ಸಾಧನೆ

ಎವರ್ ಗ್ರೀನ್

ಎವರ್ ಗ್ರೀನ್
Published On :

ಮಂಗಳೂರಿನ ಹೊರವಲಯದ ಬೊಂದೇಲ್ ಗುಡ್ಡ ಬೋಳುಬೋಳಾಗಿತ್ತು. ಹೇಳಿಕೇಳಿ ಅದು ಸರ್ಕಾರಿ ಜಾಗ. ಅಲ್ಲಿ ಏನಾದರೆ ಏನು ಎನ್ನುವ ಧೋರಣೆ ಜನರದ್ದು. ಆದರೆ ಬೊಂದೇಲ್ ಕೃಷ್ಣಪ್ಪ ಅವರಿಗೆ ಸುಮ್ಮನಿರಲು ಆಗಲಿಲ್ಲ. ನಾಲ್ಕು ವರ್ಷ ಹಿಂದೆ ವಿವಿಧ ಜಾತಿಯ ಒಂದಷ್ಟು ಗಿಡಗಳನ್ನು ನೆಟ್ಟರು. ಈಗ ಅಲ್ಲಿ ವನದೇವತೆ ಹಸಿರುಟ್ಟು ನಲಿಯುತ್ತಿದ್ದಾಳೆ.
ಇದಿಷ್ಟೇ ಅಲ್ಲ ಕೃಷ್ಣಪ್ಪನವರ ಕಥೆ. ಮಳೆಗಾಲದಲ್ಲಿ ಉತ್ಸಾಹದಿಂದ ಗಿಡಗಳನ್ನು ನೆಟ್ಟಿದ್ದೇನೋ ಆಯ್ತು. ಅವೂ ಚಿಗುರಿಕೊಂಡು ಬದುಕಿದವು. ಬೇಸಿಗೆ ಶುರುವಾಯ್ತು ನೋಡಿ. ಒಂದೊಂದೇ ಗಿಡ ನೀರಿಲ್ಲದೆ ಒಣಗಲಾರಂಭಿಸಿತು. ನೆಟ್ಟಿರುವ ಗಿಡಗಳು ಹಾಗೇ ಬಾಡಿ ಹೋಗುವುದಕ್ಕೆ ಬಿಡಲು ಕೃಷ್ಣಪ್ಪರ ಮನಸ್ಸು ಒಪ್ಪಲಿಲ್ಲ. ಅವುಗಳಿಗೆ ಬಿಂದಿಗೆ ನೀರುಣಿಸಲು ಭಗೀರಥ ಪ್ರಯತ್ನಕ್ಕೆ ಕೈ ಹಾಕಿದರು.
ಮಹಾನಗರಪಾಲಿಕೆ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ, ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನೂ ಎಡತಾಕಿದರು. ಪ್ರಯೋಜನ ಶೂನ್ಯ. ಬೊಂದೇಲ್‌ಗೆ ನೀರು ಸರಬರಾಜು ಮಾಡುವ ದೊಡ್ಡ ಟ್ಯಾಂಕರ್ ಕೂಡ ಈ ಗಿಡಗಳಿರುವ ಪ್ರದೇಶದ ಕಣ್ಣಳತೆ ದೂರದಲ್ಲೇ ಇದೆ. ಅದರಿಂದಲಾದರೂ ನೀರು ಕೊಡಿಸಿ ಎಂದರೂ ಯಾರೂ ಮುಂದೆ ಬರಲಿಲ್ಲ. ಇವರೂ ಛಲ ಬಿಡಲಿಲ್ಲ. ತನ್ನ ಸ್ವಂತ ಖರ್ಚಿನಲ್ಲೇ ಟ್ಯಾಂಕರ್ ತರಿಸಿ ಗಿಡಗಳಿಗೆ ನೀರುಣಿಸಿದರು. ಬಾಡಿದ್ದ ಗಿಡಗಳು ಮತ್ತೆ ಚಿಗುರಿದವು, ಬದುಕುಳಿದವು.
74ರ ಹರೆಯದ ಪರಿಸರ ಪ್ರೇಮಿ ಬೊಂದೇಲ್ ಕೃಷ್ಣಪ್ಪ ಅವರನ್ನು ಈಗ 'ಮಂಗಳೂರಿನ ಸಾಲು ಮರದ ತಿಮ್ಮಕ್ಕ' ಎಂದು ಎಲ್ಲರೂ ಗುರುತಿಸುತ್ತಾರೆ. ಇವರು ಮಾತ್ರ ಮೂರ್ನಾಲ್ಕು  ವರ್ಷಗಳಿಂದ ತಮ್ಮ ಕಿಸೆಯಿಂದಲೇ ಕಾಸು ಖರ್ಚು ಮಾಡಿ ಗಿಡಗಳಿಗೆ ನೀರುಣಿಸಿ ಕೃತಾರ್ಥರಾಗಿದ್ದಾರೆ. ಈ ಬಾರಿ ಮೇಘನಾಥ್ ಮತ್ತು ಮೋಹನ್ ಎನ್ನುವ ಮಿತ್ರರಿಬ್ಬರು ಸಹಾಯಹಸ್ತ ಚಾಚಿದ್ದಾರೆ.
 ಬೊಂದೇಲ್ ಪರಿಸರದಲ್ಲಿ 150 ಗಿಡ ನೆಟ್ಟು ಬೆಳೆಸಿದ್ದಷ್ಟೇ ಅಲ್ಲ, ಮಂಗಳೂರು ಮಂಗಳಾ ಕ್ರೀಡಾಂಗಣದ ಸುತ್ತ, ಸುರತ್ಕಲ್‌ನಲ್ಲಿ ಹೀಗೆ ಹಲವೆಡೆ ಗಿಡಗಳನ್ನು ನೆಟ್ಟು ತಮ್ಮ ಪರಿಸರಪ್ರೇಮ ಮೆರೆದಿದ್ದಾರೆ.
ಇಷ್ಟೇ ಅಲ್ಲ
ಗಿಡಗಳನ್ನು ನೆಡುವುದಕ್ಕಷ್ಟೇ ಇವರ ಪರಿಸರಪ್ರೇಮ ಮುಗಿಯುವುದಿಲ್ಲ. ಮಂಗಳೂರಿನ ಆಸುಪಾಸು ಎಲ್ಲೇ ಕರೆದರು ಬ್ಯಾನರ್‌ಗಳನ್ನು ಬರೆದು, ಕುತ್ತಿಗೆಗೊಂದು ಸಿಕ್ಕಿಸಿ, ಕೈಯ್ಯಲ್ಲೊಂದು ಬ್ಯಾನರ್ ಹಿಡಿದು ಇವರು ಹಾಜರ್. ಪರಿಸರ ದಿನಾಚರಣೆ, ಪ್ಲಾಸ್ಟಿಕ್ ವಿರೋಧಿ ಜಾಥಾಗಳಲ್ಲಿ ಇವರು ಮುಂದು, ಮ್ಯಾರಾಥಾನ್‌ಗಳಲ್ಲೂ ಮುಂಚೂಣಿ. ಪರಿಸರ, ಆರೋಗ್ಯ ಕುರಿತು ಮಕ್ಕಳಿಗೆ ಉಪನ್ಯಾಸವನ್ನೂ ನೀಡುತ್ತಾರೆ. ತಂಬಾಕು ವಿರುದ್ಧದ ಜನಜಾಗೃತಿಯಲ್ಲೂ ಇವರೇ ಇರುತ್ತಾರೆ. ಒಟ್ಟಿನಲ್ಲಿ ತಮ್ಮ ನಿವೃತ್ತ ಜೀವನವನ್ನು ಸಮಾಜಕ್ಕಾಗಿ ಸವೆಸುತ್ತಿದ್ದಾರೆ.
'ಇದೆಲ್ಲ ಕಷ್ಟ ನಿನಗ್ಯಾಕೆ, ಮನೆಯಲ್ಲಿ ಸುಮ್ಮನೇ ಇರಬಾರದೇ ಎಂದು ಮಗ ಕೇಳುತ್ತಾನೆ. ಆದರೆ ನನಗೆ ಮನಸ್ಸು ಕೇಳುತ್ತಿಲ್ಲ' ಎನ್ನುತ್ತಾರೆ ಕೃಷ್ಣಪ್ಪ.
ನೆರೆಯ ಕೇರಳದಿಂದ ಬಂದು ಕಳೆದ 60 ವರ್ಷದಿಂದ ಇವರು ಕರ್ನಾಟಕದಲ್ಲೇ ನೆಲೆ ನಿಂತಿದ್ದಾರೆ. ವಿವಿಧ ಕಂಪನಿಗಳಲ್ಲಿ ದುಡಿದು ಈಗ ನಿವೃತ್ತರಾಗಿದ್ದಾರೆ. ಬೊಂದೇಲ್ ಕೃಷ್ಣಪ್ಪ ಅವರನ್ನು 0824-2481763 ಮೂಲಕ ಸಂಪರ್ಕಿಸಬಹುದು.

= ಚಿತ್ರ- ಲೇಖನ: ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.