುವ, ಸಂಗೀತ ಕಲಿಯುವ ಮನಸ್ಸೇನೋ ಇತ್ತು, ಲಕ್ಷ್ಮೀ ಕೃಪೆ ಇರಲಿಲ್ಲ. ಊರಿನ ಹಿತೈಷಿಯೊಬ್ಬರ ನೆರವಿನಿಂದ ಬೆಂಗಳೂರಿನ ಬಸ್ಸು ಹತ್ತಿದ. ಅವರೇ ಶಿಫಾರಸ್ಸು ಮಾಡಿದ್ದ ಪ್ರತಿಷ್ಠಿತರೊಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತ ಕಾಲೇಜು ಸೇರಿಕೊಂಡ. ಕಾನೂನು ಓದಿ ವಕೀಲಿ ವೃತ್ತಿ ಕೈಗೊಳ್ಳುವ ಆಸೆಯೂ ಚಿಗುರಿತು.
ಊರು ಬಿಡುವಾಗ ಜತೆಗಿದ್ದದ್ದು ಬಡತನ ಕಲಿಸಿದ ಜೀವನದ ಅನುಭವ, ಗುರುವಿಲ್ಲದೇ ಕಲಿತ ಸಂಗೀತ, ಹಾಡುಗಳ 'ಭಂಡಾರ', ಪ್ರಾಮಾಣಿಕತೆ, ಸಂಗೀತಗಾರನಾಗುವ ಕನಸು, ಶ್ರದ್ಧೆ, ಉತ್ಸಾಹ. ಇವುಗಳೇ ಮುಂದೆ  ಅವರನ್ನು ಸಾಧನೆಯ ಹಾದಿಯಲ್ಲಿ ನಡೆಸಿದವು.
ಆಶ್ರಯ ನೀಡಿದ್ದವರ ಮನೆ ತೊರೆಯಬೇಕಾಗಿ ಬಂದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡರು. ನಂತರ ಕೆಲಕಾಲ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಅಡುಗೆ ಭಟ್ಟರಾದರು. ಲಾ ಪದವಿಗೆ ತಿಲಾಂಜಲಿ ನೀಡಬೇಕಾಯಿತು. ಆದರೆ ತನ್ನ ಜತೆಗೆ ಊರಿನಲ್ಲಿರುವ ತಾಯಿ, ಸೋದರಿಯರ ಜೀವನ ಸಾಗಬೇಕಲ್ಲ? ಸುಗಮ ಸಂಗೀತವನ್ನು ವೃತ್ತಿಯಾಗಿಸಿಕೊಳ್ಳುವ ಧೈರ್ಯ ಮಾಡಿಯೇ ಬಿಟ್ಟರು. ಕಾಲೇಜಿಗೆ ಹೋಗುತ್ತಿದ್ದಾಗ ಸಂಗೀತ ಸ್ಪರ್ಧೆಗಳಲ್ಲಿ ಗೆದ್ದದ್ದು, ಕೆಲ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ತೀರ್ಪುಗಾರನಾದದ್ದು ಧೈರ್ಯ ತುಂಬಿತು.
ಯಾರೋ ಕೊಟ್ಟ ಸೆಕೆಂಡ್‌ಹ್ಯಾಂಡ್ ಟಿವಿಎಸ್ ಏರಿ 'ಸಂಚಾರಿ ಸಂಗೀತ ಶಾಲೆ' ಪ್ರಾರಂಭಿಸಿದರು. ಮನೆಮನೆಗೆ ತೆರಳಿ ಮಕ್ಕಳಿಗೆ ಪಾಠ ಹೇಳಿಕೊಡುವುದು ಕಾಯಕವಾಯಿತು. ಬದುಕು ತಹಬದಿಗೆ ಬಂದಿದೆ ಅನ್ನಿಸಿದಾಗ ತಾಯಿ, ಅಕ್ಕತಂಗಿಯರನ್ನು ಇಲ್ಲಿಗೇ ಕರೆಸಿಕೊಂಡರು. ಕಮಲಾ ಜೋಯಿಸ್ ಬಳಿ ಸಂಗೀತ ಕಲಿಯಲು ಸೋದರಿಯರನ್ನು ಕಳುಹಿಸುತ್ತಿದ್ದರು. ಆಗ ಅವರಿಗೆ ನರಹರಿ ಹಾಡುತ್ತಾರೆ ಎನ್ನುವುದು ಗೊತ್ತಾಗಿ, 'ನೀನೇ ಏಕೆ ಒಂದು ಶಾಲೆ ತೆರೆಯಬಾರದು' ಎಂದು ಹೊಸ ಕನಸು ತುಂಬಿದರು. ಮನೆಯಲ್ಲೇ ನಾಲ್ಕೈದು ಶಿಷ್ಯರಿಂದ ಆರಂಭವಾದ 'ಸೃಜನ ಸಂಗೀತ ಶಾಲೆ' ಈಗ ಬೆಂಗಳೂರಿನಲ್ಲಿ 16 ಶಾಖೆಗಳನ್ನು ಹೊಂದಿದೆ. 400ಕ್ಕೂ ಹೆಚ್ಚು ಶಿಷ್ಯರು ಇವರ ಬಳಿ ಸಂಗೀತ ಕಲಿಯುತ್ತಿದ್ದಾರೆ.
ದೀಕ್ಷಿತರು ಮಕ್ಕಳಿಗೆ ಸಂಗೀತವನ್ನಷ್ಟೇ ಕಲಿಸುವುದಿಲ್ಲ. ಒಳ್ಳೆಯ ಸಂಸ್ಕಾರ ನೀಡುತ್ತಾರೆ. ಸಂಸ್ಕೃತಿ ಬಗ್ಗೆಯೂ ತಿಳಿಹೇಳುತ್ತಾರೆ. ದೊಡ್ಡವರಾದ ಬಳಿಕ ಹೆತ್ತವರನ್ನು ಹೇಗೆ ನೋಡಿಕೊಳ್ಳಬೇಕು ಎಂದು ತಿಳಿಹೇಳುತ್ತಾರೆ. ಮನೆಯಲ್ಲಿ ಪಾಲಕರ ಮಾತು ಕೇಳದವರ ವರ್ತನೆ, ಇವರ ಬಳಿ ಬಂದ ಬಳಿಕ ಬದಲಾಗಿಬಿಡುತ್ತದೆ. ಅದೇ ದೀಕ್ಷಿತರ ವಿಶೇಷತೆ. ಇವರು ಕಲಿಸಲು ಆರಿಸಿಕೊಳ್ಳುವ ಹಾಡುಗಳೂ ಅಪರೂಪದಲ್ಲಿ ಅಪರೂಪವಾದವು. ತಾಯಿ ಮೇಲಿನ ಹಾಡುಗಳೇ ಹೆಚ್ಚು.
ಸ್ನೇಹಿತರು 'ನೀನು ಹಾಡು ಹೇಳಿಕೊಟ್ಟರೆ ಕಂಠ ಹಾಳಾಗುತ್ತೆ. ಮುಂದೆ ನಿನಗೆ ಅವಕಾಶ ಸಿಕ್ಕಾಗ ಹಾಡಲು ತೊಂದರೆಯಾದೀತು' ಎಂದು ಕಾಳಜಿಯಿಂದ ಎಚ್ಚರಿಸಿದ್ದರಂತೆ. 'ನಾನೊಬ್ಬ ಬೆಳೆದರೆ ಸಾಲದು. ನನ್ನಿಂದ ನೂರಾರು ಗಾಯಕರು ತಯಾರಾಗಿ ನನಗಿಂತ ಹೆಚ್ಚಿನ ಸಾಧನೆಗೈಯಬೇಕು' ಎಂಬ ಅಭಿಲಾಷೆಯಿಂದ ಶಿಷ್ಯವೃಂದವನ್ನು ಬೆಳೆಸತೊಡಗಿದರು.
ದೀಕ್ಷಿತರು (ಮೊ. 94489 28611) ಇಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, 'ನನ್ನ ಬಳಿ ಕಲಿತ, ಕಲಿಯುತ್ತಿರುವ ಮಕ್ಕಳು ಟಿ.ವಿ. ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ ಚೆನ್ನಾಗಿ ಹಾಡುತ್ತಿದ್ದಾರೆ. ಅದರ ಮುಂದೆ ನಾನು ಪಟ್ಟ ಕಷ್ಟ ಏನೇನೂ ಅಲ್ಲ'.

ವಿದ್ಯೆ ಜೀವನ ಕೊಡುತ್ತದೆ. ಸಂಗೀತ ನೆಮ್ಮದಿ ಕೊಡುತ್ತದೆ. ಜೀವನ ಮತ್ತು ಬದುಕು ಎರಡೂ ಜತೆಜತೆಯಾಗಿ ಹೋದರೆ ಮಾತ್ರ ಬದುಕು ಸಮೃದ್ಧವಾಗುತ್ತದೆ.
- ನರಹರಿ ದೀಕ್ಷಿತ್

-   ಸವಿತಾ ನಾಗೇಶ್
savithanagesh73@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.