ಸಾಧನೆ

ಸೀನಿಯರ್ ಸೀಟು

ಸೀನಿಯರ್ ಸೀಟು
Published On :

'ಎಷ್ಟು ದೊಡ್ಡದಾಗಿದೆ ಬೋರ್ಡು... ಕಾಣಿಸಲ್ವೆ?'
'ಎಳೆದು ಹಾಕಬೇಕೇ ತೋಳು ಹಿಡಿದು?'
'ಏಳು ಮಾರಾಯ ನಿಂಗೂನೂ ನಾಳೆ ವಯಸ್ಸಾಗುತ್ತೆ'
'ನಿಂಗೆ ಮರ್ಯಾದೆ ಇದ್ರೆ ಸೀಟು ಬಿಡು...'
ನಿಮ್ಮ ಊಹೆ ಸರಿ, ಸಿಟಿ ಬಸ್ಸಿನಲ್ಲಿ ಹಿರಿಯ ನಾಗರಿಕರು ತಮಗೆ ಮೀಸಲಾದ ಆ 4 ಸೀಟುಗಳನ್ನು ಪಡೆದುಕೊಳ್ಳಲು ಕಿರಿಯರಿಗೆ ಹಾರಿಸುವ ಗುಂಡುಗಳಿವು. ಒಡನೆಯೇ ಆಸನ ಬಿಟ್ಟು ಕೊಡುವವರುಂಟು. ಆದರೆ ಪ್ರತಿಯಾಗಿ ಗುಂಡು ಪ್ರಯೋಗಿಸುವವರ ಸಂಖ್ಯೆ ಇನ್ನೂ ಹೆಚ್ಚುಂಟು!
'ನಾವೂನೂ ನಿಮ್ಮ ಹಾಗೇ ಟಿಕೆಟ್ ತಗೊಂಡಿದೀವಿ..'
'ಮೊದಲನೇ ಸ್ಟಾಪಲ್ಲೇ ಹತ್ತಿದೀವಿ ಬಸ್‌ನ.'
ಸುಮ್ನೆ ಯಾಕೆ ತೊಂದರೆ ಕೊಡ್ತೀರಾ? ಆಗಲ್ಲ ಅಂತಾದ್ರೆ ಟ್ಯಾಕ್ಸೀಲಿ ಹೋಗ್ರೀ...'- ಇವು ಸ್ಯಾಂಪಲ್ಲುಗಳು.
ಮಾತಿಗೆ ಮಾತು ಅದೆಷ್ಟು ತ್ವರಿತವಾಗಿ ಬೆಳೆದಿರುತ್ತದೆಂದರೆ ಎರಡು ಅಥವಾ ಮೂರನೇ ಡೈಲಾಗ್‌ಗೆ ಏಕವಚನ ಪ್ರವೇಶಿಸಿರುತ್ತದೆ. ವಿಪರ್ಯಾಸ ನೋಡಿ, ಎಪ್ಪತ್ತೈದು ಮೀರಿದವರನ್ನು ಇಪ್ಪತ್ತೈದೂ ಮೀರದವನು ನಿನ್ನೆ ಬಸ್ಸಲ್ಲಿ 'ಮಗನೇ' ಎಂದು ಸಂಬೋಧಿಸಿದ್ದ!
ಸಿಟಿಬಸ್ಸಿನಲ್ಲಿ ಅಭಿನಯಪಟುತ್ವ ಸಮರ್ಥವಾಗಿಯೇ ಮೆರೆದಿರುತ್ತದೆನ್ನಬೇಕು, ಎಲ್ಲವೂ ಆಸನಕ್ಕಾಗಿ. ಬಸ್ಸನ್ನು ಆರೋಹಣ ಮಾಡುವಾಗಲೇ ಬೆನ್ನು ಬಾಗಿಸಿಕೊಂಡು ಸುಸ್ತಾದವರಂತೆ ಕಾಣುವ ಅದೆಷ್ಟೋ 50 ಪ್ಲಸ್ ವಯಸ್ಸಿನ ಮಂದಿಗೆ ತಮ್ಮ ಸ್ಟಾಪ್‌ನಲ್ಲಿ ಇಳಿವಾಗ ಬೆನ್ನುನೋವಿನ ಸಮಸ್ಯೆಯೇ ಮರೆತುಹೋಗಿರುತ್ತದೆ. ಈ ನಿಟ್ಟಿನಲ್ಲಿ ನಾನು ನನ್ನ ಕೋ ಬ್ರದರ್ ನಾಣಿ ಪಡುವ ಪಾಡನ್ನು ಹೇಳಲೇಬೇಕಿದೆ. ಆತನಿಗೆ ಅರವತ್ತಾಗಿದೆ. ಬಣ್ಣ ಬಳಿದುಕೊಳ್ಳುತ್ತಾನಾದ್ದರಿಂದ ತಲೆಗೂದಲು ಬೆಳ್ಳಗಿಲ್ಲದೆ ಕಪ್ಪಗಿದೆ. ವಯಸ್ಸು ಕಾಣದಿರುವ ಕಾರಣ ಅವನಿಗೆಷ್ಟೇ ಕೂಡದಿದ್ದರೂ ಕಾರ್ಡು, ದಾಖಲೆ ತೋರಿದರೂ ಬಸ್ಸಿನಲ್ಲಿ ಯಾರೂ ಸೀಟು ಬಿಡರು. ಈ ಭೂಪ ಬಣ್ಣ ಬಿಡ, ಅವರು ಸೀಟು ಬಿಡರು. ನಾನು ತಮಾಷೆಗೆ ಕಿಸೆಯಲ್ಲಿ ಡೈ ಪ್ಯಾಕ್ ಇಟ್ಟುಕೊಂಡು ಓಡಾಡಲು ಸಲಹೆ ನೀಡಿದ್ದೇನೆ.
ಇನ್ನು ಕೆಲವರಿರುತ್ತಾರೆ. ಅರವತ್ತೆಂಟು ವರ್ಷದ ಮೇಲಾಗಿರುತ್ತದೆ. ಅವರೆಂಥವರಂದ್ರೆ 'ಬನ್ರಿ ಇದು ನಿಮ್ಮ ಸೀಟು' ಎಂದು ಕೈ ಹಿಡಿದೆಳೆದರೂ ಕೂತರೆ ಕೇಳಿ. ನೋಡಿ ಈ ವಯಸ್ನಲ್ಲೂ ಎಷ್ಟು ಗಟ್ಟಿಯಾಗಿದ್ದೇನೆ, ನಿಂತು ಪ್ರಯಾಣಿಸಬಲ್ಲೆ ಎಂದು ಪ್ರಾತ್ಯಕ್ಷಿಕೆ ನೀಡುವುದು ಅವರ ಉದ್ದೇಶ. ಸಾಲದ್ದಕ್ಕೆ ಬಸ್ಸು ತಿರುವಿನಲ್ಲಿ ಸಾಗುತ್ತಿದ್ದಾಗ ಮೇಲ್ಕಂಬಿ ಹಿಡಿದು ಜಗ್ಗಾಡಿ, ಎಂಥ ಪರಿಸ್ಥಿತಿಯಲ್ಲೂ ನಾನು ಆಸನ ಅವಲಂಭಿಸೆನು ಅಂತ ಸಾಬೀತುಪಡಿಸುತ್ತಿರುತ್ತಾರೆ. ಇದನ್ನು ನೋಡುವಾಗೆಲ್ಲ ನನಗೆ ನಾನು ಯಾವುದೋ ಸಂಚಾರಿ ವ್ಯಾಯಾಮ ಶಾಲೆಯಲ್ಲಿ ಪಯಣಿಸುತ್ತಿರುವಂತೆ ಭಾಸವಾಗುತ್ತದೆ. ಲಾಲ್‌ಬಾಗಿಗೆ ನಿತ್ಯ ವಾಕಿಂಗ್ ಹೋಗಲು ನಾನು ಹನುಮಂತನಗರದಿಂದ ಬಸ್ಸು ಹಿಡಿಯುತ್ತೇನೆ. ತಪ್ಪದೆ ಎಂಬತ್ತರ ನರಸಣ್ಣ ಸಿಗುತ್ತಾರೆ. ನಿವೃತ್ತ ಮಾಸ್ತರರಾದ ಅವರು ನಿಂತಲ್ಲಿ ಕುಂತಲ್ಲಿ ಕವನ ಕಟ್ಟುತ್ತಾರೆ. ಬಸ್ಸಿನಲ್ಲಿ ಹುಟ್ಟಿದ ಅಣಕು,
ಹಿರಿಯ ನಾಗರಿಕರಿಗೆ ಬಿಡು ಸೀಟು
ತಮ್ಮಾ ಸಲ್ಲದು ವೃಥಾ ಸಿಟ್ಟು
'ಏನಪ್ಪಾ ಪ್ರಜೆಗಳು, ನಂಗೆ ನೂರು ವರ್ಷವಾದ ಮೇಲಾದರೂ ಸೀಟು ಬಿಡುತ್ತಾರ ನೋಡ್ಬೇಕು' ಅಂತ ಒಮ್ಮೊಮ್ಮೆ ಹತಾಶರಾಗುತ್ತಾರೆ. ವಿಪರ್ಯಾಸ ಎಂದರೆ, ಹಿರಿ-ಕಿರಿಯರ ನಡುವೆ ಚಕಮಕಿಯಾಗುತ್ತಿದ್ದರೆ 'ಹೌದು, ಹಿರಿಯರ ಮಾತು ಸರಿ' ಎಂದು ಹೇಳುವವರೇ ಇರುವುದಿಲ್ಲ. ಈ ಸಾಲಿಗೆ ಸೀಟು ದೊರಕಿಸಿಕೊಂಡ ಅರವತ್ತು ಪ್ಲಸ್ ಕೂಡಾ ಸೇರುತ್ತಾರೆ!
ಉಳಿದವರಿಗೆ ಪುಕ್ಕಟೆ ಮನರಂಜನೆ ಒದಗಿಸುವ ಈ ಕದನಕ್ಕೆ ವಿರಾಮವೇ ಇಲ್ಲವೇನೋ?!ಟಿ  
- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.