ಕೃಷಿ with ಕೃತಿ

ದಿನವಿಡೀ ಹೊಲದಲ್ಲಿ ದುಡಿತ. ಆದರೂ ಓದುವ ಹುಚ್ಚು. ಸಾಹಿತ್ಯದ ಓದಿನಿಂದಲೇ ದುಡಿಮೆಯ ಆಯಾಸ ಮರೆಯುವ ಪ್ರಯತ್ನ. ಅದರ ಫಲವಾಗಿ ಈಗ ಅವರ ಮನೆಯೇ ಗ್ರಂಥಾಲಯ.
ಚಿಕ್ಕಮಗಳೂರಿನ ಮೂಗುತಿಹಳ್ಳಿ ಗ್ರಾಮದ ಚಂದ್ರಶೇಖರ ನಾರಣಾಪುರ ಅವರ ಮನೆಯೇ ಒಂದು ಲೈಬ್ರರಿ. ಚಂದ್ರಶೇಖರ್ ಬಿ.ಎ ಪದವೀಧರ. ಪದವಿ ಬಳಿಕ ಉದ್ಯೋಗವನ್ನಾರಸುತ್ತಾ ಊರೂರು ತಿರುಗುವ ಬದಲು ಒಂದಷ್ಟು ಸಾಲ ಮಾಡಿ ಜಮೀನು ಖರೀದಿಸಿ ದುಡಿಯತೊಡಗಿದರು. ಈಗ 13 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.
ಇವರದೊಂದು ಪದ್ಧತಿ. ಯಾವ ಕಾರ್ಯಕ್ರಮಕ್ಕೆ ಹೋದರೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು, ಹಾಗೆಯೇ ಎಲ್ಲಿಗಾದರೂ ಹೋದಾಗ ಆ ಭೇಟಿಯ ನೆನಪಿಗಾಗಿ ಸಾಹಿತ್ಯ ಕೃತಿಯೊಂದನ್ನು ಖರೀದಿಸಿ ತರುವುದು. ಪ್ರತಿವರ್ಷ ತನ್ನ ಮದುವೆ ವಾರ್ಷಿಕೋತ್ಸವದಂದು ಸಾವಿರಾರು ರುಪಾಯಿ ಮೌಲ್ಯದ ಪುಸ್ತಕ ಕೊಳ್ಳುತ್ತಾರೆ. ಈಗಾಗಲೇ ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ, ಅನಂತಮೂರ್ತಿ ಸೇರಿದಂತೆ ಕನ್ನಡದ ಬಹುತೇಕ ಸಾಹಿತಿಗಳು, ಕವಿಗಳ ಎರಡು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಈವರೆಗೆ ಏಳರಿಂದ ಎಂಟು ಲಕ್ಷ ರುಪಾಯಿಗಳನ್ನು ಪುಸ್ತಕ ಖರೀದಿಗಾಗಿ ಉಪಯೋಗಿಸಿದ್ದು ತನ್ನ ಮನೆಯನ್ನೇ ಗ್ರಂಥಾಲಯವನ್ನಾಗಿಸಿದ್ದಾರೆ. ಎರಡು ರುಪಾಯಿಂದ ಒಂದುವರೆ ಸಾವಿರ ಮುಖಬೆಲೆಯ ಪುಸ್ತಕಗಳು ಇವರ ಗ್ರಂಥಾಲಯದಲ್ಲಿವೆ. ದಿನದ ಹೆಚ್ಚಿನ ಸಮಯ ತೋಟದ ಕೆಲಸದಲ್ಲೇ ಕಳೆಯುವ ಚಂದ್ರಶೇಖರ್, ನಾಲ್ಕು ಗಂಟೆಗಳನ್ನು ಓದಿಗೂ ಮೀಸಲಿಟ್ಟಿದ್ದಾರೆ.
ಇವರ ಪ್ರಯತ್ನಗಳಿಗೆ ಪೂರಕವಾಗಿ 2004ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಾಹಿತ್ಯಶ್ರೀ , ಜಿಲ್ಲಾ ಪರಿಷತ್‌ನಿಂದ ಜಿಲ್ಲಾ ಪ್ರಶಸ್ತಿ, ಬಾಗಲಕೋಟೆ ವಿಶ್ವವಿದ್ಯಾನಿಲಯ ಸಾವಯವ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಸಾಧನೆಯನ್ನು ಕಣ್ಣಾರೆ ಕಾಣಲು ಪ್ರತಿನಿತ್ಯ ಇಲ್ಲಿಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ನೂರಾರು ಕೃಷಿಕರು, ಸಾಹಿತ್ಯಭಿಮಾನಿಗಳು ಬರುತ್ತಾರೆ. ಓದುವ ಸಂಸ್ಕೃತಿ ನಾಶವಾಗುತ್ತಿರುವ ದಿನಗಳಲ್ಲಿ ಚಂದ್ರಶೇಖರ್ ಮಾದರಿ ವ್ಯಕ್ತಿಯಾಗಿ ಕಾಣುತ್ತಾರೆ. ಅವರ ಸಂಪರ್ಕ: 94484 84024.
ಪುಸ್ತಕ ಸಿಗಲಿಲ್ಲ, ತಾವೇ ಬರೆದರು!
ಚಿಕ್ಕಂದಿನಿಂದಲೂ ಚಂದ್ರಶೇಖರ್‌ಗೆ ವೀರಶೈವ ಮಠಗಳ ಇತಿಹಾಸದ ಬಗ್ಗೆ ಆಸಕ್ತಿ. ಪದವಿ ಮುಗಿದ ಬಳಿಕ ವೀರಶೈವ ಮಠಗಳ ಕುರಿತು ಓದಲೆಂದು ಪುಸ್ತಕಗಳ ಹುಡುಕಾಟಕ್ಕೆ ತೊಡಗಿದರು. ಮಠಗಳ ಕುರಿತು ಯಾವುದೇ ಪುಸ್ತಕ ಪ್ರಕಟವಾಗದಿದ್ದನ್ನು ಕಂಡು ತಾವೇ ಸ್ವತಃ ಕರ್ನಾಟಕದಲ್ಲಿರುವ ವೀರಶೈವ ಮಠಗಳ ಕುರಿತು ಅಧ್ಯಯನ ನಡೆಸಿ ಪುಸ್ತಕ ಬರೆಯುವ ನಿರ್ಧಾರಕ್ಕೆ ಬಂದರು. ಸತತ ಐದು ವರ್ಷ ಅಧ್ಯಯನ ಮಾಡಿದರು. 486 ದಿನ ರಾಜ್ಯದ 28,000 ಹಳ್ಳಿಗಳನ್ನು ಸುತ್ತಿದರು. ನಂತರ 412 ದಿನಗಳಲ್ಲಿ 1402 ಪುಟಗಳನ್ನುಳ್ಳ ಧಾರ್ಮಿಕ ಕೇಂದ್ರದ ಮೊದಲ ಅಧ್ಯಯನ ಗ್ರಂಥ 'ಕರ್ನಾಟಕ ವೀರಶೈವ ಮಠಗಳು' ಸಿದ್ಧವಾಯಿತು. ತರೀಕೆರೆಯ ನಾರಣಾಪುರದವರಾದ ಇವರ ಪುಸ್ತಕದ ಪ್ರಕಟಣೆಗೆ ಸಹಕಾರ ನೀಡಿದವರು ಸುತ್ತೂರು ಸ್ವಾಮಿಗಳು. ಮೊದಲ ಮುದ್ರಣದ ಎಲ್ಲ 3000 ಪ್ರತಿಗಳು ಮಾರಾಟವಾಗಿವೆ. ಇದೀಗ ಕರ್ನಾಟಕದ ಮಠಗಳ ಕುರಿತು ಪುಸ್ತಕವೊಂದು ಪ್ರಕಟಣೆಯ ಹಂತದಲ್ಲಿದೆ.
= ಚಿತ್ರ-ಲೇಖನ: ಚಂದ್ರಹಾಸ ಚಾರ್ಮಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


