ಮೆಲುಕು ನೋಟ

ನಾವು ಆಡಿ ನಲಿದು, ಬೆಳೆದು ಬಂದ ಅಜ್ಜಿ ಮನೆ ಸ್ವರ್ಗಕ್ಕಿಂತಲೂ ಮಿಗಿಲಾದದ್ದು. ಓದಿ ದೊಡ್ಡವರಾದ ಬಳಿಕ ಕೆಲಸ ಕೆಲಸ ಎಂದು ಇಂದಿನ ದಿನಗಳಲ್ಲಿ ನಮ್ಮನ್ನೇ ನಾವು ಮರೆಯುತ್ತಿದ್ದೇವೆ. ಹೀಗಿರುವಾಗ ಅಜ್ಜಿ ಮನೆಯಲ್ಲೊಂದು ಅಪರೂಪದ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಹೇಗಿರುತ್ತೆ?
ಕೆಲಸವನ್ನೆಲ್ಲಾ ಬದಿಗೊತ್ತಿ ಮತ್ತೆ ನಾವು ಮಕ್ಕಳಾಗುವ ಅವಕಾಶ ಅಜ್ಜಿಮನೆ ಮಾತ್ರ ಮಾಡಿಕೊಡಲು ಸಾಧ್ಯ ಎಂಬ ಅಗಾಧ ನಂಬಿಕೆಯೊಂದಿಗೆ ಇದಕ್ಕಾಗಿ ಮನಸ್ಸು ಮಾಡಿದ್ದು ನಾವುಗಳೇ. ಅಂತೂ ಕಾರ್ಯರೂಪಕ್ಕೆ ಬಂದ ಈ ಕೆಲಸ ಒಗ್ಗೂಡಿಕೆಯಿಂದ ಎಲ್ಲರ ಮನದಲ್ಲಿ ಅಚ್ಚಾಗಿ ನೆಲೆಯೂರಿ ಸದಾ ಕಾಲ ನೆನೆಯುವಂತೆ ಮಾಡಿದ್ದಂತೂ ಸುಳ್ಳಲ್ಲ.
ಅಂದು ಶನಿವಾರ. ಸುತ್ತಲೂ ಅಡಕೆ ತೋಟ. ಕಣ್ಣು ಮುಚ್ಚಿದರೂ ತೆರೆದರೂ ಹಚ್ಚಹಸಿರು. ನೆಟ್‌ವರ್ಕ್ ಇಲ್ಲದ ಕಾರಣ ಮೊಬೈಲ್ ಕರ'ಕರೆ' ಇರಲಿಲ್ಲ. ಇನ್ನು ಕಾರ್ಯಕ್ರಮ ಸಂಪ್ರದಾಯ ರೀತಿಯಲ್ಲೇ ಶುರು ಆಯ್ತು..
ಪ್ರಾರ್ಥನೆ, ದೀಪ ಬೆಳಗುವುದು, ಪ್ರಸ್ತಾವನೆ... ಅಜ್ಜ ಅಜ್ಜಿ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಒಟ್ಟು ಎಂಬತ್ತು ಜನ ಒಗ್ಗೂಡಿದ ಆ ದಿನ ಅವಿಸ್ಮರಣೀಯ. 'ಮೆಲುಕು' ಎಂಬ ಕಾರ್ಯಕ್ರಮ ನಡೆಸಿ ಎಲ್ಲರನ್ನೂ ಭಾವುಕರನ್ನಾಗಿಸಿದೆವು.
ಅಜ್ಜಿಯ ಆ ದಿನಗಳ ಚಟುವಟಿಕೆ, ಅವರ ನಡೆ ನುಡಿ, ಆಚಾರ, ವಿಚಾರ ಇವೆಲ್ಲವನ್ನೂ ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಬಗೆಯನ್ನು ಎಳೆ ಎಳೆಯಾಗಿ ಪ್ರತಿಯೊಬ್ಬರೂ ವಿವರಿಸಿದರು. ಇನ್ನು ತೀರಿ ಹೋದ ಅಜ್ಜನ ಕೆಲಸಗಳು ಹೇಗಿತ್ತು, ಶ್ರದ್ಧೆ, ಭಕ್ತಿ, ಚುರುಕುತನ, ನಡವಳಿಕೆ ಬಗ್ಗೆ ಹೇಳುವಾಗ ಮನಸ್ಸಿನ ಮೂಲೆಯಲ್ಲಿ ಅವರೆಲ್ಲರೂ ಇದ್ದಿದ್ರೆ ಅನ್ನಿಸುತ್ತಿತ್ತು. ಈ ಮಾತಿನ ಮಧ್ಯೆ ಕಿರುಹೊತ್ತಿಗೆಯೊಂದು ಲೋಕಾರ್ಪಣೆಗೊಂಡಿತು. ನಂತರ ಕುಟುಂಬ ಗೀತೆಯನ್ನು ಸ್ವತಃ ನಾವುಗಳೇ ರಚಿಸಿ ಹಾಡಿದೆವು. ಬಳಿಕ ಪ್ರತಿಯೊಬ್ಬರ ಕುಟುಂಬ ಪರಿಚಯದ ಜೊತೆಗೆ ಒಂದು ಫೋಟೋ. ಹೀಗೆ ಬೆಳಗಿನ ಕಾರ್ಯಕ್ರಮ.
ಮಧ್ಯ ಮಾತಾಡಿ ಮಾತಾಡಿ ಬಾಯಾರಿದ್ದಕ್ಕೆ ಎಲ್ಲರಿಗೂ ಎಳನೀರು. ಖುಷಿಗಾಗಿ ಒಂದಿಷ್ಟು ಆಟಗಳು... ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮ್ಮನ್ನು ತಾವು ಮರೆತು ಆಟವಾಡಿ ಮತ್ತಷ್ಟು ಉತ್ಸುಕರಾದರು. ಅಷ್ಟೊತ್ತಿಗಾಗಲೇ ಮಧ್ಯಾಹ್ನ. ಊಟ ಘಮ ಘಮಿಸುತ್ತಿದ್ದಂತೆ ಹೊಟ್ಟೆ ಕೇಳಲೇ ಇಲ್ಲ... ಅಬ್ಬಾ! ತಂಬುಳಿ, ಗೊಜ್ಜು, ಪಾಯಸ, ಹುರುಳಿಸಾರು, ಹುರುಳಿ ಪಲ್ಯ, ಕೋಸಂಬರಿ, ಪುಳಿಯೋಗರೆ, ಹಲಸಿನ ಹಪ್ಪಳ, ಬಾಳಕ ಮೆಣಸು, ಒಬ್ಬಟ್ಟು, ಬೆರೆಸಿದ ಮಜ್ಜಿಗೆ... ಮುಗೀತಿದ್ದಂತೆ ವಿವಿಧ ಹಣ್ಣುಗಳು, ಎಲೆ ಅಡಕೆ.
ಮತ್ತೆ ಸಭೆಗೆ ಎಲ್ಲರೂ ಹಾಜರ್. ಆಗ ಶುರುವಾಯ್ತು ನೋಡಿ, ನಮ್ಮಗಳ ಕಲಾ ಪ್ರದರ್ಶನ. ಮರಿಮಕ್ಕಳೆಲ್ಲರೂ ಮಂತ್ರ ಘೋಷ ಪಠಿಸಿದರೆ, ಮನೆಯ ಹಿರಿ ಸೊಸೆಯಂದಿರು ಒಂದಿಷ್ಟು ಭಾವಗೀತೆ, ಭಕ್ತಿಗೀತೆಗಳನ್ನ ಹಾಡಿ ಕೇಳುಗರ ಮನಸ್ಸಿಗೆ ಮುದ ನೀಡಿದರು. ನಮ್ಮ ಹಾಡು, ಭರತನಾಟ್ಯ, ಜಾನಪದ ನೃತ್ಯ, ಫ್ಯೂಝನ್, ಸಿನಿಮಾ ಹಾಡಿಗೂ ಕುಣಿತ, ನೋಡುಗರ ಶಿಳ್ಳೆ, ಚಪ್ಪಾಳೆ... ಇವೆಲ್ಲಕ್ಕೂ ಸಾಕ್ಷಿಯಾಗಿದ್ದು ಅಜ್ಜಿ ಮನೆ ಅಂಗಳ.
ಮರುದಿನವೂ ಯಥಾ ಪ್ರಕಾರ. ಕೊನೆಯಲ್ಲಿ ಎಲ್ಲರ ಭಾವಚಿತ್ರ ತೆಗೆಯುವ ಸಂದರ್ಭ. ಹೇಗೆ ನಿಲ್ಲಬೇಕೆಂಬ ಬಗ್ಗೆ ಕಿತ್ತಾಡಿ ನಾನಾ ಪೋಸ್ ಕೊಟ್ಟಾದ ಮೇಲೆ... ಕಳೆದುಕೊಂಡವರ ಸವಿ ನೆನಪು, ಅವರಿಲ್ಲದ ನಮ್ಮ ಬದುಕು, ಭಾವಪೂರ್ಣ ಶ್ರದ್ಧಾಂಜಲಿ... ಹೊರಡುವಾಗ ನೆನಪುಗಳ ಬುತ್ತಿ ಇನ್ನಷ್ಟು ತುಂಬಿತ್ತು.
- ಸಂಧ್ಯಾ ಅಜಯ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


