ಕಾಸಿದ್ದಾಗಲೇ ಕೈಲಾಸ

'ನಿವೃತ್ತಿ ನಂತರ ಏನು ಮಾಡಬೇಕೆಂದಿದ್ದೀರಿ? ಏನಾದರೂ ಯೋಜನೆ ಹಾಕಿಕೊಂಡಿದ್ದೀರೇನು?' ಎಂದು ನಿವೃತ್ತರನ್ನು ಕೇಳಿ ನೋಡಿ.. 'ಈ ವಯಸ್ಸಿನಲ್ಲಿ ಇನ್ನೇನು ತಾನೇ ಮಾಡಲಾದೀತು? ಈಗ ಫ್ರೀಯಾಗಿದ್ದೇನೆ. ಸಾಕಷ್ಟು ಪುರಸೊತ್ತು ಸಿಗುತ್ತಿದೆ. ಮಕ್ಕಳೆಲ್ಲ ಸೆಟ್ಲ್ ಆಗಿದ್ದಾರೆ. ಹಾಗಾಗಿ ತೀರ್ಥಯಾತ್ರೆ ಮಾಡಬೇಕೆಂದಿದ್ದೇನೆ. ಈಗ ಅದನ್ನೇ ತಾನೇ ಎಲ್ಲರೂ ಮಾಡುವುದು? ಕೆಲಸದ ಜಂಜಡವಿಲ್ಲ. ಬಿಡುವಾಗಿರುವುದರಿಂದ ಕಾಶಿಯಾತ್ರೆ ಮಾಡಿ ಬರೋಣ ಅಂತಿದೀನಿ' ಎಂಬ ಉತ್ತರ ಬರುವುದು ಗ್ಯಾರಂಟಿ.
ಲಾಗಾಯ್ತಿನಿಂದಲೂ ಕಾಶಿ, ರಾಮೇಶ್ವರ, ಬದರಿ, ಕೇದಾರ ಮುಂತಾದ ಸ್ಥಳ (ತೀರ್ಥಕ್ಷೇತ್ರ)ಗಳಿಗೆ ಯಾತ್ರೆ ಹೋಗುತ್ತಾರೆಂದರೆ ಅವರಿಗೆ 65, 70, 75 ವರ್ಷವಾಗಿರಬೇಕು ಎಂಬ ಅಲಿಖಿತ ಪದ್ಧತಿ ರೂಢಿಯಲ್ಲಿ ಬಂದುಬಿಟ್ಟಿದೆ. ಸಂಸಾರದ ಜವಾಬ್ದಾರಿಯನ್ನೆಲ್ಲ ಮುಗಿಸಿ, ಮನೆಯ ಜವಾಬ್ದಾರಿಯನ್ನು ಮಗನಿಗೆ ವರ್ಗಾಯಿಸಿ, 'ರಾಮಾ-ಶಿವಾ' ಎಂದು ಕಾಲಕಳೆಯುವ ಜೀವನಸಂಧ್ಯೆಯಲ್ಲಿ ಕೈಗೊಳ್ಳುವ ಈ ಯಾತ್ರೆಯಿಂದ 'ಮುಕ್ತಿ' ಪಡೆಯಬೇಕು ಎನ್ನುವ ಒಂದೇ ಒಂದು ಕೊನೆಯ ಆಸೆ ಅವರದ್ದಾಗಿರುತ್ತಿತ್ತು.
ತೀರ್ಥಯಾತ್ರೆ ಅಂತಲೇ ಅಲ್ಲ. ಬಹುತೇಕರು ನಿವೃತ್ತಿ ಹೊಂದಿದ ಬಳಿಕವೇ ದೇಶ ಸುತ್ತಲು ಬಯಸುತ್ತಾರೆ. ಇಳಿ ವಯಸ್ಸಿನಲ್ಲೇ ಯಾಕೆ ಪ್ರವಾಸ ಹೋಗಬೇಕು? ಈ ಅಲಿಖಿತ ಪದ್ಧತಿಯನ್ನು ನೀವ್ಯಾಕೆ ಮುರಿಯಬಾರದು?
ಹೌದು. 45-50ರ ವಯೋವಾನದೊಳಗೇ ನೋಡಬೇಕಾದ ಸ್ಥಳಗಳನ್ನೆಲ್ಲ ನೋಡಿಬಿಡಬೇಕು. ನಲವತ್ತು, ಐವತ್ತರ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಅರ್ಧದಷ್ಟು ಕಡಿಮೆಯಾಗಿರುತ್ತದೆ. ಮಕ್ಕಳು ಓದು ಮುಗಿಸಿ ಕೆಲಸ ಹಿಡಿದಿರುತ್ತಾರೆ. ಬ್ಯಾಂಕ್ ಬ್ಯಾಲೆನ್ಸ್ ಕೂಡ ತೃಪ್ತಿಕರವಾಗಿರುತ್ತದೆ. ಒಂದೆರಡು ನಿಶ್ಚಿತ ಠೇವಣಿಗಳು, ಇನ್ಶೂರೆನ್ಸ್ ಪಾಲಿಸಿಗಳು ಅವಧಿ ಮುಗಿದು ಕೈಗೆ ಬಂದಿರುತ್ತವೆ. ಪ್ರವಾಸ, ಯಾತ್ರೆಗಾಗಿ ಮಕ್ಕಳ ಮುಂದೆ ಹಣಕ್ಕೆ ಕೈಚಾಚುವ ಪ್ರಮೇಯವೂ ಇಲ್ಲ. ಮೈಯಲ್ಲಿ ಶಕ್ತಿ, ಹುಮ್ಮಸ್ಸು ಕೂಡ ಸಾಕಷ್ಟಿರುತ್ತದೆ. ಮಂಡಿ ನೋವು, ಉಸಿರಾಟದ ತೊಂದರೆಯಂಥ ಮಧ್ಯವಯಸ್ಸಿನ ಕಾಯಿಲೆಗಳ ದೃಷ್ಟಿಯಿನ್ನೂ ನಿಮ್ಮ ಮೇಲೆ ಬಿದ್ದಿರುವುದಿಲ್ಲ. ಹಾಗಾಗಿ ಈ ವಯಸ್ಸು ಪ್ರವಾಸಕ್ಕೆ, ಅದರಲ್ಲೂ ತೀರ್ಥಯಾತ್ರೆಗೆ ಸರಿಯಾದದ್ದು.
ಪ್ರಪಂಚದ ಯಾವುದೇ ಸ್ಥಳಗಳಿಗೆ ಹೋಗಬೇಕಾದರೂ ಮೊದಲೇ ಪ್ಲಾನ್ ಮಾಡಬೇಕಾಗುತ್ತದೆ. ವಿಮಾನ, ರೈಲ್ವೆ, ಬಸ್ ಅಥವಾ ಹಡಗು ಯಾವುದರ ಮೂಲಕ ನೀವು ಪ್ರಯಾಣ ಮಾಡುವುದಾದರೂ ಒಂದು ಒಂದೂವರೆ ತಿಂಗಳು ಮೊದಲೇ ಮುಂಗಡ ಕಾಯ್ದಿರಿಸಬೇಕಾಗುತ್ತದೆ. ಅದೂ ಅಲ್ಲದೆ ಕಾಶಿ, ಬದರಿ, ಕೇದಾರವಂತೂ ಉತ್ತರದ ತುದಿಯಾಗಿರುವುದರಿಂದ ಅಲ್ಲಿಗೆ ಹೋಗುವುದಾದರೆ ಯಾವ ಕಾಲದಲ್ಲಿ ಹೋದರೆ ಹೆಚ್ಚು ಸೂಕ್ತ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಏಕೆಂದರೆ ಉತ್ತರದ ಪ್ರವಾಸಿ ಸ್ಥಳಗಳಲ್ಲಿ ವರ್ಷದ ಹೆಚ್ಚಿನ ತಿಂಗಳು ಚಳಿ ಇರುತ್ತದೆ. ಇನ್ನು ಸಮುದ್ರ ಮಟ್ಟದಿಂದ ನಾಲ್ಕೂವರೆ, ಐದು, ಐದೂವರೆ ಸಾವಿರ ಅಡಿ ಎತ್ತರದಲ್ಲಿರುವ ಪ್ರವಾಸಿ ಸ್ಥಳ (ಯಾತ್ರಾಸ್ಥಳ) ವಾದರಂತೂ ಹೆಚ್ಚಿನವರಿಗೆ ಮಂಡಿನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸ್ಥಳಗಳಿಗೆ ಹೋಗುವವರಿಗೆ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುವುದು ಅತ್ಯಗತ್ಯ. ಈ ಎಲ್ಲ ದೃಷ್ಟಿಯಿಂದ ಐವತ್ತು ವರ್ಷಕ್ಕಿಂತ ಮೊದಲು ತೀರ್ಥಯಾತ್ರೆ, ಯಾತ್ರಾಸ್ಥಳ, ಪ್ರವಾಸ ಸ್ಥಳಗಳಿಗೆ ಹೋಗಿಬರುವುದು ಹೆಚ್ಚು ಅನುಕೂಲ. ದೇಹ ಸ್ವಸ್ಥವಾಗಿರುವಾಗ ಪ್ರವಾಸದಲ್ಲಿ ಹೆಚ್ಚು ಆನಂದವನ್ನು ಅನುಭವಿಸಲು ಸಾಧ್ಯ.
ಹಾಗಾಗಿ ತೀರ್ಥಯಾತ್ರೆಗೆ 65-70 ವರ್ಷಕ್ಕಾಗಿ ಕಾಯಬೇಡಿ. ಐವತ್ತರೊಳಗೇ ಯಾತ್ರೆ ಮುಗಿಸಿ.
-ಶಶಿರೇಖಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


