ಮುಸ್ಸಂಜೆ ಮರ್ಯಾದೆ
ಮಕ್ಕಳ ದಿನ, ಅಮ್ಮನ ದಿನ, ಅಪ್ಪನ ದಿನ, ಪ್ರೇಮಿಗಳ ದಿನ... ಹೀಗೆ ಕೊಂಡಾಡುವ ಎಷ್ಟೋ ದಿನಗಳು...

ಮಕ್ಕಳ ದಿನ, ಅಮ್ಮನ ದಿನ, ಅಪ್ಪನ ದಿನ, ಪ್ರೇಮಿಗಳ ದಿನ... ಹೀಗೆ ಕೊಂಡಾಡುವ ಎಷ್ಟೋ ದಿನಗಳು ನಮಗೆ ತಿಳಿದಿವೆ. ಆದರೆ, ಸರಕಾರಿ ಸೇವೆಯಿಂದ ನಿವೃತ್ತರಾದವರಿಗೆ ಒಂದು ದಿನವಿದೆಯೆಂಬುದು ಹೆಚ್ಚಿನವರಿಗೆ ತಿಳಿಯದು. ಹಾಗೆ ನೋಡಿದರೆ, ಬಾಳ ಸಂಜೆಯಲ್ಲಿರುವವರಿಗೆ ಕೊಂಡಾಡಲು ಒಂದು ದಿನ ಬೇಕೆ? ಹಲವಾರು ವರ್ಷಗಳಿಂದ ವೃತ್ತಿಯಲ್ಲಿ ತೊಡಗಿಸಿಕೊಂಡು ಅರವತ್ತರ ವಯಸ್ಸಿಗೆ ನಿವೃತ್ತಿಯಾಗುವ ಮಂದಿಗೆ ನಂತರದ ದಿನವೆಲ್ಲಾ ಅವರದ್ದೇ ಅಲ್ಲವೆ? ಡಿಸೆಂಬರ್ 17 ಹೇಗೆ ನಿವೃತ್ತರ ದಿನವೆಂದು ಗೊತ್ತುಪಡಿಸಲಾಯಿತು! ಅದಕ್ಕೊಂದು ಅರ್ಥಪೂರ್ಣ ಹಿನ್ನೆಲೆಯಿದೆ.
25-5-1979ರಂದು ಕೇಂದ್ರ ಸರಕಾರವು ಉದಾರೀಕರೃತ ನಿವೃತ್ತ ಯೋಜನೆ ಜಾರಿಗೆ ತಂದಿತು. ಆದರೆ, ಆ ದಿನಾಂಕದ ಹಿಂದೆ ನಿವೃತ್ತರಾದವರಿಗೆ ಯೋಜನೆಯ ಲಾಭ ಅನ್ವಯಿಸುವುದಿಲ್ಲವೆಂದು ಸರಕಾರಿ ಆಜ್ಞೆಯಲ್ಲಿ ಉಲ್ಲೇಖಿಸಲಾಗಿತ್ತು. ಈ ಆಜ್ಞೆಯ ವಿರುದ್ಧವಾಗಿ ಸುಪ್ರೀಂಕೋರ್ಟನ್ನು ಪ್ರವೇಶಿಸಿ ನ್ಯಾಯಕ್ಕಾಗಿ ಮೊರೆಯಿಟ್ಟವರು ಡಿ.ಎಸ್. ನಕರಾರವರು. ಈ ನಕರಾರವರು ರಕ್ಷಣಾ ಇಲಾಖೆಯಲ್ಲಿ ಆರ್ಥಿಕ ಸಮಾಲೋಚಕರಾಗಿದ್ದವರು. 1972ರಲ್ಲಿ ನಿವೃತ್ತರಾದರು. ಡಿಸೆಂಬರ್ 17, 1982ರಂದು ಸುರ್ಪ್ರೀಕೋರ್ಟಿನ 5 ಸದಸ್ಯರ ನ್ಯಾಯಪೀಠವು ಸರಕಾರದ ಆಜ್ಞೆಯ ವಿರುದ್ಧ ಮಹತ್ವದ ತೀರ್ಪು ನೀಡಿತು. ಈ ನ್ಯಾಯಪೀಠದ ಮುಖ್ಯ ನ್ಯಾಯಾಧೀಶರಾದ ವೈ.ವಿ. ಚಂದ್ರಾಚೂಡಾರವರು ತಮ್ಮ ತೀರ್ಪಿನಲ್ಲಿ, 'ನಿವೃತ್ತಿವೇತನವೆಂಬುದು ಸರಕಾರದ ಅನುಕಂಪದ ಕೊಡುಗೆಯಲ್ಲ. ದಯಾಭಿಕ್ಷೆಯೂ ಅಲ್ಲ. ನಿವೃತ್ತಿಯಾಗುವ ನೌಕರನ ಹಕ್ಕು ನಿವೃತ್ತಿ ವೇತನ. ಅದರಲ್ಲಿ ತಾರತಮ್ಮಯ ಸಲ್ಲದು. ಆದ್ದರಿಂದ ಉದಾರೀಕೃತ ನಿವೃತ್ತ ಯೋಜನೆಯ ಫಲಾನುಭವವನ್ನು ಎಲ್ಲ ನಿವೃತ್ತ ಕೇಂದ್ರ ಸರಕಾರಿ ನೌಕರರಿಗೆ ನೀಡಬೇಕಾಯಿತು' ಎಂದು ಆದೇಶಿಸಿತು. ಅದರಂತೆ ಕೇಂದ್ರ ಸರಕಾರವು 1983ರ ಅಕ್ಟೋಬರ್‌ನಿಂದ ಆ ಆಜ್ಞೆಯನ್ನು ಹೊರಡಿಸಿತು. ಇದರಿಂದ ಎಲ್ಲಾ ನಿವೃತ್ತ ನೌಕರರಿಗೆ ಬಹಳಷ್ಟು ಉಪಯೋಗ ದೊರೆಯಿತು. ನ್ಯಾಯಪೀಠವು ನೀಡಿದ ಈ ಮಹತ್ವದ ತೀರ್ಪಿನ ದಿನವನ್ನು ನಿವೃತ್ತರ ದಿನ (ಡಿಸೆಂಬರ್ 17) ಎಂದು ಆಚರಿಸಲಾಗುತ್ತದೆ.
ವ್ಯಕ್ತಿಯೊಬ್ಬ ಸರಿಸುಮಾರು 21ನೇ ವಯಸ್ಸಿನಿಂದ 50 ವರ್ಷದವರೆಗೆ ದುಡಿಯಲು ಶಕ್ತನಾಗಿರುತ್ತಾನೆ. ಐವತ್ತೈದರ ನಂತರ ಕಣ್ಣು ಕಿವಿಗಳ ಶಕ್ತಿ ಕುಂದುತ್ತದೆ. ಕೈಕಾಲುಗಳು ದಣಿವನ್ನು ಸೂಚಿಸುತ್ತವೆ. ಇಂದ್ರಿಯಗಳು ತಮಗೆ ವಿಶ್ರಾಂತಿಯ ಅವಶ್ಯಕತೆ ಇದೆಯಂದು ಪಿಸುಗುಡುತ್ತವೆ. ವಯಸ್ಸನ್ನು ಮರೆಮಾಚಲು ತಲೆಕೂದಲಿಗೆ ಕಪ್ಪು ಬಣ್ಣ ಹಚ್ಚಿ, ಉದುರಿದ ಹಲ್ಲುಗಳ ಖಾಲಿ ಜಾಗದಲ್ಲಿ ಕೃತಕ ಹಲ್ಲುಗಳನ್ನು ಜೋಡಿಸಿ ತಿಪ್ಪರಲಾಗ ಹಾಕಿದರೂ ದೇಹದ ಬಿಡಿ ಭಾಗಗಳು ಎಚ್ಚರಿಕೆ ನೀಡುತ್ತಿರುತ್ತವೆ.
ಮೂವತ್ತು ಮೂವತ್ತೈದು ವರ್ಷಗಳ ಕಾಲ ದುಡಿದ ಜೀವನ ನಿವೃತ್ತಿಯ ಬದುಕಿಗೆ ಹೊಂದಿಕೊಳ್ಳುವುದು ಸುಲಭವಲ್ಲ. ನೌಕರಿಯಲ್ಲಿದ್ದಾಗ, ಗಡಿಬಿಡಿಯಲ್ಲಿ ಬೆಳಗ್ಗೆ ಹಾಸಿಗೆ ಬಿಟ್ಟೆದ್ದು, ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿ ಆಫೀಸಿಗೆ ಹೋಗಿ ಸಂಜೆ ಮನೆಗೆ ಮರಳುವುದು ರೂಢಿಯಾಗಿರುತ್ತದೆ. ವರ್ಷಾನುಗಟ್ಟಲೆ ಇಂಥ ಬದುಕಿಗೆ ಅಂಟಿಕೊಂಡಿದ್ದ ಮನುಷ್ಯ ಒಮ್ಮೆಗೆ ಮನೆಯಲ್ಲೇ ಕುಳಿತಿರಬೇಕೆಂದರೆ ಆಗದ ಮಾತು. ಕೆಲವರಂತು ನೀರಿನಿಂದ ಹೊರತೆಗೆದ ಮೀನಿನಂತಾಗಿರುತ್ತಾರೆ. ಬದುಕಿನುದ್ದಕ್ಕೂ ಯಾವುದೇ ಹವ್ಯಾಸಗಳನ್ನು ಬೆಳೆಸಿಕೊಳ್ಳದವರ ಸ್ಥಿತಿಯಂತೂ ಶೋಚನೀಯ. ಆಫೀಸಿನಲ್ಲಿ ಬಂಧಿಯಾಗಿದ್ದರೂ ಮನೆಯಲ್ಲಿ ಬಿದ್ದಿರುವುದು ಕಷ್ಟ ಕಷ್ಟ. ವೃತ್ತಿ ಬದುಕಿನಲ್ಲಿ ಕೈಕೆಳಗೆ ಕೆಲಸ ಮಾಡುವವರ ಮೇಲೆ ದರ್ಪ ತೋರಿಸಿದ ವ್ಯಕ್ತಿಗಳ ಸ್ಥಿತಿಯಂತೂ ಹೇಳತೀರದು. ಆಗ ಸಿಗುವ ಗೌರವ, ಮರ್ಯಾದೆಗಳು ನಿವೃತ್ತಿಯಾಗಿ ಮರುದಿನದಿಂದ ಮಾಯವಾಗಿರುತ್ತದೆ. ನಿವೃತ್ತಿಯ ನಂತರ ಕೆಲವರಂತು ಮತ್ತೆ ತಾವು ಕೆಲಸ ಮಾಡಿದ್ದಲ್ಲಿಗೆ ಹೋಗರು. ಅವರಿಗೆ ಗೊತ್ತು ತಾನು 'ಸರ್ವೀಸಿನಲ್ಲಿ' ಇದ್ದಾಗ ಹೇಗೆ ನಡೆದುಕೊಂಡಿದ್ದೇನೆಂದು.
ನಿವೃತ್ತಿಯ ನಂತರ ಸಿಗುವ ಆರ್ಥಿಕ ಕೊಡುಗೆಗಳು ಕೆಲವೊಮ್ಮೆ ಮಕ್ಕಳು ಮೊಮ್ಮಕ್ಕಳ ಪಾಲಾಗುವುದುಂಟು. ಕೆಲವರು ಈ ಹಣವನ್ನು ಮಕ್ಕಳ ಮದುವೆಗೆ ಅಥವಾ ಮನೆ ಕಟ್ಟಿಸುವುದಕ್ಕೆ ಬಳಸಿಕೊಳ್ಳುತ್ತಾರೆ. ವೃತ್ತಿಯಲ್ಲಿರುವಾಗ ಮಾಡಿದ ಸಾಲ, ಯಾರಿಗೋ ಜಾಮೀನು ನಿಂತು ತಗಲಿಸಿಕೊಂಡಿದ್ದೆಲ್ಲ ಈ ಹಣ ಪೋಲಾದರೆ, ನಿವೃತ್ತನ ಕೈ ಹಿಡಿಯುವುದು ನಿವೃತ್ತಿ ವೇತನವೊಂದೇ.
ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಅಭಿರುಚಿಯುಳ್ಳವರಿಗೆ ನಿವೃತ್ತಿಯ ನಂತರದ ಬದುಕು ಅದನ್ನು ಮುಂದುವರಿಸಲು ಅತ್ಯುತ್ತಮ ಅವಕಾಶ. ತಮ್ಮ ಆಸಕ್ತ ಕ್ಷೇತ್ರದಲ್ಲಿ ಮಿಂಚಲು ನೃತ್ತಿಯ ಬದುಕು ಸಕಾಲ.
ಜೀವನ ಸಂಧ್ಯಾಕಾಲದಲ್ಲಿ ಏಳು ಬೀಳುಗಳನ್ನುಕಷ್ಟನಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸಿದರೆ ಬದುಕು, ನೆಮ್ಮದಿ, ಸುಖ ಸಂತೋಷಗಳಿಂದ ಕೂಡಿರುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವುದಕ್ಕೂ ಗಮನ ನೀಡಬೇಕು. ಹಿರಿಯರಿಗೆ ಬದುಕಿನ ಕುರಿತಾದ ಉತ್ಸಾಹವನ್ನು ನವೀಕರಿಸಿಕೊಳ್ಳುವ ಪ್ರಯತ್ನವು ಅಷ್ಟೇ ಮುಖ್ಯ. 'ನಿವೃತ್ತರ ದಿನ' ಅಂಥದೊಂದು ಪ್ರಯತ್ನವಷ್ಟೇ.
- ಕೆ.ಕೆ. ಗಂಗಾಧರನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


