ಸಾಧನೆ

ದೊಣ್ಣೆಮನಸು

ದೊಣ್ಣೆಮನಸು
Published On :

ಮುದುಡುತ್ತಿದ್ದೇನೆಂಬ ದುಗುಡ ಎದೆಯ ಗೂಡೊಳಗೆ ಗಟ್ಟಿಯಾದ ಕಫದ ಜತೆಗೇ ಹೆಪ್ಪುಗಟ್ಟಿದೆ. ಕೆಮ್ಮುವಾಗ, ಮುಖ ಹಿಂಡಿ ಸೀನುವಾಗ ಮತ್ತಷ್ಟೂ ಸುಕ್ಕುಗಟ್ಟುವ ಮುಖವನ್ನು ನೋಡಿಯೂ 'ರಾಯರಿಗೆ ವಯಸ್ಸಾಯ್ತು' ಅಂತ ಸಾರುವ ನೂರಾರು ನೆರಿಗೆಗಳೇ ಸರ್ಟಿಫಿಕೇಟಿನಂತೆ ಸಾಕ್ಷಿ. ಅರವತ್ತಾದ ಮೇಲೆ ಕಚೇರಿ, 'ನೀವ್ ನಡೀರಿ' ಅಂತ ಮನೆ ಕಡೆ ಕಳುಹಿಸಿದಾಗಲೂ ಡೈ ಹಾಕಿಕೊಂಡ ಅವರ ಹತ್ತಿಪ್ಪತ್ತು ಕೂದಲಲ್ಲಿ ಒಂದೂ ಕಂಪಿಸಿರಲಿಲ್ಲ. ಹಾವೇಣಿಯಂತೆ ಏರಿ ಇಳಿಯುವ ಬಿಪಿ. ಬಾಡಿಯ ಬರಿದಾಗದ ಶುಗರ್ ಡಬ್ಬಿ. ನಾಲ್ಕು ಹೆಜ್ಜೆ ನಡೆಯಲೂ ಆಗದಿದ್ದಾಗ ಕಾಡುವ ನಿಶ್ಶಕ್ತಿಗೂ ಹರೆಯದ ಹುಮ್ಮಸ್ಸಿನ ಟಾನಿಕ್ ಅವರಲ್ಲಿ ರೆಡಿ. ಬಲೆ ಕಟ್ಟುವ ಕಣ್ಣನ್ನು ಗಮನಿಸಿಯೂ, ತನಗೆ ಮುಪ್ಪು ಬಲೆ ಬೀಸಿಯೇ ಇಲ್ಲ ಎಂದುಕೊಳ್ಳುವ ರಾಯರ ಕಾನ್ಫಿಡೆನ್ಸಿಗೆ ಬಹುಶಃ ರಾಯರೇ ಸಾಟಿ.
ಮನೆಯ ತುಂಬು ಫ್ಯಾಮಿಲಿ ನೋಡಿ, ಅಲ್ಲಿ ಮೇಜರಾಗಿ ತುಂಬಿಕೊಂಡ ಯಂಗ್ ಜನರೇಶನ್ನನ್ನು ನೋಡಿ, ತೊಟ್ಟಿಲಿನ ತೋಯ್ದಾಟಕ್ಕೆ ಕಿಟಾರನೆ ಕಿರುಚಿ ಹಲ್ಲು ಕಿಸಿಯುವ ಮೊಮ್ಮಗಳನ್ನು ನೋಡಿ ರಾಯರಲ್ಲಿ ಯವ್ವನತ್ವ ರೀಚಾರ್ಜ್ ಆಗುತ್ತದೆ. ತಾನೇಕೆ ವಯಸ್ಸಾಯ್ತು ಎಂದು ಅಂದುಕೊಳ್ಳಬೇಕು ಅಂತನ್ನಿಸುತ್ತದೆ.
ಇರಲಿ. ರಾಯರ ಆತ್ಮದಲ್ಲಿ ಚಿಗುರಿದ ಹರೆಯಕ್ಕೆ ಶಹಬ್ಬಾಸ್ ಹೇಳೋಣ. ಆದರೆ, ಮೊನ್ನೆಯ ದೃಶ್ಯ ಯಾರಿಗೂ ಬೇಸರ ತಂದೀತು. ಹತ್ತಿರದ ಪಾರ್ಕಿಗೆ ವಾಕಿಂಗಿಗೆಂದು ಹೋದ ರಾಯರು ಬರುತ್ತಾ ಪೇಚು ಮೋರೆಯಲ್ಲಿ ಕಣ್ಣೀರಿಡುತ್ತಾ ಬಂದರು.
ಮೊಮ್ಮಗ ಕೇಳಿದ, 'ಏನಜ್ಜಾ, ಯಾಕೆ ಕಣ್ಣೀರು?'. ಮಾಸಿದ ಕರ್ಚೀಫಿನಲ್ಲಿ ಮುಖವೊರೆಸುತ್ತ ಅವರಂದರು, 'ಯಾರೋ ಇಬ್ಬರೂ ನನ್ನ ಜೇಬು ದೋಚಿ ಒಂದಷ್ಟು ನೋಟು, ಮೊಬೈಲನ್ನು ಎಗರಿಸಿಕೊಂಡು ಹೋದ್ರು'. 'ಛೇ!' ಎಂಬ ಬೇಸರದ ಉದ್ಗಾರದೊಂದಿಗೆ ಮೊಮ್ಮಗ ಮಾತು ಮುಂದವರಿಸಿದ್ದ... 'ಅಜ್ಜ ಮೊನ್ನೇನೆ ನಾನು ಹೇಳ್ಲಿಲ್ವಾ? ನಿಮಗೆ ನಡೆಯೋದಿಕ್ಕೇ ಆಗಲ್ಲ. ಈ ದೊಣ್ಣೆ ಇಟ್ಕೊಂಡು ನಡೀರಿ ಅಂತ. ಈ ಟೈಮಲ್ಲಿ ದೊಣ್ಣೆ ಇದ್ದಿದ್ರೆ ನಾಲ್ಕು ಬಾರಿಸಬಹುದಿತ್ತಲ್ವಾ?' ಎಂದು ಹೇಳಿ ಮ್ಯಾಟರ್ ಸೀರಿಯಸ್ ಅಂತ ಗೊತ್ತಿದ್ದೂ ನಗು ಬೀರಿದ.
ರಾಯರಿಗೂ ಹೌದೆನ್ನಿಸಿತು. ದೊಣ್ಣೆ ಇಟ್ಟುಕೊಂಡರೆ, ಎಲ್ಲರೂ ವಯಸ್ಸಾಗಿದೆ ಅಂತ ಭಾವಿಸ್ತಾರೆ ಎಂಬ ತಮ್ಮ ಪೂರ್ವಗ್ರಹಕ್ಕೆ 'ಥೂ' ಅಂದುಬಿಟ್ಟರು. ಮರುದಿನವೇ ಅವರ ಕೈಗೆ ದೊಣ್ಣೆ ಬಂತು... ಮನದಾಳದ ಯಾವ ದೊಣ್ಣೆರಾಯನ ಅಪ್ಪಣೆಯಿಲ್ಲದೆ!

ಸೇಫ್ ಆಗಿರ್ತೀರಿ!
ಮುಪ್ಪು ಅಪ್ಪಿಕೊಂಡಾಗ ಕೆಲವೊಂದು ಬದಲಾವಣೆ ಮುಖ್ಯ. ನಿಮಗೆ ನಡೆಯಲು ತಾಕತ್ತಿದ್ದರೂ ಕೈಯಲ್ಲೊಂದು ಊರುಗೋಲು ಅಥವಾ ವಾಕಿಂಗ್ ಸ್ಟಿಕ್, ಹಳ್ಳಿ ಭಾಷೆಯಲ್ಲಿ ಹೇಳೋದಾದ್ರೆ 'ದೊಣ್ಣೆ' ಇಟ್ಟುಕೊಳ್ಳುವುದು ಒಳಿತು. ಬಿಪಿ ಏರಿಳಿತದಿಂದ ತಲೆ ಗಿರ್ರನೆ ಸುತ್ತಿ, ರೆಪ್ಪೆ ಮುಚ್ಚೋದರೊಳಗೆ ರಪ್ಪನೆ ಬೀಳೋದಕ್ಕಿಂತ ದೊಣ್ಣೆಯ ಸಪೋರ್ಟಿನಿಂದ ನಿಧಾನಕ್ಕೆ ಅಲ್ಲಿಯೇ ಕೂರಬಹುದಲ್ಲವೇ? ಬಿದ್ದು ಮಂಡೆ ಒಡೆದುಕೊಳ್ಳುವ ಪ್ರಸಂಗ ಯಾಕೆ?
ಎದುರಿಗೆ ಅಪ್ಪಿತಪ್ಪಿ ಬೀದಿನಾಯಿ ಬರಬಹುದು. ನಿಮ್ಮ ಮೇಲೆ ಎರಗಬಹುದು. ಖಾಲಿ ಕೈಯಲ್ಲಿದ್ದರೆ ಕೈಲಾಸ. ಅದೇ ಕೈಯಲ್ಲಿ ದೊಣ್ಣೆಯಿದ್ದರೆ ನಾಯಿಗೆ ಏಟಿನ ಸಮೋಸ. ರಾಯರಂತೆ ನಿಮ್ಮ ಮೇಲೂ ಯಾರೋ ಕಳ್ಳರು ಅಟ್ಯಾಕ್ ಮಾಡಬಹುದು. ಆಗ ನಿಮ್ಮ ಬಳಿ ದೊಣ್ಣೆಯಿದ್ದರೆ, ಅವರ ಸೊಂಟ ಮುರಿಯಬಹುದಲ್ಲವೇ? ಎದುರಿಗೊಂದು ಹಾವು ಬಂದರೆ, ನಿಮ್ಮನ್ನು ದೊಣ್ಣೆಯೇ ಉಳಿಸುತ್ತದೆಯಲ್ಲವೇ?
ಎದುರಿಗೆ ಯಾವನೋ ಸೈಕಲ್ಲೋ, ಬೈಕನ್ನೋ ಬಿಟ್ಟುಕೊಂಡು ಬಂದ. ಇನ್ನೇನು ನಿಮ್ಮನ್ನು ಗುದ್ದುತ್ತಾನೆ ಅನ್ನೋವಾಗ ನಿಮ್ಮನ್ನು ಬಚಾವು ಮಾಡೋದೇ ಈ ದೊಣ್ಣೆ.
ಹೀಗಾಗಿ, ದೊಣ್ಣೆ ವಯಸ್ಸಿನ ಸೂಚಕ ಅಲ್ಲವೇ ಅಲ್ಲ. ನಿಮಗೆ ಬಾಡಿಗಾರ್ಡ್, ಅಷ್ಟೇ!

-ಮಿಲೀ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.