ದೇವರು ರುಜು ಮಾಡಿದ!
ಜೀವನದ ಉಸಿರಾಗಿದ್ದ ಕ್ರಿಕೆಟ್‌ಗೆ ವಿದಾಯ ಹೇಳಿದ ಸಚಿನ್ ತೆಂಡೂಲ್ಕರ್‌ರವರ ಕುರಿತ...

ಜೀವನದ ಉಸಿರಾಗಿದ್ದ ಕ್ರಿಕೆಟ್‌ಗೆ ವಿದಾಯ ಹೇಳಿದ ಸಚಿನ್ ತೆಂಡೂಲ್ಕರ್‌ರವರ ಕುರಿತ ಸುನಾಮಿಯ ಅಲೆ ವಿಶ್ವದಾದ್ಯಂತ ಪ್ರಚಂಡವಾಗಿ ಬೀಸುತ್ತಿದೆ. ಸಚಿನ್‌ರೊಂದಿಗೆ ಅವರ ವ್ಯಕ್ತಿತ್ವವೂ ಭಾರತೀಯ ಶೈಲಿಗೆ ಅಪರೂಪದ ಕಾಣಿಕೆ. ಇಂಥ ಮೇರು ಕ್ರಿಕೆಟಿಗರನ್ನು ನಾವೂ ಭೇಟಿಯಾಗಿದ್ದೇವೆಂಬ ಹೆಮ್ಮೆಯ ಅವಲೋಕನವನ್ನು ಸಂಕ್ಷಿಪ್ತವಾಗಿ ಸಾದರಪಡಿಸಲಿಚ್ಛಿಸುತ್ತೇವೆ.
ನಟಸಾರ್ವಭೌಮ ಡಾ. ರಾಜ್‌ಕುಮಾರ್ ಮತ್ತು ಕ್ರಿಕೆಟ್ ಸಾರ್ವಭೌಮ ತೆಂಡೂಲ್ಕರ್‌ರವರ ಜನ್ಮದಿನ ಏಪ್ರಿಲ್ 24. 2003ರಲ್ಲಿ ಬಿಡುಗಡೆಯಾದ 'ವರನಟ' ಹೆಬ್ಬೊತ್ತಗೆಯಲ್ಲಿ ಈ ಬಗ್ಗೆ ವಿವರಗಳನ್ನು ಲೇಖಕನಾಗಿ ದಾಖಲಿಸಿದ್ದೆ. ಅವಕಾಶ ದೊರೆತರೆ ಡಾ. ರಾಜ್, ಸಚಿನ್ ಇಬ್ಬರಿಗೂ ಕೃತಿಯನ್ನು ಅರ್ಪಿಸಿ ಅವರುಗಳ ಹಸ್ತಾಕ್ಷರವನ್ನು ಕೃತಿಯ ಮೇಲೆ ಪಡೆಯುವ ಹಂಬಲ ನನ್ನದಾಗಿತ್ತು. ದೇವರು ಅಸ್ತು ಎಂದುಬಿಟ್ಟ. ಮೊದಲ ನಡಿಗೆ ಸಚಿನ್ ಬಳಿಗೆ.
ಅದು 2003ರ ಟಿವಿಎಸ್ ಕಪ್ ಪಂದ್ಯಾವಳಿ. ಸಚಿನ್ ಬೆಂಗಳೂರಿಗೆ ಆಗಮಿಸಿದ್ದರು. ಹಿತೈಷಿಗಳ ನೆರವಿನಿಂದ ಆಟದ ನಡುವೆಯೇ ಸಚಿನ್‌ರನ್ನು ಭೇಟಿಯಾಗುವ ಸುಯೋಗ ದೊರೆಯಿತು. ಪೆವಿಲಿಯನ್‌ನಲ್ಲಿನ ಏಕಾಗ್ರತೆ, ಪಿಚ್‌ಗೆ ಹೊರಡುವ ಮುನ್ನ ಅವರ ಸಿದ್ಧತೆ, ಮಿತಭಾಷಿತ್ವ, ಮಿಂಚಿನ ಆಟದ ವೈಖರಿ ಎಲ್ಲವನ್ನೂ ಸನಿಹದಿಂದ ಕಂಡು ವಿಸ್ಮಿತರಾದೆವು. ಬಿಡುವಿನಲ್ಲಿ ಅವರ ಬಳಿ ಹೋಗಿ ಸಿದ್ಧಪಡಿಸಿಕೊಂಡಿದ್ದ ಆಂಗ್ಲಭಾಷೆಯ ಒಕ್ಕಣೆ ಮತ್ತು ಕನ್ನಡ ಕೃತಿ 'ವರನಟ' ಕೈಗಿತ್ತೆವು. ನನ್ನೊಂದಿಗೆ ಸೋದರ ವೇಣುಗೋಪಾಲ್ ರಾವ್ ಬಹುಳೆಯೂ ಇದ್ದರು. ಸಚಿನ್ ಕುತೂಹಲದಿಂದ ಕಣ್ಣರಳಿಸಿ ರಾಜ್ ಮುಖಚಿತ್ರವನ್ನು ಹಾಗೂ ಆ ಮಹಾನಟರೊಂದಿಗೆ ತಮ್ಮ ಜನ್ಮದಿನದ ಸಾಮ್ಯವನ್ನು ಕೃತಿಯಲ್ಲಿ ವಿವರಿಸಿರುವ ಬಗ್ಗೆ ತಿಳಿದು ಖುಷಿಪಟ್ಟರು. ತಮ್ಮ ಮ್ಯಾನೇಜರ್‌ರನ್ನು ಕರೆದು 'ವರನಟ' ಕೃತಿಯನ್ನು ತಮ್ಮ ಆಟದ ಕಿಟ್‌ನಲ್ಲಿ ಜೋಪಾನವಾಗಿಡಲು ತಿಳಿಸಿದರು. ನಮ್ಮ ಬಳಿ ಇದ್ದ ಕೃತಿಗೆ ನಮ್ಮ ಅಪೇಕ್ಷೇಯಂತೆ ಅಭಿಮಾನದಿಂದ ಹಾಗೂ ಮಂದಹಾಸದಿಂದ 'BEST WISHES SACHIN TENDULKAR' ಎಂಬುದಾಗಿ, ಹಸ್ತಾಕ್ಷರ ನೀಡಿ ಶುಭ ಹಾರೈಸಿದರು.
ಭದ್ರತೆಯ ಕಾರಣದಿಂದ ಸಚಿನ್‌ರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುವ ಆಸೆ ಮಾತ್ರ ಈಡೇರಲಿಲ್ಲ.
ಇದಿಷ್ಟು ವಿಚಾರವನ್ನು ಡಾ. ರಾಜ್‌ರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ತಿಳಿಸಿದೆವು. ಆಗ ರಾಜ್, 'ಆ ದಿನಕ್ಕೆ (ಏಪ್ರಿಲ್ 24) ಏನೋ ವಿಶೇಷತೆ ಇದೇರಿ. ನಾನು ಹುಟ್ಟಿದ ಸಂದರ್ಭದಲ್ಲಿ ಬರಗಾಲದಿಂದ ಬೆಂಗಾಡಾಗಿದ್ದ ಗಾಜನೂರಿನಲ್ಲಿ ಕುಂಭದ್ರೋಣ ಮಳೆ ಆಯಿತಂತೆ. ಅದಕ್ಕೆ ಆ ಬಡ್ಡಿಮಗ (ಸಚಿನ್) ಹಾಗೆ ಬಾರಿಸೋದು' ಎಂದು ಸಚಿನ್‌ರ ಬ್ಯಾಟಿಂಗ್‌ನ ಶ್ರೇಷ್ಠತೆಯನ್ನು ದೇಸೀ ಶೈಲಿಯಲ್ಲಿ ಪ್ರಶಂಸಿಸುತ್ತಾ ಮನಸಾರೆ ನಕ್ಕಿದ್ದರು. ಇಬ್ಬರು ಮಹಾನ್ ಸಾಧಕರು ಪ್ರಸ್ತುತ ನೇಪಥ್ಯದಲ್ಲಿದ್ದಾರೆ. ಆದರೆ, ಪ್ರತಿ ಏಪ್ರಿಲ್ 24 ಬಂದಾಗಲೂ ಕನ್ನಡಿಗರಿಗಂತೂ ರಾಜ್ ಹಬ್ಬದೊಂದಿಗೆ ಸಚಿನ್ ಹಬ್ಬವೂ ಬಂದೇ ಬರುತ್ತದೆ. ಆದರ್ಶಗಳ ಮಾತು ಬಂದಾಗ ಈ ಎರಡೂ ಮಹಾನ್ ತಾರೆಗಳು ಮಹಾನ್ ಸಂಕೇತಗಳಾಗಿಯೂ ಉಳಿಯುತ್ತಾರೆ.
- ಎಸ್. ಜಗನ್ನಾಥರಾವ್ ಬಹುಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


